ಬೆಂಗಳೂರಿನಲ್ಲಿ ಮತ್ತೊಂದು ದುರಂತ: ನಿಗೂಢ ಸ್ಫೋಟಕ್ಕೆ ಮೂವರು ಬಲಿ

Update: 2021-09-23 14:34 GMT

ಬೆಂಗಳೂರು, ಸೆ.23: ರಾಜಧಾನಿ ಬೆಂಗಳೂರಿನ ತರಗುಪೇಟೆಯಲ್ಲಿ ಸಿಡಿಮದ್ದು ಸ್ಫೋಟಗೊಂಡ ಪರಿಣಾಮ ಮೂವರ ಮೃತದೇಹಗಳು ಛಿದ್ರಗೊಂಡು ಸಾವನ್ನಪ್ಪಿರುವ ಹೃದಯ ವಿದ್ರಾವಕ ಘಟನೆ ನಡೆದಿದೆ.

ಮೃತರನ್ನು ಫಯಾಝ್(50), ಮನೋಹರ್(29), ಅಸ್ಲಾಂ(45) ಎಂದು ಪೊಲೀಸರು ಗುರುತಿಸಿದ್ದು, ಘಟನೆಯಲ್ಲಿ ಐವರು ಗಾಯಗೊಂಡು ವಿಕ್ಟೋರಿಯಾ ಆಸ್ಪತ್ರೆಗೆ ಚಿಕಿತ್ಸೆ ಪಡೆಯುತ್ತಿದ್ದಾರೆ.

ಇಲ್ಲಿನ ತರಗುಪೇಟೆಯಲ್ಲಿರುವ ಮಹಾಕಾಳಿ ಅಮ್ಮನ್ ಲಾರಿ ಸರ್ವಿಸ್ ಗೋದಾಮಿನಲ್ಲಿ ಈ ಘಟನೆ ಸಂಭವಿಸಿದೆ. ಮೃತರ ಪೈಕಿ ಫಯಾಝ್ ಪಟಾಕಿ ಮಳಿಗೆ ನಡೆಸುತ್ತಿದ್ದರು. ಮನೋಹರ್, ಟಾಟಾಏಸ್ ವಾಹನ ಚಾಲಕ. ಅಸ್ಲಾಂ, ಪಂಕ್ಚರ್ ಅಂಗಡಿ ಮಾಲಕ ಎಂದು ಪೊಲೀಸರು ತಿಳಿಸಿದ್ದಾರೆ.

ಗುರುವಾರ ಟಾಟಾಏಸ್‍ನಲ್ಲಿ ಪಟಾಕಿ ಬಾಕ್ಸ್‍ಗಳನ್ನು ತಂದಿದ್ದ ಮನೋಹರ್, ಮಳಿಗೆಯೊಳಗೆ ಇಟ್ಟಿದ್ದ. ಬಳಿಕ ಫಯಾಝ್ ಜೊತೆ ಮಾತನಾಡುತ್ತ ನಿಂತಿದ್ದ. ಇದೇ ಸಂದರ್ಭದಲ್ಲಿ ದಿಢೀರ್ ಸ್ಫೋಟ ಸಂಭವಿಸಿ ಇಬ್ಬರೂ ಹಾರಿ ಹೊರಗೆ ಬಿದ್ದಿದ್ದಾರೆ.

ಅವರ ದೇಹಗಳು ಛಿದ್ರಗೊಂಡಿವೆ. ಹತ್ತಿರದಲ್ಲಿಯೇ ಪಂಕ್ಚರ್ ಅಂಗಡಿಯಲ್ಲಿ ಕುಳಿತಿದ್ದ ಅಸ್ಲಾಂ ಸಹ ತೀವ್ರ ಗಾಯಗೊಂಡು ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಸ್ಫೋಟದ ತೀವ್ರತೆಗೆ ಪಟಾಕಿ ಮಳಿಗೆ, ಪಕ್ಕದಲ್ಲಿದ್ದ ಪಂಕ್ಚರ್ ಮಳಿಗೆ ಹಾಗೂ ಚಹಾ ಅಂಗಡಿ ಸಂಪೂರ್ಣ ಸುಟ್ಟು ಹೋಗಿದೆ. 10 ದ್ವಿಚಕ್ರ ವಾಹನಗಳು ನಜ್ಜುಗುಜ್ಜಾಗಿವೆ. ಅಷ್ಟೇ ಅಲ್ಲದೆ, ಅಕ್ಕ-ಪಕ್ಕದ ಮನೆಗಳು, ಸೇಂಟ್ ಮೇರಿ ಆಸ್ಪತ್ರೆ, ವಿದ್ಯಾರ್ಥಿಗಳ ವಸತಿ ನಿಲಯಕ್ಕೂ ಹಾನಿ ಆಗಿದೆ. ಬಾಂಬ್ ಸ್ಫೋಟವಾದ ರೀತಿಯಲ್ಲಿ ಸದ್ದು ಕೇಳಿಸಿತೆಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ.

