ಸೆ.26ರಂದು ‘ಗಾಂಧಿ ನಡಿಗೆ’ ಕಾರ್ಯಕ್ರಮಕ್ಕೆ ಚಾಲನೆ: ಡಾ.ಎಂ.ವೀರಪ್ಪ ಮೊಯ್ಲಿ

Update: 2021-09-23 12:29 GMT

ಬೆಂಗಳೂರು, ಸೆ.23: ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿಯಲ್ಲಿ ಸೆ.26ರಂದು ಹಾಗೂ 29ರಂದು ಯಲಹಂಕ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ‘ಗಾಂಧಿ ನಡಿಗೆ' ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಅಕ್ಟೋಬರ್ ತಿಂಗಳಲ್ಲಿ ಹೊಸಕೋಟೆ, ನೆಲಮಂಗಲ ಹಾಗೂ ದೊಡ್ಡಬಳ್ಳಾಪುರ ವಿಧಾನಸಭಾ ಕ್ಷೇತ್ರಗಳಲ್ಲಿ ಈ ಕಾರ್ಯಕ್ರಮ ನಡೆಸಲಾಗುವುದು ಎಂದು ಕೇಂದ್ರದ ಮಾಜಿ ಸಚಿವ ಡಾ.ಎಂ.ವೀರಪ್ಪ ಮೊಯ್ಲಿ ತಿಳಿಸಿದರು.

ಗುರುವಾರ ನಗರದ ಕ್ವೀನ್ಸ್ ರಸ್ತೆಯಲ್ಲಿರುವ ಕೆಪಿಸಿಸಿ ಕಚೇರಿಯಲ್ಲಿ ಜಂಟಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ನವೆಂಬರ್‍ನಲ್ಲಿ ಚಿಕ್ಕಬಳ್ಳಾಪುರ ವ್ಯಾಪ್ತಿಯ ಬಾಗೇಪಲ್ಲಿ, ಗೌರಿಬಿದನೂರಿನಲ್ಲಿ ಬೆಳಗ್ಗೆ 10 ರಿಂದ ಸಂಜೆ 6ರವರೆಗೂ ನಡೆಯಲಿರುವ ಈ ಕಾರ್ಯಕ್ರಮದಲ್ಲಿ ವಿಪಕ್ಷ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಡಿ.ಕೆ.ಶಿವಕುಮಾರ್, ಕಾರ್ಯಾಧ್ಯಕ್ಷರಾದ ರಾಮಲಿಂಗಾರೆಡ್ಡಿ, ಸಲೀಂ ಅಹ್ಮದ್ ಭಾಗವಹಿಸಲಿದ್ದಾರೆ ಎಂದರು.

ಇದರಲ್ಲಿ ವಾರ್ಡ್, ತಾಲೂಕು, ಜಿಲ್ಲಾ ಮಟ್ಟದ ನಾಯಕರು, ಅಭ್ಯರ್ಥಿಗಳು ಭಾಗವಹಿಸಲಿದ್ದು, ಕಾರ್ಯಕರ್ತರಲ್ಲಿ ಹುರುಪು ತುಂಬಲು ಈ ಕಾರ್ಯಕ್ರಮ ನಡೆಸುತ್ತಿದ್ದೇವೆ. ದೇವರಾಜ ಅರಸು ಅವರ ಕಾಲದಲ್ಲಿ ಹಾಗೂ ಇಂದಿರಾ ಗಾಂಧಿ ಸೋತ ನಂತರ ಈ ರೀತಿ ಕಾರ್ಯಕ್ರಮ ಮಾಡಿ ಪಕ್ಷ ಸಂಘಟನೆ ಮಾಡಿದ್ದೆವು. ಆಗ ಪಕ್ಷ ವಿಧಾನಸಭೆ ಹಾಗೂ ಲೋಕಸಭೆ ಚುನಾವಣೆಗಳಲ್ಲಿ ಗೆಲುವು ಸಾಧಿಸಿತ್ತು ಎಂದು ಅವರು ತಿಳಿಸಿದರು.
ಈಗ ಹಣ ಹಾಗೂ ಜಾತಿ ಚುನಾವಣೆಯಲ್ಲಿ ಪ್ರಾಧಾನ್ಯತೆ ಪಡೆದ ವಿಕೃತ ರಾಜಕಾರಣ ಬೆಳೆದಿವೆ. ಇದಕ್ಕೆ ಕಾರಣ ಬಿಜೆಪಿ. ಅವರು ಬ್ರಿಟೀಷರಂತೆ ಮತಗಳು, ಧರ್ಮಗಳ ನಡುವೆ ಒಡೆದು ಆಳುವ ನೀತಿ ಅನುಸರಿಸುತ್ತಿದ್ದಾರೆ. ಇದು ಯಾವಾಗಲೂ ಯಶಸ್ವಿಯಾಗುವುದಿಲ್ಲ. ಪ್ರಧಾನಿ ಖ್ಯಾತಿ ಕುಸಿತವೇ ಇದಕ್ಕೆ ಸಾಕ್ಷಿ ಎಂದು ಅವರು ಟೀಕಿಸಿದರು.

