ಲಖಿಂಪುರ ಹಿಂಸಾಚಾರ ಸ್ಥಳದಲ್ಲಿ ಸಚಿವ ಅಜಯ್‌ ಕುಮಾರ್‌ ಪುತ್ರ ಇದ್ದನೆಂಬುವುದಕ್ಕೆ ಸಾಕ್ಷಿಯಾಗುತ್ತಿರುವ ವೈರಲ್‌ ವೀಡಿಯೋ

Update: 2021-10-06 07:48 GMT
Photo: ndtv

ಹೊಸದಿಲ್ಲಿ: ಹಿಂಸಾಪೀಡಿತ ಲಖೀಂಪುರ್ ಖೇರಿಯಿಂದ ಹೊಸ ವೀಡಿಯೋವೊಂದು ಹೊರಬಿದ್ದಿದೆ. ಜಿಲ್ಲೆಯಲ್ಲಿ  ಸಚಿವರ ಪುತ್ರನದ್ದೆಂದು ಹೇಳಲಾದ ಎಸ್‍ಯುವಿಯೊಂದು ಪ್ರತಿಭಟನಾನಿರತ ರೈತರ ಮೇಲೆ ಹರಿದು ನಾಲ್ಕು ಮಂದಿ ಸಾವಿಗೀಡಾದ ಘಟನೆಯ ನಂತರ ಪೊಲೀಸ್ ಅಧಿಕಾರಿಯೊಬ್ಬರು ವ್ಯಕ್ತಿಯೊಬ್ಬನನ್ನು ವಿಚಾರಣೆ ನಡೆಸುತ್ತಿರುವುದು ಈ  ವೀಡಿಯೋದಲ್ಲಿ ಕಾಣಿಸುತ್ತದೆ.

ಈ ವೀಡಿಯೋದ ಸತ್ಯಾಸತ್ಯತೆ ತಿಳಿದು ಬಂದಿಲ್ಲವಾದರೂ ರಕ್ತಸಿಕ್ತವಾಗಿರುವ ಬಿಳಿ ಬನಿಯನ್ ಧರಿಸಿದ್ದ ಹಾಗೂ ಮುಖದಲ್ಲಿ ರಕ್ತ ಹರಿಯುತ್ತಿದ್ದ ವ್ಯಕ್ತಿಯೊಬ್ಬ ನೆಲದಲ್ಲಿ ಕುಳಿತಿರುವುದು ಹಾಗೂ ಕೈಯ್ಯಲ್ಲಿ ಮೈಕ್ ಹಿಡಿದಿರುವ ಪೊಲೀಸ್ ಅಧಿಕಾರಿಯೊಬ್ಬರು ಆತನನ್ನು ಪ್ರಶ್ನಿಸುತ್ತಿರುವುದು ಕಾಣಿಸುತ್ತದೆ.

ತಾನು ಕಪ್ಪು ಬಣ್ಣದ ಫಾರ್ಚೂನರ್ ವಾಹನದಲ್ಲಿದ್ದೆ ಅದರಲ್ಲಿ ಐದು ಜನರಿದ್ದರು, ತಾನು ವಾಹನದ ಹಿಂದಿನ ಸೀಟಿನಲ್ಲಿ ಕುಳಿತಿದ್ದೆ, ಈ ವಾಹನ ಮಾಜಿ ಕಾಂಗ್ರೆಸ್ ಸಂಸದರಿಗೆ ಸೇರಿದ್ದು ಎಂದು ಹೇಳುವ ಆತ ಕಾರಿನ ನಂಬರ್ ಪ್ಲೇಟ್‍ನಲ್ಲಿ ಬರೆದಿರುವ ಸಂಖ್ಯೆಯನ್ನು ನೀಡುತ್ತಾನೆ.

"ಎದುರು ಇನ್ನೊಂದು ವಾಹನವಿತ್ತು ಅದು ಯಾರದ್ದು?" ಎಂದು ಪೊಲೀಸ್ ಅಧಿಕಾರಿ ಕೇಳಿದಾಗ ಆತ "ನನಗೆ ಗೊತ್ತಿಲ್ಲ" ಎಂದು ಹೇಳುತ್ತಾನೆ.

ಆಗ ಪೊಲೀಸ್ ಅಧಿಕಾರಿ "ಆ ಥಾರ್ ವಾಹನದಲ್ಲಿ ಯಾರಿದ್ದರು ನನಗೆ ಇಷ್ಟೇ ಹೇಳಿ" ಎಂದಾಗ "ಭೈಯ್ಯಾ ಕೆ ಸಾಥ್ ಥೀ" ಎಂದು ಹೇಳುತ್ತಾನೆ ಆಗ ಪೊಲೀಸ್ ಅಧಿಕಾರಿ- "ಅಂದರೆ ಅವರೆಲ್ಲಾ ಅವರ ಜನರು" ಎಂದಾಗ "ಹೌದು, ಎಲ್ಲಾ ಅವರ ಜನರು" ಎಂದು ಆತ ಒಪ್ಪಿಕೊಳ್ಳುತ್ತಾನೆ.

ಕೇಂದ್ರ ಸಚಿವ ಅಜಯ್ ಮಿಶ್ರಾ ಅವರ ಪುತ್ರ ಆಶಿಷ್ ಮಿಶ್ರಾ ಆವರನ್ನು ʼಭೈಯ್ಯಾ' ಎನ್ನಲಾಗುತ್ತದೆ.

ಈಗಾಗಲೇ ವೈರಲ್ ಆಗಿರುವ ವೀಡಿಯೋದಲ್ಲಿ ಥಾರ್ ವಾಹನವು  ರೈತರ ಮೇಲೆ ಹರಿದರೆ ಅದರ ಹಿಂದೆ ಕಪ್ಪು ಬಣ್ಣದ ಫಾರ್ಚೂನರ್ ಸಾಗುತ್ತಿತ್ತು.

ಈ ಥಾರ್ ವಾಹನ ತನಗೆ ಸೇರಿದ್ದು ಎಂಬುದನ್ನು ಕೇಂದ್ರ ಸಚಿವರು ಒಪ್ಪಿದ್ದರೂ ಘಟನೆ ನಡೆದಾಗ ತಾವು ಅಥವಾ ತಮ್ಮ ಪುತ್ರ ಅಲ್ಲಿರಲಿಲ್ಲ ಎಂದು ಹೇಳಿಕೊಂಡಿದ್ದಾರೆ ಎಂದು ಎನ್‍ಡಿಟಿವಿ ವರದಿ ಮಾಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News