ಮಣಿಪುರ: 2ನೇ ವಿಶ್ವಯುದ್ಧ ಕಾಲದ ಬಾಂಬ್ ಸ್ಫೋಟಗೊಂಡು ಇಬ್ಬರು ಮೃತ್ಯು

Update: 2021-09-30 17:30 GMT

ಸಾಂದರ್ಭಿಕ ಚಿತ್ರ

ಇಂಫಾಲ್ ,ಸೆ.30: ಮ್ಯಾನ್ಮಾರ್ ಗಡಿಗೆ ಹೊಂದಿಕೊಂಡಿರುವ ಮಣಿಪುರದ ಮೋರೆ ಪಟ್ಟಣದಲ್ಲಿ ಬುಧವಾರ ಎರಡನೇ ವಿಶ್ವಯುದ್ಧದ ಕಾಲದ್ದೆನ್ನಲಾಗಿರುವ ಬಾಂಬ್ ಸ್ಫೋಟಿಸಿದ ಪರಿಣಾಮ ಇಬ್ಬರು ಯುವಕರು ಮೃತಪಟ್ಟಿದ್ದಾರೆ.

ಎರಡನೇ ವಿಶ್ವಯುದ್ಧದ ಸಂದರ್ಭದಲ್ಲಿ ಬ್ರಿಟಿಷರು ಮೋರೆ ಡಿಪೋದಲ್ಲಿ 300 ಕೋ.ರೂ. ಮೌಲ್ಯದ ಮದ್ದುಗುಂಡುಗಳು, ಶಸ್ತ್ರಾಸ್ತ್ರಗಳು ಮತ್ತು ಆಹಾರವನ್ನು ದಾಸ್ತಾನಿರಿಸಿದ್ದರು.

ವ್ಯಕ್ತಿಯು ತ್ಯಾಜ್ಯವನ್ನು ಸುರಿಯಲು ತಮ್ಮ ಮನೆಯ ಹಿತ್ತಿಲಿನಲ್ಲಿ ಹೊಂಡವನ್ನು ತೋಡುತ್ತಿದ್ದಾಗ ಈ ಸ್ಫೋಟ ಸಂಭವಿಸಿದೆ. ಬಾಂಬ್ 2ನೇ ವಿಶ್ವಯುದ್ಧ ಕಾಲದ್ದು ಎಂದು ನಂಬಲಾಗಿದೆ ಎಂದು ಟೆಂಗ್ನೌಪಾಲ್ ಜಿಲ್ಲೆಯ ಎಸ್.ಪಿ.ಎಂ.ಅಮಿತ್ ಅವರು ಸುದ್ದಿಗಾರರಿಗೆ ತಿಳಿಸಿದರು.

ಬುಧವಾರ ಸ್ಫೋಟಗೊಂಡ ಬಾಂಬ್ ಬ್ರಿಟಿಷರ ಫಿರಂಗಿ ದಳ ನೆಲೆಗಳಲ್ಲೊಂದರಲ್ಲಿತ್ತು. ಕಳೆದ ವರ್ಷ ಅಲ್ಲಿ ಭಾರೀ ಪ್ರಮಾಣದಲ್ಲಿ ಬಾಂಬ್ಗಳು ಪತ್ತೆಯಾಗಿದ್ದವು ಎಂದು ಸೆಕೆಂಡ್ ವರ್ಲ್ಡ್ ವಾರ್ ಇಂಫಾಲ ಕ್ಯಾಂಪೇನ್ ಫೌಂಡೇಷನ್ ನ ಅಧ್ಯಕ್ಷ ರಾಜೇಶ್ವರ ಯುಮ್ನಾಮ್ ತಿಳಿಸಿದರು.

ಸ್ಫೋಟ ಸಂಭವಿಸಿದ್ದ ಸ್ಥಳದಲ್ಲಿ 2ನೇ ವಿಶ್ವಯುದ್ಧ ಕಾಲದ ಹಲವಾರು ಬಾಂಬ್ಗಳು ಪತ್ತೆಯಾಗಿದ್ದವು ಎಂದು ಗ್ರಾಮದ ಮುಖ್ಯಸ್ಥ ಟಿ.ಬೈಟೆ ಅವರೂ ತಿಳಿಸಿದರು. ರಾಜ್ಯ ಸರಕಾರವು ಮೃತರ ಕುಟುಂಬಗಳಿಗೆ ಅಗತ್ಯ ನೆರವನ್ನು ಒದಗಿಸಬೇಕು ಎಂದು ಅವರು ಕೋರಿದರು.

ಮೃತರು ಹೊಂಡವನ್ನು ತೋಡುತ್ತಿದ್ದ ನಿವೇಶನದಲ್ಲಿ ಕಳೆದ ವರ್ಷದ ನವೆಂಬರ್ನಲ್ಲಿ ಉತ್ಖನನ ನಡೆಸಿ 122 ಸ್ಫೋಟಿಸಿರದ ಫಿರಂಗಿ ಬಾಂಬ್ ಶೆಲ್ಗಳನ್ನು ಪತ್ತೆ ಹಚ್ಚಲಾಗಿತ್ತು. ಅದೇ ವರ್ಷದ ಜೂನ್ನಲ್ಲಿ ಮಣಿಪುರದ ಚುರಾಚಂಡಪುರ ಜಿಲ್ಲೆಯಲ್ಲಿ 2ನೇ ವಿಶ್ವಯುದ್ಧ ಕಾಲದ ಎರಡು ಮಾರ್ಟರ್ ಶೆಲ್ಗಳು ಪತ್ತೆಯಾಗಿದ್ದವು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News