ಜಿಎಸ್‍ಟಿ, ನೋಟು ರದ್ಧತಿ ಮೂಲಕ ಸರಕಾರ ಜನರ ಮೇಲೆ ಬರೆ ಎಳೆದಿದೆ. ರಾಷ್ಟ್ರದ ಸಂಪತ್ತಿನಲ್ಲಿ ಶೇ.50ರಷ್ಟು ದೇಶದ ಶೇ.10ರಷ್ಟು ಶ್ರೀಮಂತರ ಕೈಯಲ್ಲಿದೆ. ಜಿಡಿಪಿ ಋಣಾತ್ಮಕ ಹಂತ ತಲುಪಿದೆ, ನಿರುದ್ಯೋಗ ಹೆಚ್ಚಾಗಿದೆ. 14 ಕೋಟಿ ಉದ್ಯೋಗ ಕಳೆದುಕೊಂಡಿದ್ದೇವೆ ಎಂದು ವೀರಪ್ಪ ಮೊಯ್ಲಿ ಹೇಳಿದರು. 

 ಭ್ರಷ್ಟಾಚಾರ ನಿರ್ಮೂಲನೆ ಮಾಡಲು ನಾನು ಕಾನೂನು ಸಚಿವ ಆಗಿದ್ದಾಗ ಒಂದು ಸಮಿತಿ ಮಾಡಿದ್ದೆವು. ನಂತರ 2014ರಲ್ಲಿ ಲೋಕಪಾಲ ಮಸೂದೆ ಜಾರಿಗೆ ತಂದಿದ್ದೆವು. ನಾವು ಅದಕ್ಕೆ ಬದ್ಧವಾಗಿದ್ದೆವು. ಆದರೆ 2017ರವರೆಗೆ ಲೋಕಪಾಲರ ನೇಮಕ ಮಾಡಿಲ್ಲ ಎಂದು ಸುಪ್ರೀಂ ಕೋರ್ಟ್ ಸರಕಾರವನ್ನು ಪ್ರಶ್ನಿಸಿತ್ತು. ನಂತರ ಲೋಕಪಾಲರನ್ನು ನೇಮಕ ಮಾಡಿತು ಎಂದು ಅವರು ತಿಳಿಸಿದರು.

ರಾಜ್ಯದಲ್ಲೂ ಲೋಕಾಯುಕ್ತರು ಇಲ್ಲ, ಕೇಂದ್ರದಲ್ಲಿ ಲೋಕಪಾಲರೂ ಇಲ್ಲ.  ಭ್ರಷ್ಟಾಚಾರ ಲಾಭ ಪಡೆದು ಅಧಿಕಾರಕ್ಕೆ ಬಂದ ನರೇಂದ್ರ ಮೋದಿ, ಅರವಿಂದ ಕೇಜ್ರಿವಾಲ್ ಇಂದು  ಭ್ರಷ್ಟಾಚಾರ ನಡೆಯುತ್ತಿದ್ದರೂ ಮೌನವಾಗಿದ್ದಾರೆ. ಚುನಾವಣಾ ಬಾಂಡ್ ಎಲ್ಲ ಪಕ್ಷಗಳ ಆದಾಯ ಕಡಿಮೆ ಮಾಡಿದರೆ, ಬಿಜೆಪಿಯದ್ದು ಊಹೆಗೂ ಮೀರಿ ಬೆಳೆಯುತ್ತಿದೆ. ಭ್ರಷ್ಟಾಚಾರಕ್ಕೆ ಅವಕಾಶ ಕೊಟ್ಟಿದ್ದಕ್ಕೆ ಇದು ಸಾಧ್ಯ ಎಂದು ಅವರು ಟೀಕಿಸಿದರು.

