ಕರಾವಳಿಯಲ್ಲಿ ನೆಲಕಚ್ಚಿದ ರಿಯಲ್ ಎಸ್ಟೇಟ್

Update: 2021-10-04 06:10 GMT

ಮಂಗಳೂರು, ಅ.3: ಜಗತ್ತಿನ ಬುಡವನ್ನೇ ಅಲ್ಲಾಡಿಸಿದ ಕೋವಿಡ್‌ಗೆ ದೇಶ ಹೊರತೇನಲ್ಲ. ಕೊರೋನ ಸೋಂಕು ಇಡೀ ದೇಶದ ಆರ್ಥಿಕತೆಗೆ ಹೊಡೆತ ನೀಡಿದೆ. ಇದರಿಂದ ಸಹಜವಾಗಿಯೇ ರಿಯಲ್ ಎಸ್ಟೇಟ್ ಉದ್ಯಮಕ್ಕೂ ಭಾರೀ ಪೆಟ್ಟುಬಿದ್ದಿದೆ. ಗಾಯದ ಮೇಲೆ ಬರೆ ಎಳೆದಂತೆ ಲಾಕ್‌ಡೌನ್‌ಗಳ ಸರಣಿಯಿಂದ ಉದ್ಯಮ ಅಕ್ಷರಶಃ ನಲುಗಿದೆ. ಹಂತ ಹಂತವಾಗಿ ಲಾಕ್‌ಡೌನ್ ಸಡಿಲಿಕೆ ಏನೋ ಆಯಿತು. ಆದರೆ ಉದ್ಯಮ ಏದುಸಿರು ಬಿಡುತ್ತಾ ತೆವಳುತ್ತಿದೆ.

ರಿಯಲ್ ಎಸ್ಟೇಟ್ ಉದ್ಯಮದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದ ಕರಾವಳಿಯ ಉದ್ಯಮಿಗಳು ಈಗ ಕೋವಿಡ್ ಅಲೆಗಳ ಹೊಡೆತಕ್ಕೆ ಜರ್ಝರಿತರಾಗಿದ್ದಾರೆ. ಉದ್ಯಮದಲ್ಲಿ ಎಣಿಕೆಗೂ ನಿಲುಕದಷ್ಟು ಪ್ರಮಾಣದ ಆದಾಯ ಕೈಸೇರದಂತಾಗಿದೆ. ಇದರಿಂದ ಉದ್ಯಮ ತೀವ್ರ ಆರ್ಥಿಕ ಬಿಕ್ಕಟ್ಟಿಗೆ ಸಿಲುಕಿದೆ.

ಈ ವರ್ಷ ಕೊರೋನದ ಎರಡನೇ ಅಲೆ ಸುಮಾರು ಎರಡು ತಿಂಗಳವರೆಗೆ ಎಲ್ಲ ಕ್ಷೇತ್ರಗಳನ್ನು ಇನ್ನಿಲ್ಲದಂತೆ ಕಾಡಿದ್ದು, ಪೆಟ್ರೋಲಿಯಂ ಉತ್ಪನ್ನ ಬೆಲೆ ಏರಿಕೆ ಹಾಗೂ ಕಟ್ಟಡ ನಿರ್ಮಾಣ ಕಚ್ಚಾ ವಸ್ತು ದರ ಏರಿಕೆಯಿಂದ ರಿಯಲ್ ಎಸ್ಟೇಟ್ ಉದ್ಯಮ ಉಸಿರುಗಟ್ಟುವಂತೆ ಮಾಡಿದೆ. ಅರ್ಥ ವ್ಯವಸ್ಥೆಯ ಸುಧಾರಣೆಗೆ ಸರಕಾರ ಕ್ರಮ ಕೈಗೊಂಡರೆ ಮಾತ್ರ ಉದ್ಯಮ ಅಲ್ಪ ಮಟ್ಟಿಗೆ ಚೇತರಿಕೆಯ ಹಾದಿ ತುಳಿಯಲಿದೆ.

