ಬೆಂಗಳೂರು: ಪಿಸ್ತೂಲಿನಿಂದ ಗುಂಡು ಹಾರಿಸಿಕೊಂಡು ವಿದ್ಯಾರ್ಥಿ ಆತ್ಮಹತ್ಯೆ

Update: 2021-09-17 17:12 GMT

ಬೆಂಗಳೂರು, ಸೆ.17: ಸೇನೆಯ ಶಾಲಾ ವಿದ್ಯಾರ್ಥಿಯೊಬ್ಬ ತಲೆಗೆ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಸದಾಶಿವನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ರಾಹುಲ್ ಭಂಡಾರಿ(17) ಎಂಬ ವಿದ್ಯಾರ್ಥಿ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಪೊಲೀಸರು ಗುರುತಿಸಿದ್ದಾರೆ.

ಗುರುವಾರ ರಾತ್ರಿ ಊಟ ಮಾಡಿ ಮನೆಯಲ್ಲೇ ಮಲಗಿದ್ದ ರಾಹುಲ್, ಬೆಳಗಿನ ಜಾವ 4 ಗಂಟೆಗೆ ವಾಯುವಿಹಾರಕ್ಕೆ ತೆರಳಿದ್ದ ಈ ವೇಳೆ ಘಟನೆ ನಡೆದಿದೆ ಎಂದು ಪೊಲೀಸರು ತಿಳಿಸಿದರು.

ಉತ್ತರಾಖಂಡ ಮೂಲದ ಭಗತ್‍ಸಿಂಗ್ ಮತ್ತು ಬಾಬ್ನಾ ದಂಪತಿಯ ಪುತ್ರನಾಗಿರುವ ರಾಹುಲ್, ದ್ವಿತೀಯ ಪಿಯುಸಿ ವ್ಯಾಸಂಗ ಮಾಡುತ್ತಿದ್ದ. ಪರೀಕ್ಷೆಗೆ ತಯಾರಿ ನಡೆಸುತ್ತಿದ್ದ ಈತ, ನಿತ್ಯ ಮೂರು ಗಂಟೆಗೆ ಎದ್ದು ಓದಿಕೊಳ್ಳುತ್ತಿದ್ದಎಂದು ತಿಳಿದುಬಂದಿದೆ.
ಶುಕ್ರವಾರ ಕೂಡ ಬೆಳಗಿನ ಜಾವ ಮೂರಕ್ಕೆ ಎದ್ದು ಸ್ವಲ್ಪ ಸಮಯ ಓದಿದ ಬಳಿಕ ತನ್ನ ಮೊಬೈಲ್ ತೆಗೆದುಕೊಂಡು ವಾಯುವಿಹಾರಕ್ಕೆ ತೆರಳಿದ್ದ. ಈ ಸಂದರ್ಭದಲ್ಲಿ ಮನೆಯ ಅಲ್ಮೇರಾದಲ್ಲಿಟ್ಟಿದ್ದ ಪಿಸ್ತೂಲ್ ತೆಗೆದು ಬ್ಯಾಗ್‍ನಲ್ಲಿ ಹಾಕಿಕೊಂಡು ಹೊರಗೆ ಹೋಗಿದ್ದ ಎನ್ನಲಾಗಿದೆ.

ಇಲ್ಲಿನ ಗಂಗಾನಗರದಲ್ಲಿರುವ ಇಂಡಿಯನ್ ಏರ್ಫೋರ್ಸ್ ಹೆಡ್‍ಕ್ವಾರ್ಟರ್ಸ್ ಗೋಡೆ ಪಕ್ಕದ ಬಿಎಂಟಿಸಿ ಬಸ್‍ನಿಲ್ದಾಣದಲ್ಲಿ ಬೆಳಗಿನ ಜಾವ 5 ಗಂಟೆ ಸಮಯದಲ್ಲಿ ಗುಂಡು ಹಾರಿಸಿಕೊಂಡು ಸಾವನ್ನಪ್ಪಿದ್ದಾನೆ ಎಂದು ಹೇಳಲಾಗುತ್ತಿದೆ.

ಇನ್ನು, ಸಾರ್ವಜನಿಕರು ರಕ್ತದ ಮಡುವಿನಲ್ಲಿ ಬಾಲಕನೊಬ್ಬ ಬಿದ್ದಿರುವುದನ್ನು ಗಮನಿಸಿ ಕೂಡಲೇ ಪೊಲೀಸ್ ನಿಯಂತ್ರಣ ಕೊಠಡಿಗೆ ಕರೆ ಮಾಡಿ ತಿಳಿಸಿದ್ದಾರೆ. ಸ್ಥಳಕ್ಕೆ ದೌಡಾಯಿಸಿದ ಸದಾಶಿವನಗರ ಠಾಣೆ ಪೊಲೀಸರು ಪರಿಶೀಲಿಸಿದರು. ಆತನ ಜೇಬಿನಲ್ಲಿ ಮೊಬೈಲ್ ಕರೆ ಬರುತ್ತಿರುವುದನ್ನು ಗಮನಿಸಿದ ಪೊಲೀಸರು, ಕರೆ ಸ್ವೀಕರಿಸಿ ಬಾಲಕ ಆತ್ಮಹತ್ಯೆ ಮಾಡಿಕೊಂಡಿರುವ ಬಗ್ಗೆ ತಿಳಿಸಿದ್ದಾರೆ.

ವಿಷಯ ತಿಳಿದು ಸ್ಥಳಕ್ಕೆ ಬಂದ ಪೋಷಕರ ಆಕ್ರಂದನ ಮುಗಿಲು ಮುಟ್ಟಿತ್ತು. ಮಾನಸಿಕ ಒತ್ತಡ ಜಾಸ್ತಿಯಾದಾಗ ರಾಹುಲ್ ಹೊರಗಡೆ ವಾಯು ವಿಹಾರ ಮಾಡುತ್ತಿದ್ದ. ಇಂದು ಕೂಡ 4 ಗಂಟೆ ಸುಮಾರಿಗೆ ಹೊರಗಡೆ ಬಂದಿದ್ದ ಎಂದು ಮೃತನ ತಾಯಿ ಪ್ರತಿಕ್ರಿಯಿಸಿದರು.

2017ರಲ್ಲಿ ಪಿಸ್ತೂಲ್ ಖರೀದಿ

ರಾಹುಲ್ ತಂದೆ ಭಗತ್‍ಸಿಂಗ್ 2017ರಲ್ಲಿ ಸೇನೆಯ ಹವಾಲ್ದಾರ್ ವೃತ್ತಿಯಿಂದ ನಿವೃತ್ತರಾಗಿದ್ದರು. ಈ ವೇಳೆ ತಮ್ಮ ಹೆಸರಿನಲ್ಲೇ ಪಿಸ್ತೂಲ್ ಖರೀದಿಸಿದ್ದರು. ಇದನ್ನು ಮನೆಯ ಅಲ್ಮೇರಾದಲ್ಲಿ ಇಡುತ್ತಿದ್ದರು. ಜತೆಗೆ ತಮ್ಮ ಪುತ್ರ ರಾಹುಲ್‍ಗೂ ಪಿಸ್ತೂಲ್ ಬಳಕೆಯ ಬಗ್ಗೆ ತರಬೇತಿ ಕೊಡಿಸಿದ್ದರು ಎಂದು ತಿಳಿದುಬಂದಿದೆ.
 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News