ಸಾಲ, ಬಡ್ಡಿ ಕಂತುಗಳಿಂದ ತತ್ತರಿಸಿದ ರಿಕ್ಷಾ, ಟ್ಯಾಕ್ಸಿ ಚಾಲಕರು

Update: 2021-10-02 06:00 GMT
ಫೈಲ್ ಚಿತ್ರ

ಬೆಂಗಳೂರು,: ‘ಏಯ್ ಆಟೊ ಬರ್ತಿಯಾ’.. ಅಂದ್ರೆ ‘ಏಲ್ಲಿಗೆ’....ಎಂದು ಗೈರತ್ತಿನಿಂದಲೇ ಪ್ರಶ್ನಿಸುತ್ತಿದ್ದ ರಿಕ್ಷಾ ಚಾಲಕರ ಧ್ವನಿ ಕೋವಿಡ್ ಸೋಂಕಿನ ಸುದೀರ್ಘ ಅವಧಿಯ ಲಾಕ್‌ಡೌನ್, ಪೆಟ್ರೋಲ್, ಅನಿಲ(ಗ್ಯಾಸ್) ಬೆಲೆ ಏರಿಕೆ ಹಾಗೂ ಖಾಸಗಿ ಫೈನಾನ್ಸಿಯರ್‌ಗಳ ತೀವ್ರ ಕಿರುಕುಳದಿಂದ ಕ್ಷೀಣಿಸಿದೆ. ರಿಕ್ಷಾ ಚಾಲಕರ ಜೊತೆಗೆ ಐಟಿ-ಬಿಟಿ, ಸಾಫ್ಟ್‌ವೇರ್ ಕಂಪೆನಿಗಳ ಬೂಮ್ ಕಾರಣಕ್ಕೆ ‘ಬಿಂದಾಸ್’ ಆಗಿ ಜೀವನ ನಡೆಸುತ್ತಿದ್ದ ಟ್ಯಾಕ್ಸಿ ಚಾಲಕರು ಆರ್ಥಿಕ ಸಂಕಷ್ಟದಿಂದಾಗಿ ಫೈನಾನ್ಸಿಯರ್‌ಗಳಿಂದ ಪಡೆದ ಸಾಲದ ಕಂತು ಮತ್ತು ಬಡ್ಡಿ ಕಟ್ಟಲು ಸಾಧ್ಯವಾಗದೆ ತಮ್ಮ ವಾಹನಗಳನ್ನು ಬಿಟ್ಟು(ಜಪ್ತಿ ಮಾಡಿದ ಕಾರಣ) ಹಳ್ಳಿಗಳಿಗೆ ಮರಳಿದ್ದಾರೆ.

ರಾಜಧಾನಿ ಬೆಂಗಳೂರು ಒಂದರಲ್ಲೇ ಸರಿಸುಮಾರು 20ರಿಂದ 25 ಸಾವಿರ ಆಟೊರಿಕ್ಷಾ ಮತ್ತು 18ರಿಂದ 20 ಸಾವಿರದಷ್ಟು ಟ್ಯಾಕ್ಸಿಗಳು ಖಾಸಗಿ ಫೈನಾನ್ಸಿಯರ್‌ಗಳ ಸಾಲ ಮರುಪಾವತಿಸದ ಕಾರಣಕ್ಕೆ ಜಪ್ತಿ ಮಾಡಲಾಗಿದ್ದು, ಆ ಎಲ್ಲ ಚಾಲಕರು ತಮ್ಮ ಸ್ವಯಂ ಉದ್ಯೋಗವನ್ನು ಕಳೆದುಕೊಂಡಿದ್ದು, ಅವರನ್ನು ಆಶ್ರಯಿಸಿದ್ದ ಕುಟುಂಬಗಳು ಅಕ್ಷರಶಃ ಬೀದಿಗೆ ಬಿದ್ದಿವೆ.

