×
Ad

"ನಮ್ಮ ದೇಶದ ಜಾತಿ ವ್ಯವಸ್ಥೆಯಲ್ಲಿ ಇವರಿಗೆ ಇದೇ ಕೆಲಸ, ನೀವು ಅದನ್ನೆಲ್ಲ ಕೇಳ್ತಾ ಇರೋಕ್ಕೆ ಆಗಲ್ಲ! "

Update: 2021-10-11 20:51 IST

ಬೆಂಗಳೂರು, ಅ. 11: `ಮ್ಯಾನ್‍ಹೋಲ್ (ಮಲದ ಗುಂಡಿ) ಸ್ವಚ್ಛತೆಗೆ ಮನುಷ್ಯನ ಬಳಕೆ ಮಾಡುವುದನ್ನು ಸಂಪೂರ್ಣ ನಿಷೇಧಿಸಿ' ಸುಪ್ರೀಂ ಕೋರ್ಟ್ ಆದೇಶ ನೀಡಿದ್ದರೂ ಅದನ್ನು ಉಲ್ಲಂಘಿಸುವ ಪ್ರಕರಣಗಳು ಪ್ರತಿನಿತ್ಯ ನಡೆಯುತ್ತಿವೆ. ಇಲ್ಲಿನ ಶಿವಾಜಿನಗರ ಸಮೀಪದಲ್ಲಿನ ಇನ್‍ಫೆಂಟ್ರಿ ರಸ್ತೆಯಲ್ಲಿನ ಕೆಲೆರಾ ಡಯಾಗ್ನೆಸ್ಟಿಕ್ ಸೆಂಟರ್ ಎದುರಿನಲ್ಲಿ `ಬೆಂಗಳೂರು ಸ್ಮಾರ್ಟ್ ಸಿಟಿ ಪ್ರೈವೆಟ್ ಲಿಮಿಟೆಡ್ ಯೋಜನೆ' ಕಾಮಗಾರಿ ವೇಳೆ ಮಲದ ಗುಂಡಿ ಸ್ವಚ್ಛತೆಗೆ ಪೌರಕಾರ್ಮಿಕರನ್ನು(ಸ್ಕ್ಯಾವೆಂಜರ್ಸ್) ಬಳಕೆ ಮಾಡುವುದು ಬೆಳಕಿಗೆ ಬಂದಿದೆ.

ಈ ಪ್ರಕರಣ ಸಂಬಂಧ ಬೆಂಗಳೂರು ಸ್ಮಾರ್ಟ್ ಸಿಟಿ ಪ್ರೈವೆಟ್ ಲಿ.ನ ವ್ಯವಸ್ಥಾಪಕ ನಿರ್ದೇಶಕರಿಗೆ ಎಂದು ಸಾಮಾಜಿಕ ಹೋರಾಟಗಾರರಾದ ವಿನಯ್ ಶ್ರೀನಿವಾಸ್ ಹಾಗೂ ಸ್ವಾತಿ ಶಿವಾನಂದ ಅವರು ದೂರು ನೀಡಿದ್ದು, '' ನಾವು ಇಂದು ಬೆಳಿಗ್ಗೆ (ಸೋಮವಾರ, ಅಕ್ಟೋಬರ್‌ 11) ಶಿವಾಜಿನಗರದ ಇನ್ಫಾಂಟ್ರಿ ರಸ್ತೆಯಲ್ಲಿ ನಡೆದು ಹೋಗುತ್ತಿದ್ದೆವು. ಸೆಲೆರಾ ಡಯೋಗ್ನಾಟಿಕ್ಸ್‌ ಎದುರು ವ್ಯಕ್ತಿಯು ಮ್ಯಾನ್‌ಹೋಲ್‌ಗೆ ಇಳಿಯುತ್ತಿದ್ದನ್ನು ಕಂಡೆವು. ಕಾರ್ಮಿಕರ ಬಳಿ ಈ ಕುರಿತು ವಿಚಾರಿಸಿದಾಗ ನೀರು ಕಟ್ಟಿಕೊಂಡಿದ್ದನ್ನು ತೆರವುಗೊಳಿಸುವುದಾಗಿ ತಿಳಿಸಿದರು. ಕಾರ್ಮಿಕರು ಯಾವುದೇ ರಕ್ಷಣಾ ಸಲಕರಣೆಗಳನ್ನು ಧರಿಸಿರಲಿಲ್ಲ''. ಎಂದು ದೂರಿದ್ದಾರೆ.

''ತಕ್ಷಣ ನಾವು ಯೋಜನೆ ಕಾಮಗಾರಿ ಗುತ್ತಿಗೆ ಪಡೆದಿರುವ ಅಮೃತ ಕನ್ಸ್ ಸ್ಷ್ರಕ್ಷನ್‍ನ ಸಿಬ್ಬಂದಿಗೆ ಕರೆ ಮಾಡಿ ಮ್ಯಾನ್‍ಹೋಲ್ ಸ್ವಚ್ಛತೆಗೆ ಕಾರ್ಮಿಕರ ಬಳಕೆ ಬಗ್ಗೆ ಆಕ್ಷೇಪಿಸಿದ್ದೇವೆ. ಅವರು ತಮ್ಮನ್ನು ಈ ಯೋಜನೆಯಡಿಯಲ್ಲಿ ಬರುವ ಅಮೃತ ಕನ್ಸ್‍ಸ್ಷ್ರಕ್ಷನ್‍ನ ಇಂಜಿನಿಯರ್ ಎಂದು ಪರಿಚಯಿಸಿರುವುದಾಗಿ ತಿಳಿಸಿದ್ದಾರೆ.

