ಹರ್ಯಾಣ: ಸರಕಾರಿ ನೌಕರರು ಆರೆಸ್ಸೆಸ್, ಜಮಾಅತೆ ಇಸ್ಲಾಮ್ ಸೇರುವುದರ ಮೇಲಿನ 54 ವರ್ಷಗಳ ನಿಷೇಧ ರದ್ದು

Update: 2021-10-12 16:26 GMT
ಸಾಂದರ್ಭಿಕ ಚಿತ್ರ (PTI)

ಚಂಡಿಗಡ,ಅ.12: ತನ್ನ ಸಿಬ್ಬಂದಿಗಳು ಆರೆಸ್ಸೆಸ್ ಮತ್ತು ಜಮಾಅತೆ ಇಸ್ಲಾಮ್ ಸೇರುವುದನ್ನು ನಿರ್ಬಂಧಿಸಿದ್ದ 54 ವರ್ಷಗಳ ನಿಷೇಧವನ್ನು ಹರ್ಯಾಣ ಸರಕಾರವು ಸೋಮವಾರ ರದ್ದುಗೊಳಿಸಿದೆ. 1967ರಲ್ಲಿ ಹೇರಲಾಗಿದ್ದ ನಿಷೇಧವನ್ನು ಹಿಂದೆಗೆದುಕೊಂಡಿರುವ ಬಗ್ಗೆ ಮುಖ್ಯ ಕಾರ್ಯದರ್ಶಿ ವಿಜಯ ವರ್ಧನ ಅವರು ಎಲ್ಲ ಇಲಾಖಾ ಮುಖ್ಯಸ್ಥರಿಗೆ ನಿರ್ದೇಶಗಳನ್ನು ಹೊರಡಿಸಿದ್ದಾರೆ.

ಆರೆಸ್ಸೆಸ್ ಮತ್ತು ಜಮಾಅತೆ ಇಸ್ಲಾಮಿಯಂತಹ ಸಂಘಟನೆಗಳ ಚಟುವಟಿಕೆಗಳಲ್ಲಿ ಭಾಗವಹಿಸುವ ಸರಕಾರಿ ನೌಕರರು ಸೇವಾ ನಿಯಮಗಳಡಿ ಶಿಸ್ತುಕ್ರಮಗಳನ್ನು ಎದುರಿಸಬೇಕಾಗುತ್ತದೆ ಎಂದು 1967,ಜ.11ರಂದು ಆಗಿನ ಮುಖ್ಯ ಕಾರ್ಯದರ್ಶಿ ನಿರ್ದೇಶವನ್ನು ಹೊರಡಿಸಿದ್ದರು.

ವರ್ಧನ ಅವರು ಎಲ್ಲ ಇಲಾಖಾ ಮುಖ್ಯಸ್ಥರಿಗೆ ಬರೆದಿರುವ ಪತ್ರದಲ್ಲಿ ‘ಸರಕಾರಿ ನೌಕರರು ಭಾರತದ ಸಾರ್ವಭೌಮತೆ ಮತ್ತು ಸಮಗ್ರತೆ ಅಥವಾ ಸಾರ್ವಜನಿಕ ಸುವ್ಯವಸ್ಥೆ ಅಥವಾ ನೈತಿಕತೆ ಹಿತಾಸಕ್ತಿಗೆ ಪೂರ್ವಾಗ್ರಹಪೀಡಿತ ಉದ್ದೇಶಗಳು ಮತ್ತು ಚಟುವಟಿಕೆಗಳನ್ನು ಹೊಂದಿರುವ ಸಂಘಟನೆಯನ್ನು ಸೇರುವಂತಿಲ್ಲ ಅಥವಾ ಸದಸ್ಯರಾಗಿ ಮುಂದುವರಿಯುವಂತಿಲ್ಲ’ ಎಂದು ಸ್ಪಷ್ಟಪಡಿಸಿದ್ದಾರೆ.

ಸರ್ಕಾರದ  ಈ ಕ್ರಮ ವಿಪಕ್ಷ ಕಾಂಗ್ರೆಸ್‍ನಿಂದ ತೀವ್ರ ಟೀಕೆಗೆ ಗುರಿಯಾಗಿದ್ದು ರಾಜ್ಯದ ಮನೋಹರ್ ಲಾಲ್ ಖಟ್ಟರ್ ಸರ್ಕಾರ "ಬಿಜೆಪಿ-ಆರೆಸ್ಸೆಸ್ ಪಾಠ್‍ಶಾಲೆ''ಯನ್ನು ನಡೆಸುತ್ತಿದೆಯೇ ಎಂದು ಪ್ರಶ್ನಿಸಿದೆ.

ಕಾಂಗ್ರೆಸ್ ವಕ್ತಾರ ರಣದೀಪ್ ಸಿಂಗ್ ಸುರ್ಜೇವಾಲ ಇದನ್ನು ಟೀಕಿಸಿ ಟ್ವೀಟ್ ಮಾಡಿದ್ದಾರೆ. "ಈಗ ಹರ್ಯಾಣ ಸರ್ಕಾರಿ ಉದ್ಯೋಗಿಗಳು ಆರೆಸ್ಸೆಸ್ ಚಟುವಟಿಕೆಗಳಲ್ಲಿ ಭಾಗವಹಿಸಲು ಸ್ವತಂತ್ರರು. ಇದೇನು ಸರ್ಕಾರವೇ ಅಥವಾ ಬಿಜೆಪಿ-ಆರೆಸ್ಸೆಸ್ ಪಾಠಶಾಲೆಯೇ?,'' ಎಂದು ಅವರು ಪ್ರಶ್ನಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News