ಎಲೆಕ್ಟ್ರಾನಿಕ್ ಸಿಟಿನಲ್ಲಿ ಇಬ್ಬರು ಸಾವು ಪ್ರಕರಣ: ತನಿಖೆಗೆ ಸೂಚನೆ: ರವಿಕಾಂತೇಗೌಡ

Update: 2021-09-15 17:38 GMT

ಬೆಂಗಳೂರು, ಸೆ.15: ಇಲ್ಲಿನ ಎಲೆಕ್ಟ್ರ್ರಾನಿಕ್ ಸಿಟಿ ಮೇಲ್ಸೇತುವೆ ಬಳಿ ಸಂಭವಿಸಿದ ಅಪಘಾತದಲ್ಲಿ ಇಬ್ಬರು ಮೃತಪಟ್ಟ ಪ್ರಕರಣ ಸಂಬಂಧ ತನಿಖೆ ಕೈಗೊಳ್ಳಲಾಗಿದೆ ಎಂದು ಸಂಚಾರ ವಿಭಾಗದ ಜಂಟಿ ಪೊಲೀಸ್ ಆಯುಕ್ತ ಬಿ.ಆರ್. ರವಿಕಾಂತೇಗೌಡ ತಿಳಿಸಿದ್ದಾರೆ.

ಬುಧವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವೇಗದ ಚಾಲನೆ ಹಾಗೂ ನಿರ್ಲಕ್ಷತನವೇ ಅಪಘಾತಕ್ಕೆ ಕಾರಣವಾಗಿದೆ ಎಂದು ತನಿಖೆ ವೇಳೆ ಕಂಡು ಬಂದಿದೆ ಎಂದರು.

ಘಟನೆಗೆ ಕಾರು ಚಾಲಕನ ನಿರ್ಲಕ್ಷಮೇಲ್ನೋಟಕ್ಕೆ ಕಾಣುತ್ತಿದೆ. ಚಾಲಕ ಮದ್ಯಪಾನ ಮಾಡಿರುವ ಶಂಕೆಯೂ ಇದ್ದು, ಪತ್ತೆ ಹಚ್ಚುವ ದೃಷ್ಟಿಯಿಂದ ಚಾಲಕನ ರಕ್ತದ ಮಾದರಿ ಸಂಗ್ರಹಿಸಲಾಗಿದೆ ಎಂದು ಆಯುಕ್ತರು ಮಾಹಿತಿ ನೀಡಿದರು.

ಅಲ್ಲದೆ, ಮೇಲ್ಸೇತುವೆ ಮೇಲೆ ವೇಗ ಮಿತಿ 50-80 ಕಿ.ಮೀ ಇದೆ. ಆದರೆ, ವಾಹನ ದಟ್ಟಣೆಯಿದ್ದಾಗ 40 ಕಿ.ಮೀಗೆ ತಗ್ಗಬೇಕು. ನಿನ್ನೆ ನಡೆದ ಘಟನೆಯಲ್ಲಿ ಕಾರು ಚಾಲಕ 100 ಕಿ.ಮೀಗೂ ಅಧಿಕ ವೇಗವಾಗಿ ಕಾರು ಚಲಾಯಿಸುತ್ತಿದ್ದ. ಪ್ರತಿ ಅಪಘಾತವಾದಾಗ ಸುಪ್ರೀಂಕೋರ್ಟ್ ಆದೇಶದಂತೆ ಒಂದು ತಂಡ ರಚನೆಯಾಗಿದ್ದು, ತಂಡದಲ್ಲಿ ಸಂಚಾರ ಪೊಲೀಸರು, ರಸ್ತೆ ಪ್ರಾಧಿಕಾರದ ಅಧಿಕಾರಿಗಳು, ಲೊಕೋಪಯೋಗಿ ಇಲಾಖೆಯ ಇಂಜಿನಿಯರ್‍ಗಳು ಇರಲಿದ್ದಾರೆ. ಸ್ಥಳ ಪರಿಶೀಲಿಸಿದ ಬಳಿಕ ಯಾರದ್ದೇ ದೋಷವಿದ್ದರೂ ಕಾನೂನು ಪ್ರಕಾರ ಕ್ರಮ ಜರುಗಿಸುತ್ತೇವೆ ಎಂದು ಅವರು ಹೇಳಿದರು.

ಏನಿದು ಘಟನೆ?: ಮಂಗಳವಾರ ರಾತ್ರಿ ಇಲ್ಲಿನ ಸಿಲ್ಕ್ ಬೋರ್ಡ್ ಕಡೆಯಿಂದ ಹೊಸೂರು ಮಾರ್ಗದ ಎಲೆಕ್ಟ್ರಾನಿಕ್ ಸಿಟಿ ಮೇಲ್ಸೇತುವೆ ಬಳಿ ಬೈಕ್‍ಗೆ ಕಾರು ಢಿಕ್ಕಿ ಹೊಡೆದಿದೆ. ಢಿಕ್ಕಿ ಹೊಡೆದ ರಭಸಕ್ಕೆ ಮೇಲ್ಸೇತುವೆ ಮೇಲಿನ ತಡೆಗೋಡೆಯಿಂದ ಕೆಳಗೆಬಿದ್ದ ಬೈಕ್ ಸವಾರರಾದ ಜೆ.ಪಿ.ನಗರದ ನಿವಾಸಿ ಪ್ರೀತಮ್ ಕುಮಾರ್(30) ಹಾಗೂ ಚೆನ್ನೈ ಮೂಲದ ಕೃತಿಕಾ ರಾಮನ್(28) ಸಾವನ್ನಪ್ಪಿದ್ದಾರೆ.

ಘಟನೆಗೆ ಕಾರಣರಾದ ನಿತೇಶ್(23) ಬೊಮ್ಮಸಂದ್ರ ತಿರುಪಾಳ್ಯ ಗ್ರಾಮದ ನಿವಾಸಿಯಾಗಿದ್ದು, ಬಿಎಂಎಸ್ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದ. ಈ ದುರ್ಘಟನೆಯಲ್ಲಿ ನಿತೇಶ್‍ಗೆ ಶ್ವಾಸಕೋಶದಲ್ಲಿ ಗಂಭೀರ ಗಾಯವಾಗಿದ್ದು, ಸೆಂಟ್ ಜಾನ್ಸ್ ಆಸ್ಪತ್ರೆಯ ಐಸಿಯು ವಾರ್ಡ್‍ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಈ ಸಂಬಂಧ ಪೊಲೀಸರು ತನಿಖೆ ಮುಂದುವರೆಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News