ಕೊರೋನ ಸೋಂಕಿನ ಪರಿಣಾಮದಿಂದ ಉದ್ಯಮಕ್ಕೆ ಎಷ್ಟು ನಷ್ಟವಾಗಿದೆ ಎಂದು ನಿಖರವಾಗಿ ಅಂದಾಜಿಸುವುದು ಸದ್ಯಕ್ಕೆ ಕಷ್ಟ. ಆರ್ಥಿಕ ಹಿಂಜರಿತದ ಪರಿಣಾಮ ಪ್ರಸಕ್ತ ವರ್ಷದ ಸುಮಾರು ಒಂಬತ್ತು ತಿಂಗಳುಗಳಿಂದ ಉದ್ಯಮ ತೆವಳುತ್ತಾ ಸಾಗಿದೆ. ನೋಟು ಅಮಾನ್ಯೀಕರಣ ಮತ್ತು ಜಿಎಸ್‌ಟಿ ಹೊಡೆತಗಳ ತರುವಾಯ ಸ್ವಲ್ಪ ಮಟ್ಟಿಗೆ ಸುಧಾರಿಸಿಕೊಂಡು ಉದ್ಯಮ ಸಾಗುತ್ತಿತ್ತಾದರೂ, ಈಗ ಬಿದ್ದಿರುವ ಹೊಡೆತದಿಂದ ಮೇಲೇಳಲು ಇನ್ನೂ ಕನಿಷ್ಠ ಆರು ತಿಂಗಳುಗಳಿಂದ ವರ್ಷವಾದರೂ ಅಚ್ಚರಿಪಡಬೇಕಾಗಿಲ್ಲ ಎಂದು ಅಳೆದು ತೂಗಿ ಮಾತನಾಡುತ್ತಾರೆ ರಿಯಲ್ ಎಸ್ಟೇಟ್ ಉದ್ಯಮದವರು.

ರಿಯಲ್ ಎಸ್ಟೇಟ್ ಉದ್ಯಮದಲ್ಲಿ ಮಾರ್ಚ್ ನಂತರ ನಿವೇಶನ ಗಳ ಖರೀದಿ, ಮಾರಾಟ ತೀರಾ ಇಳಿಮುಖಗೊಂಡಿದೆ. ಮೊದಲಿಗೆ ರಿಯಲ್ ಎಸ್ಟೇಟ್ ಕ್ಷೇತ್ರವೂ ಆರಕ್ಕೇರದ ಮೂರಕ್ಕಿಳಿಯದ ಪರಿಸ್ಥಿತಿಯಲ್ಲಿತ್ತು. ಕೋವಿಡ್ ನಂತರ ಈ ಕ್ಷೇತ್ರದಲ್ಲಿಯೂ ಜನರು ಬಂಡವಾಳ ಹೂಡುವುದನ್ನು ಕಡಿಮೆ ಮಾಡಿದ್ದಾರೆ. ಇತ್ತ ಮುಖವನ್ನೂ ಹಾಕುತ್ತಿಲ್ಲ. ಕೊಳ್ಳುವವರ ಸಂಖ್ಯೆಗಿಂತ ಮಾರುವವರ ಸಂಖ್ಯೆ ಹೆಚ್ಚಾಗಿದೆ ಎಂಬುದು ರಿಯಲ್ ಎಸ್ಟೇಟ್ ನಡೆಸುವವರ ಮಾತಾಗಿದೆ.

ನಿರ್ಮಾಣ ವೆಚ್ಚ ಹೆಚ್ಚಳ: ‘ಲಾಕ್‌ಡೌನ್ ಅವಧಿಯಲ್ಲೇ ಹೆಚ್ಚು ಪ್ರಮಾಣದಲ್ಲಿ ಪೆಟ್ರೋಲಿಯಂ ದರ ಏರಿಕೆಯಿಂದಾಗಿ ಸಿಮೆಂಟ್, ಕಬ್ಬಿಣ, ಸ್ಟೀಲ್, ಪೈಪ್‌ಗಳು, ಶೀಟ್‌ಗಳು ಮತ್ತಿತರ ಕಟ್ಟಡ ನಿರ್ಮಾಣದ ಅಗತ್ಯ ವಸ್ತುಗಳ ದರವೂ ಭಾರೀ ಏರಿಕೆಯಾಗಿದೆ. ಸರಕಾರದ ತೆರಿಗೆ ಸೇರಿದಂತೆ ಮಂಗಳೂರು ಮಹಾನಗರ ಪಾಲಿಕೆಯಲ್ಲಿ ಸ್ಕ್ವೇರ್ ಫೀಟ್‌ಗೆ ಅಧಿಕ ಶುಲ್ಕ ಹೆಚ್ಚಳ, ಮಂಗಳೂರು ನಗರ ಅಭಿವೃದ್ಧಿ ಪ್ರಾಧಿಕಾರದಲ್ಲೂ ಶುಲ್ಕ ಹೆಚ್ಚಳ ಮಾಡಲಾಗಿದೆ. ಇದರಿಂದ ಸಹಜವಾಗಿಯೇ ನಿರ್ಮಾಣ ವೆಚ್ಚ ಅಧಿಕವಾಗಲಿದೆ’ ಎನ್ನುತ್ತಾರೆ ಹೆಸರು ಹೇಳಲು ಬಯಸದ ಉದ್ಯಮಿ.

