ಗ್ರಾ.ಪಂ.ನೌಕರರಿಂದ ವಿಧಾನಸೌಧ ಮುತ್ತಿಗೆ

Update: 2021-09-15 14:22 GMT

ಬೆಂಗಳೂರು, ಸೆ.15: ರಾಜ್ಯ ಸರಕಾರವು ವೇತನ ಪಾವತಿ ಸೇರಿದಂತೆ ವಿವಿಧ ಬೇಡಿಕೆ ಈಡೇರಿಕೆ ಮುಂದಾಬೇಕೆಂದು ಆಗ್ರಹಿಸಿ ಗ್ರಾಮ ಪಂಚಾಯಿತಿ ನೌಕರರು ವಿಧಾನಸೌಧ ಮುತ್ತಿಗೆ ಚಳುವಳಿ ನಡೆಸಿದರು.

ಬುಧವಾರ ನಗರದ ಸಿಟಿ ರೈಲ್ವೇ ನಿಲ್ದಾಣದಿಂದ ಫ್ರೀಡಂ ಪಾರ್ಕ್‍ವರೆಗೂ ಕರ್ನಾಟಕ ರಾಜ್ಯ ಗ್ರಾಮ ಪಂಚಾಯತ್ ನೌಕರರ ಸಂಘ(ಸಿಐಟಿಯು) ನೇತೃತ್ವದಲ್ಲಿ ಸಾವಿರಾರು ನೌಕರರು ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಿದರು. 

ರಾಜ್ಯ ಸರಕಾರ ಪ್ರತಿ ತಿಂಗಳು ಸರಿಯಾಗಿ ವೇತನ ಬಿಡುಗಡೆ ಮಾಡಬೇಕು. ಈ ಕೂಡಲೇ ವೇತನಕ್ಕಾಗಿ 700 ಕೋಟಿ ರೂ. ಬಿಡುಗಡೆ ಮಾಡಬೇಕು. 10 ವರ್ಷ ಮೇಲ್ಪಟ್ಟವರ ಭಡ್ತಿಗೆ ಅರ್ಹತಾ ಪರೀಕ್ಷೆ ರದ್ದು ಮಾಡುವಂತೆ ಪ್ರತಿಭಟನಾಕಾರರು ಆಗ್ರಹಿಸಿದರು.

ಪಿಂಚಣಿ ಕಡತವನ್ನು ಆದೇಶ ರೂಪದಲ್ಲಿ ಆಗಬೇಕು ಎಂದು ಆಗ್ರಹಿಸಿದ ನೌಕರರು, ಕಳೆದ ಹತ್ತು ತಿಂಗಳಿನಿಂದ ಗ್ರಾಮ ಪಂಚಾಯಿತಿ ನೌಕರರಿಗೆ ವೇತನವೇ ಬಂದಿಲ್ಲ. 2021 ಸೆಪ್ಟೆಂಬರ್ ತಿಂಗಳಲ್ಲಿ ಸರಕಾರದ ನಿಧಿಯಿಂದ ಇಎಫ್‍ಎಂಎಸ್ ಮೂಲಕ ವೇತನ ನೀಡಲು ರಾಜ್ಯ ಸರಕಾರ ಆದೇಶ ಮಾಡಿತ್ತು. ಆದರೆ ಗ್ರಾಮಪಂಚಾಯಿತಿ ನೌಕರರಿಗೆ ಇಲ್ಲಿಯವರೆಗೆ ವೇತನ ಬಿಡುಗಡೆ ಸರಿಯಾಗಿ ಆಗುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಈಶ್ವರಪ್ಪ ವಿರುದ್ಧ ಆಕ್ರೋಶ

ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಿದ ಗ್ರಾಮ ಪಂಚಾಯಿತಿ ನೌಕರರು, ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ ಪ್ರತಿಭಟನಾ ಸ್ಥಳಕ್ಕೆ ಧಾವಿಸಬೇಕೆಂದು ಪಟ್ಟು ಹಿಡಿದು, ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ಪ್ರತಿಭಟನೆ ಮುಂದುವರಿಕೆ

ಗ್ರಾಮೀಣಾಭಿವೃದ್ಧಿ ಇಲಾಖೆ ಪ್ರಧಾನ ಕಾರ್ಯದರ್ಶಿ ಎಲ್.ಕೆ.ಅತೀಕ್ ಅವರೊಂದಿಗೆ ಗ್ರಾಮ ಪಂಚಾಯಿತಿ ನೌಕರರ ಸಂಘದ ಮುಖಂಡರು ನಡೆಸಿದ ಮಾತುಕತೆ ವಿಫಲವಾಗಿದ್ದು, ಫ್ರೀಡಂ ಪಾರ್ಕ್‍ನಲ್ಲಿ ನಡೆಯುತ್ತಿರುವ ನೌಕರರ ಪ್ರತಿಭಟನೆಯನ್ನು ಮುಂದುವರೆಸುವುದಾಗಿ ಸಂಘದ ಮುಖಂಡರು ತಿಳಿಸಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News