×
Ad

ಧಾರಾಕಾರ ಮಳೆ; ಬೆಂಗಳೂರಿನಲ್ಲಿ ಜನಜೀವನ ಅಸ್ತವ್ಯಸ್ತ

Update: 2021-10-04 17:08 IST

ಬೆಂಗಳೂರು, ಅ.4: `ಶಾಹೀನ್ ಚಂಡಮಾರುತದ ಪರಿಣಾಮ ಬೆಂಗಳೂರಿನಲ್ಲಿ ರವಿವಾರ ರಾತ್ರಿ ಧಾರಾಕಾರ ಮಳೆ ಸುರಿದ ಪರಿಣಾಮ ಹಲವು ಬಡಾವಣೆ, ರಸ್ತೆಗಳು ಜಲಾವೃತವಾಗಿ ಜನಜೀವನ ಅಸ್ತವ್ಯಸ್ತವಾಗಿದೆ.

ಪ್ರಮುಖವಾಗಿ ಆರ್‍ಆರ್ ನಗರ ಹೊರವಲಯದಲ್ಲಿರುವ ರಾಜಕಾಲುವೆ ಸಮೀಪ ನೆಲೆಸಿದ್ದ ಅಂದಾನಪ್ಪ ಎಂಬುವರಿಗೆ ಸೇರಿದ ಮನೆ, ಕೊಟ್ಟಿಗೆಗೆ ಏಕಾಏಕಿ ನೀರು ನುಗ್ಗಿದ ಪರಿಣಾಮ 5 ಹಸು, 6 ಮೇಕೆ ಮೃತಪಟ್ಟಿವೆ. ಜಾನುವಾರುಗಳಿಗೆ ಸಂಗ್ರಹಿಸಿಟ್ಟಿದ್ದ 30 ಮೂಟೆ ಹಿಂಡಿ, ಬೂಸ ನೀರು ಪಾಲಾಗಿರುವ ಹೃದಯ ವಿದ್ರಾವಕ ಘಟನೆ ಸಂಭವಿಸಿದೆ.

ಎಲ್ಲಲ್ಲಿ ನೀರು?: ಭಾರಿ ಮಳೆಯಿಂದ ಮಲ್ಲತ್ತಹಳ್ಳಿ ಕೆರೆಯಂತಾಗಿದ್ದು, ಇಲ್ಲಿನ ಹಲವು ಮನೆಗಳಿಗೆ ರಾಜಕಾಲುವೆ ನೀರು ನುಗ್ಗಿದೆ. ಇದರಿಂದಾಗಿ ಜನರು ಪರದಾಡುವಂತಾಗಿದೆ. ಕೋರಮಂಗಲದ 6ನೇ ಬ್ಲಾಕ್‍ನಲ್ಲೂ ಮನೆಗೆ ನೀರು ನುಗ್ಗಿದ್ದು, ರಸ್ತೆ, ಬದಿ ನಿಲ್ಲಿಸಿದ್ದ ಬೈಕ್, ಕಾರುಗಳು ನೀರಿನಲ್ಲಿ ಮುಳುಗಿದ್ದವು. ಸದ್ಯ ರಸ್ತೆಯಲ್ಲಿರುವ ನೀರು ತೆರವು ಮಾಡಲಾಗಿದೆ. ಕೆ.ಆರ್.ಪುರದ ರಾಮಮೂರ್ತಿ ನಗರ, ಹೊರಮಾವು, ಮಹದೇವಪುರದಲ್ಲಿ ಮಳೆ ನೀರು ಮನೆಗಳಿಗೆ ನುಗ್ಗಿದ್ದು, ಜನಜೀವನ ಅಸ್ತವ್ಯಸ್ತವಾಗಿದೆ. 

ಹೊಯ್ಸಳ ನಗರದಲ್ಲಿ ರಾಜಕಾಲುವೆ ಕಾಮಗಾರಿ ಅರ್ಧಕ್ಕೆ ನಿಲ್ಲಿಸಿರುವುದರಿಂದ ಬಡಾವಣೆಗಳಿಗೆ ನೀರು ನುಗ್ಗುತ್ತಿದೆ. ಸುಮಾರು ಎರಡು ವರ್ಷಗಳಿಂದ ಈ ಕಾಮಗಾರಿ ನಡೆಯುತ್ತಿದೆ. ಇನ್ನೂ ಪೂರ್ಣಗೊಳ್ಳದ ಕಾರಣ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಆರ್‍ಆರ್ ನಗರ ಐಡಿಯಲ್ ಲೇಔಟ್‍ನಲ್ಲಿ 15 ಮನೆಗಳಿಗೆ ನೀರು ನುಗ್ಗಿರುವ ದೂರಿನ ಹಿನ್ನೆಲೆಯಲ್ಲಿ ಪಾಲಿಕೆ ಸಿಬ್ಬಂದಿ ನೆರವಿಗೆ ಧಾವಿಸಿ, ಸ್ವಚ್ಛತಾ ಕಾರ್ಯದಲ್ಲಿ ತೊಡಗಿದರು. ಅದೇ ರೀತಿಯಲ್ಲಿ,ಶಂಕರಮಠ ವಾರ್ಡ್, ಶಕ್ತಿಗಣಪತಿನಗರ ವಾರ್ಡ್, ಜೆ.ಸಿ.ನಗರ, ಕಮಲಾನಗರ ವ್ಯಾಪ್ತಿಯಲ್ಲಿ ಮನೆಗಳಿಗೆ ನುಗ್ಗಿದ ಮಳೆ ನೀರು ಅವಾಂತರ ಸೃಷ್ಟಿಸಿದೆ. 

