ಎಲೆಕ್ಟ್ರಿಕಲ್ ಅಂಗಡಿಯಲ್ಲಿ ಮಾದಕ ವಸ್ತು ಮಾರಾಟ: ಆರು ಮಂದಿ ಸೆರೆ
Update: 2021-10-02 18:27 IST
ಬೆಂಗಳೂರು, ಅ.2: ಹಾರ್ಡ್‍ವೇರ್ ಮತ್ತು ಎಲೆಕ್ಟ್ರಿಕಲ್ ಅಂಗಡಿಯಲ್ಲಿ ಮಾದಕ ವಸ್ತು ಮಾರಾಟ ಮಾಡುತ್ತಿದ್ದ ಆರು ಜನರನ್ನು ಬಂಧಿಸಿ, 36 ಲಕ್ಷ ರೂ. ಮೌಲ್ಯದ ಅಫೀಮು, 4 ಮೊಬೈಲ್ ಇನ್ನಿತರ ವಸ್ತುಗಳನ್ನು ವಶಪಡಿಸಿಕೊಂಡಿರುವ ಘಟನೆ ಕೆ.ಆರ್.ಪುರಂನಲ್ಲಿ ನಡೆದಿದೆ.
ಕಿತ್ತಗನೂರು ಮುಖ್ಯ ರಸ್ತೆಯಲ್ಲಿರುವ ಹಾರ್ಡ್‍ವೇರ್ ಮತ್ತು ಎಲೆಕ್ಟ್ರಿಕಲ್ ಅಂಗಡಿಯಲ್ಲಿ ಪರಿಚಯಸ್ಥ ಗಿರಾಕಿಗಳಿಗೆ ಅಫೀಮು ಮಾರಾಟ ಮಾಡಲಾಗುತ್ತಿದೆ ಎಂಬ ಮಾಹಿತಿ ಮೇರೆಗೆ ಪೊಲೀಸರು ಕಾರ್ಯಾಚರಣೆ ನಡೆಸಿ ಮೊದಲು ಒಬ್ಬಾತನನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿದಾಗ ಉಳಿದವರ ಬಗ್ಗೆ ಬಾಯ್ಬಿಟ್ಟಿದ್ದಾನೆ.
ಈತನ ಹೇಳಿಕೆ ಆಧರಿಸಿ ಈ ಅಂಗಡಿ ಮೇಲೆ ದಾಳಿ ಮಾಡಿ ಉಳಿದ ಐವರು ಆರೋಪಿಗಳನ್ನು ಬಂಧಿಸಿ ಅಫೀಮು, ಎಲೆಕ್ಟ್ರಾನಿಕ್ ಮಷಿನ್ ವಶಪಡಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ. ಈ ಪ್ರಕರಣ ಕೆ.ಆರ್.ಪುರಂ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.