ಸರೋಜ ಮೋಹನದಾಸ್ ರಾವ್

Update: 2021-09-20 14:59 GMT

ಉಡುಪಿ, ಸೆ.20: ಮಂಗಳೂರಿನ ಹಿರಿಯ ಸಂಗೀತ ವಿದುಷಿ ಸರೋಜ ಮೋಹನದಾಸ್ ರಾವ್ ಸೋಮವಾರ ಬೆಂಗಳೂರಿನ ತಮ್ಮ ಮಗನ ಮನೆಯಲ್ಲಿ ವಯೋಸಹಜ ಅನಾರೋಗ್ಯದಿಂದ, ತಮ್ಮ 90ನೇ ವಯಸ್ಸಿನಲ್ಲಿ ನಿಧನರಾಗಿದ್ದಾರೆ.

ಸುಮಾರು 75 ವರ್ಷಗಳಿಂದ ಮಂಗಳೂರಿನಲ್ಲಿ ನೆಲೆಸಿ, ಕರ್ನಾಟಕ ಸಂಗೀತ ಕಚೇರಿಗಳನ್ನು ನೀಡುತ್ತಾ, ದೀರ್ಘಕಾಲ ಅನೇಕ ಶಿಷ್ಯಂದಿರಿಗೆ ಸಂಗೀತ ಶಿಕ್ಷಣ ವನ್ನು ನೀಡಿ ಪ್ರಸಿದ್ಧರಾಗಿದ್ದರು. ಮಂಗಳೂರಿನ ಕಪಿತಾನಿಯೊ ಟೀಚರ್ಸ್‌ ಟ್ರೈನಿಂಗ್ ಕೇಂದ್ರ ಹಾಗೂ ಸೈಂಟ್ ಆನ್ಸ್ ಶಿಕ್ಷಕಿಯರ ತರಬೇತಿ ಕೇಂದ್ರದಲ್ಲಿ ಸಂಗೀತ ಶಿಕ್ಷಕಿಯಾಗಿದ್ದು, ವೀಣೆ, ವಯೊಲಿನ್, ಕೀ ಬೋರ್ಡ್, ಜಲತರಂಗ ವಾದನಗಳಲ್ಲಿಯೂ ವಿದ್ಯಾರ್ಥಿಗಳಿಗೆ, ಹಾಗೂ ನಿವೃತ್ತಿಯ ಬಳಿಕ ಇತರ ಶಿಷ್ಯರಿಗೆ ತರಬೇತಿ ಕೊಡುತ್ತಿದ್ದರು.

ಮಂಗಳೂರು-ಉಡುಪಿಯ ಹಲವಾರು ಸಂಗೀತ ಸಂಸ್ಥೆಗಳ ಸಕ್ರಿಯ ಸದಸ್ಯೆ ಯಾಗಿದ್ದ ಇವರು ವಿವಿಧ ಸಂಘ ಸಂಸ್ಥೆಗಳಿಂದ ಸಂಮಾನಿಸಲ್ಪಟ್ಟು, ದಕ್ಷಿಣ ಕನ್ನಡ ರಾಜ್ಯೋತ್ಸವ ಪ್ರಶಸ್ತಿಯನ್ನು ಪಡೆದಿದ್ದರು. ಇವರಿಗೆ ಪೇಜಾವರ ಶ್ರೀಗಳು ಶ್ರೀ ರಾಮವಿಠಲ ಪ್ರಶಸ್ತಿ ನೀಡಿ ಗೌರವಿಸಿದ್ದಾರೆ. ಅಲ್ಲದೇ ಕನಕ-ವಾದಿರಾಜ ಸಂಗೀತ ಮಹೋತ್ಸವ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿತ್ತು.

ಸರೋಜ ಮೋಹನದಾಸ್ ಬೆಂಗಳೂರಿನ ಗುರುನಾರಾಯಣ ಸ್ವಾಮಿ ಭಾಗವತ (ಸಂಗೀತ) ಹಾಗೂ ಆಕಾಶವಾಣಿ ಕಲಾವಿದ ಟಿ.ಜಿ. ಗೋಪಾಲಕೃಷ್ಣ (ವಯೊಲಿನ್) ಇವರ ಶಿಷ್ಯೆ. ಸರೋಜ ಅವರು ಓರ್ವ ಪುತ್ರ, ಓರ್ವ ಪುತ್ರಿ ಹಾಗೂ ಅಪಾರಬಂಧುಬಳಗ, ಶಿಷ್ಯ ಹಾಗೂ ಅಭಿಮಾನಿ ವೃಂದವನ್ನು ಅಗಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News

ವಸಂತಿ