ಟ್ವೆಂಟಿ-20 ವಿಶ್ವಕಪ್: ಚಾಂಪಿಯನ್ ತಂಡಕ್ಕೆ 1.6 ಮಿಲಿಯನ್ ಡಾಲರ್ ಬಹುಮಾನ

Update: 2021-10-10 10:40 GMT

ಹೊಸದಿಲ್ಲಿ: ಓಮಾನ್ ಹಾಗೂ  ಯುಎಇಯಲ್ಲಿ ಅಕ್ಟೋಬರ್ 17 ರಂದು ಆರಂಭವಾಗಲಿರುವ ಪುರುಷರ ಟ್ವೆಂಟಿ- 20 ವಿಶ್ವಕಪ್ ಗೆ ಬಹುಮಾನದ ಮೊತ್ತದ ವಿವರಗಳನ್ನು ಅಂತರ್ ರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ) ರವಿವಾರ ಪ್ರಕಟಿಸಿದೆ.

ಈ ಕುರಿತು ಪತ್ರಿಕಾ ಪ್ರಕಟನೆ ಹೊರಡಿಸಿದ ಐಸಿಸಿ,  ಪಂದ್ಯಾವಳಿಯಲ್ಲಿ ವಿಜೇತರಾದವರು 1.6 ಮಿಲಿಯನ್ ಯುಎಸ್ ಡಾಲರ್ ಚೆಕ್ ಅನ್ನು ಸ್ವೀಕರಿಸಲಿದ್ದಾರೆ ಹಾಗೂ  ರನ್ನರ್ಸ್ ಅಪ್ ಇದರ ಅರ್ಧದಷ್ಟು ಮೊತ್ತವನ್ನು ಪಡೆಯುತ್ತಾರೆ ಎಂದು ಬಹಿರಂಗಪಡಿಸಿದೆ

ಅಕ್ಟೋಬರ್ 17 ರಿಂದ ನವೆಂಬರ್ 14 ರವರೆಗೆ ನಡೆಯಲಿರುವ ಪುರುಷರ ಟಿ -20 ವಿಶ್ವಕಪ್‌ನಲ್ಲಿ 16 ತಂಡಗಳು ಭಾಗವಹಿಸಲಿವೆ.

" ನವೆಂಬರ್ 10 ಹಾಗೂ 11 ರಂದು ನಡೆಯುವ ಸೆಮಿ ಫೈನಲ್ ಪಂದ್ಯದಲ್ಲಿ ಸೋಲುವ ತಂಡಗಳು ತಲಾ  400,000 ಯುಎಸ್ ಡಾಲರ್ ಪಡೆಯುತ್ತವೆ. 2016 ರಂತೆ ಸೂಪರ್ 12 ಹಂತದಲ್ಲಿ ತಂಡಗಳು ಗೆಲ್ಲುವ ಪ್ರತಿಯೊಂದು ಪಂದ್ಯಕ್ಕೂ ಬೋನಸ್ ಮೊತ್ತ ಇರುತ್ತದೆ. ಆ ಹಂತದಲ್ಲಿ 30 ಪಂದ್ಯಗಳನ್ನು ಗೆಲ್ಲುವ ತಂಡವು  ಈ ಬಾರಿ  40,000 ಯುಎಸ್ ಡಾಲರ್ ಗೆಲ್ಲುತ್ತದೆ’’ ಎಂದು ಐಸಿಸಿ ಮಾಧ್ಯಮ ಪ್ರಕಟನೆಯಲ್ಲಿ ತಿಳಿಸಿದೆ.

ಎಂಟು ತಂಡಗಳಾದ ಅಫ್ಘಾನಿಸ್ತಾನ, ಆಸ್ಟ್ರೇಲಿಯಾ, ಇಂಗ್ಲೆಂಡ್, ಭಾರತ, ನ್ಯೂಝಿಲ್ಯಾಂಡ್, ಪಾಕಿಸ್ತಾನ, ದಕ್ಷಿಣ ಆಫ್ರಿಕಾ ಹಾಗೂ  ವೆಸ್ಟ್ ಇಂಡೀಸ್ ಸೂಪರ್ 12 ಹಂತದಿಂದ ತಮ್ಮ ಅಭಿಯಾನವನ್ನು ಆರಂಭಿಸುತ್ತವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News