ಆಫ್ರಿಕಾ ಖಂಡ ಸೀಳುತ್ತಿದೆ, ಆರ್ಕ್ಟಿಕ್ ಐಸ್‌ಗಡ್ಡೆಗಳು ಬಿರುಕುಬಿಡುತ್ತಿವೆ...

Update: 2021-10-14 04:44 GMT

ಆಫ್ರಿಕಾದ ಕೀನ್ಯಾ ದೇಶದಲ್ಲಿ ಇದ್ದಕ್ಕಿದ್ದಹಾಗೆ ಒಂದು ದೊಡ್ಡ ಬಿರುಕು ಕಾಣಿಸಿಕೊಂಡು ಆಫ್ರಿಕಾ ಖಂಡ ಎರಡು ಭಾಗಗಳಾಗಿ ವಿಭಜನೆಗೊಳ್ಳುವ ಸೂಚನೆ ಕೊಟ್ಟಿದೆ. ಮಳೆಗಾಲದಲ್ಲಿ ಈ ಬಿರುಕು ಇನ್ನಷ್ಟು ಅಗಲವಾಗಿ ತೆರೆದುಕೊಳ್ಳುತ್ತಿದೆ. ನಿರಂತರ ವಿಘಟನೆಗೆ ಅದರ ಅಡಿಯಲ್ಲಿರುವ ಹೆಚ್ಚು ತಾಪಮಾನದ ಫಲಕವೇ ಕಾರಣ ಎನ್ನಲಾಗಿದೆ. ನ್ಯಾಷನಲ್ ಜಿಯೋಗ್ರಾಫಿಕ್ ಪ್ರಕಾರ 50 ಅಡಿಗಳಿಗಿಂತ ಆಳ ಮತ್ತು 65 ಅಡಿಗಳ ಉದ್ದದ ಒಂದು ಬಿರುಕು ಕೀನ್ಯಾದ ನರೋಕ್-ನೈರೋಬಿ ಹೆದ್ದಾರಿಯಲ್ಲಿ ಕಾಣಿಸಿಕೊಂಡು ಅದು ಉದ್ದವಾಗುತ್ತಲೇ ಹೋಗುತ್ತಿದೆ. ಪೂರ್ವ ಆಫ್ರಿಕಾದಲ್ಲಿನ ಈ ಬಿರುಕು ಸುಮಾರು 2,200 ಕಿ.ಮೀ. ಉದ್ದ ಮತ್ತು 30-120 ಕಿ.ಮೀ. ಅಗಲದ ಪ್ರದೇಶದಲ್ಲಿ ಅಲ್ಲಲ್ಲಿ ಕಾಣಿಸಿಕೊಂಡಿದೆ.

ಪೂರ್ವ ಆಫ್ರಿಕಾದ ಈ ಸಕ್ರಿಯ ಖಂಡಾಂತರ ಬಿರುಕು ಸುಮಾರು ಹತ್ತುಲಕ್ಷ ವರ್ಷಗಳ ಹಿಂದೆ ಮಯೋಸೀನ್‌ನ ಆರಂಭದ ಕಾಲದಲ್ಲಿಯೇ ಪ್ರಾರಂಭವಾಗಿದೆ ಎನ್ನಲಾಗಿದೆ. ಹಿಂದೆ ಈ ವಲಯವನ್ನು ‘ಗ್ರೇಟ್ ರಿಫ್ಟ್ ವ್ಯಾಲಿ’ಯ ಭಾಗವೆಂದು ಪರಿಗಣಿಸಲಾಗಿದ್ದು ಅದು ಉತ್ತರದಲ್ಲಿ ಏಶ್ಯ ಮೈನರ್ ಫಲಕದವರೆಗೂ ವಿಸ್ತರಿಸಿದೆ. ಉದ್ದವಾದ ಕಿರಿದಾದ ವಲಯದಲ್ಲಿ ವಿಭಜನೆಯ ಬಿರುಕು ಮೂಡುತ್ತಿದ್ದು ಎರಡು ಭೂಫಲಕಗಳು ವಿರುದ್ಧ ದಿಕ್ಕಿಗೆ ಚಲಿಸುವ ಕುರುಹುಗಳು ಕಾಣಿಸಿಕೊಂಡಿವೆ. ಒಂದು ಸೋಮಾಲಿ ಫಲಕವಾದರೆ ಇನ್ನೊಂದು ನುಬಿಯನ್ ಫಲಕವಾಗಿದೆ. ಇವು ವರ್ಷಕ್ಕೆ ಸರಾಸರಿ 6-7 ಮಿ.ಮೀ. ಪ್ರಮಾಣದಲ್ಲಿ ಸಾಗುತ್ತಿವೆ ಎಂದು ಲೆಕ್ಕ ಹಾಕಲಾಗಿದೆ.

