ರೈತರ ಕಷ್ಟಕ್ಕೆ ಸ್ಪಂದಿಸದ ಮೋದಿ, 'ಗಾಂಧಿ ತಮ್ಮವರು' ಎಂದು ಬಿಂಬಿಸಿಕೊಳ್ಳಲು ಹುನ್ನಾರ ನಡೆಸಿದ್ದಾರೆ: ಡಿ.ಕೆ.ಶಿ

Update: 2021-10-02 09:41 GMT

ಬೆಂಗಳೂರು: ‘ರೈತರ ಸಂಕಷ್ಟಕ್ಕೆ ಎಂದೂ ಸ್ಪಂದಿಸದ ಗುಜರಾತ್ ಮೂಲದ ಪ್ರಧಾನಿ ನರೇಂದ್ರ ಮೋದಿ ಅವರು ರೈತಪರ ಹೋರಾಟ ನಡೆಸಿದ್ದ ಮಹಾತ್ಮ ಗಾಂಧೀಜಿ ಅವರನ್ನು ತಮ್ಮವರು ಎಂದು ಬಿಂಬಿಸಿಕೊಳ್ಳಲು ಹುನ್ನಾರ ನಡೆಸಿದ್ದಾರೆ. ಗಾಂಧೀಜಿ ಅವರು ರೈತರಿಗಾಗಿ ಭಾರತದಲ್ಲಿ ತಮ್ಮ ಹೋರಾಟ ಆರಂಭಿಸಿದ್ದರು. ಆದರೆ ದೇಶದ ಅನ್ನದಾತ ಕಳೆದ 10 ತಿಂಗಳಿಂದ ಗಾಂಧಿ ಆದರ್ಶವಾದ ಅಹಿಂಸೆ ಮೂಲಕ ಬೀದಿಗಿಳಿದು ಹೋರಾಟ ನಡೆಸುತ್ತಿದ್ದರೂ ಪ್ರಧಾನಿ ಅವರು ಅವರ ಕಷ್ಟ ಕೇಳುವ ಮನಸ್ಸು ಮಾಡಿಲ್ಲ’ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ಟೀಕಿಸಿದ್ದಾರೆ.

ಮಹಾತ್ಮ ಗಾಂಧಿಜಿ ಹಾಗೂ ಮಾಜಿ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಜನ್ಮದಿನ ಅಂಗವಾಗಿ ಬೆಂಗಳೂರಿನ ಕೆಪಿಸಿಸಿ ಕಚೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಭಾಗವಹಿಸಿದ ಶಿವಕುಮಾರ್ ಅವರು ಉಭಯ ನಾಯಕ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ, ಮಾತನಾಡಿದರು.

‘ನಾವೆಲ್ಲರೂ ಇಂದು ಗಾಂಧೀಜಿ ಹಾಗೂ ಶಾಸ್ತ್ರಿ ಅವರನ್ನು ನೆನೆಸಿಕೊಳ್ಳುತ್ತಿದ್ದೇವೆ. ಪ್ರತಿಯೊಬ್ಬ ವ್ಯಕ್ತಿಯ ಹುಟ್ಟು ಮತ್ತು ಸಾವಿನ ಮಧ್ಯೆ ಇರುವ ಜೀವನದ ಹಾದಿಯೇ ನಮ್ಮ ಬದುಕಿಗೆ ಉತ್ತರ. ಈ ಇಬ್ಬರು ಮಹಾನ್ ನಾಯಕರ ಜೀವನ ಹಾದಿ ನಮ್ಮ ಶಕ್ತಿ. ಗಾಂಧೀಜಿ ಅವರಿಗೂ ಕರ್ನಾಟಕಕ್ಕೂ ದೊಡ್ಡ ಸಂಬಂಧ ಇದೆ. ಗಾಂಧಿಜಿ ಅವರು 1924ರಲ್ಲಿ ಬೆಳಗಾವಿಯಲ್ಲಿ ನಡೆದ ಭಾರತೀಯ ಕಾಂಗ್ರೆಸ್ ಮಹಾ ಅಧಿವೇಶನದ ಅಧ್ಯಕ್ಷರಾಗಿದ್ದರು. ಇಂತಹ ಮಹಾನ್ ನಾಯಕರು ಇದ್ದ ಪಕ್ಷದ ಸದಸ್ಯರಾಗಿ ನಾವಿಲ್ಲಿ ಕೂತಿದ್ದೇವೆ. ಇದು ನಮ್ಮ ಸೌಭಾಗ್ಯ ಅಲ್ಲವೇ? ನಮ್ಮ ಪಕ್ಷಕ್ಕಿರುವ ಹಿನ್ನೆಲೆ, ಇತಿಹಾಸವನ್ನು ಹೆಮ್ಮೆಯಿಂದ ಹೇಳಿಕೊಳ್ಳಲು ಬೇರೆ ಪಕ್ಷದವರಿಗೆ ಸಾಧ್ಯವೇ? ಗಾಂಧೀಜಿ ಅವರ ತ್ಯಾಗ, ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಆದರ್ಶ ಬದುಕಿನ ಬಗ್ಗೆ ಬೇರೆ ಪಕ್ಷದ ನಾಯಕರು ಹೇಳಿಕೊಳ್ಳಲು ಸಾಧ್ಯವೇ? ಎಂದು ಪ್ರಶ್ನಿಸಿದ್ದಾರೆ. 