ಕಚ್ಚಾ ವಸ್ತುಗಳ ದರದಲ್ಲಿ ಶೇ.5ರಷ್ಟು ಏರಿಳಿಕೆ ಇದ್ದಲ್ಲಿ ಸಮಸ್ಯೆ ಬರುವುದಿಲ್ಲ. ಆದರೆ, ಒಂದೇ ವರ್ಷ ದಲ್ಲಿ ಸ್ಟೀಲ್ ಬೆಲೆಯು ಕೆ.ಜಿ.ಯೊಂದಕ್ಕೆ 40 ರೂ.ನಿಂದ 70 ರೂ.ಗೆ ಜಿಗಿತ ಕಂಡಿದೆ. ಪಿವಿಸಿ ಪೈಪ್ ಬೆಲೆಯಲ್ಲೂ ದುಪ್ಪಟ್ಟು ಹೆಚ್ಚಳವಾಗಿದೆ. 300 ರೂ. ಇದ್ದ ಸಿಮೆಂಟ್ ದರ 400ರ ಆಸುಪಾಸಿಗೆ ಬಂದು ನಿಂತಿದೆ. ಸಿಮೆಂಟ್ ದರದಲ್ಲಿ ಶೇ.25ರಷ್ಟು ಭಾರೀ ಏರಿಕೆಯಾಗಿರುವುದು ಕಟ್ಟಡ ನಿರ್ಮಾಣದಾರರಲ್ಲಿ ಆತಂಕ ಹೆಚ್ಚಿ ಸಿದೆ. ಜೊತೆಗೆ, ಹೊಸ ಫ್ಲಾಟ್‌ಗಳ ನಿರ್ಮಾಣ ಯೋಜನೆಗಳು ದುಬಾರಿಯಾಗುವ ಸಾಧ್ಯತೆ ಇದೆ. ದರ ಏರಿಕೆಯಿಂದಾಗಿ ಜಿಎಸ್ಟಿಯಲ್ಲೂ ಹೆಚ್ಚಳವಾಗಲಿದೆ. ಭೂಮಿಯ ದರವೂ ಗಗನಕ್ಕೇರಿದೆ. ಪ್ರತಿ ಚದರ್ ಅಡಿಗೆ 400-500 ರೂ.ಗಳಷ್ಟು ಏರಿಕೆಯಾಗಿದೆ. ಇದರಿಂದ ರಿಯಲ್ ಎಸ್ಟೇಟ್ ಉದ್ಯಮ ನೆಲಕಚ್ಚಲಿದೆ ಎನ್ನುತ್ತಾರೆ ಉದ್ಯಮಿಗಳು.

ಏಕಗವಾಕ್ಷಿ ಯೋಜನೆ ನನೆಗುದಿಗೆ: ರಿಯಲ್ ಎಸ್ಟೇಟ್ ಉದ್ಯಮಿಗಳು ಅಪಾರ್ಟ್ ಮೆಂಟ್‌ವೊಂದನ್ನು ನಿರ್ಮಿಸಲು ಸುಮಾರು 17ಕ್ಕಿಂತ ಹೆಚ್ಚು ಇಲಾಖೆಗಳ ಅನುಮತಿ ಪಡೆಯ ಬೇಕಾ ಗುತ್ತದೆ. ಇದನ್ನು ತಪ್ಪಿಸಲು ರಾಜ್ಯ ಸರಕಾರ ಏಕಗವಾಕ್ಷಿ ಯೋಜನೆಯನ್ನು 2016 ರಲ್ಲೇ ಜಾರಿಗೆ ತಂದಿದೆ. ಆದರೆ ಇಲ್ಲಿಯವರೆಗೂ ಅದು ಜಾರಿಯಾಗಿಲ್ಲ. ಕೂಡಲೇ ಯೋಜನೆ ಕಾರ್ಯ ರೂಪಕ್ಕೆ ಬಂದಲ್ಲಿ ಬಿಲ್ಡರ್‌ಗಳಿಗೆ ಕಟ್ಟಡ ನಿರ್ಮಾಣ ಕೆಲಸ ಸಲೀಸಾಗುತ್ತದೆ ಎನ್ನುವುದು ಬಿಲ್ಡರ್‌ಗಳ ಅಭಿಮತ.

