ತಾಯಿ-ಮಗಳು ಸಜೀವದಹನ ಪ್ರಕರಣ: ಬಹುಮಹಡಿ ಕಟ್ಟಡ ಮಾರ್ಪಾಡುಗಳಿಗೆ ತಡೆ

Update: 2021-09-22 15:25 GMT

ಬೆಂಗಳೂರು, ಸೆ.22: ದೇವರಚಿಕ್ಕನಹಳ್ಳಿಯ ವಸತಿಗೃಹದಲ್ಲಿ ಭೀಕರ ಅಗ್ನಿ ಅವಘಡ ಸಂಭವಿಸಿದ ಬೆನ್ನಲ್ಲೇ ಅಗ್ನಿ ಅವಘಡಗಳನ್ನು ತಡೆಗಟ್ಟುವ ನಿಟ್ಟನಲ್ಲಿ ಬಿಬಿಎಂಪಿ ಹೊಸ ಆದೇಶ ಪ್ರಕಟಿಸಿದ್ದು, ವಸತಿ ಸಮುಚ್ಛಯಗಳಲ್ಲಿ ಬಾಲ್ಕನಿಯಲ್ಲಿ ಬದಲಾವಣೆಗಳು ಹಾಗೂ ಇನ್ನಿತರ ಅಸುರಕ್ಷತಾ ಕಟ್ಟಡ ಮಾರ್ಪಾಡು ತಡೆಗಟ್ಟಲು ಸೂಚಿಸಲಾಗಿದೆ.

ಬಿಬಿಎಂಪಿ ವ್ಯಾಪ್ತಿಯಲ್ಲಿರುವ ಕಟ್ಟಡಗಳಿಗೆ ಕಟ್ಟಡ ಉಪವಿಧಿ-2003, ಪರಿಷ್ಕøತ ವಲಯ ನಿಯಮಾವಳಿಗಳು-2015 ಮತ್ತು ನ್ಯಾಷನಲ್ ಬಿಲ್ಡಿಂಗ್ ಕೋಡ್ ಆಫ್ ಇಂಡಿಯ-2016ರ ಅನ್ವಯ ನಕ್ಷೆ ಮಂಜೂರಾತಿ, ಪ್ರಾರಂಭಿಕ ಪ್ರಮಾಣಪತ್ರ ಮತ್ತು ಸ್ವಾಧೀನಾನುಭವ ಪ್ರಮಾಣಪತ್ರಗಳನ್ನು ಪಡೆದ ನಂತರ ಕಟ್ಟಡಗಳ ಬಾಲ್ಕನಿಗಳನ್ನು ಸಂಪೂರ್ಣವಾಗಿ ಮುಚ್ಚುವುದು ಹಾಗೂ ಇನ್ನಿತರೆ ಅಸುರಕ್ಷತಾ ಕಟ್ಟಡ ಮಾರ್ಪಾಡುಗಳನ್ನು ಮಾಡಲು ನಿಯಮಾನುಸಾರ ಅವಕಾಶವಿರುವುದಿಲ್ಲ ಎಂದಿದೆ.

ಆದರೂ, ಕಟ್ಟಡ ಮಾಲಕರು ನಿಯಮಬಾಹಿರವಾಗಿ ಅಸುರಕ್ಷತೆಗೆ ಕಾರಣವಾಗುವಂತೆ ಕಟ್ಟಡ ಮಾರ್ಪಾಡು ಮಾಡುತ್ತಿರುವುದನ್ನು ಗಮನಿಸಲಾಗಿದೆ ಎಂದು ಸುತ್ತೋಲೆಯಲ್ಲಿ ತಿಳಿಸಿದೆ.

ಈ ಹಿನ್ನೆಲೆಯಲ್ಲಿ ನಿಯಮಾನುಸಾರ ಕಟ್ಟಡಗಳಿಗೆ ಪ್ರಮಾಣ ಪತ್ರಗಳನ್ನು ಪಡೆದ ನಂತರ ವಸತಿ ಸಮುಚ್ಚಯ, ಇತರೆ ಕಟ್ಟಡಗಳಲ್ಲಿ ಬಾಲ್ಕನಿಯಲ್ಲಿ ಅಸುರಕ್ಷಿತ ಮಾರ್ಪಾಡುಗಳನ್ನು ತಡೆಗಟ್ಟಲು ಎಲ್ಲ್ಲ ವಲಯ ಆಯುಕ್ತರು ಹಾಗೂ ಬೆಂಗಳೂರು ಅಪಾರ್ಟ್‍ಮೆಂಟ್ಸ್ ಫೆಡರೇಶನ್‍ಗೆ ಸೂಚನೆ ಕಳುಹಿಸಲಾಗಿದೆ. 