40 ಕೆಜಿ ಸ್ಫೋಟ?: ಗೋದಾಮಿನಲ್ಲಿ 80 ಬಾಕ್ಸ್ ಪಟಾಕಿ ಸಂಗ್ರಹಿಸಲಾಗಿತ್ತು. ಪ್ರತಿಯೊಂದು ಬಾಕ್ಸ್ ತಲಾ ಸುಮಾರು 20 ಕೆ.ಜಿಯಂತೆ ಎರಡು ಬಾಕ್ಸ್‍ಗಳು ಸ್ಫೋಟಗೊಂಡಿದ್ದು, ಅದರ ಅವಶೇಷಗಳು ಪತ್ತೆಯಾಗಿವೆ ಎಂದು ಹಿರಿಯ ಪೊಲೀಸ್ ಅಧಿಕಾರಿ ತಿಳಿಸಿದರು.
ಘಟನೆ ಸಂಬಂಧ ವಿವಿಪುರಂ ಪೊಲೀಸ್ ಠಾಣೆಯಲ್ಲಿ ಮೊಕದ್ದಮೆ ದಾಖಲಾಗಿದೆ. ಘಟನಾ ಸ್ಥಳಕ್ಕೆ ವಿಧಿವಿಜ್ಞಾನ ಪ್ರಯೋಗಾಲಯದ ತಜ್ಞರು, ಬಾಂಬ್ ನಿಷ್ಕ್ರಿಯ ದಳದ ಸಿಬ್ಬಂದಿ ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿ, ಅವಶೇಷಗಳ ಮಾದರಿ ಸಂಗ್ರಹಿಸಿದರು.

ಮಾಲಕನ ಹುಡುಕಾಟ

ಪಟಾಕಿ ಸಂಗ್ರಹಕ್ಕೆ ಅನುಮತಿ ಇರಲಿಲ್ಲ. ಬಿಬಿಎಂಪಿಯಿಂದಲೂ ಪರವಾನಿಗೆ ಪಡೆದಿರಲಿಲ್ಲ. ಇದೊಂದು ಅಕ್ರಮವಾಗಿ ಪಟಾಕಿ ಸಂಗ್ರಹಿಸಿದ್ದ ಗೋದಾಮು ಆಗಿದ್ದು, ಇದರ ಮಾಲಕ ಗಣೇಶ್ ಎಂಬಾತನ ಪತ್ತೆಗೆ ಶೋಧಕಾರ್ಯ ಮುಂದುವರೆಸಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿವೊಬ್ಬರು ತಿಳಿಸಿದರು.

ಸ್ಫೋಟಕ್ಕೆ ಕಾರಣ ಗೊತ್ತಿಲ್ಲ

ಗೋದಾಮಿನಲ್ಲಿ ಪಟಾಕಿ ಸ್ಫೋಟ ಕುರಿತು ಸದ್ಯಕ್ಕೆ ಕಾರಣ ಗೊತ್ತಾಗಿಲ್ಲ. ಈ ಸಂಬಂಧ ಮೊಕದ್ದಮೆ ದಾಖಲಿಸಿ ತನಿಖೆ ಕೈಗೊಳ್ಳಲಾಗಿದ್ದು, ತಪ್ಪಿತಸ್ಥರ ವಿರುದ್ಧ ಕ್ರಮ ಜರುಗಿಸಲಾಗುವುದು.

-ಹರೀಶ್ ಪಾಂಡೆ, ಡಿಸಿಪಿ

ಇಂದು ಕೆಲಸಕ್ಕೆ ಹೋಗಲ್ಲ ಎಂದಿದ್ದ ಅಸ್ಲಾಂ

ಗುರುವಾರ ಕೆಲಸಕ್ಕೆ ಹೋಗುವುದಿಲ್ಲ. ಶನಿವಾರದಿಂದ ಪಂಕ್ಚರ್ ಅಂಗಡಿ ತೆರೆಯುವುದಾಗಿ ಅಸ್ಲಾಂ ಹೇಳಿದ್ದ. ಆದರೆ, ಮನೆಯಲ್ಲಿ ಬಡತನ ಇದೆ. ಅಂಗಡಿ ಬಂದ್ ಮಾಡಬೇಡ ಎಂದು ಹೇಳಿ ಕಳುಹಿಸಿದ್ದೆ ಎಂದು ಮೃತ ಅಸ್ಲಾಂ ಸಹೋದರ ಫಾರೂಕ್ ಪಾಷಾ ಕಣ್ಣೀರು ಹಾಕಿದರು.

2 ಲಕ್ಷ ರೂ. ಪರಿಹಾರ ಘೋಷಿಸಿದ ಝಮೀರ್

ಘಟನಾ ಸ್ಥಳಕ್ಕೆ ಭೇಟಿ ನೀಡಿದ ಚಾಮರಾಜಪೇಟೆ ಕಾಂಗ್ರೆಸ್ ಶಾಸಕ ಬಿ.ಝೆಡ್.ಝಮೀರ್ ಅಹ್ಮದ್ ತಲಾ 2 ಲಕ್ಷ ರೂಪಾಯಿ ಪರಿಹಾರ ಘೋಷಿಸಿದ್ದಾರೆ. ಜತೆಗೆ ಈ ಅವಘಡದಲ್ಲಿ ಗಂಭೀರ ಗಾಯಗೊಂಡ ನಾಲ್ವರಿಗೆ ತಲಾ 50 ಸಾವಿರ ಪರಿಹಾರ ಘೋಷಿಸಿದ್ದಾರೆ. ಅಲ್ಲದೆ, ಅವರ ಸಂಪೂರ್ಣ ಚಿಕಿತ್ಸಾ ವೆಚ್ಚವನ್ನೂ ತಾವೇ ಭರಿಸುವುದಾಗಿ ಭರವಸೆ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News