"ಮಹಿಳೆಯೊಂದಿಗಿರುವ ನಕಲಿ ಫೋಟೊ ಸೋರಿಕೆಯ ಭಯವಿದೆ": ಮಹಾಂತ ನರೇಂದ್ರಗಿರಿ ಆತ್ಮಹತ್ಯಾ ಪತ್ರದಲ್ಲಿ ಬರೆದದ್ದೇನು?

Update: 2021-09-21 17:00 GMT

ಪ್ರಯಾಗರಾಜ್: ತನ್ನ ಶಿಷ್ಯ ಆನಂದ್‌ ಗಿರಿ,‌ ಮಹಿಳೆಯೋರ್ವರ ಜೊತೆಗೆ ಇರುವಂತೆ ನನ್ನ ಫೋಟೊವನ್ನು ನಕಲು ಮಾಡಿ ಅದನ್ನು ಸಾಮಾಜಿಕ ತಾಣಗಳಲ್ಲಿ ಸೋರಿಕೆ ಮಾಡುತ್ತಾನೆಂಬ ಭಯವಿದೆ ಎಂದು ಸೋಮವಾರ ಶವವಾಗಿ ಪತ್ತೆಯಾದ ಪ್ರಯಾಗ್‌ ರಾಜ್‌ ನ ಬಘಂಬರಿ ಮಠದ ಮುಖ್ಯಸ್ಥ ಮಹಂತ್‌ ನರೇಂದ್ರಗಿರಿ ತಮ್ಮ ಆತ್ಮಹತ್ಯಾ ಪತ್ರದಲ್ಲಿ ಬರೆದಿದ್ದಾರೆ ಎಂದು theprint.in ವರದಿ ಮಾಡಿದೆ.

ಆತ್ಮಹತ್ಯೆ ಪತ್ರದ ಪ್ರಕಾರ, ಅಖಿಲ ಭಾರತೀಯ ಅಖಾರ ಪರಿಷತ್‌ ನ ಅಧ್ಯಕ್ಷರಾದ ನರೇಂದ್ರ ಗಿರಿ ಅವರು, "ನಾನು ಸೆಪ್ಟೆಂಬರ್‌ 13ರಂದು ಆತ್ಮಹತ್ಯೆ ಮಾಡಿಕೊಳ್ಳಲು ಪ್ರಯತ್ನಿಸಿದೆ. ಆದರೆ ನನಗೆ ಧೈರ್ಯ ಸಾಲಲಿಲ್ಲ" ಎಂದು ಬರೆದಿದ್ದಾರೆ. ಒಟ್ಟು ಏಳು ಪುಠಗಳ ಪತ್ರದಲ್ಲಿ ಮೇಲ್ಭಾಗದಲ್ಲಿ ಮೊದಲು ಸೆಪ್ಟೆಂಬರ್‌ 13 ಎಂದು ಬರೆದು ಬಳಿಕ ಅದನ್ನು ಅಳಿಸಿ ಸೆಪ್ಟೆಂಬರ್‌ 20 ಎಂದು ಬರೆಯಲಾಗಿದ್ದಾಗಿ ವರದಿ ಉಲ್ಲೇಖಿಸಿದೆ.

"ಆನಂದ್‌ ಗಿರಿಯು ನನ್ನ ಫೋಟೊವನ್ನು ಅಶ್ಲೀಲವಾಗಿರುವ ರೀತಿಯಲ್ಲಿ ಇನ್ನೊಂದು ಮಹಿಳೆಯೊಂದಿಗೆ ಇರುವಂತೆ ಎಡಿಟ್‌ ಮಾಡಿದ್ದಾನೆ ಎಂದು ತಿಳಿದು ಬಂತು. ಇದರ ಬಗ್ಗೆ ನಾನು ಎಷ್ಟು ಮಂದಿಗೆ ಸಮರ್ಥನೆ ನೀಡಬೇಕಾಗಿ ಬರಬಹುದು ಎಂದು ನಾನು ಆಲೋಚಿಸಿದೆ. ಇದು ಸಂಪೂರ್ಣವಾಗಿ ನನ್ನ ಘನತೆಯನ್ನು ಹಾಳು ಮಾಡುತ್ತದೆ" ಎಂದು ಬರೆದಿರುವುದಾಗಿ theprint ಪರಿಶೀಲನೆ ನಡೆಸಿ ಉಲ್ಲೇಖಿಸಿದೆ.

"ನಾನು ಸೆಪ್ಟೆಂಬರ್‌ 13ರಂದು ಆತ್ಮಹತ್ಯೆ ಮಾಡಲು ಪ್ರಯತ್ನಿಸಿದ್ದೆ. ಆದರೆ ನನಗೆ ಧೈರ್ಯ ಸಾಕಾಗಿರಲಿಲ್ಲ. ನಾನು ಯಾವುದೇ ಮಹಿಳೆಯೊಂದಿಗೆ ಸಂಪರ್ಕ ಹೊಂದಿರಲಿಲ್ಲ ಎನ್ನುವುದನ್ನು ಜನರು ನಿಧಾನವಾಗಿ ಅರಿತುಕೊಳ್ಳುತ್ತಾರೆ. ಆವೇಳೆಗಾಗಲೇ ನನ್ನ ಘಟನೆ ಸಂಪೂರ್ಣ ಇಲ್ಲವಾಗಿರುತ್ತದೆ. ನಾನು ಇಂತಹ ಘನತೆಯಿರುವ ಸ್ಥಾನದಲ್ಲಿದ್ದುಕೊಂಡು ಇವುಗಳನ್ನು ಅರಗಿಸಿಕೊಳ್ಳಲು ಸಾಧ್ಯವಿಲ್ಲ. ಅದನ್ನು ನೋಡುತ್ತಾ ಜೀವಿಸಲು ನನ್ನಿಂದ ಸಾಧ್ಯವಿಲ್ಲ. ನಾನು ಆತ್ಮಹತ್ಯೆ ಮಾಡಿಕೊಳ್ಳಲು ಕಾರಣ ಆನಂದಗಿರಿ, ಪ್ರಭಾ ತಿವಾರಿ ಮತ್ತು ಅವರ ಪುತ್ರ ಸಂದೀಪ್‌ ತಿವಾರಿ ಆಗಿದ್ದಾರೆ" ಎಂದು ಅವರು ಬರೆದುಕೊಂಡಿದ್ದಾರೆ.

"ನಾನು ಯಾವುದೇ ಹಣವನ್ನು ಲಪಟಾಯಿಸಿಲ್ಲ. ಒಂದೊಂದು ಹಣವನ್ನೂ ನಾನು ಮಠದ ಮತ್ತು ದೇವಸ್ಥಾನದ ಅಭಿವೃದ್ಧಿಗಾಗಿ ಬಳಸಿಕೊಂಡಿದ್ದೇನೆ. ಮಠದೊಳಗೆ ನಾನು ಕುಳಿತುಕೊಳ್ಳುವ ಜಾಗದಲ್ಲಿ ಸಮಾಧಿ ಮಾಡಿ" ಎಂದು ಅವರು ಬರೆದಿರುವುದಾಗಿ ವರದಿ ತಿಳಿಸಿದೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಪ್ರಯಾಗರಾಜ್‌ ಪೊಲೀಸರು ಆನಂದ್‌ ಗಿರಿಯನ್ನು ಬಂಧಿಸಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News