ಮೋದಿ ಅಧಿಕಾರಕ್ಕೆ ಬಂದ ಮೇಲೆ ದೇಶದ್ರೋಹ ಪ್ರಕರಣ 300 ಪಟ್ಟು ಹೆಚ್ಚಾಗಿದೆ. ಸುಪ್ರೀಂಕೋರ್ಟ್ ಇದರ ದುರ್ಬಳಕೆಗೆ ಛೀಮಾರಿ ಹಾಕಿದೆ. ಈ.ಡಿ, ಸಿಬಿಐನಂತಹ ಸಾಂವಿಧಾನಿಕ ಸಂಸ್ಥೆ ರಾಜಕೀಯ ಅಸ್ತ್ರವಾಗಿವೆ. ಇಂದು ಗ್ರಾಮಾಂತರ ಪ್ರದೇಶಗಳಲ್ಲಿ ಗಾಂಧಿ ತತ್ವಗಳನ್ನು, ಗಾಂಧಿ ಕೊಂದವರನ್ನು ಪೂಜಿಸಲಾಗುತ್ತಿದೆ. ಗಾಂಧಿ ತತ್ವ ರಕ್ಷಣೆಯಾಗಬೇಕಾದರೆ ಈ ಕಾರ್ಯಕ್ರಮ ಅಗತ್ಯ. ಈ ನಿಟ್ಟಿನಲ್ಲಿ ನಮ್ಮ ಅಧ್ಯಕ್ಷರು ಉತ್ತಮ ಕಾರ್ಯಕ್ರಮ ನಡೆಸುತ್ತಿದ್ದಾರೆ. ಕಾರ್ಯಾಧ್ಯಕ್ಷರು ಕೂಡ ರಾಜ್ಯಾದ್ಯಂತ ಸುತ್ತಿ ಚುರುಕಿನ ಕೆಲಸ ಮಾಡುತ್ತಿದ್ದಾರೆ ಎಂದು ಅವರು ಹೇಳಿದರು.

ದೇಶ ಬದಲಾಗಬೇಕಾದರೆ ನಾವು ಬದಲಾಗಬೇಕು ಎನ್ನುವ ಹಾಗೆ, ನಾವು ನಿಸ್ವಾರ್ಥವಾಗಿ ಕೆಲಸ ಮಾಡಬೇಕು. ಹೀಗಾಗಿ ಈ ಕಾರ್ಯಕ್ರಮ ರೂಪಿಸಲಾಗಿದೆ. ಇದು ಅಧಿಕಾರ ಹಿಡಿಯುವುದಕ್ಕಿಂತ, ಗಾಂಧಿ, ನೆಹರು ಅವರ ತತ್ವ ಉಳಿಸುವ ಕಾರ್ಯವಾಗಿದೆ. ಇಂದಿರಾಗಾಂಧಿ ಬ್ಯಾಂಕ್ ರಾಷ್ಟೀಕರಣ ಮಾಡಿದರೆ, ಇವರು ಬ್ಯಾಂಕ್ ವಿಲೀನ ಮಾಡುತ್ತಿದ್ದಾರೆ. ಕೈಗಾರಿಕೆಗಳನ್ನು ದುರ್ಬಲಗೊಳಿಸುತ್ತಿದ್ದಾರೆ ಎಂದು ವೀರಪ್ಪ ಮೊಯ್ಲಿ ತಿಳಿಸಿದರು.

ಸಮಾಜವನ್ನು ಮತ್ತೆ ಕಟ್ಟಬೇಕಾದರೆ ಗಾಂಧಿ ತತ್ವ ಅಗತ್ಯವಿದೆ. ಕಾಂಗ್ರೆಸ್ ಅನ್ನು ಮೊದಲು ಬದಲಿಸಿಕೊಂಡು ನಂತರ ದೇಶ ಹಾಗೂ ಸಮಾಜ ಬದಲಿಸೋಣ. ಈ ಉದ್ದೇಶದಿಂದ ಈ ಗಾಂಧಿ ನಡಿಗೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದೆ ಎಂದು ಅವರು ಹೇಳಿದರು.

ಕೆಪಿಸಿಸಿ ಕಾರ್ಯಾಧ್ಯಕ್ಷ ರಾಮಲಿಂಗಾರೆಡ್ಡಿ ಮಾತನಾಡಿ, ಮಾಜಿ ಮುಖ್ಯಮಂತ್ರಿ ವೀರಪ್ಪ ಮೊಯ್ಲಿ ವಿಶೇಷ ಕಾರ್ಯಕ್ರಮ ರೂಪಿಸಿದ್ದಾರೆ. ಮೊದಲು ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ನಡೆಯುತ್ತಿದೆ. ಗಾಂಧಿ ನಡಿಗೆ ಕಾರ್ಯಕ್ರಮವನ್ನು ರಾಜ್ಯವ್ಯಾಪಿ ನಡೆಸಲು ನಮ್ಮ ಸಿಎಲ್‍ಪಿ ನಾಯಕರು ಹಾಗೂ ಕೆಪಿಸಿಸಿ ಅಧ್ಯಕ್ಷರ ಬಳಿ ಚರ್ಚಿಸಲಾಗುವುದು ಎಂದರು.

