ಕೋಲಾರ ಜಿಲ್ಲೆಯ ಮಕ್ಕಳಲ್ಲಿ ಹೆಚ್ಚಿದ ಅಪೌಷ್ಟಿಕತೆ

Update: 2021-10-10 05:12 GMT

ಕೋಲಾರ: ಕೋವಿಡ್‌ನ ಮೊದಲೆರಡು ಅಲೆಗಳು ಮನುಕುಲಕ್ಕೆ ಅಪಾರ ನಷ್ಟವನ್ನುಂಟು ಮಾಡಿದ್ದು, ಮಾತ್ರವಲ್ಲದೆ ಪಾಠವನ್ನೂ ಕಲಿಸಿದೆ. ಇನ್ನೇನು ಕೋವಿಡ್ 3ನೇ ಅಲೆ ಸಮೀಪಿಸುತ್ತಿದೆ. ಅದರಲ್ಲೂ 3ನೇ ಅಲೆ ಮಕ್ಕಳನ್ನು ಬಾಧಿಸುವ ಸಾಧ್ಯತೆಗೆ ಬಗ್ಗೆ ಈಗಾಗಲೇ ತಜ್ಞರು ಮುನ್ನೆಚ್ಚರಿಕೆ ನೀಡಿದ್ದಾರೆ. ಸರಕಾರವೂ ಈ ಹಿನ್ನೆಲೆಯಲ್ಲಿ ಸಾಕಷ್ಟು ಸಿದ್ಧತೆಗಳನ್ನು ಮಾಡಿಕೊಂಡಿದೆ. ಈ ಸಂದಭರ್ದಲ್ಲಿ ಪೌಷ್ಟಿಕ ಆಹಾರ ಸಿಗದಿರುವುದರಿಂದ ಅಂಗನವಾಡಿ ಮಕ್ಕಳಲ್ಲಿ ಅಪೌಷ್ಟಿಕತೆ ಪ್ರಮಾಣ ಹೆಚ್ಚಾಗಿ ಕಾಣಿಸಿಕೊಂಡಿರುವುದು ಇಲಾಖೆಯ ಅಂಕಿ-ಅಂಶಗಳಿಂದ ತಿಳಿದುಬಂದಿರವುದು ಸಾರ್ವಜನಿಕ ವಲಯದಲ್ಲಿ ಆತಂಕ ಸೃಷ್ಟಿಸಿದೆ.

ಕಳೆದ ಮಾರ್ಚ್ ತಿಂಗಳಲ್ಲಿ 2,658 ಸಾಧಾರಣ ಅಪೌಷ್ಟಿಕತೆ ಹಾಗೂ 93 ತೀವ್ರ ಅಪೌಷ್ಟಿಕತೆ ಮಕ್ಕಳಿದ್ದರು, ಇದೀಗ ಐದು ತಿಂಗಳ ಅವಧಿಯಲ್ಲಿ ಜಿಲ್ಲೆಯಲ್ಲಿ ಒಟ್ಟು 3,714 ಸಾಧಾರಣ ಅಪೌಷ್ಟಿಕತೆ ಹಾಗೂ 167 ಮಕ್ಕಳು ತೀವ್ರ ಅಪೌಷ್ಟಿಕತೆಗೆ ಒಳಗಾಗಿದ್ದಾರೆ ಎಂಬ ಮಾಹಿತಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಅಂಕಿ-ಅಂಶಗಳಿಂದ ಗೊತ್ತಾಗಿದೆ. ಈ ವರ್ಷದ ಎಪ್ರಿಲ್‌ನಿಂದ ಆಗಸ್ಟ್‌ವರೆಗಿನ ಅಧ್ಯಯನದಲ್ಲಿ ಈ ಕಳವಳಕಾರಿ ಅಂಶ ಮಕ್ಕಳ ರಕ್ಷಣೆಯ ಬಗ್ಗೆ ಜಾಗ್ರತೆ ವಹಿಸಲೇಬೇಕಾದ ಎಚ್ಚರಿಕೆಯನ್ನು ನೀಡುತ್ತಿದೆ.

