ಸ್ಟ್ಯಾನ್ ಸ್ವಾಮಿ ಸಾವು ಸಹಜವಲ್ಲ, ಸಾಂಸ್ಥಿಕ ಕೊಲೆ: ಎಲ್ಗಾರ್ ಪರಿಷದ್ ಪ್ರಕರಣದ ಸಹ-ಆರೋಪಿಗಳಿಂದ ಸಿಎಂ ಠಾಕ್ರೆಗೆ ಪತ್ರ

Update: 2021-10-06 07:57 GMT

ಮುಂಬೈ: ಭೀಮಾ ಕೋರೆಗಾಂವ್-ಎಲ್ಗಾರ್ ಪರಿಷದ್ ಪ್ರಕರಣದಲ್ಲಿ ಬಂಧಿತರಾಗಿರುವ ಮೂವರು  ಹೊರಾಟಗಾರರಾದ ಸುರೇಂದ್ರ ಗದ್ಲಿಂಗ್, ರಮೇಶ್ ಗೈಚೋರ್ ಹಾಗೂ ಸಾಗರ್ ಗೊರ್ಖೆ ಅವರು ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರಿಗೆ ಪತ್ರ ಬರೆದಿದ್ದು, ಬಂಧಿತ ಆದಿವಾಸಿ ಹಕ್ಕುಗಳ ಹೋರಾಟಗಾರ ಫಾ. ಸ್ಟಾನ್ ಸ್ವಾಮಿ ಅವರು ನೈಸರ್ಗಿಕವಾಗಿ  ಸಾವನ್ನಪ್ಪಿಲ್ಲ ಅದೊಂದು "ಸಾಂಸ್ಥಿಕ ಕೊಲೆ" ಎಂದು ಬಣ್ಣಿಸಿದ್ದಾರೆ. ಸ್ವಾಮಿ ಅವರನ್ನು ಜೈಲಿನಲ್ಲಿರುವಾಗ ನೋಡಿಕೊಂಡ ಪರಿಗೆ ಈ ಮೂವರೂ ಪ್ರತ್ಯಕ್ಷ ಸಾಕ್ಷಿಗಳಾಗಿದ್ದಾರೆ.

"ನಾವು ಫಾ ಸ್ವಾಮಿ ಜತೆಗೆ ಸಹ ಆರೋಪಿಗಳು ಹಾಗೂ ಅವರ ವಿರುದ್ಧದ ಷಡ್ಯಂತ್ರಗಳಿಗೆ ಪ್ರತ್ಯಕ್ಷ ಸಾಕ್ಷಿಗಳು" ಎಂದು  ಫಾ. ಸ್ವಾಮಿ ಅವರು ನಿಧನರಾದ ಎರಡು ದಿನಗಳ ನಂತರ, ಜುಲೈ 5, 2021ರಂದು ಬರೆಯಲಾದ ಈ ಪತ್ರದಲ್ಲಿ ತಿಳಿಸಲಾಗಿದೆ.

"ಅವರ ಸಾವು ನಮ್ಮಲ್ಲಿ ತಳಮಳ ಸೃಷ್ಟಿಸಿದೆ. ಪ್ರತಿಭಟನೆಯ ರೂಪದಲ್ಲಿ ನಾವು ಒಂದು ದಿನದ ಉಪವಾಸ ನಡೆಸಲು ನಿರ್ಧರಿಸಿದ್ದೇವೆ" ಎಂದು ಪತ್ರದಲ್ಲಿ ಬರೆಯಲಾಗಿದೆಯಲ್ಲದೆ ಸ್ವಾಮಿ ಅವರ ಸಾವಿಗೆ ತಲೋಜ ಕಾರಾಗೃಹದ ಅಧೀಕ್ಷಕ ಕೌಸ್ತುಭ್ ಕುರ್ಲೇಕರ್ ಕಾರಣ ಎಂದು ಬರೆಯಲಾಗಿದೆ. ಫಾ ಸ್ವಾಮಿಗೆ ಸೂಕ್ತ ಚಿಕಿತ್ಸೆ ನಿರಾಕರಿಸಿ ಅವರ ದೈಹಿಕ ಹಾಗೂ ಮಾನಸಿಕ ಆರೋಗ್ಯ ಇನ್ನಷ್ಟು  ಹದಗೆಡುವಂತೆ ಮಾಡಿದರು, ಅವರಿಗೆ ಸಹಾಯದ ಅಗತ್ಯವಿದ್ದಾಗ ಅವರನ್ನು ಏಕಾಂಗಿಯಾಗಿ ಇರಿಸಲಾಯಿತು ಹಾಗೂ  ತಪಾಸಣೆಯ ನೆಪದಲ್ಲಿ ಕಾರಾಗೃಹದ ಪ್ರವೇಶದ್ವಾರದಲ್ಲಿ ಎಲ್ಲರ ಎದುರೇ ಅವರನ್ನು ವಿವಸ್ತ್ರಗೊಳಿಸಲಾಗಿತ್ತು" ಎಂದು ಪತ್ರದಲ್ಲಿ ವಿವರಿಸಲಾಗಿದೆ.

"ಮೊದಲೇ ಪಾರ್ಕಿನ್ಸನ್ಸ್ ಕಾಯಿಲೆಯಿಂದ ಬಳಲುತ್ತಿದ್ದ ಅವರಿಗೆ ಜೈಲಿನಲ್ಲಿ ಸೂಕ್ತ ಚಿಕಿತ್ಸೆ ದೊರೆಯದೇ ಇದ್ದ ಕಾರಣ ಅವರ ಆರೋಗ್ಯ ಹದಗೆಟ್ಟಿತ್ತು, ನೀರು ಕುಡಿಯಲು ಸ್ಟ್ರಾ ಸಿಪ್ಪರ್ ಕೂಡ ನಿರಾಕರಿಸಲಾಯಿತು, ಕುರ್ಲೇಕರ್ ಅವರು ಉದ್ದೇಶಪೂರ್ವಕವಾಗಿ ಹೀಗೆ ಮಾಡಿದ್ದಾರೆ" ಎಂದು ಪತ್ರದಲ್ಲಿ ಬರೆಯಲಾಗಿದೆಯಲ್ಲದೆ ಕಿರುಕುಳದಿಂದಾಗಿಯೇ ಅವರಿಗೆ ಪಾಶ್ರ್ವವಾಯು ಉಂಟಾಗಿ ಸೂಕ್ತ ಚಿಕಿತ್ಸೆಯಿಲ್ಲದೆ ಅವರು ಮೃತಪಟ್ಟರು, ಕುರ್ಲೇಕರ್ ವಿರುದ್ಧ ಕೊಲೆ  ಪ್ರಕರಣ ದಾಖಲಿಸಬೇಕು, ಫಾ ಸ್ವಾಮಿ ಸಾವಿನ ಕುರಿತು ನ್ಯಾಯಾಂಗ ತನಿಖೆ ನಡೆಯಬೇಕು,"ಎಂದು ಪತ್ರದಲ್ಲಿ ಆಗ್ರಹಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News