ಎಪ್ಪತ್ತೈದರ ಹೊಸ್ತಿಲಲ್ಲಿ ಸೂಕ್ಷ್ಮ ಸಂವೇದನಾಶೀಲ ಲೇಖಕಿ, ಹೋರಾಟಗಾರ್ತಿ ಬಿ.ಟಿ ಲಲಿತಾ ನಾಯಕ್

Update: 2021-09-18 18:32 GMT

ಲಲಿತಾ ನಾಯಕ್ ಭಿನ್ನ ದನಿಯ ಗಟ್ಟಿ ನಿಲುವಿನ ಲೇಖಕಿ. ಅನ್ಯಾಯದ ವಿರುದ್ಧ ಲೇಖನಿಯನ್ನು ಸದಾ ಹರಿತವಾಗಿಟ್ಟುಕೊಂಡು ಬರೆಯಲು ಸಿದ್ಧರಾಗಿರುವ ಲೇಖಕಿ. ಜಾತಿಭೇದ, ಲಿಂಗಭೇದ ಮತ್ತು ಮೌಢ್ಯಾಚರಣೆಗಳಿಲ್ಲದ ಸಮಸಮಾಜದ ಕನಸು ಕಾಣುತ್ತಾ ಅದನ್ನು ನನಸು ಮಾಡುವತ್ತ ತುಡಿಯುವ ಮತ್ತು ಮಿಡಿಯುವ ಜೀವ ಲಲಿತಾ ನಾಯಕ್ ಅವರದ್ದು.

