ಬೆಂಗಳೂರು: ಎಸಿಬಿ ಬಲೆಗೆ ಬಿದ್ದ ಟೋಯಿಂಗ್ ಸಿಬ್ಬಂದಿ
ಬೆಂಗಳೂರು: ರಸ್ತೆಯಲ್ಲಿ ನಿಲ್ಲಿಸಿದ್ದ ದ್ವಿಚಕ್ರ ವಾಹನವೊಂದನ್ನು ಟೋಯಿಂಗ್ ಮಾಡಿ ದಂಡ ಪಾವತಿ ಇಲ್ಲದೆ, ಬಿಡಲು ಲಂಚಕ್ಕೆ ಬೇಡಿಕೆಯಿಟ್ಟಿದ್ದ ಪ್ರಕರಣವೊಂದನ್ನು ಎಸಿಬಿ ತನಿಖಾಧಿಕಾರಿಗಳು ಭೇದಿಸಿದ್ದಾರೆ.
ಮಂಗಳವಾರ ಇಲ್ಲಿನ ಬೆಂಗಳೂರು ನಗರ ಎಸಿಬಿ ಠಾಣಾಧಿಕಾರಿಗಳು, ಜಯನಗರ ಸಂಚಾರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಕಾರ್ಯಾಚರಣೆ ಕೈಗೊಂಡಾಗ ಪ್ರಕರಣ ಬೆಳಕಿಗೆ ಬಂದಿದೆ.
ಮಲ್ಲೇಶ್ವರಂ ನಿವಾಸಿಯೊಬ್ಬರು ದ್ವಿಚಕ್ರ ವಾಹನವನ್ನು ಜೆಪಿನಗರ ಶಾಂತಿ ಸಾಗರ್ ಹೊಟೇಲ್ ಮುಂಭಾಗದಿಂದ ಜಯನಗರ ಸಂಚಾರ ಪೊಲೀಸ್ ಠಾಣೆಯ ಸಿಬ್ಬಂದಿ ಟೋಯಿಂಗ್ ವಾಹನದ ಮುಖಾಂತರ ವಾಹನ ಟೋಯಿಂಗ್ ಮಾಡಿ ಜಯನಗರ ಸಂಚಾರ ಪೊಲೀಸ್ ಠಾಣೆಗೆ ತೆಗೆದುಕೊಂಡು ಹೋಗಿದ್ದಾರೆನ್ನಲಾಗಿದೆ. ನಂತರ ದೂರುದಾರರು ವಾಹನವನ್ನು ಬಿಡಲು ಕೋರಿದಾಗ ಟೋಯಿಂಗ್ ಸಿಬ್ಬಂದಿ ಸರಕಾರಿ ದಂಡ ಶುಲ್ಕ 1150 ರೂ. ಇದ್ದು, ಈ ದಂಡವನ್ನು ಕಟ್ಟದೇ ವಾಹನವನ್ನು ಬಿಡಲು 800 ರೂ. ನೀಡುವಂತೆ ಲಂಚಕ್ಕೆ ಬೇಡಿಕೆ ಇಟ್ಟಿದ್ದಾರೆಂದು ಆರೋಪಿಸಲಾಗಿದೆ.
ಈ ಸಂಬಂಧ ಎಸಿಬಿ ಟ್ರ್ಯಾಪ್ ಕಾರ್ಯಾಚರಣೆ ನಡೆಸಿದಾಗ ಟೋಯಿಂಗ್ ಸಿಬ್ಬಂದಿ ಸಿದ್ದೇಗೌಡ ಸಿಕ್ಕಿಬಿದ್ದಿದ್ದು, ಈತನಿಂದ 800 ರೂ. ವಶಕ್ಕೆ ಪಡೆಯಲಾಗಿದೆ. ಈ ಕಾರ್ಯಾಚರಣೆಯಲ್ಲಿ ಕೆಲ ಠಾಣೆಯ ಅಧಿಕಾರಿಗಳು, ಸಿಬ್ಬಂದಿಯೂ ಸಿಕ್ಕಿಬಿದಿದ್ದು, ಈ ಕುರಿತು ತನಿಖೆ ಮುಂದುವರೆಸಲಾಗಿದೆ ಎಂದು ಎಸಿಬಿ ಹೇಳಿದೆ.