ಒಂದುವೇಳೆ ವಸತಿ ಸಮಚ್ಛಯಗಳಲ್ಲಿ, ಇತರ ಕಟ್ಟಡಗಳಲ್ಲಿ ಮಾರ್ಪಾಡು ಅವಶ್ಯವಿದ್ದಲ್ಲಿ ಪಾಲಿಕೆಯ ಸಕ್ಷಮ ಪ್ರಾಧಿಕಾರಗಳಿಂದ ಕಡ್ಡಾಯವಾಗಿ ಪೂರ್ವಾನುಮತಿಗಳನ್ನು ಪಡೆಯಬೇಕು ಎಂದು ಆದೇಶದಲ್ಲಿ ಉಲ್ಲೇಖಿಸಲಾಗಿದೆ.

ಮಂಗಳವಾರ ಸಂಭವಿಸಿದ ಅಗ್ನಿದುರಂತದ ಸ್ಥಳ ತಪಾಸಣೆ ನಡೆಸಿದ ತಜ್ಞರ ಸಲಹೆಗಳ ಮೇರೆಗೆ ಪಾಲಿಕೆ ಈ ಆದೇಶ ಹೊರಡಿಸಿದೆ.

ಏನಿದು ಪ್ರಕರಣ?

ಬೆಂಗಳೂರಿನ ದೇವರಚಿಕ್ಕನಹಳ್ಳಿಯಲ್ಲಿನ ಆಶ್ರಿತ್ ಅಪಾರ್ಟ್‍ಮೆಂಟ್‍ನಲ್ಲಿ ಮಂಗಳವಾರ ಸಂಭವಿಸಿದ ಅಗ್ನಿ ಆಕಸ್ಮಿಕದಿಂದಾಗಿ ಇಬ್ಬರು ಮಹಿಳೆಯರು ದಾರುಣ ಸಾವಿಗೀಡಾಗಿದ್ದರು. 

ಅಧಿಕಾರಿಗಳು ಸ್ಥಳ ಪರಿಶೀಲನೆ ಮಾಡುವ ವೇಳೆ, ಕೊಠಡಿಯ ಬಾಲ್ಕನಿಯಲ್ಲಿ ಸಂಪೂರ್ಣ ಗ್ರಿಲ್ ಅಳವಡಿಸಿ ಬಿಗಿ ಬಂದೋಬಸ್ತ್ ಮಾಡಿರುವುದು ಕಂಡುಬಂದಿತ್ತು. ಇದರಿಂದ ಮಹಿಳೆ ಬಚಾವ್ ಆಗದೆ, ಸಿಲುಕಿಕೊಂಡು ದುರ್ಘಟನೆ ಸಂಭವಿಸಿತು ಎಂದು ಅಭಿಪ್ರಾಯ ವ್ಯಕ್ತವಾಗಿತ್ತು.

ಎಫ್‍ಎಸ್‍ಎಲ್ ಪರಿಶೀಲನೆ

ಬುಧವಾರ ಘಟನೆ ಸ್ಥಳಕ್ಕೆ ಎಫ್‍ಎಸ್‍ಎಲ್(ವಿಧಿ ವಿಜ್ಞಾನ ಪ್ರಯೋಗಾಲಯ) ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿತು. ಈ ಸಂದರ್ಭದಲ್ಲಿ 20 ವಸ್ತುಗಳನ್ನು ವಶಕ್ಕೆ ಪಡೆದಿದೆ. ಸ್ಥಳದಲ್ಲಿ ಫ್ರಿಡ್ಜ್ ಸ್ಫೋಟಗೊಂಡಿರುವುದು ಗೊತ್ತಾಗಿದೆ. ಆದರೆ, ಸಿಲಿಂಡರ್ ಸ್ಫೋಟಗೊಂಡಿಲ್ಲ ಎಂದು ಹೇಳಲಾಗುತ್ತಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News