ಬೆಂಗಳೂರು ಮಹಾನಗರದ ಅಭಿವೃದ್ಧಿ ನಮ್ಮ ಆದ್ಯತೆ: ಬಸವರಾಜ ಬೊಮ್ಮಾಯಿ

Update: 2021-10-03 17:50 GMT

ಬೆಂಗಳೂರು, ಅ. 3: ಹೊಸದಾಗಿ ಸೇರ್ಪಡೆಯಾಗಿರುವ 110 ಹಳ್ಳಿಗಳ ಸೇರಿದಂತೆ ಬೃಹತ್ ಬೆಂಗಳೂರು ಮಹಾನಗರದ ಅಭಿವೃದ್ಧಿಯ ದೊಡ್ಡ ಸವಾಲು ನಮ್ಮ ಮುಂದಿದ್ದು, ಎಷ್ಟು ಮೊತ್ತದ ಹಣವನ್ನು ವೆಚ್ಚ ಮಾಡುತ್ತೇವೆಂಬುದಕ್ಕಿಂತ ಮುಖ್ಯ. ಭವಿಷ್ಯದ ದೃಷ್ಟಿಯಿಂದ ಯಾವ ರೀತಿಯಲ್ಲಿ ಅಭಿವೃದ್ಧಿ ಮಾಡಬೇಕು ಎಂಬುದು ನಮ್ಮ ಆದ್ಯತೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

ರವಿವಾರ ನಗರದಲ್ಲಿ ಮುಖ್ಯಮಂತ್ರಿಗಳ ನಗರೋತ್ಥಾನ ಯೋಜನೆಯಡಿಯಲ್ಲಿ ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಒಟ್ಟು 361 ಕೋಟಿ ರೂ.ಮೊತ್ತದ ವಿವಿಧ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆ ಹಾಗೂ ಶಂಕುಸ್ಥಾಪನೆಯನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ನೆರವೇರಿಸಿ ಮಾತನಾಡಿದರು.

ಉಳಿದ ದಿನಗಳು ನಗರದ ಅಭಿವೃದ್ಧಿಗೆ ಎಲ್ಲ ಪಕ್ಷದ ಜನಪ್ರತಿನಿಧಿಗಳು ಒಗ್ಗಟ್ಟಿನಿಂದ ಕೆಲಸ ಮಾಡಬೇಕಿದೆ. ಆ ನಿಟ್ಟಿನಲ್ಲಿ ಅಭಿವೃದ್ಧಿ ವಿಷಯದಲ್ಲಿ ನಾವು ಯಾವುದೇ ಸಂದರ್ಭದಲ್ಲಿಯೂ ರಾಜಕಾರಣ ಮಾಡುವುದಿಲ್ಲ. ಚುನಾವಣೆ ಸಂದರ್ಭದಲ್ಲಿ ರಾಜಕೀಯ ಮಾಡುವುದು ಇದ್ದೇ ಇದೆ. ಅಭಿವೃದ್ಧಿ ದೃಷ್ಟಿಯಿಂದ ಎಲ್ಲರ ಸಹಕಾರ ಅಗತ್ಯ ಎಂದು ಅವರು ಕೋರಿದರು.

ಇಲ್ಲಿನ ಮಲ್ಲತ್ತಹಳ್ಳಿ ಕೆರೆಯ ಸಮಗ್ರ ಅಭಿವೃದ್ಧಿಗೆ ಶಂಕುಸ್ಥಾಪನೆ, ಲಗ್ಗೆರೆ ಗ್ರಾಮದ ರಾಕ್ಷಸಿ ಹಳ್ಳದ ಸ್ಥಳದಲ್ಲಿ 25 ಕೋಟಿ ರೂ.ಗಳ ವೆಚ್ಚದಲ್ಲಿ ಅಂತರರಾಷ್ಟ್ರೀಯ ಮಟ್ಟದ ಡಾ.ಅಂಬರೀಶ್ ಈಜುಕೊಳ, ಡಾ. ರಾಜ್‍ಕುಮಾರ್ ಉದ್ಯಾನವನ ಮತ್ತು ಡಾ.ವಿಷ್ಣುವರ್ಧನ್ ಆಟದ ಮೈದಾನ ಕಾರ್ಯಕ್ರಮ ಯೋಜನೆಯ ಭೂಮಿ ಪೂಜೆಯನ್ನು ಸಿಎಂ ಬೊಮ್ಮಾಯಿ ಮಾಡಿದರು.

ಬೆಂಗಳೂರು ನಗರ ಜಿಲ್ಲೆಯ ಕೆಂಗುಂಟೆ ಗ್ರಾಮದ 650 ಕುಟುಂಬದವರಿಗೆ 94ಸಿಸಿ ಅಡಿ ಹಕ್ಕುಪತ್ರ ವಿತರಣೆ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಸಾಂಕೇತಿಕವಾಗಿ ಫಲಾನುಭವಿಗಳಿಗೆ ಹಕ್ಕುಪತ್ರ ವಿತರಿಸಿದರು. ತುಮಕೂರು ರಸ್ತೆ ರಾಷ್ಟ್ರೀಯ ಹೆದ್ದಾರಿ-4ರ ಜಾಲಹಳ್ಳಿ(ಮೆಟ್ರೊ ಸ್ಟೇಷನ್ ನಿಲ್ದಾಣದ ಬಳಿ) ಜಂಕ್ಷನ್‍ನಲ್ಲಿ 158 ಕೋಟಿ ರೂ.ವೆಚ್ಚದಲ್ಲಿ ಗ್ರೇಡ್ ಸೆಪರೇಟರ್ ಕಾಮಗಾರಿಗೆ ಸಿಎಂ ಶಂಕುಸ್ಥಾಪನೆ ನೆರವೇರಿಸಿದರು.

ಈ ವೇಳೆ ಸಚಿವರಾದ ಮುನಿರತ್ನ, ಆರ್.ಅಶೋಕ್, ಬಿ.ಎ.ಬಸವರಾಜು, ಡಾ.ಅಶ್ವತ್ಥ ನಾರಾಯಣ, ಗೋಪಾಲಯ್ಯ, ಸಂಸದ ಡಿ.ಕೆ.ಸುರೇಶ್, ಬಿಬಿಎಂಪಿ ಮುಖ್ಯ ಆಯುಕ್ತರು ಗೌರವ್ ಗುಪ್ತ, ಬೆಂಗಳೂರು ನಗರ ಜಿಲ್ಲಾಧಿಕಾರಿ ಜೆ.ಮಂಜುನಾಥ್, ವಲಯ ಆಯುಕ್ತರಾದ ರೆಡ್ಡಿ ಶಂಕರ ಬಾಬು, ಬಸವರಾಜು ಹಾಗೂ ಇನ್ನಿತರೆ ಅಧಿಕಾರಿಗಳು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News