ಬಿರುಕುಬಿಡುವ ಈ ಪ್ರಕ್ರಿಯೆಯಲ್ಲಿ ಮೂರು ಸಣ್ಣ ಫಲಕಗಳು ಭಾಗವಹಿಸಿದ್ದು ಉತ್ತರದಲ್ಲಿ ವಿಕ್ಟೋರಿಯಾ ಫಲಕ ಮತ್ತು ದಕ್ಷಿಣದಲ್ಲಿ ರೊವುಮಾ-ಲ್ವಾಂಡಲ್ ಫಲಕಗಳು ಒಳಗೊಂಡಿವೆ. ಆಫ್ರಿಕಾ ಫಲಕಕ್ಕೆ ಸಂಬಂಧಿಸಿದಂತೆ ವಿಕ್ಟೋರಿಯಾ ಫಲಕ ಅಪ್ರದಕ್ಷಿಣಾಕಾರವಾಗಿ ತಿರುಗುತ್ತಿದ್ದು ಇದರ ತಿರುಗುವಿಕೆ ದುರ್ಬಲ ಮತ್ತು ಬಲವಾದ ಶಿಲಾಗೋಳ ಪ್ರದೇಶಗಳ ಸಂರಚನೆಯಿಂದ ಕೂಡಿದೆ. ಇದರ ಮುಂದುವರಿಕೆ ಇದೇ ಪ್ರಮಾಣದಲ್ಲಿ ಸಾಗಿದರೆ ಶಿಲಾಗೋಳ 10 ದಶಲಕ್ಷ ವರ್ಷಗಳಲ್ಲಿ ಛಿದ್ರಗೊಂಡು ಸೋಮಾಲಿ ಫಲಕ ಒಡೆಯುವುದರ ಜೊತೆಗೆ ಹೊಸ ಸಾಗರ ಸೃಷ್ಟಿಯಾಗುತ್ತದೆ.

ವಿಭಿನ್ನ ಬಿರುಕುಗಳ ಜಲಾನಯನ ಪ್ರದೇಶಗಳ ಸರಣಿ ಪೂರ್ವ ಆಫ್ರಿಕಾದಲ್ಲಿ ಸಾವಿರಾರು ಕಿಲೋಮೀಟರ್‌ಗಳಷ್ಟು ದೂರ ವಿಸ್ತರಿಸಿದೆ. ಇದು ಎರಡು ಶಾಖೆಗಳನ್ನು ಹೊಂದಿದ್ದು ಪೂರ್ವಕಣಿವೆಯನ್ನು ‘ಗ್ರೆಗೊರಿ’ ಎಂದು ಕರೆಯಲಾಗಿ ಇದು ಮುಖ್ಯವಾಗಿ ಇಥಿಯೋಪಿಯನ್ ಛಿದ್ರವನ್ನು ಒಳಗೊಂಡಿದ್ದು ಅಫಾರ್ ಟ್ರಿಪಲ್ ಜಂಕ್ಷನ್‌ನಿಂದ ಪೂರ್ವಕ್ಕೆ ಚಲಿಸಿ ದಕ್ಷಿಣಕ್ಕೆ ಕೀನ್ಯಾ ಕಣಿವೆಯವರೆಗೆ ಸಾಗುತ್ತದೆ. ಪಶ್ಚಿಮದ ಛಿದ್ರ ಕಣಿವೆ ಆಲ್ಬರ್ಟೈನ್ ಛಿದ್ರ ಮತ್ತು ದಕ್ಷಿಣಕ್ಕೆ ಮಲಾವಿ ಸರೋವರದ ಕಣಿವೆಯನ್ನು ಒಳಗೊಂಡಿದೆ. ಅಫಾರ್ ಟ್ರಿಪಲ್ ಜಂಕ್ಷನ್‌ನ ಉತ್ತರದಲ್ಲಿ ಬಿರುಕು ಎರಡು ಮಾರ್ಗಗಳಲ್ಲಿ ಒಂದನ್ನು ಅನುಸರಿಸುತ್ತದೆ; ಪಶ್ಚಿಮಕ್ಕೆ ಕೆಂಪು ಸಮುದ್ರದ ಬಿರುಕು ಅಥವಾ ಪೂರ್ವಕ್ಕೆ ಏಡನ್ ಕೊಲ್ಲಿಯಲ್ಲಿ ‘ಏಡನ್ ರಿಡ್ಜ್’ ಎದ್ದುನಿಂತಿದೆ. ಗ್ರೇಟ್ ರಿಫ್ಟ್ ವ್ಯಾಲಿ ಎಂಬುದು ಸತತ ಭೌಗೋಳಿಕ ಕಂದಕಗಳ ಸರಣಿಯಾಗಿದ್ದು ಇದರ ಒಟ್ಟು ಉದ್ದ 7,000 ಕಿ.ಮೀ. ಇದ್ದು ಇದು ಲೆಬನಾನ್ ಬೆಕಾ ಕಣಿವೆಯಿಂದ ಆಗ್ನೇಯ ಆಫ್ರಿಕಾದ ಮೊಜಾಂಬಿಕ್‌ವರೆಗೆ ಕಾಣಿಸಿಕೊಂಡಿದೆ.

