×
Ad

ಅದಾನಿ ಮುಂದ್ರಾ ಬಂದರಿನಲ್ಲಿ ಡ್ರಗ್ಸ್ ಪತ್ತೆ ಪ್ರಕರಣದಲ್ಲಿ ಕೇಂದ್ರದ ಮೌನವೇಕೆ: ಸುಪ್ರಿಯಾ ಶ್ರೀನಾಥ್ ಪ್ರಶ್ನೆ

Update: 2021-10-01 17:25 IST
ಎಐಸಿಸಿ ವಕ್ತಾರೆ  ಸುಪ್ರಿಯಾ ಶ್ರೀನಾಥ್

ಬೆಂಗಳೂರು, ಅ.1: ಗುಜರಾತಿನ ‘ಅದಾನಿ ಮುಂದ್ರಾ ಬಂದರಲ್ಲಿ ಸುಮಾರು 21 ಸಾವಿರ ಕೋಟಿ ರೂ.ಮೌಲ್ಯದ ಡ್ರಗ್ಸ್ ಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಂದ್ರ ಬಿಜೆಪಿ ಸರಕಾರ ಮೌನ ವಹಿಸಿರುವುದೇಕೆ? ಇದು ದೇಶದ ಭದ್ರತೆಗೆ ಅಪಾಯ ತರುವ ವಿಚಾರವಾಗಿದ್ದು, ಇದರ ಹಿಂದೆ ಯಾರಿದ್ದಾರೆ ಎಂದು ಪತ್ತೆ ಹಚ್ಚಲು ಹಾಲಿ ಸುಪ್ರೀಂ ಕೋರ್ಟ್ ನ್ಯಾಯಾಧೀಶರ ನೇತೃತ್ವದಲ್ಲಿ ತನಿಖೆ ನಡೆಸಬೇಕು ಎಂದು ಕಾಂಗ್ರೆಸ್ ಆಗ್ರಹಿಸಿದೆ.

ಶುಕ್ರವಾರ ನಗರದ ಕ್ವೀನ್ಸ್ ರಸ್ತೆಯಲ್ಲಿರುವ ಕೆಪಿಸಿಸಿ ಕಚೇರಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಎಐಸಿಸಿ ವಕ್ತಾರೆ  ಸುಪ್ರಿಯಾ ಶ್ರೀನಾಥ್, ‘ಅದಾನಿ ಮುಂದ್ರಾ ಬಂದರಿನಲ್ಲಿ ಈ ರೀತಿ ಡ್ರಗ್ಸ್ ಪತ್ತೆ ಪ್ರಕರಣ ಇದೇ ಮೊದಲ ಬಾರಿಯಲ್ಲ. ಈ ಹಿಂದೆಯೂ ಡ್ರಗ್ಸ್ ಪತ್ತೆಯಾಗಿತ್ತು. ಆದರೂ ಬಂದರು ನಡೆಸುತ್ತಿರುವ ಅದಾನಿ ಸಮೂಹದ ವಿಚಾರಣೆ ನಡೆಸಿಲ್ಲ ಯಾಕೆ?’ ಎಂದು ಪ್ರಶ್ನಿಸಿದರು. 

ಸೆ.13ರಂದು ಗುಜರಾತಿನ ಅದಾನಿ ಮುಂದ್ರಾ ಬಂದರಿನಲ್ಲಿ 3 ಸಾವಿರ ಕೆ.ಜಿ ಅಂದರೆ 21 ಸಾವಿರ ಕೋಟಿ ಮೌಲ್ಯದ ಡ್ರಗ್ಸ್ ಪತ್ತೆಯಾಗಿತ್ತು. ಕಳೆದ ಜೂನ್ ತಿಂಗಳಲ್ಲಿ 25 ಸಾವಿರ ಕೆ.ಜಿಯಷ್ಟು ಡ್ರಗ್ಸ್ ಬಂದಿದ್ದು, ಅದು ಈಗಾಗಲೇ ಮಾರುಕಟ್ಟೆಯಲ್ಲಿ ಸರಬರಾಜಾಗುತ್ತಿದೆ ಎಂದು  ಸುಪ್ರಿಯಾ ಶ್ರೀನಾಥ್ ತಿಳಿಸಿದರು.