ಮೂರು ತಿಂಗಳ ಕೋವಿಡ್ ಲಾಕ್‌ಡೌನ್ ಮತ್ತು ಆ ನಂತರದ ಆರ್ಥಿಕ ಸಂಕಷ್ಟ ಹಾಗೂ ಪೆಟ್ರೋಲ್, ಅನಿಲ(ಗ್ಯಾಸ್) ಬೆಲೆ ಏರಿಕೆ ಆಟೊರಿಕ್ಷಾ ಮತ್ತು ಟ್ಯಾಕ್ಸಿ ಚಾಲಕರ ಬದುಕು ನಿಜಕ್ಕೂ ನರಕ ಸದೃಶ್ಯವಾಗಿದೆ. ರಿಕ್ಷಾ ಚಾಲಕರು 50ರಿಂದ 60 ಸಾವಿರ ರೂ., ಟ್ಯಾಕ್ಸಿ ಚಾಲಕರು 2ರಿಂದ 3ಲಕ್ಷ ರೂ.ಗಳಷ್ಟು ಬ್ಯಾಂಕ್‌ಗಳು ಮತ್ತು ಖಾಸಗಿ ಫೈನಾನ್ಸಿಯರ್‌ಗಳ ಸಾಲ ಮತ್ತು ಬಡ್ಡಿಯ ಕಂತು ಮರುಪಾವತಿಸಲು ಸಾಧ್ಯವಾಗದ ಕಾರಣ ದುಸ್ಥಿತಿಗೆ ಸಿಲುಕಿದ್ದಾರೆ.

ಪ್ರತಿನಿತ್ಯ ಕನಿಷ್ಠ 1 ಸಾವಿರ ರೂ., ಗರಿಷ್ಠ 2ರಿಂದ 2,500 ರೂ.ಗಳಷ್ಟು ಸಂಪಾದನೆ ಮಾಡುತ್ತಿದ್ದ ರಿಕ್ಷಾ ಚಾಲಕರಿಗೆ ಕನಿಷ್ಠ 600 ರೂ.ಗಳಿಂದ 800 ರೂ.ಸಂಪಾದನೆಯೂ ಆಗುತ್ತಿಲ್ಲ. ಓಲಾ, ಉಬರ್ ಸಹಿತ ಆನ್‌ಲೈನ್ ಟ್ಯಾಕ್ಸಿ-ಆಟೊ ಚಾಲಕರು ಪ್ರತಿದಿನ 3ರಿಂದ 4 ಸಾವಿರ ರೂ.ಗಳನ್ನು ಸಂಪಾದನೆ ಮಾಡುತ್ತಿದ್ದರು. ಆದರೆ, ಇದೀಗ 1 ಸಾವಿರ ರೂ.ಸಂಪಾದನೆಯೂ ಕಷ್ಟವಾಗಿದೆ. ಹೀಗಾಗಿ ತಾವು ಸಾಲ ಪಡೆದು ಖರೀದಿಸಿದ್ದ ವಾಹನಗಳಿಗೆ, ಸಾಲ ಮತ್ತು ಬಡ್ಡಿ ಮರುಪಾವತಿಸಲು ಸಾಧ್ಯವಾಗದೆ, ವಾಹ ನಗಳನ್ನು ಸ್ವಯಂಪ್ರೇ ರಿತರಾಗಿ ಬ್ಯಾಂಕ್ ಮತ್ತು ಫೈನಾನ್ಸಿಯರ್‌ಗಳಿಗೆ ಒಪ್ಪಿಸುತ್ತಿರುವ ಉದಾಹರಣೆಗಳು ಇವೆ.

ಆದೇಶ ನೆಪಕ್ಕೆ ಮಾತ್ರ: 

