ನಗರಗಳು ಇನ್ನು ಜಲಯುಕ್ತ, ತ್ಯಾಜ್ಯಮುಕ್ತ : ಕೇಂದ್ರದ ಹೊಸ ಯೋಜನೆ

Update: 2021-10-01 03:30 GMT

ಹೊಸದಿಲ್ಲಿ: ದೇಶದ ನಗರಗಳನ್ನು ತ್ಯಾಜ್ಯಮುಕ್ತಗೊಳಿಸುವ ಮತ್ತು ನಗರಗಳಿಗೆ ನೀರಿನ ಭದ್ರತೆ ಖಾತರಿಪಡಿಸುವ ಸ್ವಚ್ಛ ಭಾರತ್ ಮಿಷನ್- ಅರ್ಬನ್ (ಎಸ್‌ಬಿಎಂ-ಯು) ಮತ್ತು ಅಟಲ್ ಮಿಷನ್ ಫಾರ್ ರಿಜುವನೇಶನ್ ಆ್ಯಂಡ್ ಟ್ರಾನ್ಸ್‌ಫಾರ್ಮೇಷನ್ (ಅಮೃತ್) 2.0 ಯೋಜನೆಗೆ ಶುಕ್ರವಾರ ಕೇಂದ್ರ ಸರ್ಕಾರ ಚಾಲನೆ ನೀಡಲಿದೆ.

2030ರ ಒಳಗೆ ಸುಸ್ಥಿರ ಅಭಿವೃದ್ಧಿ ಗುರಿಗಳನ್ನು ಸಾಧಿಸುವ ನಿಟ್ಟಿನಲ್ಲಿ ಇದು ಮಹತ್ವದ ಹೆಜ್ಜೆಯಾಗಲಿದೆ ಎಂದು ಪ್ರಧಾನಮಂತ್ರಿ ಕಚೇರಿ ಹೇಳಿಕೆ ನೀಡಿದೆ.

"ಎಸ್‌ಬಿಎಂ-ಯು 2.0 ಮತ್ತು ಅಮೃತ್ 2.0 ಯೋಜನೆಗಳು, ಕ್ಷಿಪ್ರವಾಗಿ ನಗರೀಕರಣಗೊಳ್ಳುತ್ತಿರುವ ಭಾರತದ ಸವಾಲುಗಳನ್ನು ಸಮರ್ಥವಾಗಿ ಎದುರಿಸುವ ನಿಟ್ಟಿನಲ್ಲಿ ಇದು ಮಹತ್ವದ ಹೆಜ್ಜೆ" ಎಂದು ಪಿಎಂಓ ಪ್ರಕಟಣೆ ಹೇಳಿದೆ.

ಸ್ವಚ್ಛ ಭಾರತ ಮಿಷನ್ ಅರ್ಬನ್ 2.0 ಎಲ್ಲ ನಗರಗಳನ್ನು ತ್ಯಾಜ್ಯಮುಕ್ತಗೊಳಿಸುವ ಉದ್ದೇಶ ಹೊಂದಿದೆ. ಅಮೃತ್ ಯೋಜನೆಯಡಿ ಸೇರುವ ನಗರಗಳನ್ನು ಹೊರತುಪಡಿಸಿ ಉಳಿದೆಲ್ಲ ನಗರಗಳ ಬೂದು ಮತ್ತು ಕಪ್ಪು ನೀರನ್ನು ವ್ಯವಸ್ಥಿತವಾಗಿ ನಿರ್ವಹಿಸುವುದು ಯೋಜನೆಯ ಉದ್ದೇಶವಾಗಿದೆ. ಅಂತೆಯೇ ಒಂದು ಲಕ್ಷಕ್ಕಿಂತ ಕಡಿಮೆ ಜನಸಂಖ್ಯೆ ಇರುವ ನಗರಗಳ ಸ್ಥಳೀಯ ಸಂಸ್ಥೆಗಳನ್ನು ಬಯಲು ಬಹಿರ್ದೆಸೆ ಮುಕ್ತ ನಗರಗಳನ್ನಾಗಿ ಪರಿವರ್ತಿಸುವ ಗುರಿಯನ್ನೂ ಹಾಕಿಕೊಳ್ಳಲಾಗಿದೆ. ಈ ಮೂಲಕ ನಗರ ಪ್ರದೇಶಗಳಲ್ಲಿ ಸುರಕ್ಷಿತ ನೈರ್ಮಲ್ಯ ವ್ಯವಸ್ಥೆಯ ಗುರಿ ಹೊಂದಿದೆ.

ಘನ ತ್ಯಾಜ್ಯಗಳನ್ನು ಮೂಲದಲ್ಲೇ ವಿಂಗಡಿಸುವ ಮತ್ತು ಎಲ್ಲ ಬಗೆಯ ನಗರ ತ್ಯಾಜ್ಯಗಳನ್ನು ಕಡಿಮೆ ಮಾಡುವ, ಮರು ಬಳಸುವ ಮತ್ತು ವೈಜ್ಞಾನಿಕವಾಗಿ ಸಂಸ್ಕರಿಸುವ ಉದ್ದೇಶವನ್ನೂ ಯೋಜನೆ ಒಳಗೊಂಡಿದೆ. ಇದಕ್ಕಾಗಿ ಸುಮಾರು 1.41 ಲಕ್ಷ ಕೋಟಿ ರೂಪಾಯಿಗಳ ಬೃಹತ್ ಯೋಜನೆಯನ್ನು ಹೊಂದಿದೆ.

ಅಮೃತ್ 2.0 ಮಿಷನ್ ಅಡಿಯಲ್ಲಿ 4700 ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಎಲ್ಲ ಮನೆಗಳಿಗೆ ಕುಡಿಯುವ ನೀರು ಪೂರೈಸುವ ಉದ್ದೇಶವಿದೆ. ಇದರ ಅನ್ವಯ 2.68 ಕೋಟಿ ಹೊಸ ನಲ್ಲಿ ಸಂಪರ್ಕ ನೀಡಲಾಗುವುದು ಮತ್ತು 500 ಅಮೃತ್ ನಗರಗಳಲ್ಲಿ ಶೇಕಡ 100ರಷ್ಟು ಒಳಚರಂಡಿ ವ್ಯವಸ್ಥೆ ಕಲ್ಪಿಸಲಾಗುತ್ತದೆ. 2.64 ಕೋಟಿ ಒಳಚರಂಡಿ ಸಂಪರ್ಕಗಳನ್ನು ಕಲ್ಪಿಸಲಾಗುತ್ತಿದೆ. ಇದರಿಂದ 10.5 ಕೋಟಿ ನಗರ ವಾಸಿಗಳಿಗೆ ಪ್ರಯೋಜನವಾಗಲಿದೆ ಎಂದು ಸರ್ಕಾರ ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News