ಇದನ್ನು ಸೆಮಿ ಕಟ್ ಟಾಲ್ಕಮ್ ಪೌಡರ್ ಎಂದು ಹೆಸರಿಸಲಾಗಿದ್ದು, ಈ ಡ್ರಗ್‍ಗಳು ತಾಲಿಬಾನ್ ಹಿಡಿತದಲ್ಲಿರುವ ಅಫ್ಘಾನಿಸ್ತಾನದಿಂದ ಆಶಿ ಟ್ರೇಡಿಂಗ್ ಕಂಪನಿ ಆಮದು ಮಾಡಿಕೊಂಡಿದೆ. ಇದು ದೇಶದ ಯುವಕರ ಭವಿಷ್ಯದ ವಿಷಯವಾಗಿದೆ. ಆದರೂ ಈ ವಿಚಾರವಾಗಿ ನರೇಂದ್ರ ಮೋದಿ ಅವರ ಸರಕಾರವಾಗಲಿ, ದೇಶದ ಪ್ರಮುಖ ಮಾಧ್ಯಮಗಳಾಗಲಿ ಮಾತನಾಡುತ್ತಿಲ್ಲ ಎಂದು ಅವರು ತಿಳಿಸಿದರು.

‘ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಆಶಿ ಟ್ರೇಡಿಂಗ್ ಕಂಪೆನಿ ಮಾಲಕರಾದ ಸುಧಾಕರ್ ಮಚ್ವರಮ್ ಹಾಗೂ ಅವರ ಪತ್ನಿ ಗವಿಂದಾ ರಾಜು ವೈಶಾಲಿ ಅವರನ್ನು ಬಂಧಿಸಲಾಗಿದ್ದು, ಇಂತಹ ಸಣ್ಣ ಟ್ರೇಡಿಂಗ್ ಕಂಪೆನಿ ಇಷ್ಟು ದೊಡ್ಡ ಮೊತ್ತದ ಡ್ರಗ್ಸ್ ಆಮದು ಮಾಡಿಕೊಳ್ಳಲು ಸಾಧ್ಯವಿಲ್ಲ. ಇದರ ಹಿಂದೆ ಪ್ರಭಾವಿಗಳ ಕೈವಾಡದ ಶಂಕೆ ಇದ್ದು, ಅದು ಯಾರು ಎಂಬುದರ ಬಗ್ಗೆ ತನಿಖೆ ನಡೆದಿಲ್ಲ ಎಂದು ಅವರು ಕಿಡಿಗಾರಿದರು.

ಜೂನ್ ತಿಂಗಳಲ್ಲಿ ಅಫ್ಘಾನಿಸ್ತಾನದ ಹಸನ್ ಹುಸೇನ್ ಲಿಮಿಟೆಡ್ ಕಂಪನಿ 25 ಸಾವಿರ ಕೆ.ಜಿ ಅಂದರೆ 1.75 ಲಕ್ಷ ಕೋಟಿ ರೂ.ಗಳಷ್ಟು ಮೊತ್ತದ ಹೆರಾಯಿನ್ ರಫ್ತು ಮಾಡಿದ್ದು, ಅದು ದೇಶದ ಮಾರುಕಟ್ಟೆಯಲ್ಲಿ ಸರಬರಾಜಾಗುತ್ತಿದೆ. ಇದು ದೇಶದ ಲಕ್ಷಾಂತರ ಯುವಕರು ಮಾದಕ ವ್ಯಸನಿಗಳಾಗುವ ಸ್ಥಿತಿ ನಿರ್ಮಾಣವಾಗಿದೆ. ಆ ಮೂಲಕ ಇದು ದೇಶದ ಭದ್ರತೆಗೆ ಮಾರಕವಾಗಲಿದೆ ಎಂದು ಸುಪ್ರಿಯಾ ಶ್ರೀನಾಥ್ ಅಭಿಪ್ರಾಯಪಟ್ಟರು.

‘ಪ್ರಧಾನಿ ನರೇಂದ್ರ ಮೋದಿ ನಮ್ಮ ಯುವಕರಿಗೆ ಕಳೆದ 7 ವರ್ಷಗಳಲ್ಲಿ 14 ಕೋಟಿ ಉದ್ಯೋಗ ನೀಡಬೇಕಾಗಿತ್ತು. ಆದರೆ ದೇಶದ ಯುವಕರು ಈ ಡ್ರಗ್ಸ್ ಜಾಲಕ್ಕೆ ಸಿಲುಕುವಂತೆ ಮಾಡಲಾಗಿದೆ. ಕಳೆದ ವರ್ಷ ಕೇವಲ 2 ಗ್ರಾಂ ಡ್ರಗ್ಸ್ ಸಿಕ್ಕ ಪ್ರಕರಣದಲ್ಲಿ ಇಡೀ ಹಿಂದಿ ಚಿತ್ರರಂಗವನ್ನೇ ಜಾಲಾಡಿದ್ದ ಮಾಧ್ಯಮಗಳು, ಈ ವರ್ಷ ದೇಶದ ಇತಿಹಾಸದಲ್ಲಿ ಅತಿ ದೊಡ್ಡ ಪ್ರಮಾಣದ ಡ್ರಗ್ಸ್ ಪತ್ತೆಯಾಗಿದ್ದರೂ ಯಾವುದೇ ಚರ್ಚೆ ನಡೆಸುತ್ತಿಲ್ಲ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.