ಅಲ್ಲಿ ಅನಾರೋಗ್ಯಪೀಡಿತ ಹಿರಿಯ ನಾಗರಿಕರ ಮನೆಗಳೂ ನುಗ್ಗಿದ ಮಳೆ ನೀರು ನುಗ್ಗಿದೆ. ಮನೆ ಮುಂದೆ ನಿಂತ ವಾಹನಗಳೂ ಜಲಾವೃತಗೊಂಡಿವೆ. ಮೈಸೂರು ರಸ್ತೆಯಲ್ಲಿರುವ ಗಾಳಿ ಆಂಜನೇಯ ಸ್ವಾಮಿ ದೇವಸ್ಥಾನಕ್ಕೂ ನೀರು ನುಗ್ಗಿದೆ.

ಮನವಿ: ಮಲ್ಲತ್ತಹಳ್ಳಿ ಪ್ರದೇಶವು ನೀರಿನಿಂದ ಕೆರೆಯಂತಾಗಿದ್ದು, ರಾಜಕಾಲುವೆ ನೀರು ಮನೆಗಳೊಳಗೆ ತುಂಬಿದೆ. ಶಂಕರಮಠ ವಾರ್ಡ್ ಮತ್ತು ಶಕ್ತಿಗಣಪತಿನಗರ ವಾರ್ಡ್‍ನ ಜೆ.ಸಿ.ನಗರ ಮತ್ತು ಕಮಲಾನಗರ ಸುತ್ತಮುತ್ತಲ ಪ್ರದೇಶದ ತಗ್ಗು ಪ್ರದೇಶದಲ್ಲಿ ಇರುವ ಮನೆಗಳಿಗೆ ನೀರು ನುಗ್ಗಿದೆ ಮತ್ತು ವಾಹನಗಳು ನೀರಿನಲ್ಲಿ ಮುಳುಗಿದ್ದ ಹಿನ್ನೆಲೆ ಹಾನಿಗೊಳಗಾದ ಪ್ರದೇಶಕ್ಕೆ ಬಿಬಿಎಂಪಿ ಮಾಜಿ ಆಡಳಿತ ಪಕ್ಷದ ನಾಯಕ ಎಂ.ಶಿವರಾಜು ಭೇಟಿ ನೀಡಿ, ಹಾನಿಗೊಳಗಾದ ಕುಟುಂಬಗಳಿಗೆ ಪರಿಹಾರ ನೀಡುವಂತೆ ಪಾಲಿಕೆ ಆಯುಕ್ತರಿಗೆ ಮನವಿ ಮಾಡಿದರು.

ಸಂಪರ್ಕ ಕಡಿತ: ಮಳೆಯಿಂದಾಗಿ ಹಲವು ಬಡಾವಣೆಗಳಲ್ಲಿ ವಿದ್ಯುತ್ ಸಂಪರ್ಕ ಕಡಿತಗೊಂಡಿತು. ಮಳೆಗೆ ತಗ್ಗು ಪ್ರದೇಶದ ರಸ್ತೆಗಳ ಚಿತ್ರಣವೇ ಬದಲಾಯಿತು. ರಸ್ತೆ ಗುಂಡಿಗಳಲ್ಲಿ ಮಳೆ ನೀರು ತುಂಬಿಕೊಂಡು ರಸ್ತೆಗಳು ರಾಡಿಯಾದವು.ಕೆಲ ರೈಲ್ವೆ ಕೆಳ ಸೇತುವೆಗಳು ಹಾಗೂ ತಗ್ಗು ಪ್ರದೇಶದ ರಸ್ತೆಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಮಳೆ ನೀರು ನಿಂತಿದ್ದು, ಅಕ್ಕಪಕ್ಕದ ಬಡಾವಣೆಗಳಿಗೆ ಸಂಪರ್ಕ ಕಡಿತಗೊಂಡಿದೆ.