ಬಳಿಕ ಇಂಜಿನಿಯರ್ ಗಳ ಬಳಿ ಅವರಿಗೆ ಯಾವುದೇ ರಕ್ಷಣಾ ಸಲಕರಣೆಗಳನ್ನು ನೀಡದಿರುವ ಬಗ್ಗೆ ನಾವು ಪ್ರಶ್ನಿಸಿದಾಗ ''ಇವರೆಲ್ಲ ಕುಡುಕರು,  ಇವರಿಗೆ ರಕ್ಷಣಾ ಸಲಕರಣೆಗಳನ್ನು ನೀಡಿದ್ದೇವೆ. ಆದರೆ ಅವರು ಅದನ್ನು ಮಾರಿಕೊಂಡಿದ್ದಾರೆ'' ಎಂದು ಅವರಲ್ಲೋರ್ವ ರವಿಕುಮಾರ್‌ ಎಂಬ ಇಂಜಿನಿಯರ್ ಹೇಳಿದ್ದಾರೆ ಎಂದು ತಿಳಿಸಿದ್ದಾರೆ.

ಇನ್ನೊಬ್ಬಇಂಜಿನಿಯರ್ ಹರ್ಷಗೌಡ ಎಂಬವರು, ''.ಈ ಕೆಲಸಗಳನ್ನು ಮಾಡಲೆಂದೇ ಕೆಲವು ಜನರಿದ್ದಾರೆ. ಅವರು ಜನ ಶುಚಿಗೊಳಿಸಲೆಂದೇ ಇರುವವರು. ನಾವು ಇಂಜಿನಿಯರುಗಳು. ಅವರು ಶುಚಿಗೊಳಿಸುವುದನ್ನು ತಡೆಯಲು ಸಾಧ್ಯವಿಲ್ಲ ಎಂದಿದ್ದಾರೆ ಎಂಬುದಾಗಿ ಸಂಸ್ಥೆಯಿಂದಲೇ ಈ ಕೆಲಸವನ್ನು ಮಾಡಿಸಲಾಗುತ್ತಿದೆ ಎಂದು ಎಂಜಿನಿಯರುಗಳು ಹೇಳಿರುವುದಾಗಿ  ದೂರಿನಲ್ಲಿ ಉಲ್ಲೇಖಿಸಿದ್ದಾರೆ.

`ಈ ಪ್ರಕರಣದ ಬಗ್ಗೆ ಸಮಗ್ರ ತನಿಖೆ ನಡೆಸಿ ಒಂದು ವಾರದಲ್ಲಿ ಆ ವರದಿಯನ್ನು ಸಾರ್ವಜನಿಕವಾಗಿ ಬಹಿರಂಗಪಡಿಸಬೇಕು. ಮ್ಯಾನ್‍ಹೋಲ್(ಮಲದ ಗುಂಡಿ) ಸ್ವಚ್ಛತೆಯನ್ನು ಹೇಗೆ ನಿರ್ವಹಿಸಬೇಕೆಂದು ಕೂಡಲೇ ಸ್ಮಾರ್ಟ್ ಸಿಟಿ ಪ್ರೈ.ಲಿ. ಗುತ್ತಿಗೆದಾರರಿಗೆ ಸುತ್ತೋಲೆ ಹೊರಡಿಸಬೇಕು' ಎಂದು ಆಗ್ರಹಿಸಿದ್ದಾರೆ. 