ಡ್ರಗ್ಸ್ ನಿಯಂತ್ರಣ ಮಾಡಲು ನೇಮಕಗೊಂಡಿರುವ ಮಾದಕ ವಸ್ತುಗಳ ನಿಯಂತ್ರಣ ಮಂಡಳಿಯಲ್ಲಿ ಕಳೆದ 18 ತಿಂಗಳಿನಿಂದ ವ್ಯವಸ್ಥಾಪಕ ನಿರ್ದೇಶಕರನ್ನು ನೇಮಿಸಿಲ್ಲ. ದೇಶಕ್ಕೆ ಡ್ರಗ್ಸ್ ಪ್ರವೇಶಿಸಲು ಗುಜರಾತಿನ ಬಂದರು ರಹದಾರಿಯಾಗಿದ್ದು, ಮೋದಿ ಸರಕಾರ ಈ ವಿಚಾರದಲ್ಲಿ ಮೌನ ವಹಿಸಿದೆ ಎಂದು ಸುಪ್ರಿಯಾ ಶ್ರೀನೇಟ್ ಕಿಡಿಗಾರಿದರು.

ಬಿಜೆಪಿ ಸರಕಾರಕ್ಕೆ 10 ಪ್ರಶ್ನೆಗಳು: 1) ದೇಶದಲ್ಲಿ ಡ್ರಗ್ಸ್ ಜಾಲ ನಿರಾತಂಕವಾಗಿ ಕಾರ್ಯಚಟುವಟಿಕೆ ನಡೆಸುತ್ತಿದ್ದು, 3 ಸಾವಿರ ಕೆ.ಜಿ ಹೆರಾಯಿನ್ ಪತ್ತೆಯಾಗಿರುವುದು ಇದಕ್ಕೆ ಸಾಕ್ಷಿಯಾಗಿದೆ. ಇದು ದೇಶದ ಯುವಕರ ಭವಿಷ್ಯಕ್ಕೆ ಮಾರಕವಲ್ಲವೇ?

2) ಕಳೆದ ಜೂನ್‍ನಲ್ಲಿ ಆಮದುಗೊಂಡ 1.75 ಲಕ್ಷ ಕೋಟಿ ರೂ.ಮೌಲ್ಯದ 25 ಸಾವಿರ ಕೆ.ಜಿ ಹೆರಾಯಿನ್ ನಾಪತ್ತೆಯಾಗಿದ್ದು, ಇದರ ಬಗ್ಗೆ ಈವರೆಗೂ ತನಿಖೆ ನಡೆಸಿಲ್ಲ ಯಾಕೆ?

3) ಭಾರತದ ಮಾದಕದ್ರವ್ಯ ನಿಯಂತ್ರಣ ಮಂಡಳಿ, ಸಿಬಿಐಐ, ಇಡಿ, ಡಿಆರ್‍ಐ ಸಂಸ್ಥೆಗಳು ಏನು ಮಾಡುತ್ತಿವೆ? ಇವು ಕೇವಲ ರಾಜಕೀಯ ಎದುರಾಳಿಗಳ ವಿರುದ್ಧ ಬಳಸುವ ಅಸ್ತ್ರವಾಗಿದೆಯಾ?  

4) ತಾಲಿಬಾನ್ ನಿಯಂತ್ರಣದಲ್ಲಿರುವ ಅಫ್ಘಾನಿಸ್ತಾನದಿಂದ ದೇಶಕ್ಕೆ ಇಷ್ಟು ದೊಡ್ಡ ಪ್ರಮಾಣದಲ್ಲಿ ಡ್ರಗ್ಸ್ ರವಾನೆಯಾಗುತ್ತಿದ್ದು, ಇದು ದೇಶದ ಭದ್ರತೆಗೆ ಅಪಾಯಕಾರಿಯಲ್ಲವೇ?

5) ಪ್ರಭಾವಿ ವ್ಯಕ್ತಿ ಹೊರತಾಗಿ ಇತರರು ಇಷ್ಟು ದೊಡ್ಡ ಮಟ್ಟದ ಡ್ರಗ್ಸ್ ಆಮದು ಮಾಡಿಕೊಳ್ಳಲು ಸಾಧ್ಯವೇ? ಈ ಬಗ್ಗೆ ಪ್ರಧಾನಮಂತ್ರಿಗಳಾಗಲಿ, ಗೃಹಮಂತ್ರಿಗಳಾಗಲಿ ಅನುಮಾನಾಸ್ಪದ ಮೌನಕ್ಕೆ ಶರಣಾಗಿರುವುದೇಕೆ?

