ಡಯಾಲಿಸಿಸ್, ಬಾಡಿಗೆ, ಇಎಂಐ ಹೊರೆ: ಕೋವಿಡ್ ಬಳಿಕ ಹಣದ ಮುಗ್ಗಟ್ಟಿನಿಂದ ಚಿನ್ನ ಅಡವಿಡುತ್ತಿರುವ ಜನರು

Update: 2021-10-03 15:12 GMT

ಹೊಸದಿಲ್ಲಿ,ಅ.3: ಕೋವಿಡ್ ಸಾಂಕ್ರಾಮಿಕ ಮತ್ತು ಲಾಕ್ಡೌನ್ ಗಳಿಂದಾಗಿ ಜೀವನೋಪಾಯ ಕಳೆದುಕೊಂಡಿರುವ ಅದೆಷ್ಟೋ ಭಾರತೀಯರು ಹಣಕಾಸು ಮುಗ್ಗಟ್ಟನ್ನೆದುರಿಸುತ್ತಿದ್ದು, ಜೀವನ ನಡೆಸುವದೇ ಅವರಿಗೆ ಕಷ್ಟವಾಗಿದೆ. ಅನಿವಾರ್ಯ ವೆಚ್ಚಗಳಿಗೆ ಹಣವನ್ನು ಹೊಂದಿಸಲಾಗದೆ ತಮ್ಮ ಬಳಿಯಿರುವ ಅಲ್ಪಸ್ವಲ್ಪ ಚಿನ್ನವನ್ನೂ ಅಡವಿಡುತ್ತಿದ್ದಾರೆ ಎಂದು theprint.in ವರದಿ ಮಾಡಿದೆ. 

ಎರಡೂ ಮೂತ್ರಪಿಂಡಗಳು ವಿಫಲಗೊಂಡಿರುವ ತನ್ನ 32ರ ಹರೆಯದ ಪುತ್ರಿಯ ಡಯಾಲಿಸಿಸ್ ವೆಚ್ಚಕ್ಕಾಗಿ ಡೆಹ್ರಾಡೂನಿನ ವಿಧವೆ ಕಾಂತಾದೇವಿ ಸೆ.28ರಂದು ತನ್ನ ಚಿನ್ನವನ್ನು ಅಡವಿಟ್ಟು ಎರಡು ಲ.ರೂ.ಗಳ ಸಾಲವನ್ನು ಪಡೆದಿದ್ದಾರೆ. ದಿಲ್ಲಿಯ ಬ್ಯೂಟಿಷಿಯನ್ ಓರ್ವರು ಕಳೆದ ವರ್ಷ ಮೊದಲ ಕೋವಿಡ್ ಲಾಕ್ಡೌನ್ ಸಂದರ್ಭದಲ್ಲಿ ತನ್ನ ಪತಿಯು ಉದ್ಯೋಗ ಕಳೆದುಕೊಂಡ ಬಳಿಕ ಪುತ್ರಿಯ ಶಿಕ್ಷಣಕ್ಕಾಗಿ ತನ್ನ ಚಿನ್ನದ ಬಳೆಗಳನ್ನು ಅಡವಿಟ್ಟು 1.20 ಲ.ರೂ.ಗಳ ಸಾಲ ತೆಗೆದಿದ್ದಾರೆ ಎಂದು ವರದಿ ತಿಳಿಸಿದೆ.

ಮುಂಬೈನ ವಲಸಿಗ ಕಾರ್ಮಿಕ ಮಹಿಳೆ ಸಂಪೂರ್ಣಾ (51) 2020ರಲ್ಲಿ ರಾಷ್ಟ್ರವ್ಯಾಪಿ ಲಾಕ್ಡೌನ್ ಹೇರಲಾಗಿದ್ದ ಸಂದರ್ಭದಲ್ಲಿ ಊರಿಗೆ ಮರಳಲು ವೆಚ್ಚಕ್ಕಾಗಿ ತನ್ನಲ್ಲಿದ್ದ ಸ್ವಲ್ಪ ಚಿನ್ನವನ್ನು ಅಡವಿಟ್ಟು 20,000 ರೂ.ಗಳನ್ನು ಹೊಂದಿಸಿಕೊಂಡಿದ್ದರು. ಅಂತಿಮವಾಗಿ ಅಸಲು ಮತ್ತು ಬಡ್ಡಿಯನ್ನು ಕಟ್ಟಲಾಗದೇ ಚಿನ್ನವನ್ನು ಕಳೆದುಕೊಂಡಿದ್ದಾರೆ. ಬೆಂಗಳೂರಿನಲ್ಲಿ ಸ್ವಸಹಾಯ ಸಂಘ ಚೇತನಾ ಸ್ತ್ರೀ ಶಕ್ತಿ ಗುಂಪಿನ ಸದಸ್ಯೆಯರು ತಮ್ಮ 25 ಲ.ರೂ.ಗಳ ಸಾಮೂಹಿಕ ಸಾಲವನ್ನು ತೀರಿಸಲು ತಮ್ಮ ಮಂಗಳಸೂತ್ರಗಳನ್ನೇ ಅಡವಿಟ್ಟಿದ್ದಾರೆ. ಇದಕ್ಕಾಗಿ ಅವರು ಕೇವಲ ಬಡ್ಡಿ ಎಂದೇ ಮಾಸಿಕ 35,000 ರೂ.ಗಳನ್ನು ಪಾವತಿಸುತ್ತಿದ್ದಾರೆ. ಇವೆಲ್ಲ ಕೆಲವು ಉದಾಹರಣೆಗಳಷ್ಟೇ.

