ಶ್ರೀ ಗುರು ರಾಘವೇಂದ್ರ ಕೋ-ಆಪರೇಟಿವ್ ಬ್ಯಾಂಕ್‍ ನಿಂದ ಮತ್ತೆ ವಂಚನೆ: ಆರೋಪ

Update: 2021-09-23 11:43 GMT

ಬೆಂಗಳೂರು, ಸೆ.23: ಶ್ರೀ ಗುರು ರಾಘವೇಂದ್ರ ಕೋ-ಆಪರೇಟಿವ್ ಬ್ಯಾಂಕ್‍ನ ಮತ್ತೊಂದು ವಂಚನೆ ಪ್ರಕರಣ ಬೆಳಕಿಗೆ ಬಂದಿದೆ. ಬ್ಯಾಂಕ್‍ನಿಂದ ಇತ್ತೀಚೆಗೆ ಹಲವರಿಗೆ ಸಾಲವನ್ನು ಬಡ್ಡಿ ಸಮೇತ ಮರುಪಾವತಿಸುವಂತೆ ನೋಟಿಸ್‍ಗಳನ್ನು ಕಳುಹಿಸಲಾಗಿದೆ.

ವಿಚಿತ್ರ ಎಂದರೆ ಹೀಗೆ ನೋಟಿಸ್ ಪಡೆದವರಲ್ಲಿ ಹಲವರಿಗೆ ಈ ಬ್ಯಾಂಕ್‍ನಲ್ಲಿ ಠೇವಣಿಯೇ ಇಲ್ಲ. ಹೀಗಿದ್ದರೂ ಬ್ಯಾಂಕಿನಿಂದ ನೋಟಿಸ್ ಬಂದಿದೆ ಎಂದು ಕೆಪಿಸಿಸಿ ವೈದ್ಯಕೀಯ ಘಟಕದ ಪ್ರಧಾನ ಕಾರ್ಯದರ್ಶಿ ಡಾ.ಶಂಕರ ಗುಹಾ ದ್ವಾರಕನಾಥ್ ಆರೋಪಿಸಿದರು. ಪ್ರೆಸ್‍ಕ್ಲಬ್‍ನ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಎರಡು ವರ್ಷಗಳಿಂದ ಆಡಿಟ್ ವರದಿಗಳನ್ನು ಬಿಡುಗಡೆ ಮಾಡಲು ಮೀನಮೇಷ ಎಣಿಸುತ್ತಿದ್ದ ಬ್ಯಾಂಕ್ ಈಗ 2019-20ನೇ ಸಾಲಿನ ವಾರ್ಷಿಕ ಆಡಿಟ್ ವರದಿಗಳನ್ನು ಬಿಡುಗಡೆ ಮಾಡಿದೆ.ದುರಾದೃಷ್ಟವಶಾತ್ ಇದು ಬ್ಯಾಂಕ್‍ನ ಗ್ರಾಹಕರಿಗೂ ಮುಳುವಾಗಿ ಪರಿಣಮಿಸಿದೆ ಎಂದು ತಿಳಿಸಿದರು.

ಬ್ಯಾಂಕ್‍ನ ಆಡಳಿತ ಮಂಡಳಿಯು ಅಮಾಯಕರ ಹೆಸರಿನಲ್ಲಿ ಬೇನಾಮಿ ಅಕೌಂಟ್‍ಗಳನ್ನು ಸೃಷ್ಟಿಸಿ, ಇನ್ನಾರಿಗೋ ಸಾಲದ ಹಣವನ್ನು ಮಂಜೂರು ಮಾಡಿದೆ. ಈ ಸಾಲ ಮರುಪಾವತಿಗೆ ಮತ್ತೊಬ್ಬರ ಹೆಸರಿಗೆ ನೋಟಿಸ್ ನೀಡುತ್ತಿದೆ. ಇದು ಬ್ಯಾಂಕ್‍ನೊಳಗೆ ಸೃಷ್ಟಿಯಾಗಿರುವ ಗುಂಪಿನಿಂದ ಆಗಿರುವ ಹಗರಣ ಎಂಬುದು ನಮ್ಮ ಅನುಮಾನ. ಇದರ ಬಗ್ಗೆ ರಾಜ್ಯ ಮತ್ತು ಕೇಂದ್ರ ಸರಕಾರ ಪ್ರಕರಣವನ್ನು ಸಿಬಿಐ ಹಣಕಾಸು ವ್ಯಾಪ್ತಿಗೆ ವಹಿಸಬೇಕು ಎಂದು ಅವರು ಆಗ್ರಹಿಸಿದರು.

ನೋಟಿಸ್ ಪಡೆದ ಚಂಪಕಾವತಿ ಮಾತನಾಡಿ, ‘2011ರಲ್ಲಿ ನಾನು 35ಲಕ್ಷ ರೂ. ಪಡೆದುಕೊಂಡಿದ್ದೇನೆ. ಅದರ ಬಡ್ಡಿ ಸೇರಿ ಇಂದಿಗೆ 2ಕೋಟಿ 15ಲಕ್ಷ ರೂ. ಆಗಿದೆ. ಈ ಹಣವನ್ನು ಕೂಡಲೇ ಬ್ಯಾಂಕಿಗೆ ಮರುಪಾವತಿ ಮಾಡಬೇಕು ಎಂದು ಬ್ಯಾಂಕ್ ನೋಟಿಸ್‍ನಲ್ಲಿ ಉಲ್ಲೇಖಿಸಿದೆ ಎಂದು ಮಾಹಿತಿ ನೀಡಿದರು. ‘ನಾನು ಲೋನ್ ಪಡೆದುಕೊಂಡ ಪಕ್ಷದಲ್ಲಿ ಹತ್ತು ವರ್ಷಗಳಿಂದ ಈ ರೀತಿಯ ಯಾವುದೇ ನೋಟಿಸ್ ಏಕೆ ಕಳುಹಿಸಲಿಲ್ಲ. ಈಗ ಏಕಾಏಕಿ ಬ್ಯಾಂಕ್‍ನಿಂದ ನೋಟಿಸ್ ಬಂದಿದ್ದು ಏಕೆ? ನನಗೂ ಅದಕ್ಕೂ ಸಂಬಂಧವೇ ಇಲ್ಲ. ಈ ಕುರಿತು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ನಂತರ ವಕೀಲರಿಂದ ಬ್ಯಾಂಕಿಗೆ ನೋಟಿಸನ್ನು ಜಾರಿಗೊಳಿಸಿದರು ಅಲ್ಲಿಂದ ಸಹ ಯಾವುದೇ ಪ್ರತಿಕ್ರಿಯೆ ಬಂದಿಲ್ಲ’ ಎಂದು ಅವರು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News