ಲಂಚ ಸ್ವೀಕಾರ ಪ್ರಕರಣ: ಪೊಲೀಸ್ ಇನ್‍ಸ್ಪೆಕ್ಟರ್ ಸೇರಿ ಇಬ್ಬರು ಸೆರೆ

Update: 2021-09-18 12:15 GMT

ಬೆಂಗಳೂರು, ಸೆ.18: ರಾಜ್ಯ ಪೊಲೀಸ್ ಇಲಾಖೆಯ ಮಹಾ ಭ್ರಷ್ಟಾಚಾರ ಪ್ರಕರಣವೊಂದನ್ನು ಭೇದಿಸಿರುವ ಎಸಿಬಿ ತನಿಖಾಧಿಕಾರಿಗಳು, ಪೊಲೀಸ್ ಠಾಣೆಯ ಇನ್‍ಸ್ಪೆಕ್ಟರ್ ಸೇರಿ ಇಬ್ಬರನ್ನು ಬಂಧಿಸಿದ್ದಾರೆ.

ನಗರದ ಚಿಕ್ಕಜಾಲ ಪೊಲೀಸ್ ಠಾಣೆಯ ಇನ್‍ಸ್ಪೆಕ್ಟರ್ ರಾಘವೇಂದ್ರ ಹಾಗೂ ನಿವಾಸಿ ರಾಘವೇಂದ್ರ ಎಂಬಾತನನ್ನು ಬಂಧಿಸಿ ವಿಚಾರಣೆಗೊಳಪಡಿಸಿದ್ದಾರೆ.

ಏನಿದು ಪ್ರಕರಣ?: ನಗರದ ನಿವಾಸಿಯೊಬ್ಬರ ಜಮೀನಿಗೆ ಅಕ್ರಮ ಪ್ರವೇಶ ಮಾಡಿ ಜಮೀನಿನಲ್ಲಿ ಅಳವಡಿಸಿದ್ದ ಫಲಕವನ್ನು ಕಿತ್ತುಹಾಕಿರುವ ಕುರಿತಂತೆ ಇಲ್ಲಿನ ಚಿಕ್ಕಜಾಲ ಪೊಲೀಸ್  ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆಯನ್ನು ಕೈಗೊಳ್ಳುವಂತೆ ದೂರು ಸಲ್ಲಿಸಿದ್ದರು.
ಆದರೆ, ಇನ್‍ಸ್ಪೆಕ್ಟರ್ ರಾಘವೇಂದ್ರ 10 ಲಕ್ಷ ರೂ. ನೀಡುವಂತೆ ಲಂಚಕ್ಕೆ ಬೇಡಿಕೆ ಇಟ್ಟು, ಈಗಾಗಲೇ 8 ಲಕ್ಷ ರೂ. ಲಂಚದ ಹಣವನ್ನು ಪಡೆದಿರುವುದಾಗಿ ಗೊತ್ತಾಗಿತ್ತು. ಈ ಸಂಬಂಧ ಶನಿವಾರ ಕಾರ್ಯಾಚರಣೆ ಕೈಗೊಂಡ ಎಸಿಬಿ ತನಿಖಾಧಿಕಾರಿಗಳು, ಇನ್‍ಸ್ಪೆಕ್ಟರ್ ರಾಘವೇಂದ್ರ ಅವರು ಖಾಸಗಿ ವ್ಯಕ್ತಿ ರಾಘವೇಂದ್ರ ಎಂಬಾತನ ಮುಖಾಂತರ ಬಾಕಿ 2ಲಕ್ಷ ರೂ.ಗಳನ್ನು ಚಿಕ್ಕಜಾಲ ಪೊಲೀಸ್ ಠಾಣೆಯಲ್ಲೇ ಪಡೆಯುತ್ತಿರುವಾಗಲೇ ಸಿಕ್ಕಿಬಿದ್ದಿದ್ದಾರೆ ಎನ್ನಲಾಗಿದೆ.

ಪರಾರಿಯಾಗಿದ್ದ ಇನ್‍ಸ್ಪೆಕ್ಟರ್: ಇದೇ ಪ್ರಕರಣ ಸಂಬಂಧ ಚಿಕ್ಕಜಾಲ ಪೊಲೀಸ್ ಠಾಣೆಯ ಇನ್‍ಸ್ಪೆಕ್ಟರ್ ಯಶವಂತ್, ಪೇದೆಗಳಾದ ರಾಜು ಹಾಗೂ ಪುಟ್ಟಸ್ವಾಮಿ, ಕಂದಾಯ ಇನ್‍ಸ್ಪೆಕ್ಟರ್ ಜತೆಗೂಡಿ ತಕರಾರು ಇರುವ ಜಮೀನಿಗೆ ಫಲಕ ಅಳವಡಿಸುವ ಕುರಿತಂತೆ ಮತ್ತು ಖಾತಾ ಮಾಡುವ ಬಗ್ಗೆ ಒಟ್ಟು 11 ಲಕ್ಷ ರೂ. ಲಂಚದ ಹಣದ ಬೇಡಿಕೆ ಇಟ್ಟಿದ್ದರು ಎಂದು ಆರೋಪಿಸಿ ಎಸಿಬಿಯಲ್ಲಿ ಮತ್ತೊಂದು ದೂರು ದಾಖಲಾಗಿತ್ತು.
ಇದರನ್ವಯ ಈ ಹಿಂದೆ ಕಾರ್ಯಾಚರಣೆ ನಡೆಸಿದ್ದ ಎಸಿಬಿ ಅಧಿಕಾರಿಗಳು, ಪೇದೆಗಳಾದ ರಾಜು ಹಾಗೂ ಪುಟ್ಟಸ್ವಾಮಿ, ಕಂದಾಯ ಇನ್‍ಸ್ಪೆಕ್ಟರ್ ಅನ್ನು ಬಂಧಿಸಿದ್ದರು. ಇನ್‍ಸ್ಪೆಕ್ಟರ್ ಯಶವಂತ್ ಪರಾರಿಯಾಗಿ ಜಾಮೀನು ಪಡೆದುಕೊಂಡಿದ್ದ ಎಂದು ಎಸಿಬಿ ಪ್ರಕಟನೆಯಲ್ಲಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News