ಅಹಲ್ಯೆ

ರಾಮನಿಂದ ಹೆಣ್ಣಾದಳು

ಹೆಣ್ಣಾಗಿದ್ದ ಸೀತೆ

ರಾಮನಿಂದ ಮಣ್ಣಾದಳು

ಎಂಬ ಪ್ರಶ್ನೆ ಎತ್ತಿ ಎಲ್ಲರನ್ನು ದಂಗು ಪಡಿಸಿದವರು ಲಲಿತಾ ನಾಯಕ್. ಸಾಹಿತಿ, ಸಂಘಟಕಿ, ವಿಚಾರವಾದಿ, ಪತ್ರಕರ್ತೆ, ಹೋರಾಟಗಾರ್ತಿ, ರಾಜಕಾರಣಿ ಹೀಗೆ ಬಹುಮುಖಿ ನೆಲೆಯ ಸಾಧಕಿ ಲಲಿತಾ ನಾಯಕ್. ಯಾವುದೇ ಹುದ್ದೆ ಇರಲಿ ಪ್ರಾಮಾಣಿಕತೆ ಮತ್ತು ಪಾರದರ್ಶಕತೆಗಳಿಂದ ಆ ಹುದ್ದೆಗಳಿಗೆ ಗೌರವ ತಂದುಕೊಟ್ಟವರು. ಚಿಕ್ಕಮಗಳೂರಿನ ತಂಗಲಿ ತಾಂಡಾದ ಹುಡುಗಿ ತುಚ್ಚಮ್ಮ ಮದುವೆಯ ನಂತರ ಲಲಿತಾ ನಾಯಕ್ ಆಗಿ ವಿಧಾನಸೌಧದ ಮೆಟ್ಟಿಲನ್ನೇರಿ ಸಚಿವೆಯಾದ ಹಾದಿ ಅಚ್ಚರಿ ಎನಿಸುವಂತಹ ಕಠಿಣತಮ ಹಾದಿಯಾಗಿತ್ತು. ಲಲಿತಾ ನಾಯಕ್ ಅವರ ವಿದ್ಯಾಭ್ಯಾಸ ಎಂಟನೇ ತರಗತಿಗೇ ಮೊಟಕುಗೊಂಡರೂ ಅವರು ರಚಿಸಿದ ಕವಿತೆಗಳು ಮತ್ತು ಕತೆಗಳು ವಿವಿಧ ವಿಶ್ವವಿದ್ಯಾನಿಲಯಗಳ ಪದವಿ ವಿದ್ಯಾರ್ಥಿಗಳಿಗೆ ಪಠ್ಯಗಳಾಗಿವೆ. ಅವರ ಜೀವನ ಮತ್ತು ಸಾಹಿತ್ಯ ಕುರಿತು ಸಂಶೋಧನಾರ್ಥಿಯೊಬ್ಬರು ಪಿಎಚ್.ಡಿ. ಪದವಿ ಪಡೆದಿದ್ದಾರೆ. ಇದನ್ನು ನೋಡಿದರೆ ಅವರ ಬರಹದ ಶಕ್ತಿ ಏನೆಂಬುದು ಅರ್ಥವಾಗುತ್ತದೆ. ಸದಾ ತುಳಿತಕ್ಕೊಳಗಾದವರ ದನಿಯಾಗಿ, ಶೋಷಣೆಗೊಳಗಾದವರ ಪರವಾಗಿ ಹೋರಾಟ ಮಾಡುತ್ತಾ ಎಪ್ಪತ್ತೈದು ವರ್ಷವಾಗಿದ್ದರೂ ಇಪ್ಪತ್ತೈದರ ಉತ್ಸಾಹ ಹೊಂದಿರುವವರು ಲಲಿತಾ ನಾಯಕ್. ಅವರದು ಸದಾ ಮುಗುಳ್ನಗೆಯ ಮುಖ, ನಿರಾಡಂಬರ ನಿಲುವು. ಯಾವಾಗಲೂ ಬ್ಯಾಗಿನಲ್ಲೊಂದು ಪುಸ್ತಕ, ಪೆನ್ನು ಮತ್ತು ಕಾಗದ ಇದ್ದೇ ಇರಬೇಕು. ಯಾವುದೇ ಕಾರ್ಯಕ್ರಮ ಇರಲಿ ಭಾಷಣಕಾರರ ಮಾತಿನಲ್ಲಿ ಆಸಕ್ತಿಕರ ವಿಚಾರಗಳಿದ್ದರೆ ಅಲ್ಲೇ ಅದನ್ನು ನೋಟ್ ಮಾಡಿಕೊಳ್ಳುತ್ತಾರೆ. ಚಿಕ್ಕ ವಯಸ್ಸಿನಿಂದಲೇ ಪುಸ್ತಕಗಳನ್ನು ಓದುವ ಹವ್ಯಾಸ ಬೆಳೆಸಿಕೊಂಡಿದ್ದ ಅವರು ಚಾಂಪ್ಲಾ ನಾಯಕ್ ಅವರನ್ನು ಮದುವೆಯಾದ ನಂತರ ತಮ್ಮ ಮನಸ್ಸಿಗೆ ಬಂದ ಅನೇಕ ವಿಚಾರಗಳನ್ನು ಬರೆದು ಟ್ರಂಕಿನಲ್ಲಿ ಇರಿಸುತ್ತಿದ್ದರು. ಪತಿಯೇ ಅದನ್ನು ಗಮನಿಸಿ ಆಕಾಶವಾಣಿಗೆ ಅವರ ನಾಟಕವನ್ನು ಕಳಿಸಲು ಹೇಳಿದರು. ಅದು ಅವರ ‘ಚಂದ್ರ ಪರಾಭವ’ ನಾಟಕವಾಗಿ ಮೊತ್ತಮೊದಲ ಬಾರಿಗೆ ಆಕಾಶವಾಣಿಯಲ್ಲಿ ಪ್ರಸಾರವಾಯಿತು. ಹೀಗೆ ಆರಂಭವಾದ ಅವರ ಅಕ್ಷರಕೃಷಿ ‘ನಂ ರೂಪ್ಲಿ’, ‘ಒಡಲ ಬೇನೆ’, ‘ಹಬ್ಬ ಮತ್ತು ಬಲಿ’, ‘ಬಿದಿರು ಮಳೆ ಕಡ್ಡಿ’, ‘ನೆಲೆ ಬೆಲೆ’, ‘ಚುಟುಕುಗಳು’, ‘ಕೈ ಹಿಡಿದು ನಡೆಸೆನ್ನನು’, ‘ಬಂಜಾರ ಹೆಜ್ಜೆಗುರುತು’, ‘ಮಕ್ಕಳ ಕಥಾಸಂಕಲನ’ ಹೀಗೆ ಹಲವಾರು ಕೃತಿಗಳು ಪ್ರಕಟವಾಗುವ ತನಕ ಮುಂದುವರಿಯಿತು. ಜೊತೆಗೆ ಲಂಕೇಶ್ ಪತ್ರಿಕೆಯಲ್ಲಿ ಅವರು ವರದಿಗಳನ್ನು ಮತ್ತು ಲೇಖನಗಳನ್ನು ಬರೆದು ಕನ್ನಡದ ಪ್ರಗತಿಪರ ಮನಸ್ಸುಗಳಲ್ಲಿ ತಮ್ಮದೇ ಆದ ಸ್ಥಾನ ಪಡೆದುಕೊಂಡರು. ಅವರು ಬಿಡುವಿಲ್ಲದ ಹೋರಾಟಗಾರ್ತಿ. ಕನ್ನಡಪರ, ಮಹಿಳಾಪರ, ಸಂಶೋಧಕ ಕಲ್ಬುರ್ಗಿಯವರ, ಪತ್ರಕರ್ತೆ ಗೌರಿ ಲಂಕೇಶ್ ಅವರ ಹತ್ಯೆ ಖಂಡಿಸಿ ನಡೆಸಿದ ಹೋರಾಟವಿರಲಿ ಎಲ್ಲದರಲ್ಲಿಯೂ ಅವರು ಮುಂಚೂಣಿಯಲ್ಲಿದ್ದು ಕಿರಿಯರನ್ನು ಹುರಿದುಂಬಿಸಿದರು. ಅವರಿಗೆ ಕೊಲೆ ಬೆದರಿಕೆ ಪತ್ರ ಬಂದಾಗ ನಮ್ಮೆಲ್ಲರ ಒತ್ತಾಯಕ್ಕೆ ಮಣಿದು ಪೊಲೀಸರಿಗೆ ದೂರು ಕೊಟ್ಟರು. ಆಗ ಸರಕಾರವೇ ಅವರಿಗೆ ಗನ್ ಮ್ಯಾನ್ ಸೇವೆ ಕೊಟ್ಟಿತು. ಅದು ಈಗಲೂ ಮುಂದುವರಿದಿದೆ. ಶಾಸಕಿಯಾಗಿ ಮತ್ತು ಸಚಿವೆಯಾಗಿ ಅನೇಕ ಯೋಜನೆಗಳನ್ನು ರೂಪಿಸಿದ್ದು ಅವರ ಸಾಧನೆಯ ಮೈಲಿಗಲ್ಲು. ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದ ಆವರಣದಲ್ಲಿ ಕನ್ನಡ ಭವನ ಆರಂಭಿಸುವ ಕಡತಕ್ಕೆ ಅನುಮೋದನೆ ನೀಡಿದ್ದು ಅವರು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಚಿವೆಯಾಗಿದ್ದಾಗ. ಸರಕಾರಿ ಶಾಲಾ ವಿದ್ಯಾರ್ಥಿಗಳಿಗೆ ಮಧ್ಯಾಹ್ನದ ಊಟ, ಸಮವಸ್ತ್ರ ವಿತರಣೆ ಆರಂಭಿಸಿದ್ದು ಅವರು ಮಂತ್ರಿಯಾಗಿದ್ದಾಗಲೇ. ಗ್ರಾಮೀಣ ಪ್ರದೇಶಗಳ ವಿದ್ಯಾರ್ಥಿಗಳಿಗೆ ಉಚಿತ ಬಸ್‌ಪಾಸ್ ನೀಡಿದ್ದು, ಅನಾರೋಗ್ಯ ಪೀಡಿತ ಕಲಾವಿದರಿಗೆ ಐವತ್ತು ಸಾವಿರ ರೂಪಾಯಿಗಳ ಸಹಾಯಧನ ನೀಡಿದ್ದು ಮತ್ತು ಹತ್ತು ವರ್ಷಗಳ ಕಾಲ ಸೇವೆ ಸಲ್ಲಿಸಿದ ಅಂಗನವಾಡಿ ಕಾರ್ಯಕರ್ತೆಯರಿಗೆ ಮೇಲ್ವಿಚಾರಕರ ಹುದ್ದೆ ನೀಡಿದ್ದು ಇವರ ಹೆಗ್ಗಳಿಕೆ. ಸಾಹಿತ್ಯ ಕ್ಷೇತ್ರದಲ್ಲಿ ಗಣನೀಯ ಸಾಧನೆ ಮಾಡಿದ ಲೇಖಕಿಯರಿಗೆ ‘ದಾನಚಿಂತಾಮಣಿ ಅತ್ತಿಮಬ್ಬೆ ಪ್ರಶಸ್ತಿ’ ಸ್ಥಾಪಿತವಾಗಿದ್ದು ಲಲಿತಾ ನಾಯಕ್ ಅವರು ಮಂತ್ರಿಯಾಗಿದ್ದ ಸಂದರ್ಭದಲ್ಲಿಯೇ. ಹಾಗೆಯೇ ದೇವದುರ್ಗದಲ್ಲಿ ಸರಕಾರಿ ಕಾಲೇಜು ಆರಂಭವಾಗಿದ್ದು ಅದೇ ಕಾಲದಲ್ಲಿ. ಅಂಗನವಾಡಿ ಕಾರ್ಯಕರ್ತೆಯರಿಗೆ ಕಲ್ಯಾಣ ನಿಧಿಯನ್ನು ಅವರು ಸ್ಥಾಪನೆ ಮಾಡಿದರು. ಹೀಗೆ ಹಲವಾರು ಜನಪರ ಮತ್ತು ಅಭಿವೃದ್ಧಿ ಕೆಲಸಗಳಿಂದ ಉತ್ತಮ ಶಾಸಕಿ ಮತ್ತು ಸಚಿವೆ ಎನಿಸಿಕೊಂಡರು. ಲಲಿತಾ ನಾಯಕ್ ಅವರ ಕಾರ್ಯಕ್ಷೇತ್ರ ರಾಯಚೂರು ಜಿಲ್ಲೆ. ಅಲ್ಲಿನ ದೇವದುರ್ಗ ಕ್ಷೇತ್ರದಿಂದ ಚುನಾವಣೆಯಲ್ಲಿ ಸ್ಪರ್ಧಿಸಿ ಶಾಸಕಿಯಾಗಿ ವಿಧಾನಸಭೆಯನ್ನು ಪ್ರವೇಶಿಸಿದರು. ತಮ್ಮ ಕ್ಷೇತ್ರದಲ್ಲಿ ನೀರಾವರಿ ಯೋಜನೆಯನ್ನು ಅನುಷ್ಠಾನಗೊಳಿಸಿದರು. ಅವರಲ್ಲಿ ಚಿಕ್ಕಂದಿನಲ್ಲಿ ಪ್ರಶ್ನಿಸುವ ಮನೋಭಾವ ಇತ್ತು. ನಂತರ ಅವರು ಬಂಡಾಯ ಸಾಹಿತ್ಯ ಸಂಘಟನೆಯ ಸಂಪರ್ಕಕ್ಕೆ ಬಂದಾಗ ವೈಚಾರಿಕತೆಯನ್ನೇ ತಮ್ಮ ಬದುಕಿನ ಭಾಗವಾಗಿಸಿಕೊಂಡರು. ಆ ಸಂಘಟನೆಯ ಜೊತೆಗೇ ಅವರೂ ಬೆಳೆದರು. ಅವರ ಸರಳತೆ ಮತ್ತು ಎಲ್ಲರ ಜೊತೆಗೆ ಸ್ನೇಹಪ್ರೀತಿಯಿಂದ ಬೆರೆಯುವ ಮನೋಭಾವ ಇಷ್ಟವಾಗುತ್ತದೆ. ಅವರ ವೈಜ್ಞಾನಿಕ ಮನೋಭಾವದ ಆಲೋಚನೆಗಳು ಅವರ ಬರವಣಿಗೆಯನ್ನು ಮತ್ತಷ್ಟು ಹರಿತಗೊಳಿಸಿದವು. ಲಲಿತಾ ನಾಯಕ್ ಹೋರಾಟದಿಂದ ರೂಪುಗೊಂಡ ಜೀವ. ಆದ್ದರಿಂದಲೇ ಅವರ ಅನುಭವದ್ರವ್ಯ ವಿಸ್ತಾರವಾದುದು. ಪತ್ರಕರ್ತರಾಗಿಯೂ ಹಲವು ವರ್ಷಗಳ ಕಾಲ ದುಡಿದಿರುವ ಅವರ ಬರವಣಿಗೆಯ ಸಂವಹನ ಸರಳ. ಹೇಳಬೇಕಾದುದನ್ನು ನೇರವಾಗಿ ಹೇಳುವ ಕಲೆಯನ್ನು ಅವರು ರೂಢಿಸಿಕೊಂಡಿದ್ದಾರೆ. ಕತೆ, ಕಾವ್ಯ, ಕಾದಂಬರಿ, ಸಂದರ್ಶನ ಮುಂತಾದ ವೈವಿಧ್ಯಮಯ ಪ್ರಕಾರಗಳಲ್ಲಿ ಸಿದ್ಧಹಸ್ತರು ಎನ್ನುವ ಹಾಗೆ ಬರೆಯುತ್ತಾರೆ. ಅವರ ಕವನ ಸಂಕಲನಗಳು ಹೊಸತೊಂದು ಅನುಭವಲೋಕವನ್ನು ಕಟ್ಟಿಕೊಡುತ್ತವೆ. ‘ಬಂಜಾರ ಹೆಜ್ಜೆಗುರುತುಗಳು’ ಎಂಟು ಅಧ್ಯಾಯಗಳಲ್ಲಿ ಬಂಜಾರ ಸಮುದಾಯದ ಆಚಾರ, ವಿಚಾರ, ಹಬ್ಬಹರಿದಿನ, ಸಂಬಂಧಗಳನ್ನು ಆತ್ಮೀಯವಾಗಿ ಕಟ್ಟಿಕೊಡುತ್ತವೆ. ಲಲಿತಾ ನಾಯಕ್ ಅವರಿಗೆ ಕರ್ನಾಟಕ ಸಾಹಿತ್ಯ ಅಕಾಡಮಿ ಪ್ರಶಸ್ತಿ, ದಾನಚಿಂತಾಮಣಿ ಅತ್ತಿಮಬ್ಬೆ ಪ್ರಶಸ್ತಿ, ಕುವೆಂಪು ವಿಶ್ವವಿದ್ಯಾನಿಲಯದಿಂದ ಗೌರವ ಡಾಕ್ಟರೇಟ್, ಕರ್ನಾಟಕ ಲೇಖಕಿಯರ ಸಂಘದ ಅನುಪಮಾ ಪ್ರಶಸ್ತಿ ಹೀಗೆ ಹತ್ತುಹಲವು ಪ್ರಶಸ್ತಿಗಳಿಗೆ ಭಾಜನರಾಗಿದ್ದಾರೆ. ನಾನು ಮತ್ತು ಅವರು ಕಳೆದ ಎರಡು-ಮೂರು ದಶಕಗಳಿಂದ ಕನ್ನಡಪರ, ಭೂಕಬಳಿಕೆ, ಮೌಢ್ಯಾಚರಣೆ ವಿರುದ್ಧದ ಕಾಯ್ದೆಯ ಪರ ಹೋರಾಟವಿರಲಿ ಹೀಗೆ ಒಟ್ಟೊಟ್ಟಿಗೇ ಅನೇಕ ಹೋರಾಟಗಳಲ್ಲಿ ಪಾಲ್ಗೊಂಡಿದ್ದೇವೆ. ಹಾಗೆಯೇ ನಾವಿಬ್ಬರೂ ಕಳೆದ ಐದು ವರ್ಷಗಳಿಂದ ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯಕಾರಿ ಸಮಿತಿಯ ಸದಸ್ಯರಾಗಿ ಒಟ್ಟಿಗೆ ಸಾಹಿತ್ಯ ಪರಿಷತ್ತಿನ ಎಲ್ಲಾ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಭಾಗವಹಿಸಿದ್ದೇವೆ. ಜೊತೆಗೆ ನಾವು ಅನೇಕ ಸಮಿತಿಗಳಲ್ಲಿ ಸದಸ್ಯರಾಗಿ ದುಡಿದಿದ್ದೇವೆ. ನಾನು ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷೆಯಾಗಿದ್ದಾಗ ಅವರ ಸಮಗ್ರ ಸಾಹಿತ್ಯದ ಎರಡು ಸಂಪುಟಗಳನ್ನು ಪ್ರಕಟಮಾಡಿರುವುದು ನನಗೆ ಸಂತೋಷದ ವಿಷಯ. ಈ ಸಂಪುಟದಲ್ಲಿ ಇರುವ ಗ್ರಹಿಕೆ ಗೊಂಚಲು ವಿಭಾಗದಲ್ಲಿ ಅವರು ತ್ರಿವೇಣಿ, ಶಾಂತರಸ, ತರಾಸು, ಅನಕೃ, ಎಂ.ಕೆ.ಇಂದಿರಾರ ಕತೆಕಾದಂಬರಿಗಳನ್ನು ತಾವು ಗ್ರಹಿಸಿದ ಕ್ರಮದಲ್ಲಿ ಕಟ್ಟಿಕೊಟ್ಟಿದ್ದಾರೆ. ವ್ಯಕ್ತಿಚಿತ್ರ, ವಿಶಿಷ್ಟ ವರದಿಗಾರಿಕೆ, ಹೊಸ ಸಾಹಿತಿಗಳ ಕೃತಿಗಳ ವಿಶ್ಲೇಷಣೆ ಸೇರಿದಂತೆ 40 ಬರಹಗಳು ಈ ವಿಭಾಗದಲ್ಲಿ ಸಂಗ್ರಹಿತವಾಗಿವೆ. ಇವು ಒಂದಕ್ಕಿಂತ ಒಂದು ಭಿನ್ನವಾಗಿವೆ. ಆಕರ್ಷಕವಾಗಿವೆ. ವ್ಯಕ್ತಿಚಿತ್ರಗಳಲ್ಲಿ ಇದುವರೆಗೂ ಯಾರೂ ಕಟ್ಟಿಕೊಡದ ವ್ಯಕ್ತಿಚಿತ್ರಗಳಿವೆ. ಮಕ್ಕಳ ಸಾಹಿತ್ಯ ವಿಭಾಗದಲ್ಲಿ 20 ಕತೆಗಳಿವೆ. ಐತಿಹ್ಯ, ಜಾನಪದ, ಲೇಖಕರ ಕಾಲ್ಪನಿಕ ಲೋಕ ಇಲ್ಲಿ ಆಕರ್ಷಕ ಕತೆಗಳಾಗಿ ರೂಪುಗೊಂಡಿವೆ. ಕತೆಯ ಮೂಲಕ ಮಕ್ಕಳಿಗೆ ಗಾಂಧಿಯನ್ನು ಪರಿಚಯಿಸುವಂತಹ ಲೇಖನಗಳೂ ಇವೆ. ವಿಭಿನ್ನ ಅನುಭವಲೋಕದ ವಿವಿಧ ಮಗ್ಗುಲುಗಳನ್ನು ಅವರು ಕಲಾತ್ಮಕವಾಗಿ ಕಟ್ಟಿಕೊಟ್ಟಿದ್ದಾರೆ. ಹಾಗಾಗಿಯೇ ಅವರು ಬರೆದಿರುವ ಕತೆ, ಕವನ, ನಾಟಕ, ಕಾದಂಬರಿಗಳು ಎಲ್ಲರೂ ಓದಲೇಬೇಕಾದ ಪುಸ್ತಕಗಳಾಗಿವೆ. ಆಗ ರೂಢಿಯಲ್ಲಿದ್ದ ಗ್ರಾಂಥಿಕ ಅಥವಾ ಹಳೆ ಮೈಸೂರು ಆಡುಭಾಷೆಯಲ್ಲಿ ‘ನೆಲೆ ಬೆಲೆ’ ಕಾದಂಬರಿಯನ್ನು ಅವರು ಆಕರ್ಷಕವಾಗಿ ಬರೆದಿದ್ದಾರೆ. ಕತೆ ಕುತೂಹಲ ಹುಟ್ಟಿಸುತ್ತದೆ. ಅನಿರೀಕ್ಷಿತ ತಿರುವುಗಳು ಬದುಕಿನ ಅರ್ಥವಂತಿಕೆಯನ್ನು ಗ್ರಹಿಸಿವೆ. ಅವರ ‘ಗತಿ’ ಕಾದಂಬರಿಯೂ ತನ್ನ ವಿನೂತನ ವಸ್ತುವಿನಿಂದಾಗಿ ಗಮನ ಸೆಳೆಯುತ್ತದೆ. ರಾಯಚೂರು