ಮುಂದಿನ 10 ದಿನಗಳಲ್ಲಿ ಪ್ರಮುಖ ರಸ್ತೆಯಲ್ಲಿನ ಗುಂಡಿಗಳನ್ನ ಮುಚ್ಚಲಾಗುವುದು: ಕಂದಾಯ ಸಚಿವ ಆರ್. ಅಶೋಕ್

Update: 2021-09-30 17:55 GMT

ಬೆಂಗಳೂರು, ಸೆ. 30: ‘ನಗರದಲ್ಲಿನ ರಸ್ತೆ ಗುಂಡಿಗಳನ್ನ ಮುಚ್ಚಲು ಬಿಬಿಎಂಪಿ ಅಧಿಕಾರಿಗಳಿಗೆ ಈಗಾಗಲೇ ಗಡುವು ನೀಡಲಾಗಿತ್ತು. ಆದರೆ, ಸತತ ಮಳೆಯಿಂದಾಗಿ ಜಲ್ಲಿ ಮಿಕ್ಸ್ ಪೂರೈಸಲು 12 ದಿನಗಳ ಕಾಲ ಸಾಧ್ಯವಾಗದ ಕಾರಣ ನಿಗದಿತ ಕಾರ್ಯಕ್ಕೆ ಅಡಚಣೆಯುಂಟಾಗಿದೆ. ಹೀಗಾಗಿ ಮುಂದಿನ ಹತ್ತು ದಿನಗಳ ಒಳಗೆ ಎಲ್ಲ್ಲ ರಸ್ತೆಯಲ್ಲಿನ ಗುಂಡಿಗಳನ್ನ ಮುಚ್ಚಲು ಗಡುವು ನೀಡಿದ್ದೇನೆ' ಎಂದು ಕಂದಾಯ ಸಚಿವ ಆರ್. ಅಶೋಕ್ ಹೇಳಿದ್ದಾರೆ.

ಗುರುವಾರ ಬಿಬಿಎಂಪಿ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಬಳಿಕ ಮಾತನಾಡಿದ ಅವರು, ‘ಈಗಾಗಲೇ 246 ಕಿ.ಮೀ ಪ್ರಮುಖ ರಸ್ತೆಯುದ್ದಕ್ಕೂ ಗುಂಡಿಗಳನ್ನ ಮುಚ್ಚಲಾಗಿದೆ. ಬಿಬಿಎಂಪಿ ವ್ಯಾಪ್ತಿಯಲ್ಲಿ ಒಟ್ಟಾರೆ 13,874 ಕಿ.ಮೀ ಬರುತ್ತದೆ. ಇದರಲ್ಲಿ 1,344 ಕಿ.ಮೀ. ರಸ್ತೆಯನ್ನು ಪ್ರಮುಖ ಹಾಗೂ ಉಪ ಪ್ರಮುಖ ರಸ್ತೆ ಎಂದು ವಿಂಗಡಿಸಲಾಗಿದೆ.

ಇದರಲ್ಲಿ 865 ಕಿ.ಮೀ ಉದ್ದದ ರಸ್ತೆ ಸುಸ್ಥಿತಿಯಲ್ಲಿದ್ದು, 449 ಕಿ.ಮೀ ನಷ್ಟು ರಸ್ತೆ ಭಾಗಶಃ ಹಾಳಾಗಿದೆ. ಹೀಗಾಗಿ ಮುಂದಿನ 10 ದಿನಗಳಲ್ಲಿ ಇದನ್ನು ಸರಿಪಡಿಸಲು ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ. ಪ್ರತಿ ದಿನ 30 ಲೋಡ್ ಜಲ್ಲಿ ಮಿಕ್ಸ್ ತರಿಸಿಕೊಂಡು ಆದಷ್ಟು ಬೇಗ ಕಾಮಗಾರಿ ಮುಗಿಸುವಂತೆ ತಿಳಿಸಲಾಗಿದೆ. ಬಾಕಿ ರಸ್ತೆಗಳಲ್ಲಿನ ರಸ್ತೆ ಗುಂಡಿಗಳನ್ನ ಸ್ಥಳೀಯ ಗುತ್ತಿಗೆದಾರರ ಮೂಲಕ ಕೈಗೊಳ್ಳುವಂತೆ ಸೂಚಿಸಲಾಗಿದೆ ಎಂದರು.

‘110 ಹಳ್ಳಿಗಳಲ್ಲಿನ ಪೂರ್ಣ ಪ್ರಮಾಣದಲ್ಲಿ ನೀರು ಸರಬರಾಜು ಮತ್ತು ಚರಂಡಿ ವ್ಯಸವಸ್ಥೆಗಾಗಿ ಸರಕಾರ 1 ಸಾವಿರ ಕೋಟಿ ರೂ.ಬಿಡುಗಡೆ ಮಾಡಿದೆ. ಟೆಂಡರ್ ಪ್ರಕ್ರಿಯೆ ಮುಗಿದು ಆದೇಶ ನೀಡಲಾಗುತ್ತಿದೆ. 25 ರಿಂದ 30 ದಿನಗಳಲ್ಲಿ ಪೂರ್ಣ ಡಾಂಬರ್ ರಸ್ತೆ ಮಾಡಲಾಗುವುದು. ಕಳಪೆ ಗುಣಮಟ್ಟ ಕಂಡುಬಂದಲ್ಲಿ ಅಂತಹ ಗುತ್ತಿಗೆದಾರರನ್ನು ಕಪ್ಪುಪಟ್ಟಿಗೆ ಸೇರಿಸಲಾಗುವುದು ಎಂದು ಅಶೋಕ್ ಎಚ್ಚರಿಕೆ ನೀಡಿದರು.

