ಲಖೀಂಪುರ್ ಹಿಂಸಾಚಾರ: ಕೇಂದ್ರ ಸಚಿವರನ್ನು ವಜಾಗೊಳಿಸುವಂತೆ ಒತ್ತಾಯಿಸಿ ಬೆಂಗಳೂರಿನಲ್ಲಿ ಪ್ರತಿಭಟನೆ
ಬೆಂಗಳೂರು, ಅ.5: ಉತ್ತರ ಪ್ರದೇಶದ ಲಖೀಂಪುರ್ ಖೇರಾದಲ್ಲಿ ರೈತರ ಮೇಲೆ ನಡೆದ ದಾಳಿ ಹಾಗೂ ಕೊಲೆ ಆರೋಪ ಪ್ರಕರಣ ಸಂಬಂಧ ಕೇಂದ್ರ ಸಚಿವ ಅಜಯ್ ಕುಮಾರ್ ಮಿಶ್ರ ಅವರನ್ನು ಈ ಕೂಡಲೇ ವಜಾಗೊಳಿಸಬೇಕೆಂದು ಒತ್ತಾಯಿಸಿ ಎಸ್‍ಯುಸಿಐ(ಕಮ್ಯುನಿಸ್ಟ್) ಪಕ್ಷದ ಸದಸ್ಯರು ಪ್ರತಿಭಟನೆ ನಡೆಸಿದರು.
ಮಂಗಳವಾರ ನಗರದ ಮೈಸೂರು ವೃತ್ತದ ಬಳಿ ಜಮಾಯಿಸಿದ ಪಕ್ಷದ ಸದಸ್ಯರು, ಇತ್ತೀಚೆಗೆ ಉತ್ತರ ಪ್ರದೇಶದಲ್ಲಿ ನಡೆದ ರೈತರ ಮೇಲಿನ ಅಮಾನವೀಯ ಕೊಲೆ ಸಂಬಂಧ ಪ್ರಧಾನಿ ನರೇಂದ್ರ ಮೋದಿ ಇದುವರೆಗೂ ಮಾತನಾಡದೆ ಇರುವುದು ಖಂಡನೀಯ ಎಂದು ಆಕ್ರೋಶ ಹೊರಹಾಕಿದರು.
ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ಎಸ್‍ಯುಸಿಐ(ಕಮ್ಯುನಿಸ್ಟ್) ರಾಜ್ಯ ಕಾರ್ಯದರ್ಶಿ ಕೆ.ಉಮಾ, ರೈತರ ಮೇಲೆ ನಡೆದ ಹತ್ಯೆಯು ಅತ್ಯಂತ ಖಂಡನೀಯವಾದದ್ದು. ಪ್ರತಿರೋಧದ ಧ್ವನಿಯನ್ನು ಅಡಗಿಸಲು ಶಾಂತಿಯುತವಾಗಿ ಪ್ರತಿಭಟಿಸುತ್ತಿದ್ದ ರೈತರ ಮೇಲೆ ಅಮಾನುಷವಾಗಿ ದಾಳಿ ಮಾಡಲಾಗಿದೆಯೆಂದು ಆಕ್ರೋಶವನ್ನು ವ್ಯಕ್ತಪಡಿಸಿದರು.
ಕೇಂದ್ರ ಸರಕಾರ ಹಾಗೂ ಯುಪಿ ರಾಜ್ಯ ಸರಕಾರಗಳು ತಮ್ಮನ್ನು ಪ್ರಶ್ನಿಸುವವರ ಬಾಯಿ ಮುಚ್ಚಿಸುವ ಸಲುವಾಗಿ ಇಂತಹ ಹಿಂಸಾತ್ಮಕ ದಾಳಿಯಲ್ಲಿ ತೊಡಗಿದ್ದಾರೆ. ಇಂತಹ ಜನವಿರೋಧಿ ಸರಕಾರಗಳಿಗೆ ಅಧಿಕಾರ ನಡೆಸಲು ಯಾವುದೇ ನೈತಿಕ ಹಕ್ಕಿಲ್ಲ. ಉತ್ತರ ಪ್ರದೇಶದಲ್ಲಿ ಕಾನೂನು ಮತ್ತು ಸುವ್ಯವಸ್ಥೆಯೆನ್ನುವುದು ಕೇವಲ ಹಾಳೆಯ ಮೇಲಿದೆ ಅಷ್ಟೆ. ಮಹಿಳೆಯರ ಮೇಲಿನ ದೌರ್ಜನ್ಯಗಳು, ಕೋಮು ಗಲಭೆಗಳು ದಿನನಿತ್ಯದ ಸಂಗತಿಗಳಾಗಿವೆ ಎಂದು ಆರೋಪಿಸಿದರು.
ಈ ಸಂದರ್ಭದಲ್ಲಿ ಎಸ್‍ಯುಸಿಐ(ಕಮ್ಯುನಿಸ್ಟ್) ಸದಸ್ಯ ವಿ.ಜ್ಞಾನಮೂರ್ತಿ, ಎಚ್.ಹನುಮೇಶ್ ಸೇರಿದಂತೆ ಪ್ರಮುಖರಿದ್ದರು.