ರಾಜ್ಯ ಹಾಗೂ ದೇಶದಲ್ಲಿ ರಾಜಕಾರಣ ಹದಗೆಟ್ಟಿದ್ದು, ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸದವರ ಕೈಗೆ ದೇಶದ ಅಧಿಕಾರ ಸಿಕ್ಕಿದೆ. ದೇಶಕ್ಕೆ ಸ್ವಾತಂತ್ರ್ಯ ತಂದವರನ್ನು ಮೂಲೆಗುಂಪು ಮಾಡುವ ಪ್ರಯತ್ನ ನಡೆಯುತ್ತಿದೆ. ಬಿಜೆಪಿಯವರು ಅಧಿಕಾರಕ್ಕೆ ಬಂದ ನಂತರ ಕಾಂಗ್ರೆಸ್, ಗಾಂಧಿ, ನೆಹರು, ಇಂದಿರಾಗಾಂಧಿ ಅವರ ವಿರುದ್ಧ ಅಪಪ್ರಚಾರ ನಡೆಸುತ್ತಿದ್ದಾರೆ ಎಂದು ಅವರು ಕಿಡಿಗಾರಿದರು.

ಬಿಜೆಪಿಯ ಸುಳ್ಳುಗಳು ಜನರಿಗೆ ಮನದಟ್ಟಾಗುತ್ತದೆ. ಹಾಗಂತ ನಾವು ಸುಮ್ಮನೆ ಕೂರದೆ, ಜನರಲ್ಲಿ ಅರಿವು ಮೂಡಿಸಲು ನಾವು ಕೂಡ ಪ್ರಯತ್ನ ಮಾಡಲು ಈ ಕಾರ್ಯಕ್ರಮ ಮಾಡುತ್ತಿದ್ದೇವೆ ಎಂದು ಅವರು ಹೇಳಿದರು.

ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹ್ಮದ್ ಮಾತನಾಡಿ, 'ಗಾಂಧಿ ನಡಿಗೆ' ಕಾರ್ಯಕ್ರಮದಲ್ಲಿ ಕಾಂಗ್ರೆಸ್ ತತ್ವ, ಸಿದ್ಧಾಂತ, ಕೊಡುಗೆ, ವಿಚಾರಧಾರೆ ವಿವರಿಸಲಾಗುವುದು. ಆ ಮೂಲಕ ಜನರಿಗೆ, ಯುವ ಪೀಳಿಗೆಗೆ ಮಾರ್ಗದರ್ಶನ ನೀಡುವ ಪ್ರಯತ್ನ ಮಾಡಲಾಗುತ್ತದೆ. ಕಾಂಗ್ರೆಸ್ ವತಿಯಿಂದ ಮುಂದಿನ ತಿಂಗಳು ಗಾಂಧಿ ಗ್ರಾಮ ಸ್ವರಾಜ್ಯ ಕಾರ್ಯಕ್ರಮ ಹಮ್ಮಿಕೊಂಡಿದ್ದು, ಎಲ್ಲ ಪಂಚಾಯಿತಿ, ಬ್ಲಾಕ್ ಹಾಗೂ ಗಾಂಧೀಜಿ ಕೊಡುಗೆ, ಹೋರಾಟ ಎಲ್ಲವನ್ನು ಜನರಿಗೆ ವಿವರಿಸಲಾಗುವುದು ಎಂದರು.

ಮುಖ್ಯಮಂತ್ರಿ ಬದಲಾದರೂ ಈ ಸರಕಾರ ಟೇಕ್ ಆಫ್ ಆಗಿಲ್ಲ. ಸಿಎಂ ಬೊಮ್ಮಾಯಿ ಚಕ್ರವ್ಯೂಹದಲ್ಲಿ ಸಿಲುಕಿದ್ದಾರೆ. ಬಿಜೆಪಿ ಮನೆಯೊಂದು ಮೂರು ಬಾಗಿಲಂತಾಗಿದೆ. ಧವಳ ಗಿರಿ, ಕೇಶವ ಕೃಪ ಹಾಗೂ ದಿಲ್ಲಿ ಹೈಕಮಾಂಡ್ ನಡುವೆ ಸರಕಾರ ನಲುಗುತ್ತಿದೆ. ಬಿಜೆಪಿ ರಾಜ್ಯಾಧ್ಯಕ್ಷ ಕಟೀಲು ಭ್ರಮೆಯಲ್ಲಿದ್ದಾರೆ. ಅವರು ಅತಂತ್ರಕ್ಕೆ ಸಿಲುಕಿರುವುದರಿಂದ ಇಂತಹ ಹೇಳಿಕೆ ನೀಡಿದ್ದಾರೆ. ಜನರಿಗೆ ಸ್ವರ್ಗ ನೀಡುತ್ತಾರೆ ಎಂದು ಹೇಳಿದ್ದ ಬಿಜೆಪಿ ಜನರಿಗೆ ನರಕ ತೋರಿಸುತ್ತಿದ್ದಾರೆ ಎಂದು ಅವರು ಟೀಕಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News