6) ಗುಜರಾತಿನಲ್ಲಿರುವ ಈ ಕಂಪನಿ ದೇಶಕ್ಕೆ ಡ್ರಗ್ಸ್ ಸರಬರಾಜು ಮಾಡುವ ರಹದಾರಿಯಾಗಿ ಮಾರ್ಪಟ್ಟಿದ್ದರೂ, ಈ ಪ್ರಕರಣದಲ್ಲಿ ಅದಾನಿ ಮುಂದ್ರಾ ಬಂದರಿನ ವಿಚಾರಣೆ ನಡೆದಿಲ್ಲ ಯಾಕೆ?

7) ವಿಶೇಷ ನ್ಯಾಯಾಲಯದ ಅಭಿಪ್ರಾಯದಂತೆ ಮುಂದ್ರಾ ಬಂದರು ನಡೆಸುತ್ತಿರುವ ಅದಾನಿ ಗ್ರೂಪ್ ಈ ಆಮದಿನಿಂದ ಲಾಭ ಪಡೆಯುತ್ತಿಲ್ಲವೇ?

8) ಕಳೆದ 18 ತಿಂಗಳಿನಿಂದ ದೇಶದ ಮಾದಕ ದ್ರವ್ಯ ನಿಯಂತ್ರಣ ಮಂಡಳಿಯ ವ್ಯವಸ್ಥಾಪಕ ನಿರ್ದೇಶಕರ ಹುದ್ದೆ ಖಾಲಿ ಇರುವುದೇಕೆ?
9) ರಾಷ್ಟ್ರೀಯ ಭದ್ರತೆ ವಿಚಾರವಾಗಿ ಪ್ರಧಾನಮಂತ್ರಿಗಳು ಹಾಗೂ ಕೇಂದ್ರ ಸರಕಾರ ಪದೇ ಪದೆ ವಿಫಲರಾಗುತ್ತಿರುವುದೇಕೆ?

10) ದೇಶದ ಯುವಕರ ಭವಿಷ್ಯಕ್ಕೆ ಮಾರಕವಾಗಿರುವ ಈ ಡ್ರಗ್ಸ್ ಪ್ರಕರಣದಲ್ಲಿ ಹಾಲಿ ಸುಪ್ರಿಂ ಕೋರ್ಟ್ ನ್ಯಾಯಾಧೀಶರ ನೇತೃತ್ವದಲ್ಲಿ ತನಿಖೆ ನಡೆಯುತ್ತಿಲ್ಲ ಯಾಕೆ? ಎಂದು ಸುಪ್ರಿಯಾ ಶ್ರೀನಾಥ್, ಕೇಂದ್ರ ಸರಕಾರಕ್ಕೆ 10 ಪ್ರಶ್ನೆಗಳನ್ನು ಮುಂದಿಟ್ಟರು.

ಅಲ್ಲದೆ, ಈ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಂಗ ತನಿಖೆಯಾಗಬೇಕು. ತಪ್ಪಿತಸ್ಥರಿಗೆ ಶಿಕ್ಷೆಯಾಗಬೇಕು. ಹಾಗೂ ಈ ಮಾದಕ ವಸ್ತುಗಳನ್ನು ಮಾರಾಟ ಮಾಡುವ ಸಿಂಡಿಕೇಟ್‍ಗಳಿಗೆ ಸರಕಾರದ ಭಾಗವಾಗಿದ್ದುಕೊಂಡು ರಕ್ಷಣೆ ಒದಗಿಸುತ್ತಿರುವವರ ಮುಖವಾಡ ಕಳಚಬೇಕು ಎಂದು ಸುಪ್ರಿಯಾ ಶ್ರೀನೇಟ್ ಹೇಳಿದರು.

ಈ ಸಂದರ್ಭದಲ್ಲಿ ಕೆಪಿಸಿಸಿ ಮಾಧ್ಯಮ ವಿಭಾಗ ಮುಖ್ಯಸ್ಥ ಡಾ.ಬಿ.ಎಲ್.ಶಂಕರ್, ಎಐಸಿಸಿ ವಕ್ತಾರೆ ಭವ್ಯಾ ನರಸಿಂಹಮೂರ್ತಿ, ಕೆಪಿಸಿಸಿ ಮಾಜಿ ಪ್ರಧಾನ ಕಾರ್ಯದರ್ಶಿ ಆಗಾ ಸುಲ್ತಾನ್, ಕೆಪಿಸಿಸಿ ಸಂವಹನ ಹಾಗೂ ಮಾಧ್ಯಮ ವಿಭಾಗದ ಸಹ ಸಂಚಾಲಕರಾದ ಎಂ.ರಾಮಚಂದ್ರಪ್ಪ ಹಾಗೂ ಸಲೀಮ್ ಉಪಸ್ಥಿತರಿದ್ದರು.
 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News