ಕೋವಿಡ್ ಸಾಂಕ್ರಾಮಿಕ ಮತ್ತು ನಂತರದ ಹಣಕಾಸು ಮುಗ್ಗಟ್ಟಿನಿಂದಾಗಿ ದೇಶಾದ್ಯಂತ ಹಲವಾರು ಜನರು ಆಸ್ಪತ್ರೆ ಬಿಲ್ಗಳನ್ನು ಪಾವತಿಸಲು ಅಥವಾ ತಮ್ಮ ವ್ಯವಹಾರವನ್ನು ಮುಂದುವರಿಸಲು ತಮ್ಮಲ್ಲಿರುವ ಚಿನ್ನಾಭರಣಗಳನ್ನು ಅಡವಿಡುತ್ತಿದ್ದಾರೆ. ವಿಶ್ವದಲ್ಲಿ ಚಿನ್ನದ ಅತ್ಯಂತ ದೊಡ್ಡ ಬಳಕೆದಾರ ದೇಶವಾಗಿರುವ ಭಾರತದಲ್ಲಿ ಚಿನ್ನ ಭಾವನಾತ್ಮಕ ಮೌಲ್ಯವನ್ನು ಹೊಂದಿರುವುದು ಮಾತ್ರವಲ್ಲ,ಅಂತಸ್ತಿನ ಸಂಕೇತವೂ ಆಗಿದೆ. ಹಣಕಾಸು ಸಂಸ್ಥೆಗಳೂ ಮಾರುಕಟ್ಟೆ ದರವನ್ನು ಅವಲಂಬಿಸಿ ಚಿನ್ನಾಭರಣಗಳ ವೌಲ್ಯದ ಶೇ.75ರಷ್ಟು ಸಾಲವನ್ನು ನೀಡುತ್ತವೆ.

2020ರ ಪೂರ್ವಾರ್ಧದಲ್ಲಿ ಬ್ಯಾಂಕುಗಳು ಚಿನ್ನ ಅಡಮಾನದ ಮೇಲೆ 1.9 ಲ.ಕೋ.ರೂ. ಸಾಲಗಳನ್ನು ವಿತರಿಸಿದ್ದರೆ,2021ರ ಪೂರ್ವಾರ್ಧದಲ್ಲಿ ಅದು 3.54 ಲ.ಕೋ.ರೂ.ಗೇರಿದೆ. ಇದರಲ್ಲಿ ಚಿನ್ನಾಭರಣ ಸಾಲ ಮಾರುಕಟ್ಟೆಯಲ್ಲಿ ಅಂದಾಜು ಶೇ.65ರಷ್ಟು ಪಾಲು ಹೊಂದಿರುವ ಮುತ್ತೂಟ್ ಫ್ಯೆನಾನ್ಸ್ನಂತಹ ಬ್ಯಾಂಕೇತರ ಹಣಕಾಸು ಸಂಸ್ಥೆ (ಎನ್ಬಿಎಫ್ಸಿ)ಗಳು ಮತ್ತು ಅಸಂಘಟಿತ ಕ್ಷೇತ್ರದ ಲೇವಾದೇವಿದಾರರು ವಿತರಿಸಿರುವ ಚಿನ್ನಾಭರಣ ಸಾಲಗಳು ಸೇರಿಲ್ಲ. ಈ ನಡುವೆ ಚಿನ್ನದ ಮೇಲಿನ ಸಾಲಕ್ಕೆ ಅಪಾರ ಬೇಡಿಕೆಯಿಂದಾಗಿ ಎನ್ಬಿಎಫ್ಸಿಗಳು ಏಳಿಗೆಯನ್ನು ಕಾಣುತ್ತಿವೆ. 

