ಅಮೆಝಾನ್ ವಕೀಲರಿಂದ ಭಾರತ ಸರಕಾರದ ಅಧಿಕಾರಿಗಳಿಗೆ 'ಲಂಚ ನೀಡಿಕೆ' ಪ್ರಕರಣ: ಆಂತರಿಕ ತನಿಖೆ ನಡೆಸಲಿರುವ ಸಂಸ್ಥೆ

Update: 2021-09-21 12:58 GMT
ಸಾಂದರ್ಭಿಕ ಚಿತ್ರ

ಹೊಸದಿಲ್ಲಿ:  ಇ-ಕಾಮರ್ಸ್ ಸಂಸ್ಥೆ ಅಮೆಝಾನ್‍ನ ಕಾನೂನು ಸಲಹೆಗಾರರು ಭಾರತ ಸರಕಾರದ ಅಧಿಕಾರಿಗಳಿಗೆ ಲಂಚ ನೀಡಿದ್ದಾರೆಂಬ ಆರೋಪಗಳ ಕುರಿತು ಆಂತರಿಕ ತನಿಖೆ ನಡೆಸಲಾಗುವುದು ಎಂದು ಕಂಪೆನಿ ಹೇಳಿದ್ದಾಗಿ thewire.in ವರದಿ ಮಾಡಿದೆ.

ಅಮೆಝಾನ್ ನೀಡಿದ "ಲೀಗಲ್ ಫೀ" ಇದರ ಒಂದು ಭಾಗವನ್ನು  ಕಂಪೆನಿಯ  ಒಬ್ಬರು ಅಥವಾ ಹೆಚ್ಚು ಕಾನೂನು ಪ್ರತಿನಿಧಿಗಳು ಲಂಚದ ರೂಪದಲ್ಲಿ ಹಸ್ತಾಂತರಿಸಿದ್ದಾರೆಂದು ವಿಸಿಲ್‍ಬ್ಲೋವರ್ ಒಬ್ಬರು ದೂರು ದಾಖಲಿಸಿದ್ದಾರೆಂದು ಮಾರ್ನಿಂಗ್ ಕಾಂಟೆಕ್ಸ್ಟ್ ವರದಿ ಮಾಡಿತ್ತು.

ಆದರೆ ಸರಕಾರ ಮಟ್ಟದಲ್ಲಿ ಭ್ರಷ್ಟಾಚಾರವನ್ನು ಸಹಿಸುವ ಪ್ರಶ್ನೆಯಿಲ್ಲ ಎಂದು ಅಧಿಕಾರಿಗಳ ಹೇಳಿದ್ದಾರೆ. ಅಮೆಝಾನ್ ಕಳೆದ ಎರಡು ವರ್ಷಗಳಲ್ಲಿ ಲೀಗಲ್ ಫೀ ಆಗಿ ರೂ 8,500 ಕೋಟಿ ಖರ್ಚು ಮಾಡಿದೆ, ಈ ಹಣ ಎಲ್ಲಿಗೆ ಹೋಗುತ್ತಿದೆ ಎಂದು ತಿಳಿಯುವ ಸಮಯ ಇದು, ಎಂದೂ ವರದಿ ಹೇಳಿದೆ.

ಅಮೆಝಾನ್ ತನ್ನ ಹಿರಿಯ ವಕೀಲರನ್ನು ಆಂತರಿಕ ತನಿಖೆ ಪೂರ್ಣಗೊಳ್ಳುವ ತನಕ ರಜೆ ಮೇಲೆ ಕಳುಹಿಸಿದೆ ಎನ್ನಲಾಗಿದೆ. ಈ ವಕೀಲ ಹಾಗೂ ದಿಲ್ಲಿಯ ಸ್ವತಂತ್ರ ವಕೀಲರೊಬ್ಬರು ತನಿಖೆಯ ಕೇಂದ್ರಬಿಂದು ಎನ್ನಲಾಗಿದೆ.

ಅಮೆಝಾನ್ ಕೂಡ ತಾನು ಭ್ರಷ್ಟಾಚಾರವನ್ನು ಸಹಿಸುವುದಿಲ್ಲ ಎಂದು ಹೇಳಿದೆ ಹಾಗೂ ಹೆಚ್ಚಿನ ಮಾಹಿತಿ ಬಹಿರಂಗಗೊಳಿಸಿಲ್ಲ. ಆದರೆ ಅಮೆರಿಕಾ ಮೂಲದ ಕಂಪೆನಿಗಳಿಗೆ ತಮ್ಮ ಉದ್ಯಮ ಹಿತಾಸಕ್ತಿಗಳನ್ನು ಕಾಪಾಡಲು ವಿದೇಶಿ ಅಧಿಕಾರಿಗಳಿಗೆ ಲಂಚ ನೀಡುವುದನ್ನು ನಿರ್ಬಂಧಿಸುವ ಅಮೆರಿಕಾದ ವಿದೇಶಿ ಭ್ರಷ್ಟ ಚಟುವಟಿಕೆಗಳ ಕಾಯಿದೆಯನ್ವಯ ಅಮೆಝಾನ್ ತನಿಖೆ ಎದುರಿಸಬೇಕಾಗಬಹುದು ಎನ್ನಲಾಗುತ್ತಿದೆ.

ಈ ಭ್ರಷ್ಟಾಚಾರ ಪ್ರಕರಣ ಕುರಿತು ತನಿಖೆಗೆ ಕಾನ್ಫೆಡರೇಶನ್ ಆಫ್ ಆಲ್ ಇಂಡಿಯಾ ಟ್ರೇಡರ್ಸ್ ಕೂಡ ಆಗ್ರಹಿಸಿದೆ ಹಾಗೂ ಈ ನಿಟ್ಟಿನಲ್ಲಿ ಕೇಂದ್ರ ವಾಣಿಜ್ಯ ಸಚಿವ ಪಿಯೂಷ್ ಗೋಯೆಲ್ ಅವರಿಗೆ ಪತ್ರ ಬರೆದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News