ಆರು ವರ್ಷದೊಳಗಿನ ಮಕ್ಕಳಿಗೆ ಕಾಡುವ ಅಪೌಷ್ಟಿಕತೆ ನಿವಾರಣೆ ಮತ್ತು ವಿವಿಧ ಅನಾರೋಗ್ಯ ಸಮಸ್ಯೆಗಳನ್ನು ನಿವಾರಿಸಲು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಆರೋಗ್ಯ ಇಲಾಖೆ ಪ್ರತಿ ವರ್ಷ ನೂರಾರು ಕೋಟಿ ರೂ. ಖರ್ಚು ಮಾಡುತ್ತಿದೆ. ಆದರೂ ಅಪೌಷ್ಟಿಕತೆ ನಿವಾರಣೆ ಸಾಧ್ಯವಾಗುತ್ತಿಲ್ಲ. 2019-20 ನೇ ಸಾಲಿನಲ್ಲಿ 107 ಮಕ್ಕಳು ತೀವ್ರ ಅಪೌಷ್ಟಿಕತೆಗೆ ಒಳಗಾಗಿದ್ದರು. ಈ ವರ್ಷ ಎಪ್ರಿಲ್‌ನಿಂದ ಆಗಸ್ಟ್ ತಿಂಗಳವರೆಗೆ ತೀವ್ರ ಅಪೌಷ್ಟಿಕತೆಯಿಂದ ಬಳಲುತ್ತಿರುವ ಮಕ್ಕಳ ಸಂಖ್ಯೆ 167ಕ್ಕೆ ಏರಿಕೆಯಾಗಿರುವುದು ಆತಂಕ ಸೃಷ್ಟಿಸಿದೆ. ಒಟ್ಟು ಜಲ್ಲೆಯಲ್ಲಿ 3,714 ಅಪೌಷ್ಟಿಕ ಮಕ್ಕಳಿದ್ದು ಅಪೌಷ್ಟಿಕ ಮಕ್ಕಳ ಸಂಖ್ಯೆಯಲ್ಲಿ ಗಣನೀಯ ಏರಿಕೆ ಕಾಣಿಸಿದೆ.

ಅಪೌಷ್ಟಿಕತೆ ನಿವಾರಣೆಗೆ ಸರಕಾರದಿಂದ ಹಲವಾರು ಅಭಿಯಾನಗಳನ್ನು ನಡೆಸಲಾಗುತ್ತಿದೆ. ಅಲ್ಲದೆ ಪೌಷ್ಟಿಕ ಪುನಃಶ್ಚೇತನ ಕೇಂದ್ರಗಳೂ ಕಾರ್ಯನಿರ್ವಹಿಸುತ್ತಿವೆ. ಆದರೂ ಸಹ ಮಕ್ಕಳಲ್ಲಿನ ಅಪೌಷ್ಠಿಕತೆ ಸಮಸ್ಯೆ ನಿಯಂತ್ರಣಕ್ಕೆ ಬಾರದಿರುವುದು ಚಿಂತಿಸಬೇಕಾದ ವಿಷಯವಾಗಿದೆ. ಐಸಿಡಿಎಸ್ ಯೋಜನೆಯಡಿಯಲ್ಲಿ 6 ವರ್ಷದೊಳಗಿನ ಮಕ್ಕಳಿಗೆ ಅಕ್ಕಿ ಕಿಚಡಿ, ರವೆ ಲಡ್ಡು, ಮೊಳಕೆ ಬರಿಸಿದ ಹೆಸರುಕಾಳು, ಚಿತ್ರಾನ್ನ, ಊಟ ಸೇರಿದಂತೆ ಪೂರಕ ಪೌಷ್ಟಿಕ ಆಹಾರ ನೀಡಲಾಗುತ್ತಿತ್ತು. ಕೋವಿಡ್ ಹಿಂದಿನಿಂದಲೂ ಕ್ಷೀರಭಾಗ್ಯ ಯೋಜನೆಯಡಿ ವಾರದಲ್ಲಿ 5 ದಿನ 150 ಮಿ.ಲೀ. ಹಾಲು, ಹಾಗೂ 2 ದಿನ ಮೊಟ್ಟೆ ನೀಡಲಾಗುತ್ತಿತ್ತು. ಕೋವಿಡ್ ನಂತರದ ದಿನಗಳಲ್ಲಿ ಒಂದನೇ ಅಲೆ ಮತ್ತು ಎರಡನೇ ಅಲೆ ಸೃಷ್ಟಿಸಿದ ಅವಾಂತರಗಳು ಮಾನವ ಕುಲವನ್ನೇ ನಡುಗಿಸಿತ್ತು. ಇದೀಗ 3ನೇ ಅಲೆ ಮಕ್ಕಳಲ್ಲಿ ಕಾಣಿಸಿಕೊಳ್ಳುವ ಮುನ್ನೆಚ್ಚರಿಕೆಯನ್ನು ಗಮನದಲ್ಲಿಟ್ಟುಕೊಂಡು ಅಂಗನವಾಡಿ ಕೇಂದ್ರಳನ್ನು ಮುಚ್ಚಲಾಗಿದೆ. ಪರ್ಯಾಯವಾಗಿ ಮಕ್ಕಳ ಮನೆಗೆ ಅಹಾರ ಧಾನ್ಯ ವಿತರಿಸಲಾಗುತ್ತಿದೆ. ಅದೇ ರೀತಿ ಗರ್ಭಿಣಿಯರಿಗೆ ಮತ್ತು ಬಾಣಂತಿಯರಿಗೂ ಸಹ ಪೌಷ್ಟಿಕ ಆಹಾರ ನೀಡಲಾಗುತ್ತಿದೆ. ಮಕ್ಕಳ ಆಹಾರ ಮನೆಗಳಿಗೆ ನೀಡುತ್ತಿರುವ ಕಾರಣ ಕುಟುಂಬದ ಸದಸ್ಯರು ಸಹ ಅದನ್ನು ಬಳಸುತ್ತಿರುವುದರಿಂದ ಮಕ್ಕಳಿಗೆ ಪೌಷ್ಟಿಕ ಆಹಾರ ಸಿಗುತ್ತಿಲ್ಲವೆಂಬುದು ಅಂಗನವಾಡಿ ಕಾರ್ಯಕರ್ತರ ಅಭಿಪ್ರಾಯ.

ಮಕ್ಕಳಲ್ಲಿ ತೀವ್ರ ಅಪೌಷ್ಟಿಕತೆ ಹೆಚ್ಚುವ ಸಾಧ್ಯತೆ: 
ಇನ್ನು ಮಕ್ಕಳ ತೂಕ, ಎತ್ತರವನ್ನು ಪ್ರತಿ ತಿಂಗಳು ಪರಿಶೀಲಿಸುವುದರೊಂದಿಗೆ ಸಮಸ್ಯೆ ಎದುರಿಸುತ್ತಿರುವ ಮಕ್ಕಳಿಗೆ ಅಂಗನವಾಡಿ ಕೇಂದ್ರಗಳಲ್ಲೇ ಅಗತ್ಯ ಚಿಕಿತ್ಸೆ ಒದಗಿಸಲಾಗುತ್ತಿತ್ತು. ಆದರೆ, ಕೋವಿಡ್ ಕಾಣಿಸಿಕೊಂಡ ಬಳಿಕ ತೂಕ ಮತ್ತು ಎತ್ತರದ ಅಳತೆ ಹಾಗೂ ಆರೋಗ್ಯ ತಪಾಸಣೆ ನಡೆಸಲು ಆಗುತ್ತಿಲ್ಲ. ಆದರೂ ಮನೆ ಮನೆಗೆ ಅಂಗನವಾಡಿ ಕಾರ್ಯಕರ್ತೆಯರು ಬೇಟಿ ನೀಡಿ ಮಾಹಿತಿ ಸಂಗ್ರಹ ಮಾಡುತ್ತಿದ್ದಾರಾದರೂ ಸರಿಯಾದ ರೀತಿಯಲ್ಲಿ ವಾಸ್ತವಾಂಶ ದಾಖಲಿಸಿಕೊಳ್ಳಲು ಆಗುತ್ತಿಲ್ಲ. ಒಂದು ವೇಳೆ ಅಂಗನವಾಡಿಗಳು ಪ್ರಾರಂಭವಾದರೆ ಮಕ್ಕಳಲ್ಲಿ ಸಮಸ್ಯೆಗಳು ಕಾಣಿಸಿಕೊಳ್ಳುವ ಸಾಧ್ಯತೆಯನ್ನೂ ಅಧಿಕಾರಿಗಳು ತಳ್ಳಿಹಾಕುತ್ತಿಲ್ಲ. ಕೋವಿಡ್ ಮೂರನೇ ಅಲೆ ಆರಂಭವಾಗುವ ಮುನ್ನವೇ ಮಕ್ಕಳಲ್ಲಿ ಪೌಷ್ಟಿಕತೆ ಹೆಚ್ಚಿಸುವ ಅಗತ್ಯದ ಬಗ್ಗೆ ಇನ್ನಿಲ್ಲದ ಸರ್ಕಸ್ ಮಾಡುತ್ತಿದ್ದರೂ ಅಪೌಷ್ಟಿಕತೆ ಮಕ್ಕಳಲ್ಲಿ ಹೆಚ್ಚುವ ಸಾಧ್ಯತೆಯನ್ನು ಗಂಭೀರವಾಗಿ ಪರಿಗಣಿಸುವ ಅಗತ್ಯವಿದೆ.