2020-21ರಲ್ಲಿ ಮುತ್ತೂಟ್ ಫಿನ್‌ ಕಾರ್ಪ್ ಉತ್ತರ,‌ ಪಶ್ಚಿಮ ಮತ್ತು ಪೂರ್ವ ಭಾರತದಾದ್ಯಂತ ಗ್ರಾಮೀಣ ಮತ್ತು ಅರೆನಗರ ಪ್ರದೇಶಗಳಲ್ಲಿ 100ಕ್ಕೂ ಅಧಿಕ ಶಾಖೆಗಳನ್ನು ತೆರೆದಿದ್ದರೆ, ಪುಣೆ ಮೂಲದ ಬಜಾಜ್ ಫೈನಾನ್ಸ್ ತನ್ನ ಶಾಖೆಗಳ ಸಂಖ್ಯೆಯನ್ನು 480ರಿಂದ 700ಕ್ಕೆ ಹೆಚ್ಚಿಸಿದೆ. ತೀವ್ರ ಬಿಕ್ಕಟ್ಟಿನ ಸಂದರ್ಭಗಳಲ್ಲಿ ಹಣಕಾಸನ್ನು ಹೊಂದಿಸಲು ಚಿನ್ನದ ಮೇಲಿನ ಸಾಲ ಅಂತಿಮ ಮಾರ್ಗವಾಗಿದೆ ಎಂದು ಸಾಮಾನ್ಯವಾಗಿ ಪರಿಗಣಿಸಲಾಗಿದ್ದರೂ ಚಿನ್ನಾಭರಣಗಳ ಮೇಲೆ ಸಾಲ ನೀಡುವ ಲೇವಾದೇವಿದಾರರು ಹೇಳುವಂತೆ ಬಹಳಷ್ಟು ಜನರು ಇಎಂಐಗಳು, ಬಾಡಿಗೆ ಮತ್ತು ಶಾಲಾ ಶುಲ್ಕಗಳ ಪಾವತಿ, ಸಾಂಕ್ರಾಮಿಕದಿಂದಾಗಿ ವ್ಯವಹಾರದಲ್ಲಿ ಉಂಟಾಗಿರುವ ನಷ್ಟದಿಂದ ಚೇತರಿಸಿಕೊಳ್ಳುವ ಪ್ರಯತ್ನ ಇತ್ಯಾದಿ ವಿವಿಧ ಕಾರಣಗಳಿಗಾಗಿ ಚಿನ್ನವನ್ನು ಅಡವಿಡುತ್ತಿದ್ದಾರೆ.

ಚಿನ್ನಾಭರಣಗಳ ಮೆಲೆ ಸಾಲ ಪಡೆದುಕೊಳ್ಳುವ ಪ್ರತಿಯೊಬ್ಬರಿಗೂ ಸಾಲವನ್ನು ಮರುಪಾವತಿಸುವ ತಾಕತ್ತು ಇರುವುದಿಲ್ಲ. ಹೀಗಾಗಿ ಅವರು ಅಡವಿಟ್ಟ ಚಿನ್ನಾಭರಣಗಳನ್ನು ಹಣಕಾಸು ಸಂಸ್ಥೆಗಳು ಹರಾಜು ಹಾಕುತ್ತವೆ. ಕಳೆದ ವರ್ಷದಿಂದ ಇಂತಹ ಹರಾಜುಗಳ ಸಂಖ್ಯೆ ಹೆಚ್ಚಾಗಿದೆ.

ಮಣಪ್ಪುರಂ ಫೈನಾನ್ಸ್ ಕಳೆದ ವರ್ಷದ ಮೊದಲ ತ್ರೈಮಾಸಿಕದಲ್ಲಿ ಒಂದು ಟನ್ ಚಿನ್ನಾಭರಣಗಳನ್ನು ಹರಾಜು ಮಾಡಿದ್ದರೆ, ಈ ವರ್ಷದ ಮೊದಲ ತ್ರೈಮಾಸಿಕದಲ್ಲಿ ಅದು 4.5 ಟನ್ಗೇರಿದೆ. ಶೇ.30ಕ್ಕೂ ಅಧಿಕ ಸಾಲಗಾರರು ನಿಗದಿತ ಸಮಯದೊಳಗೆ ತಮ್ಮ ಸಾಲಗಳನ್ನು ತೀರಿಸಲು ವಿಫಲರಾಗುತ್ತಿದ್ದಾರೆ ಎನ್ನುತ್ತವೆ ಹಣಕಾಸು ಸಂಸ್ಥೆಗಳು. ತುರ್ತು ಹಣಕ್ಕಾಗಿ ಚಿನ್ನವನ್ನು ಸಾಲವಿಡುವ ಬದಲು ಅದನ್ನು ಮಾರಾಟ ಮಾಡುವ ವೇತನದಾರರು ಮತ್ತು ಉದ್ಯಮಿಗಳಂತಹವರ ಸಂಖ್ಯೆಯೂ ಕಳೆದ ವರ್ಷ ಗಣನೀಯವಾಗಿ ಹೆಚ್ಚಿದೆ ಎಂದು ವರದಿ ಬೆಟ್ಟು ಮಾಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News