ನಮಗೆ ಅಧಿಕಾರ ಬರುತ್ತದೆ, ಹೋಗುತ್ತದೆ. ಆದರೆ ನಾವು ಕಾಂಗ್ರೆಸ್ಸಿಗನಾಗಿ ಗುರುತಿಸಿಕೊಳ್ಳುವುದೇ ಒಂದು ಹೆಮ್ಮೆ. ಕಾಂಗ್ರೆಸ್ ಸದಸ್ಯತ್ವವೇ ನಮಗೆ ಪವಿತ್ರ ಸ್ಥಾನ. ಹೀಗಾಗಿ ನಮ್ಮ ಹಿರಿಯರ ಮಾರ್ಗದರ್ಶನವನ್ನು ನಾವು ಪಾಲಿಸಬೇಕು. ಬೆಳಗಾವಿಯಲ್ಲಿ ಬೃಹತ್ ಕಾಂಗ್ರೆಸ್ ಕಚೇರಿ ನಿರ್ಮಿಲಾಗಿದ್ದು, ಡಿಸೆಂಬರ್ 28ರ ಕಾಂಗ್ರೆಸ್ ಸಂಸ್ಥಾಪನಾ ದಿನದಂದು ಇದಕ್ಕೆ ಗಾಂಧಿ ಭವನ ಎಂದು ಹೆಸರಿಡಲು ಚಿಂತನೆ ನಡೆದಿದೆ. ಈ ಬಗ್ಗೆ ಪಕ್ಷದ ಎಲ್ಲ ಹಿರಿಯ ನಾಯಕರೂ ಚರ್ಚಿಸುತ್ತೇವೆ ಎಂದರು. 

ದೇಶಕ್ಕೆ ಸ್ವಾತಂತ್ರ್ಯ ಬಂದು 75 ವರ್ಷಗಳಾದ ಸ್ಮರಣಾರ್ಥ ಈ ತಿಂಗಳು ಗಾಂಧೀಜಿ ಗ್ರಾಮ ಸ್ವರಾಜ್ಯ ಕಾರ್ಯಕ್ರಮ ಮಾಡಲಾಗುತ್ತಿದೆ. ನಮ್ಮ ಎಲ್ಲ ನಾಯಕರು 6000 ಪಂಚಾಯ್ತಿ, 1800 ವಾರ್ಡ್ ಗಳಲ್ಲಿ ಒಂದೊಂದು ಸಭೆ ಹಾಗೂ ಪ್ರತಿಭಟನೆ ನಡೆಸಲಿದ್ದಾರೆ. ಇದರಲ್ಲಿ ನಮ್ಮ ಪಕ್ಷದ ಇತಿಹಾಸ ಹಾಗೂ ಹೋರಾಟದ ಹಾದಿ ಸ್ಮರಿಸಲಾಗುತ್ತದೆ. ಗ್ರಾಮ ಸ್ವರಾಜ್ಯ ಗಾಂಧಿ ಅವರ ಕನಸು. ಅದಕ್ಕಾಗಿ ಈ ಕಾರ್ಯಕ್ರಮ ಹಮ್ಮಿಕೊಂಡಿದ್ದೇವೆ ಎಂದು ತಿಳಿಸಿದರು. 

