ಲಸಿಕೆ ನೀಡುವ ಸಿರಿಂಜ್ ಗಳಿಗೆ ಬೇಡಿಕೆ ಸಲ್ಲಿಸುವಲ್ಲಿ ಭಾರತ ಮಾಡಿದ ವಿಳಂಬಕ್ಕಾಗಿ ಈಗ ಜಗತ್ತು ಬೆಲೆ ತೆರಲಿದೆ

Update: 2021-10-11 12:58 GMT

ಹೊಸದಿಲ್ಲಿ,ಅ.11: ದೇಶದಲ್ಲಿ ಕೋವಿಡ್ ಲಸಿಕೆ ಅಭಿಯಾನ ಆರಂಭಗೊಂಡ ಬಳಿಕ ಲಸಿಕೆ ಕೊರತೆಯ ಬಗ್ಗೆ ಆಗಾಗ್ಗೆ ಮಾಧ್ಯಮಗಳು ವರದಿ ಮಾಡುತ್ತಲೇ ಇದ್ದವು. ಲಸಿಕೆಯ ಮೊದಲ ಡೋಸ್ ಪಡೆದಿರುವ ಹೆಚ್ಚಿನ ಭಾರತೀಯರು ಈಗಲೂ ಎರಡನೇ ಡೋಸ್ಗಾಗಿ ಕಾಯುತ್ತಿದ್ದಾರೆ. ಆದರೆ ಅಭಿಯಾನ ನಿಧಾನಗೊಳ್ಳಲು ಲಸಿಕೆಯ ಕೊರತೆಯೊಂದೇ ಕಾರಣವಲ್ಲ,ಅದನ್ನು ನೀಡಲು ಬಳಸುವ ಸಿರಿಂಜ್ ಗಳ ಕೊರತೆಯೂ ಇದರಲ್ಲಿ ಪ್ರಮುಖ ಪಾತ್ರವನ್ನು ಹೊಂದಿದೆ ಎನ್ನುವುದನ್ನು ಸುದ್ದಿ ಜಾಲತಾಣ   Scroll.in ನ ತನಿಖಾ ವರದಿಯು ಬಯಲುಗೊಳಿಸಿದೆ.

ಈ ವರ್ಷದ ಜನವರಿಯಲ್ಲಿ ಭಾರತದ ಸಾಮೂಹಿಕ ಪ್ರತಿರಕ್ಷಣಾ ಕಾರ್ಯಕ್ರಮವು ಆರಂಭಗೊಂಡಾಗ ಅಭಿಯಾನದಲ್ಲಿ ಕನ್ವೆನ್ಶನಲ್ ಡಿಸ್ಪೋಸೇಬಲ್ ಸಿರಿಂಜ್ (ಸಿಡಿಎಸ್) ಅಥವಾ ಬಳಸಿ ಎಸೆಯಬಹುದಾದ ಸಾಂಪ್ರದಾಯಿಕ ಸಿರಿಂಜ್ ಗಳ ಬಳಕೆಗೆ ಅವಕಾಶ ನೀಡುವ ಅಗತ್ಯವನ್ನು ಬಿಂಬಿಸಿ ಸಿರಿಂಜ್ ಗಳನ್ನು ತಯಾರಿಸುವ ಹಲವಾರು ಕಂಪನಿಗಳು ಆರೋಗ್ಯ ಸಚಿವಾಲಯಕ್ಕೆ ಪತ್ರಗಳನ್ನು ಬರೆದಿದ್ದವು.

2005ರಿಂದ ಭಾರತದ ಸಾಮೂಹಿಕ ಪ್ರತಿರಕ್ಷಣಾ ಕಾರ್ಯಕ್ರಮಗಳಲ್ಲಿ ಆಟೊ-ಡಿಸೇಬಲ್ ಸಿರಿಂಜ್(ಎಡಿಎಸ್) ಅಥವಾ ಸ್ವಯಂ ನಿಷ್ಕ್ರಿಯಗೊಳ್ಳುವ ಸಿರಿಂಜ್ ಗಳನ್ನು ಮಾತ್ರ ಬಳಸಲಾಗುತ್ತಿದೆ. ಈ ಸಿರಿಂಜ್ ಗಳನ್ನು ಒಮ್ಮೆ ಬಳಸಿದ ಬಳಿಕ ಅವುಗಳ ಸೇಫ್ಟಿ ಲಾಕ್ ಮುರಿದುಹೋಗುತ್ತದೆ ಮತ್ತು ಅವುಗಳನ್ನು ಮರುಬಳಕೆ ಮಾಡಲು ಸಾಧ್ಯವಿಲ್ಲ. ಸಿಡಿಎಸ್ಗಳನ್ನು ಮರುಬಳಕೆ ಮಾಡಬಹುದು,ಆದರೆ ಅವು ಸೋಂಕಿನ ಅಪಾಯವನ್ನುಂಟು ಮಾಡುತ್ತವೆ.