ಕೋವಿಡ್ ಸಮಸ್ಯೆ ಇರುವ ಕಾರಣ ಆಹಾರ ಧಾನ್ಯವನ್ನು ಮಕ್ಕಳ ಮನೆಗಳಿಗೆ ಪೂರೈಕೆ ಮಾಡಲಾಗುತ್ತಿದೆ. ಮಕ್ಕಳು ಅಂಗನವಾಡಿಗೆ ಬರುತ್ತಿದ್ದಾಗ ಎಲ್ಲವೂ ಸರಿಯಾಗಿ ನಿರ್ವಹಣೆ ಮಾಡಲಾಗುತ್ತಿತ್ತು. ಈಗ ಕೋವಿಡ್ ಪ್ರಯುಕ್ತ ಟೇಕ್ ಹೋಂ ಫುಡ್‌ನಿಂದ ಅಂಗನವಾಡಿಯಲ್ಲಿ ನೀಡುವ ಆಹಾರವನ್ನು ಮಕ್ಕಳಿಗೆ ಮನೆಯ ಊಟದೊಂದಿಗೆ ಹೆಚ್ಚುವರಿಯಾಗಿ ಪೂರೈಸಬೇಕು, ಮಕ್ಕಳ ಹಿತದೃಷ್ಟಿಯಿಂದ ಪೋಷಕರು ಈ ನಿಟ್ಟಿನಲ್ಲಿ ಗಮನಹರಿಸಬೇಕು. ಇಲಾಖೆಯಿಂದಲೂ ಈ ನಿಟ್ಟಿನಲ್ಲಿ ಕಾರ್ಯೋನ್ಮುಖವಾಗಿದ್ದು, ಶೀಘ್ರದಲ್ಲೇ ಸಮಸ್ಯೆಯನ್ನು ಹತೋಟಿಗೆ ತರಲು ಶ್ರಮಿಸುತ್ತಿದ್ದೇವೆ.
-ಎಂ.ಜಿ.ಪಾಲಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕರು.

ಅಪೌಷ್ಟಿಕತೆಗೆ ಬಡತನಕ್ಕಿಂತ ಅರಿವಿನ ಕೊರತೆಯೇ ಪ್ರಮುಖ ಕಾರಣವಾಗಿದೆ. ಪೋಷಕರಿಗೆ ಅರಿವು ಮೂಡಿಸುವ ಮೂಲಕ ಅಪೌಷ್ಟಿಕತೆಯನ್ನು ಹತೋಟಿಗೆ ತರಬಹುದಾಗಿದೆ. ರೋಗನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳಲು ಉತ್ತಮ ಆಹಾರ ಸೇವಿಸಬೇಕು.
- ಡಾ. ಬಾಲಚಂದ್ರ, ಮಕ್ಕಳ ತಜ್ಞ

ಮಕ್ಕಳಿಗೆ ಅಂಗನವಾಡಿಯಲ್ಲಿ ನೀಡುತ್ತಿದ್ದ ಆಹಾರ ತಾಜಾ ಹಾಗೂ ಪೌಷ್ಟಿಕವಾಗಿತ್ತು. ಇದೀಗ ಮನೆಗಳಿಗೆ ಆಹಾರ ಧಾನ್ಯ ನೀಡುತ್ತಿರುವ ಕಾರಣ ಮನೆಯ ಮಂದಿಯೆಲ್ಲರೂ ಅದನ್ನು ಉಪಯೋಗಿಸುತ್ತಿರುವ ಬಗ್ಗೆ ತಿಳಿದು ಬಂದಿದೆ. ಇದರಿಂದ ಮಗುವಿಗೆ ಸಿಗಬೇಕಾದ ಹೆಚ್ಚುವರಿ ಪೌಷ್ಟಿಕಾಂಶ ಸಿಗದೆ ಇರುವ ಕಾರಣ ಅಪೌಷ್ಟಿಕ ಮಕ್ಕಳ ಸಂಖ್ಯೆಯಲ್ಲಿ ಏರಿಕೆ ಕಾಣಿಸುತ್ತಿದೆ.
- ರಾಜಮ್ಮ, ಅಂಗನವಾಡಿ ಕಾರ್ಯಕರ್ತೆ

Writer - ಸಿ.ವಿ. ನಾಗರಾಜ್

contributor

Editor - ಸಿ.ವಿ. ನಾಗರಾಜ್

contributor

Similar News