ಒಟ್ಟಾರೆ ರಾತ್ರಿಯ ಮಳೆಗೆ ನಗರದ ಹಲವೆಡೆ ಮನೆಗಳಿಗೆ ನೀರು ನುಗ್ಗಿ ಅವಾಂತರ ಸೃಷ್ಟಿಯಾಗಿದ್ದರಿಂದ ಮಳೆ ನೀರು ಹೊರ ಹಾಕಲು ರಾತ್ರಿಯಿಡೀ ಜನರು ಹರಸಾಹಸ ಮಾಡಿದ ದೃಶ್ಯ ಸಾಮಾನ್ಯವಾಗಿತ್ತು.

ಎಲ್ಲಿ, ಎಷ್ಟು  ಪ್ರಮಾಣ..!

ಜ್ಞಾನ ಭಾರತಿ-98 ಮೀ ಮೀ., ನಾಗರಬಾವಿ- 91.ಮೀಮಿ.,  ಹಂಪಿನಗರ-90 ಮಿಮೀ.,ನಂದಿನಿ ಲೇಔಟ್-78 ಮಿಮೀ, ಹೆಗ್ಗನಹಳ್ಳಿ-67.5 ಮಿಮೀ., ಮಾರುತಿ ಮಂದಿರ-64.5 ಮಿಮೀ., ವಿವಿಪುರಂ-58.5 ಮಿಮೀ., ರಾಜರಾಜೇಶ್ವರಿ ನಗರ-53.5 ಮೀಮೀ., ದಯಾನಂದ ನಗರ-48.5 ಮಿಮೀ.

ನೆಲಕ್ಕುರಿಳಿದ ಮರಗಳು..!

ಬೆಂಗಳೂರು ನಗರದ ಹಲವೆಡೆ ಭಾರಿ ಮಳೆಗೆ ಹಲವು ಮರಗಳು ಧರೆಗುರುಳಿ ಬಿದ್ದಿವೆ.ಆರ್.ಆರ್.ನಗರದಲ್ಲಿ 5 ಮರ, ಮಲ್ಲೇಶ್ವರಂನ ಸಂಪಿಗೆ ರಸ್ತೆಯಲ್ಲಿ 2 ಮರ ಧರಾಶಾಹಿಯಾಗಿವೆ. ಅದೇ ರೀತಿ, ಪೂರ್ವ ವಲಯದಲ್ಲಿ 4 ಮರ ಬಿದ್ದಿದ್ದು, 7 ಮನೆಗಳಿಗೆ ನೀರು ತುಂಬಿ ಹಾನಿಯಾಗಿದೆ. ಪಶ್ಚಿಮ ವಲಯದಲ್ಲಿ 10 ಮನೆಗಳಿಗೆ ನುಗ್ಗಿದ್ದ ನೀರನ್ನು ಹೊರಹಾಕಲಾಗಿದೆ. ಇನ್ನೂ, ದಕ್ಷಿಣ ವಲಯದಲ್ಲಿ 2 ಮರ ಧರೆಗುರುಳಿವೆ.

ಹಲವು ಕಡೆ ಹಾನಿ..!: ನಗರದಲ್ಲಿ ಸುರಿದ ಭಾರಿ ಮಳೆ ಅವಾಂತರ ಸೃಷ್ಟಿಸಿದ್ದು, ಎಚ್‍ಎಎಲ್‍ನ ರಮೇಶ್‍ನಗರದಲ್ಲಿ ಗೋಡೆ ಕುಸಿದುಬಿದ್ದಿದೆ. ಇದರಿಂದಾಗಿ ಸುಮಾರು 4 ಕಾರು ಸಂಪೂರ್ಣ ಜಖಂಗೊಂಡಿತ್ತು. ಮಹದೇವಪುರದಲ್ಲಿ10 ಅಡಿ ತಡೆ ಗೋಡೆ ಕುಸಿದಿದ್ದು, ಕಾರು, ಬೈಕ್‍ಗಳಿಗೆ ಹಾನಿಯಾಗಿದೆ.

ಅಧಿಕಾರಿಗಳ ನಿರ್ಲಕ್ಷ್ಯ:ಆರೋಪ

ಬಹುತೇಕ ಕಡೆಗಳಲ್ಲಿ ಮಳೆ ನೀರು ನುಗ್ಗಿ ಅವಾಂತರ ಸೃಷ್ಟಿಯಾಗಿದೆ. ಭಾರಿ ಮಳೆ ಹಿನ್ನಲೆ ರಾಜಕಾಲುವೆ ತುಂಬಿ ಆ ನೀರು ಮನೆಗಳಿಗೆ ನುಗ್ಗಿದೆ. ರಾತ್ರಿಯಿಡೀ ಮಳೆಯಲ್ಲಿ ಪರದಾಡುತ್ತಿದ್ದರೂ ಅಧಿಕಾರಿಗಳು ಮಾತ್ರ ಸ್ಥಳಕ್ಕೆ ಬಾರದೆ ನಿರ್ಲಕ್ಷ್ಯ ತೋರಿರುವ ಆರೋಪ ಕೇಳಿಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News