ಭಾಗದ ಅಪ್ಪಟ ಆಡುಭಾಷೆ ತುಂಬಾ ಸರಳವಾಗಿ ಸಂವಹನವಾಗುತ್ತದೆ. ಕಥಾ ವಿಭಾಗದಲ್ಲಿ ‘ಹಬ್ಬ ಮತ್ತು ಬಲಿ’ಯಿಂದ ‘ಮೂರು ಕಾಸಿನ ಹೆಣ್ಣು’ ಮುಂತಾದ ಕತೆಗಳು ಸಲೀಸಾಗಿ ಓದಿಸಿಕೊಳ್ಳುತ್ತವೆ. ಅವುಗಳ ಒಡಲೊಳಗೆ ವಿಶಿಷ್ಟ ಲೋಕದ ವಿವರಗಳು ಮೈತಳೆದಿವೆ. ‘ಬುದ್ವಂತರು’, ‘ಪ್ರೇಮ ವಿವಾಹ’, ‘ನಂಬಿ ಕೆಟ್ಟೆನಲ್ಲೊ’, ‘ತಾಗುವ ಮುನ್ನ ಬಾಗುವ ತಲೆ ಲೇಸು’ ಮುಂತಾದ 11 ಬಾನುಲಿ ನಾಟಕಗಳು ಈ ಪ್ರಕಾರದ ವಿಶಿಷ್ಟ ಸಾಧನೆಗೆ ಉದಾಹರಣೆಗಳಾಗಿವೆ. ಒಟ್ಟಾರೆ ಹೇಳುವುದಾದರೆ ಲಲಿತಾ ನಾಯಕ್ ಭಿನ್ನ ದನಿಯ ಗಟ್ಟಿ ನಿಲುವಿನ ಲೇಖಕಿ. ಅನ್ಯಾಯದ ವಿರುದ್ಧ ಲೇಖನಿಯನ್ನು ಸದಾ ಹರಿತವಾಗಿಟ್ಟುಕೊಂಡು ಬರೆಯಲು ಸಿದ್ಧರಾಗಿರುವ ಲೇಖಕಿ. ಜಾತಿಭೇದ, ಲಿಂಗಭೇದ ಮತ್ತು ಮೌಢ್ಯಾಚರಣೆಗಳಿಲ್ಲದ ಸಮಸಮಾಜದ ಕನಸು ಕಾಣುತ್ತಾ ಅದನ್ನು ನನಸು ಮಾಡುವತ್ತ ತುಡಿಯುವ ಮತ್ತು ಮಿಡಿಯುವ ಜೀವ ಲಲಿತಾ ನಾಯಕ್ ಅವರದ್ದು. ಪ್ರಸ್ತುತ ಅವರು ಮೂರು ಮಕ್ಕಳು, ಸೊಸೆಯಂದಿರು ಮತ್ತು ಮೊಮ್ಮಕ್ಕಳ ತುಂಬುಕುಟುಂಬದ ಜೊತೆ ಬೆಂಗಳೂರಿನಲ್ಲಿ ಸಾರ್ಥಕ ಜೀವನ ನಡೆಸುತ್ತಿದ್ದಾರೆ. ಎಪ್ಪತ್ತೈದರ ವಸಂತಕ್ಕೆ ಕಾಲಿರಿಸುತ್ತಿರುವ ಈ ಸಂದರ್ಭದಲ್ಲಿ ಮಾನವೀಯ ಮೌಲ್ಯಗಳನ್ನು ಪ್ರತಿಬಿಂಬಿಸುವ ಅವರು ಶತಾಯುಷಿಯಾಗಲಿ ಎಂಬ ಹಾರೈಕೆ ನನ್ನದು.

(ರಾಜ್ಯ ಸಾಹಿತಿ ಮತ್ತು ಕಲಾವಿದರ ವೇದಿಕೆ, ಬೆಂಗಳೂರು ನೇತೃತ್ವದಲ್ಲಿ ‘ಬಿ.ಟಿ. ಲಲಿತಾ ನಾಯ್ಕ-75’ರ ಪ್ರಯುಕ್ತ ಇಂದು ಬೆಳಗ್ಗೆ 11:30ಕ್ಕೆ ಬೆಂಗಳೂರಿನ ಸಂಜಯ ನಗರದ ಶಾಸ್ತ್ರಿ ಮೆಮೋರಿಯಲ್ ಹಾಲ್‌ನಲ್ಲಿ ಕವಿಗೋಷ್ಠಿ ಹಮ್ಮಿಕೊಳ್ಳಲಾಗಿದೆ.)

Writer - ಡಾ. ವಸುಂಧರಾ ಭೂಪತಿ

contributor

Editor - ಡಾ. ವಸುಂಧರಾ ಭೂಪತಿ

contributor

Similar News