ಗಲ್ಫ್ ರಾಷ್ಟ್ರಗಳ ಎಫೆಕ್ಟ್: ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಸೈಟುಗಳ ವ್ಯವಹಾರ ಅರ್ಧಕ್ಕಿಂತ ಕಡಿಮೆ ಆಗಿದೆ. ಲಾಕ್‌ಡೌನ್ ನಂತರ ಹಲವು ವ್ಯವಹಾರ ಚಟುವಟಿಕೆ ಗಳಿಗೂ ಪೆಟ್ಟು ಬಿದ್ದಿದ್ದರಿಂದ ಹಣದ ಹರಿವು ಕುಸಿದಿದೆ. ಇದರಿಂದ ನಗರ ವ್ಯಾಪ್ತಿಯಲ್ಲಿ ಭೂಮಿ ಖರೀದಿಗೆ ಜನ ಆಸಕ್ತಿ ತೋರುತ್ತಿಲ್ಲ. ಅಲ್ಲದೆ, ಗಲ್ಫ್ ರಾಷ್ಟ್ರಗಳಲ್ಲಿ ಆರ್ಥಿಕ ಸಂಕಷ್ಟ ಏರ್ಪಟ್ಟಿದೆ. ರಿಯಲ್ ಎಸ್ಟೇಟ್ ಉದ್ಯಮದಲ್ಲಿ ಹೆಚ್ಚಿನ ಬಂಡವಾಳ ಹೂಡಿಕೆ ಮಾಡುತ್ತಿದ್ದ ಅನಿವಾಸಿ ಭಾರತೀಯರು ಕೂಡ ಹಣ ವಿನಿಯೋಗಿಸಲು ಹಿಂದೇಟು ಹಾಕುತ್ತಿದ್ದಾರೆ. ಇದರಿಂದ ಹಣದ ಹರಿವಿನಲ್ಲೂ ಭಾರೀ ಕುಸಿತ ಕಂಡುಬಂದಿದೆ.

ಉದ್ಯೋಗ ನಷ್ಟ ಭೀತಿ

ರಿಯಲ್ ಎಸ್ಟೇಟ್ ಉದ್ಯಮದಲ್ಲಿ ಆರ್ಥಿಕ ಹಿನ್ನಡೆಯಾದಲ್ಲಿ ಲಕ್ಷಾಂತರ ಜನರು ಉದ್ಯೋಗ ಕಳೆದುಕೊಳ್ಳುವ ಭೀತಿ ಎದುರಾಗಿದೆ. ರಿಯಲ್ ಎಸ್ಟೇಟ್ ಉದ್ಯಮವನ್ನು ಕೇಂದ್ರೀಕರಿಸಿಕೊಂಡು ಸುಮಾರು 250ಕ್ಕೂ ಹೆಚ್ಚು ಕೈಗಾರಿಕೆಗಳು ಕಾರ್ಯಾಚರಿಸುತ್ತಿವೆ. ಕಬ್ಬಿಣ, ಸ್ಟೀಲ್, ಸಿಮೆಂಟ್, ಟೈಲ್ಸ್, ಇಲೆಕ್ಟ್ರಾನಿಕ್ಸ್ ಉಪಕರಣ, ಪ್ಲೈವುಡ್, ಪೈಪ್‌ಗಳು ಮತ್ತಿತರ ನೂರಾರು ಬಗೆಯ ಕಚ್ಚಾ ವಸ್ತುಗಳನ್ನು ಕೈಗಾರಿಕೆಗಳಲ್ಲಿ ಉತ್ಪಾದಿಸಲಾಗುತ್ತದೆ. ಪ್ರತಿ ಕೈಗಾರಿಕೆಗಳಲ್ಲೂ ಸಾವಿರಾರು ಜನರು ದುಡಿಯುತ್ತಾರೆ. ರಿಯಲ್ ಎಸ್ಟೇಟ್ ಉದ್ಯಮಕ್ಕೆ ಆರ್ಥಿಕ ಸಮಸ್ಯೆ ತಲೆದೋರಿದಲ್ಲಿ ಲಕ್ಷಾಂತರ ಜನರು ಉದ್ಯೋಗ ಕಳೆದುಕೊಳ್ಳುವ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ ಎನ್ನುತ್ತಾರೆ ರಿಯಲ್ ಎಸ್ಟೇಟ್ ಉದ್ಯಮಿಗಳು.

