ಕಪಿಲ್ ಶರ್ಮಾ ವಂಚನೆ ಪ್ರಕರಣ:ಕಾರು ವಿನ್ಯಾಸಕ ದಿಲೀಪ್ ಛಾಬ್ರಿಯಾರ ಪುತ್ರನ ಬಂಧನ

Update: 2021-09-25 17:10 GMT

ಮುಂಬೈ,ಸೆ.25: ನಟ ಕಪಿಲ್ ಶರ್ಮಾ ಅವರು ಕಳೆದ ವರ್ಷ ಸಲ್ಲಿಸಿದ್ದ ದೂರಿನ ಆಧಾರದಲ್ಲಿ ದಾಖಲಾಗಿರುವ ಎಫ್‌ಐಆರ್‌ಗೆ ಸಂಬಂಧಿಸಿದಂತೆ ಕಾರು ವಿನ್ಯಾಸಕ ದಿಲೀಪ ಛಾಬ್ರಿಯಾ ಅವರ ಪುತ್ರ ಬೊನಿಟೊ ಛಾಬ್ರಿಯಾರನ್ನು ಶನಿವಾರ ಮುಂಬೈ ಕ್ರೈಂ ಬ್ರಾಂಚ್ ಪೊಲೀಸರು ಬಂಧಿಸಿದ್ದಾರೆ.

ದಿಲೀಪ,ಬೊನಿಟೊ ಮತ್ತು ಇತರರು ತನಗೆ 5.3 ಕೋ.ರೂ.ಗಳನ್ನು ವಂಚಿಸಿದ್ದಾರೆ ಎಂದು ಶರ್ಮಾ ಆರೋಪಿಸಿದ್ದರು.

 ಶರ್ಮಾ ತನಗಾಗಿ ವ್ಯಾನಿಟಿ ಬಸ್‌ವೊಂದನ್ನು ವಿನ್ಯಾಸಗೊಳಿಸಲು 2017 ಮಾರ್ಚ್ ಮತ್ತು ಮೇ ನಡುವೆ ದಿಲೀಪ ಛಾಬ್ರಿಯಾ ಡಿಸೈನ್ಸ್ ಪ್ರೈ.ಲಿ.(ಡಿಸಿಡಿಪಿಎಲ್) ನ ಮಾಲಿಕ ದಿಲೀಪ ಛಾಬ್ರಿಯಾಗೆ 5.3 ಕೋ.ರೂ.ಗಳನ್ನು ಪಾವತಿಸಿದ್ದರು. ಆದರೆ 2019ರವರೆಗೂ ಯಾವುದೇ ಪ್ರಗತಿ ಕಾಣದಿದ್ದಾಗ ಶರ್ಮಾ ರಾಷ್ಟ್ರೀಯ ಕಂಪನಿ ಕಾನೂನು ನ್ಯಾಯಮಂಡಳಿಯ ಮೆಟ್ಟಿಲೇರಿದ್ದರು. ಆರಂಭಿಕ ವಿಚಾರಣೆಗಳ ಬಳಿಕ ಡಿಸಿಡಿಪಿಎಲ್‌ನ ಬ್ಯಾಂಕ್ ಖಾತೆಗಳ ಸ್ತಂಭನಕ್ಕೆ ನ್ಯಾಯಮಂಡಳಿಯು ಆದೇಶಿಸಿತ್ತು.

ಕಳೆದ ವರ್ಷ ಛಾಬ್ರಿಯಾ ಇನ್ನೂ ಪೂರ್ಣಗೊಳ್ಳಬೇಕಿರುವ ವ್ಯಾನಿಟಿ ಬಸ್ ಅನ್ನು ನಿಲ್ಲಿಸಬೇಕಿರುವ ಜಾಗಕ್ಕಾಗಿ 1.20 ಕೋ.ರೂ.ಗಳ ಪಾರ್ಕಿಂಗ್ ಶುಲ್ಕದ ಬಿಲ್ ಅನ್ನು ಕಳುಹಿಸಿದ್ದು,2020 ಸೆಪ್ಟಂಬರ್‌ನಲ್ಲಿ ಶರ್ಮಾ ಛಾಬ್ರಿಯಾ ವಿರುದ್ಧ ಆರ್ಥಿಕ ಅಪರಾಧಗಳ ಘಟಕ(ಇಒಡಬ್ಲು)ಕ್ಕೆ ದೂರು ಸಲ್ಲಿಸಿದ್ದರು.

ಇಒಡಬ್ಲು ಪ್ರಾಥಮಿಕ ತನಿಖೆ (ಪಿಇ)ಯನ್ನು ನಡೆಸುತ್ತಿದ್ದಾಗ ಕಳೆದ ವರ್ಷದ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕ್ರೈಂ ಬ್ರಾಂಚ್ ಛಾಬ್ರಿಯಾರನ್ನು ಬಂಧಿಸಿತ್ತು. ಬಳಿಕ ಪಿಇ ಅನ್ನು ಎಫ್‌ಐಆರ್ ಆಗಿ ಪರಿವರ್ತಿಸಲಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News