ಈ ತಿಂಗಳ ಒಳಗಾಗಿ ಕೆಪಿಸಿಸಿ ಸಮಿತಿ ಪುನಾರಚನೆಯಾಗಲಿದೆ. ಕೆಪಿಸಿಸಿ ಸಮಿತಿ ಜತೆಗೆ ಮತ್ತೊಂದು ಸಮಿತಿ ರೂಪಿಸಲು ರಾಷ್ಟ್ರ ನಾಯಕರು ತೀರ್ಮಾನಿಸಿದ್ದು, ಕಾಂಗ್ರೆಸ್ ಕಾರ್ಯಕ್ರಮ ಅನುಷ್ಠಾನಕ್ಕೆ ತರಲು ಈ ಸಮಿತಿಯನ್ನು ರೂಪಿಸಲಾಗುತ್ತಿದೆ. ಹೀಗಾಗಿ ಪ್ರತಿ ಕಾರ್ಯಕರ್ತ ಪಕ್ಷದ ಕಾರ್ಯಕ್ರಮದ ಬಗ್ಗೆ ಗೌರವ ಇಟ್ಟುಕೊಳ್ಳಬೇಕು, ಪಕ್ಷ ಸಂಘಟನೆ ಮಾಡಬೇಕು ಎಂದು ಹೇಳಿದರು. 

ದೇಶದಲ್ಲಿ 10 ತಿಂಗಳಿನಿಂದ ರೈತರು ಚಳುವಳಿ ನಡೆಸುತ್ತಿದ್ದಾರೆ. ನಮ್ಮ ರೈತರು ಗಾಂಧಿ ಅವರ ತತ್ವ ಆಧರಿಸಿ ಹೋರಾಟ ಮಾಡುತ್ತಿದ್ದಾರೆ. ಅವರ ಕಷ್ಟ ಕೇಳದಿದ್ದರೆ ಅದು ದೇಶದ ಪ್ರತಿಯೊಬ್ಬರ ಸ್ವಾಭಿಮಾನ ಕೆರಳಿಸುವ ವಿಚಾರ. ಇಂತಹ ಪರಿಸ್ಥಿತಿಯಲ್ಲಿ ನಾವು ರೈತರ ಬೆನ್ನಿಗೆ ನಿಲ್ಲುತ್ತೇವೆ ಎಂದು ತಿಳಿಸಿದರು. 

ನಾನು ನಿನ್ನೆ ಸ್ವಗ್ರಾಮಕ್ಕೆ ತೆರಳಿದ್ದೆ. ಅಲ್ಲಿನ ಮಾರುಕಟ್ಟೆ ಸ್ಥಿತಿ ನೋಡಿ ಅಚ್ಚರಿಯಾಯಿತು. ಗೊಬ್ಬರದ ಬೆಲೆ ದುಪ್ಪಟ್ಟಾಗಿ ಕಾಳಸಂತೆಯಲ್ಲಿ ಮಾರಾಟವಾಗುತ್ತಿದೆ. ರೈತರ ಉತ್ಪನ್ನಗಳಿಗೆ ಕೋವಿಡ್ ಸಮಯದಲ್ಲಿ ಬಿಜೆಪಿ ಸರ್ಕಾರ ಮಾರುಕಟ್ಟೆ ಒದಗಿಸಲಿಲ್ಲ. ರೈತರಿಗೆ ಕುಂಟೆಗೆ 100 ರೂ. ಪರಿಹಾರ ಘೋಷಿಸಿದ್ದು, ಅದನ್ನು ಪಡೆಯಲು ರೈತ ಆನ್ ಲೈನ್ ನಲ್ಲಿ ಅರ್ಜಿ ಹಾಕಬೇಕಾಗಿದೆ ಎಂದರು. 
 
ದೇಶದ ಸ್ವಾತಂತ್ರ್ಯಕ್ಕಾಗಿ ನಮ್ಮ ಪಕ್ಷ ಹೋರಾಟ ಮಾಡಿದ ಹಾಗೆ, ನೀವು ಮತ್ತೊಂದು ಹೋರಾಟ ಮಾಡಿ ಕಾಂಗ್ರೆಸ್ ಅಧಿಕಾರಕ್ಕೆ ತಂದು ಜನರ ರಕ್ಷಣೆ ಮಾಡಬೇಕು. ಆ ನಿಟ್ಟಿನಲ್ಲಿ ಎಲ್ಲರೂ ಶ್ರಮಿಸಬೇಕು. ಗಾಂಧೀಜಿ ಅವರು ಒಂದು ಮಾತು ಹೇಳಿದ್ದರು, ‘ನೀನು ನಿನ್ನನ್ನು ಗೆಲ್ಲಬೇಕಾದರೆ, ನಿಮ್ಮ ಮಿದುಳನ್ನು ಉಪಯೋಗಿಸಿ. ಬೇರೆಯವರನ್ನು ಗೆಲ್ಲಬೇಕಾದರೆ ಹೃದಯ ಉಪಯೋಗಿಸಿ’ ಎಂದು. ಆ ರೀತಿ ನೀವು ಕೂಡ ಜನರನ್ನು ಸೆಳೆದು ಪಕ್ಷ ಸಂಘಟನೆ ಮಾಡಬೇಕು ಎಂದು ಕರೆ ನೀಡಿದರು. 