ವಸತಿ ಸಮುಚ್ಚಯ ದರ ಶೇ.30 ಏರಿಕೆ

ಕಟ್ಟಡ ನಿರ್ಮಾಣಗಳ ವೆಚ್ಚ ಬಹುತೇಕ ದುಪ್ಪಟ್ಟಾಗಿದೆ. ಕೂಲಿ ಕಾರ್ಮಿಕರ ವೇತನವೂ ಹೆಚ್ಚಳ ಕಂಡಿದೆ. ಕೆಲವೇ ದಿನಗಳಲ್ಲಿ ವಸತಿ ಸಮುಚ್ಚಯಗಳ ದರ ಶೇ.25ರಿಂದ 30ರವರೆಗೆ ಏರಿಕೆ ಕಾಣುವ ಸಾಧ್ಯತೆಗಳಿವೆ. ಈಗಾಗಲೇ ಹಲವು ಉದ್ಯಮಿಗಳು ಈ ಬೇಡಿಕೆ ಸಲ್ಲಿಸುತ್ತಿದ್ದಾರೆ. ರಿಯಲ್ ಎಸ್ಟೇಟ್ ಉದ್ಯಮ ಉಳಿಯಬೇಕೆಂದರೆ ದರ ಏರಿಕೆ ಮಾಡುವ ಅಗತ್ಯವಿದೆ ಎನ್ನುತ್ತಾರೆ ಕ್ರೆಡೈ ಮಂಗಳೂರು ಅಧ್ಯಕ್ಷರು ಹಾಗೂ ಅಭಿಷ್ ಬಿಲ್ಡರ್ಸ್ ಆ್ಯಂಡ್ ಡೆವಲಪರ್ಸ್‌ನ ಆಡಳಿತ ನಿರ್ದೇಶಕ ಪುಷ್ಪರಾಜ್ ಜೈನ್.

ಕಟ್ಟಡ ನಿರ್ಮಾಣದ ಕಚ್ಚಾವಸ್ತುಗಳ ಬೆಲೆ ಏರಿಕೆಯಿಂದಾಗಿ ಫ್ಲಾಟ್‌ಗಳ ದರದಲ್ಲೂ ಹೆಚ್ಚಳ ಕಂಡುಬರಲಿದೆ. ಉತ್ಕೃಷ್ಟ ಗುಣಮಟ್ಟದ ಕಚ್ಚಾವಸ್ತು ಬಳಕೆ ಮಾಡಿದಲ್ಲಿ ಮಾತ್ರ ಉತ್ತಮ ಗುಣಮಟ್ಟದ ಕಟ್ಟಡಗಳನ್ನು ನಿರ್ಮಿಸಲು ಸಾಧ್ಯ. ಇದರಿಂದ ಸಹಜವಾಗಿಯೇ ಫ್ಲಾಟ್, ಅಪಾರ್ಟ್ ಮೆಂಟ್‌ಗಳ ದರದಲ್ಲೂ ಏರಿಕೆಯಾಗಲಿದೆ. ಈಗಲೇ ವಸತಿಗಳನ್ನು ಖರೀದಿಸಿದಲ್ಲಿ ಹಳೆಯ ದರದಲ್ಲೇ ಲಭ್ಯವಾಗಲಿದೆ. ತಡಮಾಡಿದಲ್ಲಿ ದರ ಏರಿಕೆಯಾಗಲಿದೆ. ಶೇ.30ರವರೆಗೆ ದರ ಏರಿಸುವ ಮಾತುಗಳು ಉದ್ಯಮದಲ್ಲಿ ಕೇಳಿಬರುತ್ತಿದೆ. ಆಸಕ್ತರು ಕೂಡಲೇ ವಸತಿಗಳನ್ನು ಖರೀದಿಸುವುದು ಕ್ಷೇಮ.

ಪುಷ್ಪರಾಜ್ ಜೈನ್, ಅಧ್ಯಕ್ಷರು, ಕ್ರೆಡೈ ಮಂಗಳೂರು

Writer - ಬಂದೇನವಾಝ್ ಮ್ಯಾಗೇರಿ

contributor

Editor - ಬಂದೇನವಾಝ್ ಮ್ಯಾಗೇರಿ

contributor

Similar News