 ಲಸಿಕೆ ಅಭಿಯಾನಕ್ಕೆ ಅಗತ್ಯವಿರುವ ಬೃಹತ್ ಪ್ರಮಾಣದಲ್ಲಿ ಎಡಿಎಸ್ಗಳನ್ನು ತಯಾರಿಸುವ ಸಾಮರ್ಥ್ಯವನ್ನು ಭಾರತವು ಹೊಂದಿಲ್ಲ ಎಂದು ಕಂಪನಿಗಳು ತಮ್ಮ ಪತ್ರಗಳಲ್ಲಿ ಬೆಟ್ಟು ಮಾಡಿದ್ದವು. ಜನವರಿ ಕೊನೆಯ ವೇಳೆ ಆರೋಗ್ಯ ಸಚಿವಾಲಯವು ಈ ಕಂಪನಿಗಳ ಸಭೆಯೊಂದನ್ನು ಕರೆದಿತ್ತು.

 ‘ಸಭೆ ನಡೆದಿತ್ತಷ್ಟೇ,ಆದರೆ ಸಭೆಯ ಬಳಿಕ ಸಚಿವಾಲಯವು ಯಾವುದೇ ಅಗತ್ಯ ಕ್ರಮಗಳನ್ನು ಕೈಗೊಂಡಿರಲಿಲ್ಲ. ಅಧಿಕೃತವಾಗಿ ಯಾವುದೇ ಬೇಡಿಕೆಯನ್ನು ಸಲ್ಲಿಸಿರಲಿಲ್ಲ. ನಾವು ಸರಕಾರಕ್ಕೆ ಯಾವುದೇ ಪ್ರಮಾಣದಲ್ಲಿ ಸಿರಿಂಜ್ ಗಳ ಪೂರೈಕೆಯನ್ನು ನಿರ್ಬಂಧಿಸುವಂತಿರಲಿಲ್ಲ ಅಥವಾ ಉತ್ಪಾದನಾ ಸಾಮರ್ಥ್ಯವನ್ನು ಹೆಚ್ಚಿಸುವಂತಿರಲಿಲ್ಲ ’ ಎಂದು ಸಿಡಿಎಸ್ಗಳನ್ನು ತಯಾರಿಸುವ ಬಯೊ-ಮೆಡ್ ಹೆಲ್ತ್ಕೇರ್ ಪ್ರಾಡಕ್ಟ್ಸ್ ಲಿ.ನ ಆಡಳಿತ ನಿರ್ದೇಶಕ ದೀಪಕ್ ಅರೋರಾ ತಿಳಿಸಿದರು.

ಲಸಿಕೆ ಅಭಿಯಾನ ತೀವ್ರಗೊಳ್ಳುತ್ತಿದ್ದಂತೆ ಜು.1ರಂದು ಸರಕಾರವು 125 ಕೋ.ಎಡಿಎಸ್ಗಳ ಪೂರೈಕೆಗಾಗಿ ಬಿಡ್ಗಳನ್ನು ಆಹ್ವಾನಿಸಿತ್ತು. ಆದರೆ ಸಾಕಷ್ಟು ಬಿಡ್ ದಾರರು ಪಾಲ್ಗೊಂಡಿರಲಿಲ್ಲ ಮತ್ತು ಸರಕಾರಕ್ಕೆ 10 ಕೋ. ಸಿರಿಂಜ್ ಗಳಿಗಾಗಿ ಒಂದು ಬೇಡಿಕೆಯನ್ನು ಸಲ್ಲಿಸಲು ಮಾತ್ರ ಸಾಧ್ಯವಾಗಿತ್ತು.

