ಗೌರಿ ಲಂಕೇಶ್ ಕೊಲೆ ಆರೋಪಿಯ ವಿರುದ್ಧ ಸಂಘಟಿತ ಅಪರಾಧ ಆರೋಪ ಕೈಬಿಟ್ಟಿದ್ದಕ್ಕಾಗಿ ರಾಜ್ಯ ಹೈಕೋರ್ಟ್ ಗೆ ಸುಪ್ರೀಂ ತರಾಟೆ

Update: 2021-09-21 16:46 GMT

ಹೊಸದಿಲ್ಲಿ,ಸೆ.21: ಸರ್ವೋಚ್ಚ ನ್ಯಾಯಾಲಯವು ಮಂಗಳವಾರ ಹಿರಿಯ ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣದಲ್ಲಿ ಆರೋಪಿಯೋರ್ವನ ವಿರುದ್ಧದ ಸಂಘಟಿತ ಅಪರಾಧ ಆರೋಪಗಳನ್ನು ಕೈಬಿಟ್ಟಿರುವ ಕರ್ನಾಟಕ ಉಚ್ಚ ನ್ಯಾಯಾಲಯದ ಆದೇಶವನ್ನು ಪ್ರಶ್ನಿಸಿ ಸಲ್ಲಿಸಲಾಗಿರುವ ಅರ್ಜಿಗೆ ಸಂಬಂಧಿಸಿದಂತೆ ತನ್ನ ಆದೇಶವನ್ನು ಕಾಯ್ದಿರಿಸಿದೆ. ಇದೇ ವೇಳೆ ಆರೋಪವನ್ನು ರದ್ದುಗೊಳಿಸುವ ವಿಷಯವನ್ನು ಅತ್ಯಂತ ಹಗುರವಾಗಿ ಪರಿಗಣಿಸಿದ್ದಕ್ಕಾಗಿ ಉಚ್ಚ ನ್ಯಾಯಾಲಯವನ್ನು ಅದು ತರಾಟೆಗೆತ್ತಿಕೊಂಡಿದೆ.

ಉಚ್ಚ ನ್ಯಾಯಾಲಯದ ನಿರ್ಧಾರವು ದೋಷಯುಕ್ತವಾಗಿದ್ದು, ಅಧಿಕಾರದ ವ್ಯಾಪ್ತಿಯನ್ನು ಮೀರಿದೆ ಎಂದು ನ್ಯಾಯಮೂರ್ತಿಗಳಾದ ಎ.ಎಂ.ಖನ್ವಿಲ್ಕರ್ ಮತ್ತು ದಿನೇಶ್ ಮಹೇಶ್ವರಿ ಅವರ ಪೀಠವು ಹೇಳಿತು. ಹಿಂದುತ್ವ ರಾಜಕೀಯದ ಕಡುವಿರೋಧಿಯಾಗಿದ್ದ ಗೌರಿ ಲಂಕೇಶ್ ಅವರನ್ನು 2017,ಸೆ.5ರಂದು ಅವರ ಬೆಂಗಳೂರಿನ ನಿವಾಸದ ಹೊರಗೆ ಗುಂಡಿಟ್ಟು ಹತ್ಯೆ ಮಾಡಲಾಗಿತ್ತು. ಪ್ರಕರಣದಲ್ಲಿ ಕನಿಷ್ಠ 12 ಜನರನ್ನು ಬಂಧಿಸಲಾಗಿದೆ.
 ‌
ಎಪ್ರಿಲ್ ನಲ್ಲಿ ರಾಜ್ಯ ಉಚ್ಚ ನ್ಯಾಯಾಲಯವು ಆರೋಪಿಗಳ ಪೈಕಿ ಮೋಹನ್ ನಾಯಕ್ ಗೌರಿ ಹತ್ಯೆ ಸಂಚಿನಲ್ಲಿ ಭಾಗಿಯಾಗಿದ್ದ ಎನ್ನುವುದನ್ನು ಸಾಬೀತುಗೊಳಿಸಲು ಕರ್ನಾಟಕ ಸಂಘಟಿತ ಅಪರಾಧ ನಿಯಂತ್ರಣ ಕಾಯ್ದೆಯಡಿ ಯಾವುದೇ ಪೂರ್ವಭಾವಿ ದೋಷಾರೋಪ ಪಟ್ಟಿಯನ್ನು ಸಲ್ಲಿಸಿರಲಿಲ್ಲ ಎಂಬ ಕಾರಣದಿಂದ ಆತನ ವಿರುದ್ಧದ ಸಂಘಟಿತ ಅಪರಾಧ ಆರೋಪವನ್ನು ಕೈಬಿಟ್ಟಿತ್ತು. ಇದನ್ನು ಗೌರಿ ಸೋದರಿ ಕವಿತಾ ಲಂಕೇಶ್ ಅವರು ಸರ್ವೋಚ್ಚ ನ್ಯಾಯಾಲಯದಲ್ಲಿ ಪ್ರಶ್ನಿಸಿದ್ದರು.

ನಾಯಕ್ ಅಪರಾಧಕ್ಕೆ ಮೊದಲು ಮತ್ತು ನಂತರ ಹಂತಕರಿಗೆ ಆಶ್ರಯ ನೀಡಿದ್ದ ಮತ್ತು ಸರಣಿ ಸಂಚುಗಳಲ್ಲಿ ಭಾಗಿಯಾಗಿದ್ದ ಎನ್ನುವುದನ್ನು ಪ್ರಕರಣದ ತನಿಖೆಯು ತೋರಿಸಿದೆ ಎಂದು ಕವಿತಾ ತನ್ನ ಅರ್ಜಿಯಲ್ಲಿ ತಿಳಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News