ಜಾಗತಿಕ ತಾಪಮಾನ ಏರಿಕೆಯಿಂದ ಹವಾಮಾನ ಬದಲಾವಣೆಯಾಗಿ ಉತ್ತರ ಆರ್ಕ್ಟಿಕ್ ಮತ್ತು ದಕ್ಷಿಣದ ಅಂಟಾರ್ಕ್ಟಿಕ ಧ್ರುವಗಳ ಮಂಜುಗಡ್ಡೆಗಳು ಕರಗುತ್ತಿವೆ. ಆರ್ಕ್ಟಿಕ್ ಸಮುದ್ರದ ಮಂಜುಗಡ್ಡೆ ಒಂದು ದಶಕಕ್ಕೆ ಸುಮಾರು ಶೇ.13 ದರದಲ್ಲಿ ಕಡಿಮೆಯಾಗುತ್ತಿದ್ದು ಕಳೆದ ಮೂರು ದಶಕಗಳಲ್ಲಿ ಆರ್ಕ್ಟಿಕ್‌ನ ಅತ್ಯಂತ ಹಳೆಯ ಮತ್ತು ದಪ್ಪದಾದ ಶೇ. 95 ಮಂಜುಗಡ್ಡೆ ಕರಗಿಹೋಗಿದೆ. ಶಾಕವರ್ಧಕ ಅನಿಲಗಳ ಹೊರಸೂಸುವಿಕೆ ನಿಯಂತ್ರಣವಿಲ್ಲದೆ ಇದೇ ಪ್ರಮಾಣದಲ್ಲಿ ಬಿಡುಗಡೆಯಾಗುತ್ತಿದ್ದರೆ, 2040ರ ವೇಳೆಗೆ ಆರ್ಕ್ಟಿಕ್ ವಲಯ ಬೇಸಿಗೆ ಕಾಲದಲ್ಲಿ ಹಿಮರಹಿತವಾಗುವುದರಲ್ಲಿ ಯಾವುದೇ ಸಂದೇಹವಿಲ್ಲ. ಇದರಿಂದ ಭೂಮಿಯ ಮೇಲೆ ನೈಸರ್ಗಿಕ ಪ್ರಕ್ರಿಯೆಗಳು ಬಹಳಷ್ಟು ಏರುಪೇರಾಗಿ ಅಲ್ಲೋಲಕಲ್ಲೋಲ ಆಗುವ ಸಾಧ್ಯತೆಗಳಿವೆ. ಭೂಮಿಯ ಎರಡೂ ಧ್ರುವಗಳು ಜಗತ್ತಿನ ಎರಡು ರೆಫ್ರಿಜರೇಟರ್‌ಗಳಾಗಿದ್ದು ಎರಡೂ ಧ್ರುವಗಳು ಅಗಾಧ ಬಿಳಿಹಿಮ ಮತ್ತು ಮಂಜುಗಡ್ಡೆಗಳಿಂದ ಆವರಿಸಲ್ಪಟ್ಟಿದ್ದು ಶಾಖವನ್ನು ಬಾಹ್ಯಾಕಾಶಕ್ಕೆ ಪ್ರತಿಫಲಿಸುತ್ತವೆ. ಜೊತೆಗೆ ಹಾಗೇ ಶಾಖವನ್ನು ಹೀರಿಕೊಳ್ಳುವುದರೊಂದಿಗೆ ಭೂಮಿಯ ಇತರ ಭಾಗಗಳನ್ನು ಸಮತೋಲನದ ತಾಪಮಾನದಲ್ಲಿ ಇಡುತ್ತದೆ. ಕಡಿಮೆ ಐಸ್ ಎಂದರೆ ಕಡಿಮೆ ಪ್ರತಿಫಲಿತ ಶಾಖ, ಇದರ ಫಲಿತಾಂಶ ಜಗತ್ತಿನಾದ್ಯಂತ ತೀವ್ರಶಾಖದ ಅಲೆಗಳ ಜೊತೆಗೆ ತೀವ್ರವಾದ ಚಳಿಗಾಳಿಗಳು ಅನುಕರಿಸುತ್ತವೆ. ಧ್ರುವ ಜೆಟ್ ಸ್ಟ್ರೀಮ್ (ಸಮುದ್ರದ ಮೇಲಿನ ಬಿರುಗಾಳಿ-ಮಳೆ) ಆರ್ಕ್ಟಿಕ್ ಪ್ರದೇಶವನ್ನು ಸುತ್ತುವರಿದು ಅಧಿಕ ಒತ್ತಡದ ಬೆಚ್ಚಗಿನ ಗಾಳಿಯಿಂದ ಅಸ್ಥಿರಗೊಂಡರೆ, ದಕ್ಷಿಣ ಧ್ರುವ ನೀರಿನಲ್ಲಿ ಮುಳುಗಬಹುದು ಮತ್ತು ಕಡುಶೀತಗಾಳಿ ಕಾಣಿಸಿಕೊಳ್ಳುಬಹುದು.

