ಲೆಬನಾನ್: ಸಂಸತ್ತಿನಲ್ಲಿ ವಿಶ್ವಾಸಮತ ಗೆದ್ದ ಸರಕಾರ

Update: 2021-09-21 16:46 GMT

ಬೈರೂತ್, ಸೆ.21: ಪ್ರಧಾನಿ ನಜೀಬ್ ಮಿಕಾತಿ ನೇತೃತ್ವದ ಲೆಬನಾನ್ನ ನೂತನ ಸರಕಾರ ಸೋಮವಾರ ಸಂಸತ್ತಿನಲ್ಲಿ ವಿಶ್ವಾಸಮತ ಗೆದ್ದಿರುವುದಾಗಿ ವರದಿಯಾಗಿದೆ. ಸಂಸತ್ತಿನ 117 ಸಂಸದರಲ್ಲಿ 100 ಸಂಸದರು ವಿಶ್ವಾಸ ಮತ ಪ್ರಕ್ರಿಯೆಯಲ್ಲಿ ಪಾಲ್ಗೊಂಡಿದ್ದು 85 ಸಂಸದರು ವಿಶ್ವಾಸಮತ ನಿರ್ಣಯದ ಪರವಾಗಿ, 15 ಸಂಸದರು ವಿರುದ್ಧವಾಗಿ ಮತ ಚಲಾಯಿಸಿದ್ದಾರೆ. ಮಾಜಿ ಪ್ರಧಾನಿ ಸಾದ್ ಹರೀರಿ ಸೇರಿದಂತೆ 17 ಸಂಸದರು ಗೈರುಹಾಜರಾಗಿದ್ದರು. ಲೆಬನಾನ್ ಸಂಸತ್ತಿನಲ್ಲಿ 128 ಸ್ಥಾನಗಳಿವೆ. ಇದರಲ್ಲಿ 8 ಸಂಸದರು ರಾಜೀನಾಮೆ ನೀಡಿದ್ದರೆ , 3 ಸಂಸದರು ನಿಧನರಾಗಿದ್ದಾರೆ.

 ಅಂತರ್ ರಾಷ್ಟ್ರೀಯ ಹಣಕಾಸು ಸಂಸ್ಥೆ(ಐಎಂಎಫ್) ಪ್ರಾಯೋಜಿತ ಆರ್ಥಿಕ ಪುನಶ್ಚೇತನದ ಕ್ರಮಗಳನ್ನು ತಕ್ಷಣದಿಂದ ಪುನರಾರಂಭಿಸುವ ಮತ್ತು ದೇಶವನ್ನು ಆರ್ಥಿಕ ಕುಸಿತದಿಂದ ಪಾರು ಮಾಡಲು ಹಲವು ಸುಧಾರಣಾ ಕ್ರಮಗಳನ್ನು ಜಾರಿಗೊಳಿಸುವುದಾಗಿ ಮಿಕಾತಿ ಸರಕಾರ ಭರವಸೆ ನೀಡಿತ್ತು. ‘ಈ ಕಗ್ಗತ್ತಲ ಕಾಲದಲ್ಲಿ ತಮ್ಮ ಸರಕಾರ ಮೋಂಬತ್ತಿಯ ಬೆಳಕಿನಂತೆ ಉದಯಿಸಿದೆ ಮತ್ತು ನಮ್ಮ ನೆಚ್ಚಿನ ದೇಶದ ಸದೃಢತೆಗೆ ಒಗ್ಗೂಡಿ ಕೆಲಸ ಮಾಡುವ ಭರವಸೆ ಹಾಗೂ ದೃಢನಿರ್ಧಾರದ ಬೆಳಕನ್ನು ಬೀರಿದೆ’ ಎಂದು ವಿಶ್ವಾಸಮತ ಗೆದ್ದ ಬಳಿಕ ಮಿಕಾತಿ ಪ್ರತಿಕ್ರಿಯಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News