ರಂಗಕರ್ಮಿ ನಾಗೇಶ್ ರಂಗಭೂಮಿಯ ಇತಿಹಾಸದಲ್ಲೇ ಅವಿಭಾಜ್ಯ ಅಂಗ: ಟಿ.ಎಸ್.ನಾಗಾಭರಣ

Update: 2021-09-19 18:19 GMT

ಬೆಂಗಳೂರು, ಸೆ.19: ‘70ರ ದಶಕದಲ್ಲಿ ರಂಗಭೂಮಿಗೆ ಒಂದು ಸೂಕ್ತ ವೇದಿಕೆಯನ್ನು ನಿರ್ಮಿಸಿದ್ದ ಆರ್.ನಾಗೇಶ್ ಅವರು, ರಂಗಭೂಮಿಯ ಇತಿಹಾಸದಲ್ಲೇ ಅವಿಭಾಜ್ಯ ಅಂಗ. ಇಂದು ಅವರ ಕುರಿತು ಒಂದು ಪುಸ್ತಕ ಬಂದಿರುವುದು ನಿಜಕ್ಕೂ ಶ್ಲಾಘನೀಯ’ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಟಿ.ಎಸ್.ನಾಗಾಭರಣ ಅವರು ಮೆಚ್ಚುಗೆ ವ್ಯಕ್ತಪಡಿಸಿದರು. 

ಎನ್.ಆರ್. ಕಾಲನಿಯಲ್ಲಿರುವ ಸಿ.ಅಶ್ವಥ್ ಕಲಾ ಭವನದಲ್ಲಿ ಬಿ.ಎಸ್. ವಿದ್ಯಾರಣ್ಯ ಅವರು ಸಂಪಾದಿರುವ ‘ಆರ್.ನಾಗೇಶ್ ರಂಗವಿಹಂಗಮ’ ಎಂಬ ಕೃತಿ ಲೋಕಾರ್ಪಣೆ ಮಾಡಿ ಮಾತನಾಡಿದ ಅವರು, ‘ಈ ಕೃತಿಯು ಓದುಗರಿಗೆ ರಂಗಭೂಮಿಯ ಮಜಲುಗಳನ್ನು ತೆರೆದಿಡುತ್ತದೆ. ರಂಗ ಪ್ರಜ್ಞೆಯನ್ನು ಮೂಡಿಸುವುದಲ್ಲದೆ, ಎಲ್ಲಾ ರಂಗಕರ್ಮಿಗಳಿಗೆ ಒಂದು ಮಾರ್ಗದರ್ಶನವನ್ನು ನೀಡುತ್ತದೆ. ನಾಗೇಶ್ ಅವರು ಸಾಹಿತ್ಯದ ಪ್ರಕಾರಗಳನ್ನು ರಂಗ ವೇದಿಕೆಯಲ್ಲಿ ನಾಟಕಗಳಾಗಿ ಮೂಡಿಸಿದ ಒಬ್ಬ ಹವ್ಯಾಸಿ ರಂಗಕರ್ಮಿ. ಅವರು ಅಗಲಿದರೂ, ಅವರ ರಂಗ ನಾಟಕಗಳು ನಿರಂತರವಾಗಿ ಪ್ರದರ್ಶನವಾಗಿ ಮರುಜೀವ ಪಡೆದುಕೊಳ್ಳಲಿ’ ಎಂದು ಆಶಿಸಿದರು.

ಇದೇ ಸಂದರ್ಭದಲ್ಲಿ ಬಿ.ವಿ.ಕಾರಂತ ಪ್ರಶಸ್ತಿ ಪುರಸ್ಕೃತರಾದ ಎಚ್.ವಿ.ವೆಂಕಟಸುಬ್ಬಯ್ಯ ಅವರನ್ನು ಗೌರವಿಸಲಾಯಿತು.

ಕಾರ್ಯಕ್ರಮದಲ್ಲಿ ಶ್ರೀನಿವಾಸ ಜಿ. ಕಪ್ಪಣ್ಣ, ಜೆ.ಲೋಕೇಶ್, ಬಿ.ವಿ. ರಾಜಾರಾಮ್, ಕೆ.ವಿ.ನಾಗರಾಜಮೂರ್ತಿ, ಶಶಿಧರ ಭಾರಿಘಾಟ್ ಮತ್ತು ಕೃತಿಯ ಲೇಖಕರಾದ ಬಿ.ಎಸ್.ವಿದ್ಯಾರಣ್ಯ ಸೇರಿದಂತೆ ಹಲವರು  ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News