185 ಕಟ್ಟಡಗಳು ಶಿಥಿಲ: ‘ಈಗಾಗಲೇ 2019ರ ಸರ್ವೇ ಪ್ರಕಾರ 185 ಶಿಥಿಲಗೊಂಡ ಕಟ್ಟಡಗಳು ಎಂದು ಗುರುತಿಸಲಾಗಿದೆ. ಅದರಲ್ಲಿ 10 ಕಟ್ಟಡಗಳನ್ನ ನೆಲಸಮ ಮಾಡಲಾಗಿದ್ದು, ಉಳಿದ 175 ಕಟ್ಟಡಗಳಿಗೆ ಒಂದು ವಾರ ಸಮಯ ನೀಡಿದ್ದು, ಅವರಿಗೆ ಸೂಚನೆ ಕೊಟ್ಟು, ನಂತರದಲ್ಲಿ ಬೆಸ್ಕಾಂ ಮೂಲಕ ವಿದ್ಯುತ್ ಸರಬರಾಜು ಸ್ಥಗಿತಗೊಳಿಸಿ ಸ್ಥಳೀಯ ಪೆÇಲೀಸ್ ನೆರವಿನೊಂದಿಗೆ ನೆಲಸಮಗೊಳಿಸಬೇಕು. ಬಿಬಿಎಂಪಿ ಹೊಸದಾಗಿ ಮತ್ತೇ ಸರ್ವೆ ಮಾಡಲು ಸೂಚಿಸಿದ್ದೇನೆ. ಹೊಸ ಕಟ್ಟಡ ನಿರ್ಮಾಣದ ವೇಳೆ ಆಳವಾದ ಗುಂಡಿಗಳನ್ನ ತೋಡದಂತೆ ನೋಡಿಕೊಳ್ಳಲು ಅಧಿಕಾರಿಗಳಿಗೆ ತಿಳಿಸಲಾಗಿದೆ.

ಇದರಿಂದ ಅಕ್ಕಪಕ್ಕದ ಕಟ್ಟಡಗಳು ಅಸ್ಥಿರಗೊಳ್ಳುವ ಸಾಧ್ಯತೆ ಇರುತ್ತದೆ. ಈ ರೀತಿ ಯಾರಿಗೂ ಅನುಮತಿ ನೀಡಕೂಡದು ಎಂದು ಸೂಚನೆ ನೀಡಲಾಗಿದೆ. ಕಟ್ಟಡದ ಮಾಲಕರಿಗೆ ನೆಲಸಮ ಮಾಡಲು ತಿಳಿಸಲಾಗಿದೆ. ಆ ಖರ್ಚನ್ನು ನಿವೇಶನದ ಆಸ್ತಿ ತೆರಿಗೆಗೆ ಜಮಾ ಮಾಡಲು ತಿಳಿಸಲಾಗಿದೆ. ಇಂತಹ ಶಿಥಿಲಗೊಂಡ ಕಟ್ಟಡಗಳು ಸಾರ್ವಜನಿಕರ ಗಮನಕ್ಕೂ ಬಂದಲ್ಲಿ ಮಾಹಿತಿ ನೀಡಬೇಕು ಎಂದರು.

ಕೋವಿಡ್ ಪರಿಹಾರ ನಿಧಿಗೆ ಅರ್ಹರಾದ 15 ಸಾವಿರ ಜನರನ್ನ ಬಿಬಿಎಂಪಿ ವ್ಯಾಪ್ತಿಯಲ್ಲಿ ಗುರುತಿಸಲಾಗಿದೆ. ಅವರಿಗೆ 15 ದಿನಗಳೊಳಗೆ ನಮ್ಮ ವಾರ್ಡ್ ಕಚೇರಿಯಿಂದ ಅರ್ಜಿಗಳನ್ನ ತೆಗೆದುಕೊಂಡು ಬೇಗ ಕಾರ್ಯ ಮುಗಿಸುವಂತೆ ಸೂಚಿಸಲಾಗಿದೆ. ಬಿಪಿಎಲ್ ಕಾರ್ಡ್ ಹೊಂದಿರುವವರಿಗೆ ರಾಜ್ಯ ಸರಕಾರ 1 ಲಕ್ಷ ರೂ. ಮತ್ತು ಕೇಂದ್ರ ಸರಕಾರ 50 ಸಾವಿರ ರೂ. ನೀಡಲಿದೆ. ಮುಖ್ಯಮಂತ್ರಿ ಜೊತೆಗೂ ಈ ವಿಷಯವನ್ನ ಚರ್ಚೆ ಮಾಡಿದ್ದೇನೆ. ಆದಷ್ಟು ಬೇಗ ಪರಿಹಾರ ಹಣ ನೀಡಲಾಗುವುದು ಎಂದು ಸಚಿವ ಅಶೋಕ್ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News