1900ರ ದಶಕದಿಂದ ಜಾಗತಿಕ ಸರಾಸರಿ ಸಮುದ್ರಮಟ್ಟ ಸುಮಾರು 7-8 ಇಂಚುಗಳು ಹೆಚ್ಚಾಗಿದ್ದು ಕರಾವಳಿ ಜನಸಮುದಾಯಗಳ ಮೇಲೆ ಹಲವು ರೀತಿಯ ವ್ಯತಿರಿಕ್ತ ಪರಿಣಾಮಗಳು ಬೀಳುತ್ತಿವೆ ಮತ್ತು ಸಮುದ್ರ ಮಟ್ಟ ತೀವ್ರವಾಗಿ ಹೆಚ್ಚುತ್ತಲೇ ಇದೆ. ಇದರಿಂದ ಜಗತ್ತಿನಾದ್ಯಂತ ಕಡಲ ಅಂಚಿನಲ್ಲಿರುವ ಹಳ್ಳಿ ಪಟ್ಟಣ, ಮಹಾನಗರಗಳು, ಸಣ್ಣಪುಟ್ಟ ದ್ವೀಪಗಳು ಅಪಾಯಕ್ಕೆ ಸಿಲುಕಿಕೊಂಡಿವೆ. ಪ್ರವಾಹಗಳು ಮತ್ತು ಚಂಡಮಾರುತಗಳು ಇನ್ನಷ್ಟು ಅಪಾಯಕಾರಿಯಾಗಿ ಪರಿಣಮಿಸಿವೆ. ಗ್ರೀನ್‌ಲ್ಯಾಂಡ್ ಮಂಜುಗಡ್ಡೆಯ ಹಿಮನದಿಗಳ ಕರಗುವಿಕೆ ಭವಿಷ್ಯದಲ್ಲಿ ಸಮುದ್ರಮಟ್ಟ ಏರಿಕೆಯ ಪ್ರಮುಖ ಮುನ್ಸೂಚನೆಯಾಗಿದ್ದು ಇದು ಸಂಪೂರ್ಣವಾಗಿ ಕರಗಿದರೆ ಜಾಗತಿಕ ಸಮುದ್ರಮಟ್ಟ 20 ಅಡಿಗಳಷ್ಟು ಹೆಚ್ಚಾಗುತ್ತದೆ ಎನ್ನಲಾಗಿದೆ.