ಇನ್ನು ಬಿಜೆಪಿ ಸರ್ಕಾರ ನೂತನ ಶಿಕ್ಷಣ ನೀತಿ ಜಾರಿಗೆ ತರಲು ಹೊರಟಿದೆ. ಇಡೀ ದೇಶಕ್ಕೆ ಎದುರಾಗಲಿರುವ ದೊಡ್ಡ ಅಪಾಯ ಈ ನೂತನ ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ ಅಡಗಿದೆ. ನಮ್ಮಲ್ಲಿ ಈಗ ಇರುವ ಶಿಕ್ಷಣ ವ್ಯವಸ್ಥೆಯನ್ನು ಇಡೀ ವಿಶ್ವವೇ ಪ್ರಶಂಸಿಸಿದೆ. ನಮ್ಮ ನಾಯಕರು ಜಾಗತೀಕರಣ ಮಾಡಿ, ಅದಕ್ಕೆ ಬೇಕಾದ ರೀತಿಯಲ್ಲಿ ಶಿಕ್ಷಣ ನೀತಿ ರೂಪಿಸಿ, ಇಡೀ ಜಗತ್ತಿನಲ್ಲಿ ದೇಶ ಸ್ವಾವಲಂಬಿಯಾಗಿ ನಿಲ್ಲುವಂತೆ ಮಾಡಿದೆ. ನಮ್ಮ ಶಿಕ್ಷಣ ವ್ಯವಸ್ಥೆಯಲ್ಲಿ ವಿಶ್ವವಿಖ್ಯಾತ ವೈದ್ಯರು, ಇಂಜಿನೀಯರ್, ಪ್ರೊಫೆಸರ್ ಗಳು ತಯಾರಾಗಿದ್ದಾರೆ. ಅಂತಹ ಶಿಕ್ಷಣ ವ್ಯವಸ್ಥೆ ಬಿಟ್ಟು ಪುರಾಣ ಓದುವ ಶಿಕ್ಷಣ ನೀತಿ ಜಾರಿಗೆ ತರಲು ಹೊರಟಿದ್ದಾರೆ. ಈ ನೂತನ ಶಿಕ್ಷಣ ನೀತಿ ಜಾರಿ ತರಲು ನೇಮಕವಾಗಿರುವ ಸಮಿತಿ ಸದಸ್ಯರನ್ನು ಈ ನೀತಿ ಬಗ್ಗೆ ಕೇಳಿದಾಗ ಅವರಿಗೆ ಈ ಶಿಕ್ಷಣ ನೀತಿ ಅರ್ಥವಾಗಿಲ್ಲವಂತೆ. ನಾನು ಕೂಡ ಎಜುಕೇಷನಿಸ್ಟ್ ಆಗಿದ್ದು, ಇದು ಏನು ಎಂದು ತಿಳಿಯುವ ಪ್ರಯತ್ನ ಮಾಡಿದೆ. ನನಗೂ ಇದು ಅರ್ಥವಾಗಲಿಲ್ಲ ಎಂದರು.

