×
Ad

ಕಬ್ಬಿನ ಎಫ್‍ಆರ್ ಪಿ ದರ ಮರುಪರಿಶೀಲನೆಗೆ ಒತ್ತಾಯಿಸಿ ಬೆಂಗಳೂರಿನಲ್ಲಿ ರೈತರ ಪ್ರತಿಭಟನೆ

Update: 2021-10-05 18:56 IST

ಬೆಂಗಳೂರು, ಅ.5: ಉತ್ತರಪ್ರದೇಶದಲ್ಲಿ ನಡೆದ ರೈತರ ಹತ್ಯೆ ಹಾಗೂ ಕಬ್ಬಿನ ಪ್ರೋತ್ಸಾಹದಾಯಕ ದರ(ಎಫ್‍ಆರ್‍ಪಿ) ದರವನ್ನು ಮರುಪರಿಶೀಲಿಸುವಂತೆ ಆಗ್ರಹಿಸಿ ರಾಜ್ಯ ರೈತ ಸಂಘಟನೆಗಳ ನೇತೃತ್ವದಲ್ಲಿ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಲಾಯಿತು.

ಮಂಗಳವಾರ ಇಲ್ಲಿನ ಸಂಗೊಳ್ಳಿ ರಾಯಣ್ಣ ರೈಲ್ವೆ ನಿಲ್ದಾಣದಿಂದ ಫ್ರೀಡಂ ಪಾರ್ಕ್‍ವರೆಗೂ ರಾಜ್ಯ ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ಕುರುಬೂರು ಶಾಂತಕುಮಾರ್ ನೇತೃತ್ವದಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿ, ರೈತರ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿದರು.

ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ಕುರುಬೂರು ಶಾಂತಕುಮಾರ್, ಕಬ್ಬಿನ ಎಫ್‍ಆರ್‍ಪಿ ದರವನ್ನು ಕಳೆದ ಎರಡು ವರ್ಷಗಳಿಂದ ಏರಿಕೆ ಮಾಡದೆ ಅನ್ಯಾಯ ಮಾಡಲಾಗುತ್ತಿದೆ. ಕಬ್ಬು ಉತ್ಪಾದನಾ ವೆಚ್ಚ ದ್ವಿಗುಣವಾಗಿದ್ದರೂ ಈಗ ಟನ್‍ಗೆ 50 ರೂ. ಏರಿಕೆ ಮಾಡಿರುವುದನ್ನು ಪುನರ್ ಪರಿಶೀಲಿಸಬೇಕು ಎಂದರು.

ಇನ್ನು, ಕಬ್ಬಿನಿಂದ ಬರುವ ಎಥಿನಾಲ್ ಉತ್ಪನ್ನದ ಲಾಭ ಹಾಗೂ ಉಪ ಉತ್ಪನ್ನಗಳ ಲಾಭಗಳನ್ನು ರೈತರಿಗೆ ಹಂಚಿಕೆ ಮಾಡಬೇಕು ಎಂದ ಅವರು, ಸಕ್ಕರೆ ಇಳುವರಿ, ತೂಕದಲ್ಲಿ ಮೋಸ, ಕಬ್ಬಿನ ಹಣ ಪಾವತಿಸುವಲ್ಲಿ ವಿಳಂಬ ತಪ್ಪಿಸಲು ಕಠಿಣ ಕ್ರಮ ಕೈಗೊಳ್ಳಬೇಕು. ವಿಳಂಬದ ಹಣ ಪಾವತಿಗೆ ಶೇ.15ರಷ್ಟು ಬಡ್ಡಿ ಸೇರಿಸಿ ಕೊಡಬೇಕು ಎಂದು ಅವರು ಒತ್ತಾಯಿಸಿದರು. 

ಅದೇ ರಿತಿ, ಹೊಸ ಸಕ್ಕರೆ ಕಾರ್ಖಾನೆಗಳ ಆರಂಭಕ್ಕೆ ಇರುವ 25 ಕಿ.ಮೀ ಮಿತಿಯನ್ನು ರದ್ದುಗೊಳಿಸಬೇಕು. ಸಕ್ಕರೆ ಕಾರ್ಖಾನೆ ಹಾಗೂ ರೈತರ ನಡುವೆ ಕಾನೂನುಬದ್ಧ ದ್ವಿಪಕ್ಷೀಯ ಒಪ್ಪಂದ ಪತ್ರ ಜಾರಿಯಾಗಬೇಕು. ಸಕ್ಕರೆ ಕಾರ್ಖಾನೆಗಳಿಂದ ರೈತರಿಗೆ ಬರಬೇಕಾದ ಕಬ್ಬಿನ ಬಾಕಿ ಹಣವನ್ನು ಕೂಡಲೇ ಕೊಡಿಸಬೇಕು ಎಂದು ಆಗ್ರಹಿಸಿದರು.

ವಿಧಾನಸೌಧ ಮುತ್ತಿಗೆ ಹಾಕಲು ಯತ್ನಿಸಿದ ಪ್ರತಿಭಟನಾಕಾರರನ್ನು ಫ್ರೀಡಂಪಾರ್ಕ್ ಬಳಿ ಪೊಲೀಸರು ತಡೆದರು.ಜತೆಗೆ, ಬಿಗಿ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿತ್ತು.

ಮುಖ್ಯಮಂತ್ರಿ ಭೇಟಿ

ಕಬ್ಬಿನ ಪ್ರೋತ್ಸಾಹದಾಯಕ ದರ(ಎಫ್‍ಆರ್‍ಪಿ) ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರೊಂದಿಗೆ ರೈತ ಮುಖಂಡರು ಮಂಗಳವಾರ ಚರ್ಚೆ ನಡೆಸಿದರು.

ಸಚಿವರ ಭೇಟಿ

ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿದ ಕೃಷಿ ಸಚಿವ ಬಿ.ಸಿ.ಪಾಟೀಲ್ ಅವರು, ಕಬ್ಬಿನ ಪ್ರೋತ್ಸಾಹದಾಯಕ ದರ(ಎಫ್‍ಆರ್‍ಪಿ)ವನ್ನು ಕೇಂದ್ರ ಸರಕಾರವೂ ಹೆಚ್ಚಳ ಮಾಡಬೇಕು. ಈ ಸಂಬಂಧ ಮುಖ್ಯಮಂತ್ರಿಗಳೊಂದಿಗೂ ಚರ್ಚೆ ನಡೆಸಲಾಗುವುದು ಎಂದು ವಿಶ್ವಾಸ ವ್ಯಕ್ತಪಡಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News