ಹಿಮಪಾತದಿಂದ ಉಂಟಾಗುವ ಧ್ರುವ ಸುಳಿಗಳು, ಹೆಚ್ಚಿದ ಶಾಖದ ಅಲೆಗಳು ಮತ್ತು ಹವಾಮಾನದ ಏರುಪೇರುಗಳು ಈಗಾಗಲೇ ಜಾಗತಿಕ ಆಹಾರ ವ್ಯವಸ್ಥೆಯನ್ನು ಅವಲಂಬಿಸಿರುವ ಬೆಳೆಗಳಿಗೆ ಗಮನಾರ್ಹ ಹಾನಿಯನ್ನು ಉಂಟುಮಾಡಿವೆ. ಪರಿಣಾಮ ಈ ಅಸ್ಥಿರತೆಯಿಂದ ಬೆಲೆಗಳು ಹೆಚ್ಚಿ ಜಗತ್ತಿನ ಬಡವರ ಆರ್ಥಿಕ ಬಿಕ್ಕಟ್ಟು ಹೆಚ್ಚುತ್ತದೆ. ಐಸ್ ಕರಗಿದರೆ ಜಲ ಮಾರ್ಗಗಳು ತೆರೆದುಕೊಳ್ಳುತ್ತವೆ. ಇದರಿಂದ ಈ ವಲಯಗಳು ಇನ್ನಷ್ಟು ಶಾಖಗೊಂಡು ತೈಲಸೋರಿಕೆಯಾದರೆ ಏನಾಗಬಹುದು ಎನ್ನುವುದನ್ನು ಊಹಿಸಿಕೊಳ್ಳಬಹುದು. ತಾಪಮಾನದ ಏರುಪೇರಿನಿಂದ ಧ್ರುವಗಳಲ್ಲಿ ಬದುಕುವ ಕಡಲಜೀವಿಗಳು ತೊಂದರೆಗೆ ಸಿಲುಕಿಕೊಳ್ಳುತ್ತವೆ. ಅರಣ್ಯಗಳು ನಾಶವಾಗಿ ವನ್ಯಪ್ರಾಣಿಗಳು ಮತ್ತು ಮನುಷ್ಯರ ನಡುವೆ ಸಂಘರ್ಷಗಳು ಏರ್ಪಡುತ್ತವೆ. ಆರ್ಕ್ಟಿಕ್ ವಲಯದ ಮಂಜುಗಡ್ಡೆಗಳಲ್ಲಿ ಬದುಕು ನಡೆಸುತ್ತಿರುವ ಜೀವಿಗಳು ಮತ್ತು ಜನಸಮುದಾಯಗಳು ನಾಶವಾಗುತ್ತವೆ.

ಆರ್ಕ್ಟಿಕ್ ಐಸ್ ಮತ್ತು ಪರ್ಮಾಫ್ರಾಸ್ಟ್-ಶಾಶ್ವತವಾಗಿ ಹೆಪ್ಪುಗಟ್ಟಿದ ನೆಲ ಶಾಖವರ್ಧಕ ಅನಿಲವಾದ ಮೀಥೇನ್‌ಅನ್ನು ಅಗಾಧ ಪ್ರಮಾಣದಲ್ಲಿ ಸಂಗ್ರಹಿಸಿ ಹಿಡಿದಿಟ್ಟುಕೊಳ್ಳುತ್ತದೆ. ಅದು ಕರಗಿದಾಗ ಮೀಥೇನ್ ಬಿಡುಗಡೆಯಾಗಿ ತಾಪಮಾನ ಏರಿಕೆಯಾಗುತ್ತದೆ. ಸಮುದ್ರಗಳು ಸಹ ಮೀಥೇನ್ ಅನಿಲವನ್ನು ಹಿಡಿದಿಟ್ಟುಕೊಳ್ಳುತ್ತ ಭೂಮಿಯನ್ನು ಉಳಿಸಿಕೊಳ್ಳಲು ಪ್ರಯತ್ನಪಡುತ್ತಿವೆ. ಜಾಗತಿಕ ತಾಪಮಾನ ಏರಿಕೆಯಿಂದ ಜಗತ್ತಿನಾದ್ಯಂತ ಅಸಹಜ ಋತುಮಾನಗಳು ಸೃಷ್ಟಿಯಾಗುತ್ತಿದ್ದು ನಿರಂತರ ಅಸಹಜ ಪ್ರಕೃತಿ ವಿದ್ಯಮಾನಗಳು ನಡೆಯುತ್ತಿವೆ. ಉದಾ: ಕಳೆದ ಕೆಲವು ವರ್ಷಗಳಿಂದ ಚಂಡಮಾರುತಗಳು ಎಡಬಿಡದೆ ಸೃಷ್ಟಿಯಾಗುತ್ತಿವೆ.

