ಸ್ಯಾಫ್ ಚಾಂಪಿಯನ್‌ಶಿಪ್‌: 77 ನೇ ಗೋಲು ಗಳಿಸಿ ಫುಟ್ಬಾಲ್ ದಿಗ್ಗಜ ಪೀಲೆ ದಾಖಲೆ ಸರಿಗಟ್ಟಿದ ಸುನಿಲ್ ಚೆಟ್ರಿ

Update: 2021-10-11 07:10 GMT

ಹೊಸದಿಲ್ಲಿ: ಸ್ಯಾಫ್ ಚಾಂಪಿಯನ್‌ಶಿಪ್‌ನಲ್ಲಿ ನೇಪಾಳದ ವಿರುದ್ದ 83 ನೇ ನಿಮಿಷದಲ್ಲಿ ಗೋಲು ಗಳಿಸಿದ ಭಾರತದ ನಾಯಕ ಸುನೀಲ್ ಚಟ್ರಿ ಅವರು ತಂಡವು ಟೂರ್ನಿಯಿಂದ ನಿರ್ಗಮಿಸುವುದರಿಂದ ಪಾರು ಮಾಡಿದರು. ಈ ಹಾದಿಯಲ್ಲಿ ವೃತ್ತಿಜೀವನದಲ್ಲಿ 77 ನೇ ಅಂತಾರಾಷ್ಟ್ರೀಯ ಗೋಲು ಗಳಿಸಿದ ಸುನೀಲ್ ಚೆಟ್ರಿ ಅವರು ಫುಟ್ಬಾಲ್ ದಿಗ್ಗಜ ಪೀಲೆ ದಾಖಲೆಯನ್ನು ಸರಿಗಟ್ಟಿದರು.

ರವಿವಾರ ನಡೆದ ಚಾಂಪಿಯನ್ ಶಿಪ್ ಪಂದ್ಯದಲ್ಲಿ ಭಾರತವು ನೇಪಾಳವನ್ನು 1-0 ಗೋಲುಗಳಿಂದ ಸೋಲಿಸಿತು.

37 ರ ವಯಸ್ಸಿನ ಚೆಟ್ರಿ ಭಾರತದ ಪರ ಆಡಿರುವ ತನ್ನ 123 ನೇ ಪಂದ್ಯದಲ್ಲಿ ಬ್ರೆಝಿಲಿಯನ್ ದಿಗ್ಗಜ ಪೀಲೆ  (92 ಪಂದ್ಯಗಳಿಂದ 77 ಗೋಲುಗಳು) ದಾಖಲೆ ಸರಿಗಟ್ಟಿದರು. ಕ್ರಿಸ್ಟಿಯಾನೊ ರೊನಾಲ್ಡೊ (112) ಹಾಗೂ  ಲಿಯೊನೆಲ್ ಮೆಸ್ಸಿ (79) ಅವರ ಬಳಿಕ  ಸಕ್ರಿಯ ಫುಟ್ಬಾಲ್ ಆಟಗಾರರಲ್ಲಿ ಗರಿಷ್ಠ ಗೋಲುಗಳನ್ನು ಗಳಿಸಿ ಮೂರನೇ ಸ್ಥಾನದಲ್ಲಿರುವ ಯುಎಇಯ ಅಲಿ ಮಬ್ಖೌತ್ ರೊಂದಿಗೆ ಸ್ಥಾನ ಹಂಚಿಕೊಂಡಿದ್ದಾರೆ.

ಏಳು ಬಾರಿಯ ಚಾಂಪಿಯನ್ ಭಾರತವು ಐದು ತಂಡಗಳ ಪಟ್ಟಿಯಲ್ಲಿ ಮೂರು ಪಂದ್ಯಗಳಿಂದ ಐದು ಅಂಕಗಳೊಂದಿಗೆ ಮೂರನೇ ಸ್ಥಾನದಲ್ಲಿದೆ. ಮಾಲ್ಡೀವ್ಸ್ (ಮೂರು ಪಂದ್ಯಗಳಿಂದ ಆರು ಅಂಕಗಳು) ಹಾಗೂ ನೇಪಾಳ (ಮೂರು ಪಂದ್ಯಗಳಿಂದ ಆರು ಅಂಕಗಳು) ಬಳಿಕದ ಸ್ಥಾನದಲ್ಲಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News