ಬೆಂಗಳೂರು: ಆರೋಗ್ಯ ಸಿಬ್ಬಂದಿ ಆತ್ಮಹತ್ಯೆ
ಬೆಂಗಳೂರು, ಅ.4: ಖಾಸಗಿ ಆಸ್ಪತ್ರೆಯಲ್ಲಿ ಕೆಲಸ ನಿರ್ವಹಿಸುತ್ತಿದ್ದ ಸಿಬ್ಬಂದಿಯೋರ್ವ ಅರಿವಳಿಕೆ ಇಂಜೆಕ್ಷನ್ ತೆಗೆದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಆರೋಪ ಕೇಳಿಬಂದಿದ್ದು, ಈ ಸಂಬಂಧ ನೆಲಮಂಗಲ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಚಿಕ್ಕಮಗಳೂರು ಜಿಲ್ಲೆಯ ಕಡೂರು ಮೂಲದ ಸಂಜಯ್ (19) ಅರಿವಳಿಕೆ ಇಂಜೆಕ್ಷನ್ ತೆಗೆದುಕೊಂಡು ಮೃತಪಟ್ಟವರು ಎಂದು ತಿಳಿದುಬಂದಿದೆ. ಸ್ವಾಸ್ಥ್ಯ ಎಂಬ ಖಾಸಗಿ ಆಸ್ಪತ್ರೆಯ ಸಿಬ್ಬಂದಿಯ ವಿಶ್ರಾಂತಿ ಕೊಠಡಿಯಲ್ಲಿ ಸಂಜಯ್ ಅರಿವಳಿಕೆ ಇಂಜೆಕ್ಷನ್ ಪಡೆದು ಮೃತಪಟ್ಟಿದ್ದರು. ರವಿವಾರ ವಿಶ್ರಾಂತಿ ಕೊಠಡಿಯಲ್ಲಿ ಮಲಗಿದ್ದವನು ಬಹಳ ಸಮಯವಾದರೂ ಮೇಲೇಳದೆ ಇದ್ದಾಗ ಘಟನೆ ಬೆಳಕಿಗೆ ಬಂದಿದೆ.
ವೈದ್ಯಕೀಯ ಕೋರ್ಸ್ ಮುಗಿಸಿರುವ ಸಂಜಯ್, ಕೋವಿಡ್ ಲಾಕ್‍ಡೌನ್‍ಗೂ ಮುನ್ನ 6 ತಿಂಗಳು ಶಸ್ತ್ರ ಚಿಕಿತ್ಸಾ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದರು ಎಂದು ತಿಳಿದುಬಂದಿದೆ. ಘಟನೆ ಸಂಬಂಧ ಸಂಜಯ್ ಪೋಷಕರು ನೆಲಮಂಗಲ ನಗರ ಠಾಣಾ ಪೊಲೀಸರಿಗೆ ದೂರು ನೀಡಿದ್ದು, ತನಿಖೆಗೆ ಆಗ್ರಹಿಸಿದ್ದಾರೆ.