ದೇಗುಲಕ್ಕೆ ಹಾನಿ ಮಾಡದಂತೆ ಕೋರ್ಟ್ ಮೊರೆ ಹೋದ ಮುಸ್ಲಿಮರು

Update: 2021-09-27 04:36 GMT
(ಫೋಟೊ : timesofindia)

ಹೊಸದಿಲ್ಲಿ: ಪುರಾತನ ದೇವಸ್ಥಾನವೊಂದನ್ನು ದುಷ್ಕರ್ಮಿಗಳು ಹಾಳು ಮಾಡದಂತೆ ತಡೆಯುವ ಪ್ರಯತ್ನವಾಗಿ ಜಾಮಿಯಾ ನಗರದ ಮುಸ್ಲಿಂ ನಿವಾಸಿಗಳು ದೆಹಲಿ ಹೈಕೋರ್ಟ್‌ನಲ್ಲಿ ದಾವೆ ಸಲ್ಲಿಸಿದ ಕಾರ್ಯ ಸರ್ವತ್ರ ಮೆಚ್ಚುಗೆಗೆ ಪಾತ್ರವಾಗಿದೆ.

ಈ ದೇವಾಲಯದ ಪಕ್ಕ ಇದ್ದ ಧರ್ಮಶಾಲೆಯನ್ನು ಇತ್ತೀಚೆಗೆ ಕಿಡಿಗೇಡಿಗಳು ನಾಶಪಡಿಸಿದ್ದರು. ಇದರಿಂದ ಆತಂಕಿತರಾದ ಮುಸ್ಲಿಂ ನಾಗರಿಕರು ಸಕಾಲಿಕವಾಗಿ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸುವ ಮೂಲಕ ಇದರ ಸಂರಕ್ಷಣೆಗೆ ಕಾಳಜಿ ಮೆರೆದಿದ್ದಾರೆ.

ಜಾಮಿಯಾ ನಗರದ 206 ವಾರ್ಡ್ ಸಮಿತಿ ಕಳೆದ ವಾರ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿ, ಈ ಭಾಗದಲ್ಲಿ ಉಳಿದಿರುವ ಏಕೈಕ ದೇವಾಲಯ ಹಾಗೂ ಜೋಹ್ರಿ ಫಾರ್ಮ್‌ನಲ್ಲಿ ಇದ್ದ ಧರ್ಮಶಾಲೆಯನ್ನು ಒತ್ತುವರಿ ಮಾಡಿ ಧ್ವಂಸಗೊಳಿಸಲಾಗುತ್ತಿದೆ ಎಂದು ಗಮನಕ್ಕೆ ತಂದಿತ್ತು. ಧರ್ಮಶಾಲೆಯನ್ನು ರಾತ್ರೋರಾತ್ರಿ ಧ್ವಂಸಗೊಳಿಸಲಾಗಿದ್ದು, ಇಡೀ ಭೂಮಿಯನ್ನು ಸಮತಟ್ಟು ಮಾಡಲಾಗಿದೆ. ಇದನ್ನು ಕಿಡಿಗೇಡಿಗಳು/ಬಿಲ್ಡರ್‌ಗಳು ಕಬಳಿಸುವ ಎಲ್ಲ ಸಾಧ್ಯತೆ ಇದೆ ಎಂದು ನೂರ್ ನಗರ ಬಡಾವಣೆಯ ನಿವಾಸಿಗಳು ನ್ಯಾಯಾಲಯದ ಗಮನಕ್ಕೆ ತಂದಿದ್ದರು.

ಆ ಪ್ರದೇಶದ ಲೇಔಟ್ ಪ್ಲಾನ್‌ನಲ್ಲಿ ಮಂದಿರದ ಆವರಣ ಬಗ್ಗೆ ಸ್ಪಷ್ಟವಾಗಿ ಉಲ್ಲೇಖವಿದೆ. ಇದನ್ನು ಭಾಗಶಃ ಕಬಳಿಸಿ ಫ್ಲ್ಯಾಟ್ ಮಾಡಿ ಮಾರಾಟ ಮಾಡಲು ಸಂಚು ನಡೆದಿದೆ ಎಂದು ಫೌಝುಲ್ ಅಜೀಂ ನೇತೃತ್ವದ ಸಮಿತಿ ದಾವೆಯಲ್ಲಿ ವಿವರಿಸಿತ್ತು. ಇದು ಅಕ್ರಮ ಮಾತ್ರವಲ್ಲದೇ, ಕೋಮು ಗಲಭೆ ಸೃಷ್ಟಿಸಿ ಹಣ ಸುಲಿಗೆ ಮಾಡುವ ಹುನ್ನಾರ ಎಂದು ಆಪಾದಿಸಿತ್ತು. ಈ ದೇವಾಲಯವನ್ನು ರಕ್ಷಿಸುವಂತೆ ಪಾಲಿಕೆ ಹಾಗೂ ದೆಹಲಿ ಪೊಲೀಸರಿಗೆ ಸೂಚನೆ ನೀಡಬೇಕು ಎಂದು ಮನವಿ ಮಾಡಲಾಗಿತ್ತು.

ಈ ಹಿನ್ನೆಲೆಯಲ್ಲಿ ಮಂದಿರ ರಕ್ಷಣೆಯನ್ನು ಪಾಲಿಕೆ ಹಾಗೂ ದೆಹಲಿ ಪೊಲೀಸರು ಖಾತರಿಪಡಿಸಬೇಕು ಎಂದು ಹೈಕೋರ್ಟ್ ಸೂಚನೆ ನೀಡಿತು. ಜತೆಗೆ ಈ ಪ್ರದೇಶದಲ್ಲಿ ಯಾವುದೇ ಕಾನೂನು ಸುವ್ಯವಸ್ಥೆ ಸಮಸ್ಯೆ ಉದ್ಭವಿಸದಂತೆ ಅಗತ್ಯ ಕ್ರಮ ಕೈಗೊಳ್ಳುವಂತೆಯೂ ಆದೇಶ ನೀಡಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News