ಕೊನೆಗೂ ಅದೇ ತಿಂಗಳು ಸರಕಾರವು ಜನವರಿಯಲ್ಲಿ ಸಿರಿಂಜ್ ತಯಾರಕರು ತನಗೆ ನೀಡಿದ್ದ ಸಲಹೆಯನ್ನು ಒಪ್ಪಿಕೊಂಡಿತ್ತು. ಸಿಡಿಎಸ್ಗಳನ್ನು ತಯಾರಿಸುವ ಕಂಪನಿಗಳೂ ಬಿಡ್ ಗಳನ್ನು ಸಲ್ಲಿಸಲು ಸಾಧ್ಯವಾಗುವಂತೆ ಮಾನದಂಡಗಳನ್ನು ಸಡಿಲಿಸಿದ್ದ ಸರಕಾರವು 90 ಕೋ.ಸಿರಿಂಜ್ ಗಳ ಪೂರೈಕೆಗಾಗಿ ಬಿಡ್ಗಳನ್ನು ಆಹ್ವಾನಿಸಿತ್ತು. ಆದರೆ ಆ ವೇಳೆಗಾಗಲೇ ಹೆಚ್ಚಿನ ಕಂಪನಿಗಳು ಇತರ ದೇಶಗಳೊಂದಿಗೆ ರಫ್ತು ಒಪ್ಪಂದಗಳನ್ನು ಮಾಡಿಕೊಂಡಿದ್ದವು.

ಸರಕಾರವು ತಾನು ಕೋರಿದ್ದ 90 ಕೋ.ಸಿರಿಂಜ್ ಗಳ ಪೈಕಿ ಕೇವಲ 68-70 ಕೋ.ಸಿರಿಂಜ್ ಗಳ ಪೂರೈಕೆಗೆ ಬೇಡಿಕೆ ಸಲ್ಲಿಸಲು ಸಾಧ್ಯವಾಗಿತ್ತು. ಎಷ್ಟು ಸಿರಿಂಜ್ ಗಳನ್ನು ಖರೀದಿಸಲಾಗಿದೆ ಎನ್ನುವುದನ್ನು ತಿಳಿಸಲು ಖರೀದಿ ಪ್ರಕ್ರಿಯೆಯಲ್ಲಿ ಭಾಗಿಯಾಗಿದ್ದ ಹಿರಿಯ ಸರಕಾರಿ ಅಧಿಕಾರಿಗಳು ನಿರಾಕರಿಸಿದ್ದಾರೆ.

ಸಿರಿಂಜ್ ಗಳ ಕೊರತೆಯು ಅಂತಿಮವಾಗಿ ಸರಕಾರವು ಕಳೆದ ವಾರ ಸಿರಿಂಜ್ ಗಳ ರಫ್ತನ್ನು ನಿರ್ಬಂಧಿಸಲು ಕಾರಣವಾಗಿದೆ. ಭಾರತೀಯ ತಯಾರಕರು 149 ದೇಶಗಳಿಗೆ ಸಿರಿಂಜ್ ಗಳನ್ನು ರಫ್ತು ಮಾಡುತ್ತಿದ್ದು,ಹೆಚ್ಚಿನ ದೇಶಗಳು ಕೋವಿಡ್ ಲಸಿಕೆ ಅಭಿಯಾನಗಳು ಮತ್ತು ಇತರ ವೈದ್ಯಕೀಯ ಅಗತ್ಯಗಳಿಗಾಗಿ ಈ ಸಿರಿಂಜ್ ಗಳನ್ನೇ ಅವಲಂಬಿಸಿರುವುದರಿಂದ ಭಾರತ ಸರಕಾರದ ಈ ಕ್ರಮವು ವಿಶ್ವಾದ್ಯಂತ ಕಳವಳಗಳನ್ನುಂಟು ಮಾಡಿದೆ.