`ಮ್ಯಾನ್‍ಹೋಲ್ ಕಟ್ಟಿಕೊಂಡರೆ ಹೇಗೆ ಸ್ವಚ್ಛಗೊಳಿಸಬೇಕೆಂಬ ಮಾಹಿತಿಯನ್ನು ಸ್ಮಾರ್ಟ್‍ಸಿಟಿ ಯೋಜನೆ ವೆಬ್‍ಸೈಟ್‍ನಲ್ಲಿ ಹಾಕಬೇಕು. ಸ್ಮಾರ್ಟ್‍ಸಿಟಿ ಯೋಜನೆ ಕಾಮಗಾರಿ ನಡೆಸುತ್ತಿರುವ ಕಾರ್ಮಿಕರನ್ನು ಅತ್ಯಂತ ಅಮಾನವೀಯವಾಗಿ ದುಡಿಸಿಕೊಳ್ಳುತ್ತಿದ್ದು, ಅವರಿಗೆ ವಸತಿ ಸೌಲಭ್ಯಗಳನ್ನು ಕಲ್ಪಿಸಿಲ್ಲ. ಹೀಗಾಗಿ ಅವರಿಗೆ ಸೂಕ್ತ ವಸತಿ ಸೌಲಭ್ಯ ಕಲ್ಪಿಸಬೇಕು. ಅಲ್ಲದೆ, ಕಾರ್ಮಿಕರ ಸುರಕ್ಷತೆ ಆದ್ಯತೆ ನೀಡಬೇಕು. `ಮ್ಯಾನ್‍ಹೋಲ್ ಸ್ವಚ್ಛತೆಗೆ ಸ್ಕ್ಯಾವೆಂಜರ್ಸ್‍ಗಳ ಬಳಕೆ ನಿಷೇಧ ಹಾಗೂ ಸ್ಕ್ಯಾವೆಂಜರ್ಸ್‍ಗಳ ಪುನರ್ ವಸತಿ ಕಾಯ್ದೆ-2013'ರ ಬಗ್ಗೆ ಗುತ್ತಿಗೆದಾರರಿಗೆ ಅರಿವು ಮೂಡಿಸಬೇಕು. ಕಾರ್ಮಿಕರ ಸಮಸ್ಯೆಗಳನ್ನು ಹೇಳಿಕೊಳ್ಳಲು ಸೆಲ್ ರಚನೆ ಮಾಡಬೇಕು ಎಂದು ಒತ್ತಾಯಿಸಿದ್ದಾರೆ.

ಕೂಡಲೇ ಸ್ಥಳಕ್ಕೆ ಧಾವಿಸಿದ ಸಂಸ್ಥೆಯ ಯೋಗೇಂದ್ರ, ರವಿಕಿರಣ್ ಹಾಗೂ ಹರ್ಷಗೌಡ, ಮ್ಯಾನ್‍ಹೋಲ್ ಸ್ವಚ್ಛತೆಗೆ ಕಾರ್ಮಿಕರ ಬಳಕೆ ಸಮರ್ಥನೆ ಮಾಡಿದ್ದಾರೆ. ಇದಕ್ಕೆ ಆಕ್ಷೇಪಿಸಿದ ಶ್ರೀನಿವಾಸ್, ಸುಪ್ರೀಂ ಕೋರ್ಟ್ ಮತ್ತು ಹೈಕೋರ್ಟ್ ಆದೇಶದ ಉಲ್ಲಂಘನೆ ಬಗ್ಗೆ ವಿವರಣೆ ನೀಡಿದ್ದಾರೆ. ಅಲ್ಲದೆ, ಯೋಜನೆ ಕಾಮಗಾರಿಯಲ್ಲಿ ತೊಡಗಿರುವ ಕಾರ್ಮಿಕರಿಗೆ ಸೂಕ್ತ ವಸತಿ ಸಹಿತ ನಾಗರಿಕ ಸೌಲಭ್ಯಗಳನ್ನು ಕಲ್ಪಿಸಬೇಕು ಎಂದು ತಮ್ಮ ದೂರಿನಲ್ಲಿ ಆಗ್ರಹಿಸಿದ್ದಾರೆ.

`ಮ್ಯಾನ್‍ಹೋಲ್ ಸ್ವಚ್ಛತೆಗೆ ಕಾರ್ಮಿಕರನ್ನು ಬಳಕೆ ಮಾಡುವಂತಿಲ್ಲ ಎಂದು ಸುಪ್ರೀಂ ಕೋರ್ಟ್ ಆದೇಶವಿದ್ದರೂ ಅದನ್ನು ಉಲ್ಲಂಘಿಸಲಾಗುತ್ತಿದೆ. ಸರಕಾರದ ಅಂಗ ಸಂಸ್ಥೆಗಳೇ ಆದೇಶ ಉಲ್ಲಂಘನೆ ಮಾಡುತ್ತಿರುವುದು ಅತ್ಯಂತ ಖೇದಕರ ಸಂಗತಿ. ಈ ಪ್ರಕರಣದ ಬಗ್ಗೆ ಕೂಡಲೇ ಸಮಗ್ರ ತನಿಖೆ ನಡೆಸಿ ಸಂಬಂಧಪಟ್ಟವರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು. ಅಲ್ಲದೆ, ಸ್ಮಾರ್ಟ್‍ಸಿಟಿ ಯೋಜನೆ ಕಾಮಗಾರಿಯಲ್ಲಿ ತೊಡಗಿರುವ ಎಲ್ಲ ಕಾರ್ಮಿಕರಿಗೆ ಅಗತ್ಯ ಸುರಕ್ಷತಾ ಪರಿಕರಗಳನ್ನು ಒದಗಿಸಬೇಕು. ಅವರಿಗೆ ಸೂಕ್ತ ವಸತಿ ಸಹಿತ ನಾಗರಿಕ ಸೌಲಭ್ಯಗಳನ್ನು ಕಲ್ಪಿಸಬೇಕು'

-ವಿನಯ್ ಶ್ರೀನಿವಾಸ್ ದೂರದಾರ(ಸಾಮಾಜಿಕ ಹೋರಾಟಗಾರ)

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News