ಬೆಂಗಳೂರಿನ ಗಲ್ಲಿಗಳಲ್ಲಿ ಕ್ರಿಕೆಟ್ ಆಡುತ್ತಿದ್ದ ಬಾಲಕಿ ಈಗ ಜರ್ಮನಿ ರಾಷ್ಟ್ರೀಯ ಮಹಿಳಾ ತಂಡದ ನಾಯಕಿ

Update: 2021-09-25 07:10 GMT

ಬೆಂಗಳೂರು: ಬೆಂಗಳೂರಿನ ಗಲ್ಲಿಗಳಲ್ಲಿ ಕ್ರಿಕೆಟ್ ಆಡುತ್ತಿದ್ದ ಹುಡುಗಿಯೊಬ್ಬಳು ಜರ್ಮನಿ ರಾಷ್ಟ್ರೀಯ ವನಿತಾ ಕ್ರಿಕೆಟ್ ತಂಡದ ನಾಯಕಿಯಾದ ಕಥೆಯೇ ರೋಚಕ. ಕಾರ್ಡಿಯೋ ವಾಸ್ಕ್ಯುಲರ್ ವಿಜ್ಞಾನಿಯಾಗಿರುವ 34 ವರ್ಷದ ಅನುರಾಧಾ ದೊಡ್ಡಬಳ್ಳಾಪುರ ಅವರ ಸಾಧನೆ ಎಲ್ಲರಿಗೂ ಸ್ಫೂರ್ತಿದಾಯಕ.

ಹೆಚ್ಚಿನ ಭಾರತೀಯ ಮಕ್ಕಳಂತೆ ಚಿಕ್ಕವರಿರುವಾಗ ಅನುರಾಧ ಕೂಡ ಪುರುಷರ ಕ್ರಿಕೆಟ್ ಪಂದ್ಯಗಳನ್ನು ವೀಕ್ಷಿಸುತ್ತಾ ಸ್ಫೂರ್ತಿ ಪಡೆದವರು. ಗಲ್ಲಿಗಳಲ್ಲಿ ಹುಡುಗರೊಂದಿಗೆ ಕ್ರಿಕೆಟ್ ಆಟವಾಡುವಾಗ ಅವರಿಗೆ ಯಾವತ್ತೂ ಬ್ಯಾಟಿಂಗ್ ಅವಕಾಶ ದೊರಕುತ್ತಿರಲಿಲ್ಲ. ಬೌಲರ್ ಮತ್ತು ಫೀಲ್ಡರ್ ಅಷ್ಟೇ ಆಗಿದ್ದರು. ಮುಂದೆ ಬಿಷಪ್ ಕಾಟನ್ಸ್ ಗಲ್ರ್ಸ್ ಸ್ಕೂಲ್‍ನಲ್ಲಿ ಶಿಕ್ಷಣ ಪಡೆಯುವಾಗ ಅವರು ಕ್ರಿಕೆಟ್ ತರಬೇತಿ ಪಡೆದಿದ್ದರು. 1988ರಲ್ಲಿ ಅಂಡರ್-16 ತಂಡದ ಆಯ್ಕೆಯಲ್ಲಿ ಭಾಗವಹಿಸಿ ಅವರು ತಂಡಕ್ಕೆ ಪ್ರವೇಶ ಪಡೆದಿದ್ದರು.

                (thenewsminute.com)

ಮುಂದೆ ಇಂಜಿನಿಯರಿಂಗ್ ಶಿಕ್ಷಣ ಪೂರ್ಣಗೊಳಿಸಿದ ನಂತರ ಅವರು ಮೆಡಿಕಲ್ ಜೆನೆಟಿಕ್ಸ್ ನಲ್ಲಿ ಸ್ನಾತ್ತಕೋತ್ತರ ಪದವಿಗಾಗಿ ಇಂಗ್ಲೆಂಡ್‍ಗೆ ತೆರಳಿದ್ದರು. ನಂತರ ತಮ್ಮ ಪಿಎಚ್‍ಡಿಗಾಗಿ ಫ್ರಾಂಕ್‍ಫರ್ಟ್‍ಗೆ ತೆರಳಿದ ವೇಳೆ ಅವರು ರಾಷ್ಟ್ರೀಯ ವನಿತಾ ಕ್ರಿಕೆಟ್ ತಂಡದ ಆಯ್ಕೆಯಲ್ಲಿ ಭಾಗವಹಿಸಿ ಅಚ್ಚರಿಯೆಂಬಂತೆ 2013ರಲ್ಲಿ ಪ್ರವೇಶ ಪಡೆದಿದ್ದರು. 2017ರಿಂದ ಅವರು ಜರ್ಮನಿಯ ರಾಷ್ಟ್ರೀಯ ವನಿತಾ ಕ್ರಿಕೆಟ್ ತಂಡವನ್ನು ಮುನ್ನಡೆಸುತ್ತಿದ್ದಾರೆ. ಜರ್ಮನಿಯ ಕ್ರಿಕೆಟ್ ತಂಡ ತೀರಾ ಇತ್ತೀಚಿಗಿನ ತನಕ ಅಷ್ಟೊಂದೇನೂ ಸುದ್ದಿಯಾಗಿರದೇ ಇದ್ದರೂ 2020ರಲ್ಲಿ ಆಸ್ಟ್ರಿಯಾ ವಿರುದ್ಧದ ಪಂದ್ಯದಲ್ಲಿ ನಾಲ್ಕು ಬಾಲ್‍ಗಳಲ್ಲಿ  ಸತತ ವಿಕೆಟ್ ಪಡೆದು ಅನುರಾಧಾ ವನಿತಾ ಕ್ರಿಕೆಟ್‍ನಲ್ಲಿ ವಿಶ್ವದಾಖಲೆ ಸ್ಥಾಪಿಸಿ ಲಸಿತ್ ಮಾಲಿಂಗ ಮತ್ತು ರಶೀದ್ ಖಾನ್ ಅವರ ಸಾಲಿಗೆ ಸೇರ್ಪಡೆಯಾಗಿದ್ದಾರೆ.

ಸದ್ಯ ಅವರು ಮ್ಯಾಕ್ಸ್ ಪ್ಲಾಂಕ್ ಇನ್‍ಸ್ಟಿಟ್ಯೂಟ್ ಫಾರ್ ಹಾರ್ಟ್ ಎಂಡ್ ಲಂಗ್ ರಿಸರ್ಚ್ ಇಲ್ಲಿನ ವಿಜ್ಞಾನಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ.

ಕೃಪೆ: thenewsminute.com

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News