ಬೆಂಗಳೂರು: ಬೆಲೆ ಏರಿಕೆ ವಿರೋಧಿಸಿ ಯುವ ಕಾಂಗ್ರೆಸ್ ನಿಂದ ಸೈಕಲ್ ಜಾಥಾ

Update: 2021-09-26 12:48 GMT

ಬೆಂಗಳೂರು, ಸೆ. 26: ಕೇಂದ್ರ ಸರಕಾರ ನಿರಂತರ ತೈಲ ಬೆಲೆ, ದಿನಬಳಕೆ ವಸ್ತುಗಳ ದರ ಗಗನಕ್ಕೇರಿಸಿರುವ ಕ್ರಮ ವಿರೋಧಿಸಿ ರಾಜ್ಯ ಯುವ ಕಾಂಗ್ರೆಸ್ ಸದಸ್ಯರು ಬೃಹತ್ ಸೈಕಲ್ ಜಾಥಾ ನಡೆಸಿದರು.

ರವಿವಾರ ಇಲ್ಲಿನ ಟ್ರಿನಿಟಿ ವೃತ್ತದ ಬಳಿ ರಾಷ್ಟ್ರೀಯ ಯುವ ಕಾಂಗ್ರೆಸ್ ಅಧ್ಯಕ್ಷ ಬಿ.ವಿ. ಶ್ರೀನಿವಾಸ್ ನೇತೃತ್ವದಲ್ಲಿ ಜಮಾಯಿಸಿದ ಪ್ರತಿಭಟನಾಕಾರರು, ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ಸರಕಾರದ ವಿರುದ್ಧ ಧಿಕ್ಕಾರದ ಘೋಷಣೆ ಕೂಗಿ ಆಕ್ರೋಶ ಹೊರಹಾಕಿದರು.

ಕೋವಿಡ್ ಮೊದಲ ಹಾಗೂ ಎರಡನೇ ಅಲೆ ನಿಯಂತ್ರಣಕ್ಕೆ ವಿಧಿಸಲಾದ ಲಾಕ್‍ಡೌನ್‍ನಿಂದ ಜನ ಸಂಕಷ್ಟದಲ್ಲಿದ್ದಾರೆ. ಈ ನಡುವೆ ಕೇಂದ್ರ ಹಾಗೂ ರಾಜ್ಯ ಸರಕಾರಗಳು ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ಮಾಡುವ ಮೂಲಕ ಜನಸಾಮಾನ್ಯರ ಬದುಕಿನ ಮೇಲೆ ಬರೆ ಎಳೆಯುವ ಕೆಲಸ ಮಾಡಿವೆ ಎಂದು ಆರೋಪಿಸಿದರು.

ಅಲ್ಲದೆ, ಕೇಂದ್ರ ಮತ್ತು ರಾಜ್ಯ ಸರಕಾರಗಳು ಸುಳ್ಳು ಆಶ್ವಾಸನೆ ನೀಡಿ ಅಧಿಕಾರಕ್ಕೆ ಬಂದು ಅವಶ್ಯಕ ವಸ್ತು ಮತ್ತು ಪೆಟ್ರೋಲ್-ಡೀಸೆಲ್ ಬೆಲೆ ಗಗನಕ್ಕೆ ಏರಿಕೆ ಮಾಡಿ ಜನರ ಜೀವನದ ಮೇಲೆ ಚೆಲ್ಲಾಟ ಆಡುತ್ತಿವೆ. ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ಒಂದೇ ಒಂದು ರೂ. ಏರಿಕೆ ಆದರೆ ದೇಶದಾದ್ಯಂತ ಪ್ರತಿಭಟನೆ ಮಾಡುವವರು ಈಗ ಏನು ಮಾಡುತ್ತಿದ್ದಾರೆ ಎಂದು ಕಾಂಗ್ರೆಸ್ ಸದಸ್ಯರು ಪ್ರಶ್ನಿಸಿದರು.

ಮುಖ್ಯವಾಗಿ ಅಗತ್ಯ ವಸ್ತುಗಳು, ರಸಗೊಬ್ಬರ ಬೆಲೆ ಗಗನಕ್ಕೆ ಏರಿವೆ ಎಂದು ದೂರಿದರು. ಪೆಟ್ರೋಲ್, ಡೀಸೆಲ್, ರಸಗೊಬ್ಬರ, ವಿದ್ಯುತ್ ದರ ಹೆಚ್ಚಳ ಹಿಂಪಡೆಯಬೇಕು. ರಾಜ್ಯ ಸರ್ಕಾರ ಬೇಡಿಕೆಗಳಿಗೆ ಸ್ಪಂದಿಸದಿದ್ದರೆ, ಹೋರಾಟ ಮುಂದುವರೆಸಲಾಗುವುದು ಎಂದು ಎಚ್ಚರಿಕೆ ನೀಡಿದರು. ಈ ಸಂದರ್ಭದಲ್ಲಿ ರಾಷ್ಟ್ರೀಯ ಯುವ ಕಾಂಗ್ರೆಸ್ ಕಾರ್ಯದರ್ಶಿ ಮುಹಮ್ಮದ್ ಹಾರೀಸ್ ನಲಪಾಡ್  ಸೇರಿದಂತೆ ಪ್ರಮುಖರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News