ಭಾರತದಲ್ಲಿ ಸಿರಿಂಜ್ ಗಳ ಕೊರತೆಯಿಂದಾಗಿ ಪುಣೆ ಮತ್ತು ಕೊಚ್ಚಿಯಂತಹ ನಗರಗಳಲ್ಲಿ ಲಸಿಕೆ ನೀಡುವುದನ್ನೇ ತಾತ್ಕಾಲಿಕವಾಗಿ ಒಂದು ದಿನ ಸ್ಥಗಿತಗೊಳಿಸುವಂತಾಗಿತ್ತು. ಆದರೆ ಸಿರಿಂಜ್ ಗಳ ಕೊರತೆ ಮಾಧ್ಯಮಗಳಲ್ಲಿ ಸುದ್ದಿಯೇ ಆಗಿರಲಿಲ್ಲ. ರಫ್ತು ನಿರ್ಬಂಧ ಕ್ರಮವನ್ನು ಸಮರ್ಥಿಸಿಕೊಂಡಿರುವ ಸರಕಾರವು ಭಾರತೀಯರ ಅಗತ್ಯಗಳಿಗೆ ಆದ್ಯತೆ ನೀಡುವುದು ತನಗೆ ಮುಖ್ಯವಾಗಿದೆ ಎಂದು ಪ್ರತಿಪಾದಿಸಿದೆ.‘ರಫ್ತು ನಿರ್ಬಂಧವು ತಾತ್ಕಾಲಿಕವಾಗಿದ್ದು,ಅದು ಸಿರಿಂಜ್ ಗಳ ದಾಸ್ತಾನು ಸೃಷ್ಟಿಸುವಲ್ಲಿ ನೆರವಾಗಲಿದೆ ’ಎಂದು ಆರೋಗ್ಯ ಸಚಿವಾಲಯದ ಹಿರಿಯ ಅಧಿಕಾರಿಯೋರ್ವರು ಸಮಜಾಯಿಷಿ ನೀಡಿದರು.

ಆದರೆ Scroll.in ಸಿರಿಂಜ್ ತಯಾರಕರು ಸರಕಾರಕ್ಕೆ ಬರೆದಿದ್ದ ಪತ್ರಗಳನ್ನು ಮತ್ತು ಈ ವರ್ಷದಲ್ಲಿ ಹೊರಡಿಸಲಾಗಿದ್ದ ಸರಣಿ ಟೆಂಡರ್ ದಾಖಲೆಗಳನ್ನು ಪರಿಶೀಲಿಸಿದ್ದು, ಸರಕಾರವು ದೇಶಿಯ ಬೇಡಿಕೆ ಮತ್ತು ಎಡಿಎಸ್ಗಳ ಲಭ್ಯತೆಯ ವೌಲ್ಯಮಾಪನವನ್ನು ನಡೆಸಿ ಸಿಡಿಎಸ್ಗಳಿಗಾಗಿ ಮುಂಗಡ ಬೇಡಿಕೆಗಳನ್ನು ಸಲ್ಲಿಸಿದ್ದರೆ ಭಾರತದ ಅಗತ್ಯಗಳನ್ನು ಈಡೇರಿಸಲು ಮತ್ತು ಇತರ ದೇಶಗಳಿಗೆ ಸಿರಿಂಜ್ ಗಳನ್ನು ಪೂರೈಸಲು ಭಾರತೀಯ ಕಂಪನಿಗಳಿಗೆ ಸಾಧ್ಯವಾಗುತ್ತಿತ್ತು ಎನ್ನುವುದನ್ನು ಅವು ತೋರಿಸಿವೆ.

ಸರಕಾರವು ಸಿರಿಂಜ್ ಗಳ ರಫ್ತನ್ನು ನಿರ್ಬಂಧಿಸಿರುವ ಕ್ರಮವು ಅವುಗಳನ್ನೇ ನಂಬಿಕೊಂಡಿರುವ ಬ್ರಾಜಿಲ್, ಅಜೆಂಟೀನಾ, ಯುಎಇ, ರಷ್ಯಾ, ಜರ್ಮನಿಯಂತಹ ದೇಶಗಳ ಮೇಲೆ ಪ್ರತಿಕೂಲ ಪರಿಣಾಮ ಬೀರುವುದು ಮಾತ್ರವಲ್ಲ,ಜಾಗತಿಕ ಸಿರಿಂಜ್ ಮಾರುಕಟ್ಟೆಯಲ್ಲಿ ಅತ್ಯಂತ ದೊಡ್ಡ ರಫ್ತು ದೇಶವಾಗಿರುವ ಚೀನಾಕ್ಕೆ ಪೈಪೋಟಿ ನೀಡುವ ಭಾರತದ ಪ್ರಯತ್ನಗಳಿಗೂ ಹಿನ್ನಡೆಯನ್ನುಂಟು ಮಾಡಲಿದೆ.ಗಾ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News