ನೂತನ ಶಿಕ್ಷಣ ನೀತಿ ಬಿಜೆಪಿ ಅಧಿಕಾರದಲ್ಲಿರುವ ಗುಜರಾತ್, ಉತ್ತರ ಪ್ರದೇಶದಲ್ಲಿ ಅನುಷ್ಠಾನವಾಗುತ್ತಿಲ್ಲ. ಆದರೆ ಕರ್ನಾಟಕದಲ್ಲಿ ಆಗುತ್ತಿದೆ. ಇದು ನಮ್ಮ ಮಕ್ಕಳ ಭವಿಷ್ಯ, ದೇಶದ ಅಡಿಪಾಯದ ವಿಚಾರ. ಈ ವಿಚಾರದಲ್ಲಿ ನಾವು ಚಿಂತನೆ ನಡೆಸಬೇಕಿದೆ. ಚಾಣಕ್ಯ ವಿಶ್ವವಿದ್ಯಾಲಯ ಹೆಸರಿನಲ್ಲಿ ಮಕ್ಕಳಲ್ಲಿ ಕೋಮುವಾದದ ವಿಷ ಬೀಜ ಬಿತ್ತಲು ಬಿಜೆಪಿ ಸರ್ಕಾರ ಮುಂದಾಗಿದೆ. ಇದಕ್ಕಾಗಿ ದೇವನಹಳ್ಳಿಯಲ್ಲಿ ಎಕರೆಗೆ 10 ಕೋಟಿ ಮೌಲ್ಯ ಇರುವಾಗ, ಪ್ರತಿ ಎಕರೆಗೆ 40 ಲಕ್ಷ ಎಂಬಂತೆ 116 ಎಕರೆಯನ್ನು ಸೆಸ್ ಕಂಪನಿಗೆ ನೀಡಲು ಬಿಜೆಪಿ ಸರ್ಕಾರ ಮುಂದಾಗಿದೆ ಎಂದು ವಾಗ್ದಾಳಿ ನಡೆಸಿದರು. 

ವಿಶ್ವಕಂಡ ಶ್ರೇಷ್ಠ ಆರ್ಥಿಕ ತಜ್ಞ ಮನಮೋಹನ್ ಸಿಂಗ್ ಅವರು. ಜಗತ್ತಿನ ಪ್ರಬಲ ರಾಷ್ಟ್ರಗಳ ಆರ್ಥಿಕತೆ ಕುಸಿದ ಸಮಯದಲ್ಲೂ ಮನಮೋಹನ್ ಸಿಂಗ್ ಅವರು ಭಾರತದ ಆರ್ಥಿಕತೆ ಕುಸಿಯಲು ಬಿಡಲಿಲ್ಲ. ದೇಶದ ಆರ್ಥಿಕತೆ ಕುಸಿದಿರುವುದು ಮೋದಿ ಅವರ ಕಾಲದಲ್ಲಿ. ಉತ್ತಮ ಆರ್ಥಿಕ ತಜ್ಞರ ಕೈಯಲ್ಲಿ ದೇಶದ ಅಧಿಕಾರ ಸಿಗಬೇಕು ಎಂಬ ಕಾರಣಕ್ಕೆ ಶ್ರೀಮತಿ ಸೋನಿಯಾ ಗಾಂಧಿ ಅವರು ತಮಗೆ ಸಿಕ್ಕಿದ್ದ ಪ್ರಧಾನಿ ಹುದ್ದೆಯನ್ನು ತ್ಯಾಗ ಮಾಡಿದ್ದರು ಎಂದು ತಿಳಿಸಿದರು. 

ಸದ್ಯದಲ್ಲೇ ಎರಡು ಉಪಚುನಾವಣೆ ಬರುತ್ತಿದೆ. ಕೇವಲ ಅದರಲ್ಲಿ ಮಾತ್ರವಲ್ಲ, ನಿಮ್ಮ ನಿಮ್ಮ ಕ್ಷೇತ್ರಗಳ್ಳಲ್ಲಿ ನೀವೆಲ್ಲರೂ ಪಕ್ಷ ಸಂಘಟನೆಗೆ ಒತ್ತು ಕೊಡಿ, ಸಮಯ ಕೊಡಿ ಸಾಕು. ನಿಮ್ಮನ್ನು ಪಕ್ಷ ಗುರುತಿಸಲಿದೆ. ನಿಮ್ಮ ಬೂತ್ ಜವಾಬ್ದಾರಿ ನೀವೇ ವಹಿಸಿಕೊಳ್ಳಿ, ನೀವು ನಾಯಕರಾಗಿ ಬೆಳೆಯುತ್ತೀರಿ ಎಮದು ಕಾರ್ಯಕರ್ತರಿಗೆ ಸಲಹೆ ನೀಡಿದ್ದಾರೆ. 

ಈ ಸಂದರ್ಭದಲ್ಲಿ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ, ಮಾಜಿ ಮುಖ್ಯಮಂತ್ರಿ ವೀರಪ್ಪ ಮೋಯ್ಲಿ, ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಸದಸ್ಯರಾದ ಕೆ.ಹೆಚ್. ಮುನಿಯಪ್ಪ, ಕಾರ್ಯಾಧ್ಯಕ್ಷರಾದ ಸಲೀಂ ಅಹ್ಮದ್ ಮತ್ತಿತರ ನಾಯಕರು ಹಾಜರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News