ಕೋವಿಡ್ ಲಾಕ್‌ಡೌನ್ ಕಾರಣ ಆರ್‌ಬಿಐ ಎಲ್ಲ ಬ್ಯಾಂಕ್ ಮತ್ತು ಫೈನಾನ್ಸಿಯರ್‌ಗಳ ಸಾಲದ ಮೇಲಿನ ಕಂತು ಪಾವತಿ ಅವಧಿಯನ್ನು ಮೂರು ತಿಂಗಳು ವಿಸ್ತರಿಸಲು ಸೂಚನೆ ನೀಡಿತ್ತು. ಆದರೆ, ಆ ಆದೇಶ ಕೇವಲ ನೆಪ ಮಾತ್ರಕ್ಕೆ ಸೀಮಿತವಾಗಿತ್ತು ಎಂಬುದು ಟ್ಯಾಕ್ಸಿ ಮತ್ತು ರಿಕ್ಷಾ ಚಾಲಕರ ಆರೋಪವಾಗಿದೆ. ನಾಲ್ಕೈದು ತಿಂಗಳು ಸಾಲ ಮರುಪಾವತಿಸದ ಕಾರಣ ‘ಬಡ್ಡಿ’ ದುಪ್ಪಟ್ಟಾಗಿದ್ದು, ‘ಚಕ್ರಬಡ್ಡಿ’ ಬೆಳೆಯುವ ಹಂತಕ್ಕೆ ಬಂದಿದೆ. ಕೋವಿಡ್ ಸಂಕಷ್ಟದ ಅವಧಿಯಲ್ಲಿ ಚಾಲಕರು ತಮ್ಮ ಜೀವನ ನಡೆಸುವುದು ಕಷ್ಟವಾಗಿದ್ದು, ಈ ಸಾಲ ಮತ್ತು ಬಡ್ಡಿ ಚಾಲಕರನ್ನು ಮತ್ತಷ್ಟು ಇಕ್ಕಟ್ಟಿಗೆ ಸಿಲುಕಿಸಿದೆ. ಮಹಾಮಾರಿ ಹಿನ್ನೆಲೆಯಲ್ಲಿ ಕಷ್ಟದಲ್ಲಿರುವ ಚಾಲಕರ ನೆರವಿಗೆ ನಿಲ್ಲಬೇಕಾದ ಸರಕಾರಗಳು ಕಣ್ಣು, ಕಿವಿ ಕಳೆದುಕೊಂಡಿವೆ ಎಂಬುದು ಚಾಲಕರ ಆಕ್ರೋಶವಾಗಿದೆ.

ನಿಯಮ ಉಲ್ಲಂಘನೆ: ಶ್ರೀರಾಮ್, ಬಜಾಜ್, ಟಯೋಟಾ, ಮಹೀಂದ್ರ, ಮ್ಯಾಗ್ಮಾ ಸಹಿತ ಇನ್ನಿತರ ಫೈನಾನ್ಸ್ ಕಂಪೆನಿಗಳು ವಾಹನ ಸಾಲ ನೀಡುತ್ತಿದ್ದು, ಇಎಂಐ ಮೂಲಕ ಸಾಲ ಮರುಪಾವತಿ ಪ್ರಕ್ರಿಯೆ ಚಾಲ್ತಿಯಲ್ಲಿದೆ. ಒಂದು ವೇಳೆ ಸಾಲದ ಕಂತು ಪಾವತಿ ವಿಳಂಬವಾದರೆ ಬಡ್ಡಿ ವಿಧಿಸುವುದು ವಾಡಿಕೆ. ಆದರೆ, ಇದೀಗ ಈ ಫೈನಾನ್ಸ್ ಕಂಪೆನಿಗಳು ಆರ್‌ಬಿಐ ನಿಯಮಗಳನ್ನು ಉಲ್ಲಂಘಿಸಿ ಶೇ.38ರಿಂದ 40ರಷ್ಟು ಬಡ್ಡಿ ವಿಧಿಸುತ್ತಿವೆ. ಮಾತ್ರವಲ್ಲ, ಸಾಲ ಮರುಪಾವತಿಸದಿದ್ದರೆ ವಾಹನ ‘ಜಪ್ತಿ’ ಮಾಡಲು ಗೂಂಡಾಗಳನ್ನು ಬಳಕೆ ಮಾಡುತ್ತಿದ್ದು, ಚಾಲಕರಿಗೆ ಫೈನಾನ್ಸಿಯರ್‌ಗಳ ಕಿರುಕುಳ ಹೇಳತೀರದಾಗಿದೆ ಎಂದು ರಿಕ್ಷಾ ಚಾಲಕರು ಕಣ್ಣೀರಿಡುತ್ತಿದ್ದಾರೆ.

