ಪರಿಶಿಷ್ಟರ ಮೀಸಲಾತಿ ವರ್ಗೀಕರಣ: ಏಕಪಕ್ಷೀಯವಾಗಿ ಕೇಂದ್ರಕ್ಕೆ ಶಿಫಾರಸ್ಸು ಮಾಡಬಾರದು; ಮನವಿ

Update: 2021-09-23 15:25 GMT

ಬೆಂಗಳೂರು, ಸೆ. 23: ‘ಪರಿಶಿಷ್ಟರ ಮೀಸಲಾತಿ ವರ್ಗೀಕರಣಕ್ಕೆ ಸಂಬಂಧಿಸಿದಂತೆ ನ್ಯಾಯಮೂರ್ತಿ ಎ.ಜೆ.ಸದಾಶಿವ ಆಯೋಗದ ವರದಿಯನ್ನು ಏಕಪಕ್ಷೀಯವಾಗಿ ಕೇಂದ್ರಕ್ಕೆ ಶಿಫಾರಸ್ಸು ಮಾಡಬಾರದು' ಎಂದು ಕರ್ನಾಟಕ ಮೀಸಲಾತಿ ಸಂರಕ್ಷಣಾ ಒಕ್ಕೂಟ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ.ಕುಮಾರಸ್ವಾಮಿ ಅವರಿಗೆ ಮನವಿ ಮಾಡಿದೆ.

ಗುರುವಾರ ಇಮ್ಮಡಿ ಸಿದ್ದರಾಮೇಶ್ವರ ಸ್ವಾಮಿ ನೇತೃತ್ವದಲ್ಲಿ ಮಾಜಿ ಸಚಿವ ಅರವಿಂದ ಲಿಂಬಾವಳಿ, ಶಾಸಕ ಚಂದ್ರಪ್ಪ, ವೆಂಕಟರಮಣಪ್ಪ, ಗೂಳಿಹಟ್ಟಿ ಶೇಖರ್, ಎಸ್. ರಘು, ಪಿ.ರಾಜೀವ್, ಅವಿನಾಶ್ ಜಾಧವ್, ರಾಮಣ್ಣ ಲಮಾಣಿ, ಸಂಸದ ಉಮೇಶ್ ಜಾಧವ್ ಸೇರಿದಂತೆ ಇನ್ನಿತರರು ನಿಯೋಗದಲ್ಲಿದ್ದರು.

ಅಂಬೇಡ್ಕರ್ ಪ್ರಯತ್ನದ ಫಲದಿಂದ ಪಡೆದ ಸಂವಿಧಾನಿಕ ಮೀಸಲಾತಿ ಸೌಲಭ್ಯಗಳನ್ನು ವಂಚಿಸಲು ಕೆಲ ರಾಜಕೀಯ ಸೂತ್ರದಾರರು ಹವಣಿಸುತ್ತಿದ್ದು, ಇಂತಹ ಕುತಂತ್ರ ನಿಲ್ಲಬೇಕು. ಪರಿಶಿಷ್ಟ ಜಾತಿಗಳ ಸಹೋದರರ ಮಧ್ಯೆ ಪ್ರಚೋಧನೆ, ದ್ವೇಷ, ಒಡಕು ಬಿತ್ತಲು ಹೊರಟಿರುವುದು ಸರಿಯಲ್ಲ ಎಂದು ಆಕ್ಷೇಪ ವ್ಯಕ್ತಪಡಿಸಲಾಗಿದೆ.

ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಮೀಸಲಾತಿ ಹೆಚ್ಚಳಕ್ಕೆ ನ್ಯಾಯಮೂರ್ತಿ ನಾಗಮೋಹನ್ ದಾಸ್ ನೇತೃತ್ವದ ಸಮಿತಿ ಸರಕಾರಕ್ಕೆ ಸಲ್ಲಿಸಿರುವ ವರದಿಯನ್ನು ಕೂಡಲೇ ಅಂಗೀಕರಿಸಬೇಕು. ಎ.ಜೆ.ಸದಾಶಿವ ಆಯೋಗವೂ ಬಂಜಾರ, ಭೋವಿ, ಛಲವಾದಿ, ಕೊರಚ, ಕೊರಮ ಮತ್ತು ಅಲೆಮಾರಿ ಸಮುದಾಯಗಳನ್ನು ವಿನಾಕಾರಣ ಕಟಕಟೆಯಲ್ಲಿ ನಿಲ್ಲಿಸಲು ಪ್ರಯತ್ನ ಮಾಡಿದಂತೆ ಕಂಡುಬರುತ್ತದೆ.

ಆಯೋಗವು ಪಾರದರ್ಶಕ ಸಮೀಕ್ಷೆ ಮತ್ತು ವೈಜ್ಞಾನಿಕ ಅಧ್ಯಯನದ ಶಿಫಾರಸ್ಸು ಮಾಡಿರಲು ಸಾಧ್ಯವಿಲ್ಲ. ಎಡ-ಬಲ, ಸ್ಪೃಶ್ಯ, ಅಸ್ಪೃಶ್ಯ ಇತ್ಯಾದಿ ಅಸಂವಿಧಾನಿಕ ಶಬ್ಧಗಳ ಬಳಕೆಯಿಂದ ಪರಿಶಿಷ್ಟ ಜಾತಿಗಳ ಮಧ್ಯೆ ಕಂದಕವನ್ನು ಸೃಷ್ಟಿಸಿದೆ. ಹೀಗಾಗಿ ಈ ವರದಿ ಅಪ್ರಸ್ತುತ ಮತ್ತು ಅನಗತ್ಯ ಎಂದು ಸಮಿತಿ ಆಕ್ಷೇಪಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News