ಬೆಲೆ ಏರಿಕೆಯಿಂದ ಎಲ್ಲರ ಮನೆಗೆ ಬೆಂಕಿ ಬಿದ್ದಿದೆ: ಸಿದ್ದರಾಮಯ್ಯ

Update: 2021-09-24 11:57 GMT

ಬೆಂಗಳೂರು: 'ಬೆಲೆ ಏರಿಕೆಯಿಂದಾಗಿ ಇಂದು ಎಲ್ಲರ ಮನೆಗೆ ಬೆಂಕಿ ಬಿದ್ದಿದೆ' ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ರಾಜ್ಯ, ಕೇಂದ್ರ ಸರಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. 

ಬೆಲೆ ಏರಿಕೆ ಖಂಡಿಸಿ ಕೆಪಿಸಿಸಿ ಕಚೇರಿಯಿಂದ ವಿಧಾನ ಸೌಧಕ್ಕೆ ಟಾಂಗಾ ಜಾಥಾ ನಡೆಸಿದ ಕಾಂಗ್ರೆಸ್, ಕೇಂದ್ರ, ರಾಜ್ಯ ಸರಕಾರದ ವಿರುದ್ಧ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದೆ. 

ಬಳಿಕ ವಿಧಾನಸಭೆ ಆವರಣದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಸಿದ್ದರಾಮಯ್ಯ, ಬೆಲೆ ಏರಿಕೆ ಖಂಡಿಸಿ ಎತ್ತಿನಗಾಡಿ, ಸೈಕಲ್ ರ್ಯಾಲಿ ಬಳಿಕ ಇದೀಗ ಟಾಂಗಾ ಜಾಥಾ ನಡೆಸಿದ್ದೇವೆ. ಬಿಜೆಪಿ ಸರಕಾರವನ್ನು ಕಿತ್ತೊಗೆಯುವವರೆಗೂ ಹೋರಾಟ ಮುಂದುವರಿಯಲಿದೆ ಎಂದು ಹೇಳಿದ್ದಾರೆ. 

ತಮಿಳುನಾಡು ಮುಖ್ಯಮಂತ್ರಿ ಎಂ.ಕೆ ಸ್ಟಾಲಿನ್ ಪೆಟ್ರೋಲ್, ಡೀಸೆಲ್ ತೆರಿಗೆಯನ್ನು 3 ರೂಪಾಯಿ ಕಡಿತ ಮಾಡಿದ್ದಾರೆ. ಇದೇ ರೀತಿ
ಬಿಜೆಪಿ ಸರ್ಕಾರ ಕೂಡಾ ಪೆಟ್ರೋಲ್, ಡೀಸೆಲ್ ಮೇಲಿನ ತೆರಿಗೆಯನ್ನು ರೂ. 10ರಷ್ಟು ಕಡಿತ ಮಾಡಲಿ. ನಮ್ಮ ಪಕ್ಷ ಅಧಿಕಾರದಲ್ಲಿ ಇದ್ದಿದ್ದರೆ ಕನಿಷ್ಟ 10 ರೂಪಾಯಿ ತೆರಿಗೆ ಕಡಿತ ಮಾಡುತ್ತಿದ್ದೆ ಎಂದು ಹೇಳಿದ್ದಾರೆ. 

ರೈತರ ಹೋರಾಟ ಪ್ರಾಯೋಜಿತ ಎಂದು ಹೇಳಿಕೆ ನೀಡಿದ್ದ ಸಿಎಂ ಬೊಮ್ಮಾಯಿಗೆ ತಿರುಗೇಟು ನೀಡಿದ ಸಿದ್ದರಾಮಯ್ಯ, 'ಬಸವರಾಜ ಬೊಮ್ಮಾಯಿ ಹೋರಾಟದ ಹಿನ್ನೆಲೆಯಿಂದ ಬಂದವರಲ್ಲ, ಬಿಎಸ್ ವೈ ಅವರ ಆಪರೇಷನ್ ಕಮಲ ಮೂಲಕ ರಚನೆಯಾದ ಸರಕಾರದಲ್ಲಿ ಬೊಮ್ಮಾಯಿ ಸಿಎಂ ಆಗಿದ್ದಾರೆ ಎಂದು ಟೀಕಿಸಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News