‘ಸಾಲ ಮರುಪಾವತಿ ಮಾಡದಿದ್ದರೆ ನೋಟಿಸ್ ನೀಡಬೇಕು. ಸ್ಥಳೀಯ ಪೊಲೀಸರ ಮೂಲಕ ದೃಢೀಕೃತ ಸಿಬ್ಬಂದಿ ಮಾತ್ರವೇ ಸಾಲಗಾರನ ಮನೆಗೆ ತೆರಳಿ ವಾಹನ ಜಪ್ತಿ ಮಾಡಬೇಕೆಂಬುದು ನಿಯಮ. ಆದರೆ, ಈ ನಿಯಮವನ್ನು ಕಿಂಚಿತ್ತೂ ಪಾಲಿಸದ ಫೈನಾನ್ಸಿಯರ್‌ಗಳು ನೇಮಿಸಿಕೊಂಡ ‘ಗೂಂಡಾಗಳು’ ಮನಸೋ ಇಚ್ಛೆ ರಸ್ತೆ ಮಧ್ಯೆದಲ್ಲೇ ಗ್ರಾಹಕರು ಮತ್ತು ಚಾಲಕನನ್ನು ಕೆಳಗಿಳಿಸಿ ವಾಹನವನ್ನು ಜಪ್ತಿ ಮಾಡಿದ ನೂರಾರು ಉದಾಹರಣೆಗಳಿವೆ’ ಎಂದು ಟಾಕ್ಸಿ ಚಾಲಕರ ಸಂಘದ ಅಧ್ಯಕ್ಷ ತನ್ವೀರ್ ದೂರಿದ್ದಾರೆ.

ದಕ್ಕದ ಪರಿಹಾರ: 
‘ಲಾಕ್‌ಡೌನ್‌ನಿಂದ ಕಷ್ಟಕ್ಕೆ ಸಿಲುಕಿದ ರಿಕ್ಷಾ ಮತ್ತು ಟ್ಯಾಕ್ಸಿ ಚಾಲಕರಿಗೆ ತಲಾ 3 ಸಾವಿರ ರೂ.ಪರಿಹಾರವನ್ನು ರಾಜ್ಯ ಸರಕಾರ ಪ್ರಕಟಿಸಿತ್ತು. ಆದರೆ, ಆ ಪರಿಹಾರ ಪಡೆಯಲು ಹಲವು ಷರತ್ತುಗಳನ್ನು ವಿಧಿಸಿತ್ತು. ಒಂದು ವೇಳೆ ಕಷ್ಟಪಟ್ಟು ಆ ಮೊತ್ತವನ್ನು ಪಡೆದರೆ ಅದರಿಂದ ಚಾಲಕನ ಜೀವನಕ್ಕೆ ಯಾವುದೇ ರೀತಿಯಲ್ಲಿಯೂ ನೆರವಾಗಲು ಸಾಧ್ಯವಿಲ್ಲ. ‘ರಿಕ್ಷಾ, ಟ್ಯಾಕ್ಸಿ ಚಾಲಕರ ಬಗ್ಗೆ ಸರಕಾರಗಳಿಗೆ ಕನಿಷ್ಠ ಕಳಕಳಿ ಇದ್ದರೆ ಸಾಲದ ಮೇಲಿನ ಬಡ್ಡಿ ಮನ್ನಾ ಮಾಡಬೇಕಿತ್ತು. ಪೆಟ್ರೋಲ್, ಡೀಸೆಲ್ ಮತ್ತು ಗ್ಯಾಸ್ ಬೆಲೆ ಇಳಿಕೆಯ ಜೊತೆಗೆ ಎಲ್ಲ ಚಾಲಕರಿಗೆ ಕನಿಷ್ಠ 25 ಸಾವಿರ ರೂ.ಪರಿಹಾರ ನೀಡಬೇಕಿತ್ತು. ಜೊತೆಗೆ ಹೊಸದಾಗಿ ಸಾಲ ದೊರಕಿಸಲು ಸರಳ ಮಾರ್ಗಗಳನ್ನು ಕಲ್ಪಿಸಬೇಕಿತ್ತು. ಆದರೆ, ಇದೀಗ ಸಾವಿರಾರು ಜನರ ಸ್ವಯಂ ಉದ್ಯೋಗ ಕಸಿದುಕೊಂಡು ಬೀದಿಗೆ ತಳ್ಳಿದೆ. ಈಗಲಾದರೂ ಎಚ್ಚರಗೊಂಡು ಸರಕಾರ ಚಾಲಕರ ನೇರವಿಗೆ ಧಾವಿಸಬೇಕು’ ಎಂದು ತನ್ವೀರ್ ಆಗ್ರಹವಾಗಿದೆ.

