ಕಠಿಣ ಪರಿಶ್ರಮ ಹಾಗೂ ಶಿಸ್ತಿನ ಜೀವನದಿಂದ ಯಶಸ್ಸು ಸಾಧ್ಯ: ಇಕ್ಬಾಲ್ ಹೊತ್ತೂರ್

Update: 2021-09-18 12:19 GMT

ಬೆಂಗಳೂರು, ಸೆ.18: ವಿದ್ಯಾರ್ಥಿಗಳ ಭವಿಷ್ಯ ರೂಪಿಸುವಲ್ಲಿ ಶಿಕ್ಷಕರ ಪಾತ್ರ ಪ್ರಮುಖವಾದದ್ದು. ಶಾಲೆಗಳು ಮಕ್ಕಳಿಗೆ ಜ್ಞಾನ, ಕೌಶಲ, ಮೌಲ್ಯಗಳು ಹಾಗೂ ಉತ್ತಮ ಹವ್ಯಾಸಗಳನ್ನು ಕಲಿಸುವ ಸ್ಥಳವಾಗಿದೆ. ಕಠಿಣ ಪರಿಶ್ರಮ ಹಾಗೂ ಶಿಸ್ತಿನ ಜೀವನದಿಂದ ಯಶಸ್ಸು ಗಳಿಸಲು ಸಾಧ್ಯ ಎಂಬುದನ್ನು ಪ್ರತಿಯೊಬ್ಬರೂ ಅರ್ಥ ಮಾಡಿಕೊಳ್ಳಬೇಕು ಎಂದು ಸಲ್ ಸಬೀಲ್ ಎಜುಕೇಷನಲ್ ಟ್ರಸ್ಟ್ ಅಧ್ಯಕ್ಷ ಇಕ್ಬಾಲ್ ಹೊತ್ತೂರ್ ಹೇಳಿದರು.

ಶನಿವಾರ ಸಲ್ ಸಬೀಲ್ ಎಜುಕೇಷನಲ್ ಟ್ರಸ್ಟ್ ಅಧೀನದಲ್ಲಿರುವ ಇಂದಿರಾ ನಗರದ ಸಿಲಿಕಾನ್ ಸಿಟಿ ಪಬ್ಲಿಕ್ ಶಾಲೆಯಲ್ಲಿ ಆಯೋಜಿಸಲಾಗಿದ್ದ 2019-20 ಹಾಗೂ 2020-21ನೆ ಶೈಕ್ಷಣಿಕ ಸಾಲಿನಲ್ಲಿ ಎಸೆಸೆಲ್ಸಿ ಪರೀಕ್ಷೆಯಲ್ಲಿ ಅತ್ಯುತ್ತಮ ಅಂಕಗಳೊಂದಿಗೆ ತೇರ್ಗಡೆಯಾಗಿರುವ ವಿದ್ಯಾರ್ಥಿಗಳಿಗೆ ಪುರಸ್ಕಾರ ವಿತರಣಾ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಶಾಲೆಗಳಿಗೆ ಶಿಕ್ಷಣ ಪಡೆಯಲು ಬರುವಂತಹ ಎಲ್ಲ ವಿದ್ಯಾರ್ಥಿಗಳು ಸನ್ಮಾನಕ್ಕೆ ಅರ್ಹರು. ಕೇವಲ ಅಂಕಗಳ ಆಧಾರದಲ್ಲಿ ವಿದ್ಯಾರ್ಥಿಗಳ ಅರ್ಹತೆಯನ್ನು ಅಳೆಯಲು ಸಾಧ್ಯವಿಲ್ಲ. ಪ್ರತಿಯೊಬ್ಬ ವಿದ್ಯಾರ್ಥಿಯಲ್ಲಿಯೂ ಪ್ರತಿಭೆಗಳು ಇರುತ್ತವೆ. ಅವುಗಳನ್ನು ಗುರುತಿಸಿ ಪ್ರೋತ್ಸಾಹಿಸಬೇಕು ಎಂದು ಅವರು ಕರೆ ನೀಡಿದರು.

ಕೋವಿಡ್ ಮಹಾಮಾರಿ ಇಡೀ ವಿಶ್ವದಲ್ಲಿ ಹಲವಾರು ಸವಾಲುಗಳನ್ನು ಸೃಷ್ಟಿಸಿದೆ. ಇದು ನಮ್ಮ ಸಮಾಜ, ದಿನನಿತ್ಯದ ಬದುಕಿನ ಮೇಲೂ ಪರಿಣಾಮ ಬೀರಿದೆ. ಮನೆಯಿಂದಲೆ ಕೆಲಸ, ಮನೆಯಿಂದಲೆ ಶಿಕ್ಷಣ ಎಂಬುದು ನಾವು ಅನುಭವಿಸಿದ್ದೇವೆ ಎಂದು ಅವರು ಹೇಳಿದರು.

ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದ ನಿವೃತ್ತ ಐಎಎಸ್ ಅಧಿಕಾರಿ ಮುಹಮ್ಮದ್ ಸನಾವುಲ್ಲಾ ಮಾತನಾಡಿ, ಕಳೆದ ಎರಡು ವರ್ಷಗಳಿಂದ ಮಕ್ಕಳು ಶಾಲೆಗೆ ಬಂದಿಲ್ಲ, ಭೌತಿಕ ತರಗತಿಗಳಲ್ಲಿ ಭಾಗವಹಿಸಿಲ್ಲ. ಆನ್‍ಲೈನ್ ಮೂಲಕ ತರಗತಿಗಳಿಗೆ ಹಾಜರಾಗಿ ಕಠಿಣ ಪರಿಶ್ರಮದಿಂದ ಉತ್ತಮ ಶ್ರೇಣಿಯೊಂದಿಗೆ ತೇರ್ಗಡೆಯಾಗಿದ್ದಾರೆ ಎಂದರು.

ಅಲ್ಲದೆ, ಹಲವು ವಿದ್ಯಾರ್ಥಿಗಳು ಕನ್ನಡ ಭಾಷೆ ಪರೀಕ್ಷೆಯಲ್ಲಿ 100ಕ್ಕೆ 100 ಅಂಕಗಳನ್ನು ಪಡೆದಿರುವುದು ಶ್ಲಾಘನೀಯ. ತಂತ್ರಜ್ಞಾನದ ಮೂಲಕ ತರಗತಿಗಳನ್ನು ನಡೆಸಿದ್ದು ಶಿಕ್ಷಕರಿಗೆ ಒಂದು ಹೊಸ ಅನುಭವ. ತಂತ್ರಜ್ಞಾನವೇ ಭವಿಷ್ಯವಾಗಿದೆ. ಆದರೆ, ಈ ಕೋವಿಡ್ ಕಾರಣದಿಂದ ತಂತ್ರಜ್ಞಾನದ ಬಳಕೆಯನ್ನು ನಾವು ಬಹಳ ಬೇಗನೆ ಆರಂಭಿಸುವಂತಾಯಿತು ಎಂದು ಅವರು ಹೇಳಿದರು.

ಪಿಯು ಶಿಕ್ಷಣದ ಬಳಿಕ ಮಕ್ಕಳು ತಮ್ಮ ಭವಿಷ್ಯಕ್ಕೆ ಸಂಬಂಧಿಸಿದಂತೆ ಹಲವು ಆಯ್ಕೆಗಳನ್ನು ಮುಂದೆ ಇಟ್ಟುಕೊಳ್ಳಬೇಕು. ಇದರಿಂದ, ವಿದ್ಯಾರ್ಥಿಗಳ ಮೇಲೆ ಹೆಚ್ಚಿನ ಒತ್ತಡ ಬೀಳಲ್ಲ. ಅಲ್ಲದೆ, ಹಲವು ಅವಕಾಶಗಳು ಮುಂದೆ ಬರುತ್ತವೆ ಎಂದು ಮುಹಮ್ಮದ್ ಸನಾವುಲ್ಲಾ ತಿಳಿಸಿದರು.

ಇದೇ ಸಂದರ್ಭದಲ್ಲಿ ಭಾರತೀಯ ಕನ್ನಡ ಸಂಘದ ವತಿಯಿಂದ ಕನ್ನಡ ಭಾಷಾ ಪರೀಕ್ಷೆಯಲ್ಲಿ ಅತೀ ಹೆಚ್ಚು ಅಂಕಗಳನ್ನು ಪಡೆದಂತಹ ವಿದ್ಯಾರ್ಥಿಗಳಿಗೆ ಪ್ರಮಾಣಪತ್ರ, ಪಾರಿತೋಷಕವನ್ನು ನೀಡಿ ಗೌರವಿಸಲಾಯಿತು.

ಕಾರ್ಯಕ್ರಮದಲ್ಲಿ ನಿವೃತ್ತ ಐಎಎಸ್ ಅಧಿಕಾರಿ ಡಿ.ವಿ.ಪ್ರಸಾದ್, ನಾಸಿಹ್ ಪಬ್ಲಿಕ್ ಶಾಲೆಯ ಪ್ರಾಂಶುಪಾಲ ಮೌಲಾನಾ ಸೈಯ್ಯದ್ ಶಬ್ಬೀರ್ ಅಹ್ಮದ್ ನದ್ವಿ, ಕರ್ನಾಟಕ ವಿವಿಯ ವಿಶ್ರಾಂತ ಕುಲಪತಿ ಪ್ರೊ.ಎಂ.ಖಾಜಾ ಪೀರ್, ಸಲ್ ಸಬೀಲ್ ಎಜುಕೇಷನಲ್ ಟ್ರಸ್ಟ್ ಕಾರ್ಯದರ್ಶಿ ಝಿಯಾವುಲ್ಲಾ ಖಾನ್, ಟ್ರಸ್ಟಿಗಳಾದ ಮುಹಮ್ಮದ್ ಇಬ್ರಾಹಿಮ್ ಶಫಿಕ್, ಅಬ್ದುಲ್ ರಹ್ಮಾನ್, ಮುಹಮ್ಮದ್ ಯೂಸುಫ್, ನಿಸಾರ್ ಅಹ್ಮದ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News