ಕಾರ್ಪೊರೇಟ್ ಕಂಪೆನಿಗಳಿಗೆ ಕೋಟ್ಯಂತರ ರೂ. ಸಬ್ಸಿಡಿ ನೀಡುವ ಸರಕಾರಗಳು ರಿಕ್ಷಾ, ಟ್ಯಾಕ್ಸಿ ಚಾಲಕರಿಗೆ ಕನಿಷ್ಠ ಒಂದೆರಡು ಸಾವಿರ ಕೋಟಿ ರೂ.ಗಳ ಮೊತ್ತದ ಬಡ್ಡಿ ಮನ್ನಾ, 25ರಿಂದ 30 ಸಾವಿರ ರೂ.ಪರಿಹಾರ ನೀಡಬೇಕು. ಜೊತೆಗೆ ಖಾಸಗಿ ಫೈನಾನ್ಸಿಯರ್‌ಗಳ ಮರ್ಜಿ ಇಲ್ಲದೆ ಸರಳವಾಗಿ ರಿಕ್ಷಾ, ಟ್ಯಾಕ್ಸಿ ಚಾಲಕರಿಗೆ ಸಾಲ ಸೌಲಭ್ಯ ಕಲ್ಪಿಸಬೇಕು. ಫೈನಾನ್ಸಿಯರ್‌ಗಳ ಸಾಲ ವಸೂಲಾತಿ ಕಿರುಕುಳ ತಪ್ಪಿಸಲು ಕ್ರಮ ಕೈಗೊಳ್ಳಬೇಕು.

-ತನ್ವೀರ್, ಟ್ಯಾಕ್ಸಿ ಚಾಲಕರ ಸಂಘದ ಅಧ್ಯಕ್ಷ

ಕೋವಿಡ್ ಮಹಾಮಾರಿ ರಿಕ್ಷಾ ಮತ್ತು ಟ್ಯಾಕ್ಸಿ ಚಾಲಕರನ್ನು ಕಂಗೆಡಿಸಿದ್ದು, ಸಾವಿರಾರು ಕುಟುಂಬಗಳು ಬೀದಿಗೆ ಬಿದ್ದಿವೆ. ಸರಕಾರ ಯಾವುದೇ ನೆರವು ನೀಡಿಲ್ಲ. ಆದರೆ, ಒಂದೆರಡು ತಿಂಗಳಿಂದ ಶಾಲಾ-ಕಾಲೇಜುಗಳ ಜೊತೆಗೆ ಆರ್ಥಿಕ ಚಟುವಟಿಕೆಗಳು ಪುನರ್ ಆರಂಭವಾಗಿರುವುದು ಆಶಾಭಾವನೆ ಮೂಡಿಸಿದೆ. ಚಾಲಕರು ತಮ್ಮ ಜೀವನ ಶೈಲಿ ಬದಲಿಸಿಕೊಂಡಿದ್ದು ಶಿಸ್ತುಬದ್ಧತೆ ರೂಢಿಸಿಕೊಂಡಿದ್ದಾರೆ.

-ರಮೇಶ್, ಬೃಹತ್ ಬೆಂಗಳೂರು ಟ್ಯಾಕ್ಸಿ ಚಾಲಕರ ಯೂನಿಯನ್ ಅಧ್ಯಕ್ಷ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News