ಜಗತ್ತಿನ ಜನರೆಲ್ಲ ಈಗ ತುರ್ತಾಗಿ ಮಾಡಬೇಕಿರುವ ಕೆಲಸವೆಂದರೆ, ಜಾಗತಿಕ ತಾಪಮಾನವನ್ನು ಸೀಮಿತಗೊಳಿಸಿ ನಮ್ಮೆಲ್ಲರ ಸುರಕ್ಷಿತ ಭವಿಷ್ಯವನ್ನು ಭದ್ರಪಡಿಸುವುದು ನಮಗೆ ಉಳಿದಿರುವ ಏಕೈಕ ದಾರಿ. ವಿಶ್ವ ಅರಣ್ಯ ಕೂಟ ಸ್ಥಳೀಯ ಜನಸಮುದಾಯಗಳು, ಸರಕಾರಗಳು ಮತ್ತು ಜಗತ್ತಿನ ಜನರೆಲ್ಲ ಸೇರಿ ವೇಗವರ್ಧಕ ಅನಿಲಗಳ ಹೊರಸೂಸುವಿಕೆಯನ್ನು ಗಮನಾರ್ಹವಾಗಿ ಮತ್ತು ತ್ವರಿತವಾಗಿ ಕಡಿತಗೊಳಿಸಲು ಕೈಜೋಡಿಸಬೇಕಿದೆ ಎಂದು ಕೇಳಿಕೊಂಡಿದೆ.

ಮಧ್ಯ ಅಟ್ಲಾಂಟಿಕ್ ಏಣು ಮಹಾಸಾಗರಗಳ ತಳದಲ್ಲಿರುವ ಜಗತ್ತಿನ ಅತಿ ಉದ್ದ ಪರ್ವತ ಶ್ರೇಣಿಗಳ ಸರಪಳಿಯಾಗಿದೆ. ಉತ್ತರ ಅಟ್ಲಾಂಟಿಕ್‌ನಲ್ಲಿ, ಈ ಪರ್ವತ ಶ್ರೇಣಿ ಉತ್ತರ ಅಮೆರಿಕ, ಯುರೇಷಿಯನ್ ಮತ್ತು ಆಫ್ರಿಕನ್ ಖಂಡಗಳನ್ನು ಪ್ರತ್ಯೇಕಿಸುತ್ತದೆ; ಮತ್ತು ಅಜೋರ್ಸ್ ಟ್ರಿಪಲ್ ಜಂಕ್ಷನ್ ಉತ್ತರ ಮತ್ತು ದಕ್ಷಿಣ ಭಾಗಗಳನ್ನು ಪ್ರತ್ಯೇಕಿಸುತ್ತದೆ. ದಕ್ಷಿಣ ಅಟ್ಲಾಂಟಿಕ್‌ನಲ್ಲಿ ಇದು ಆಫ್ರಿಕನ್ ಮತ್ತು ದಕ್ಷಿಣ ಅಮೆರಿಕ ಫಲಕಗಳನ್ನು ಪ್ರತ್ಯೇಕಿಸುತ್ತದೆ. ಮುಂದೆ ಸಾಗಿ ಗ್ರೀನ್‌ಲ್ಯಾಂಡ್‌ನ ಈಶಾನ್ಯ ದಿಕ್ಕಿನ ‘ಗಕ್ಕೆಲ್ ಏಣು’(ಮಿಡ್-ಆರ್ಕ್ಟಿಕ್ ಏಣು)ನಿಂದ ದಕ್ಷಿಣ ಅಟ್ಲಾಂಟಿಕ್‌ನ ಬೌವೆಟ್ ಟ್ರಿಪಲ್ ಜಂಕ್ಷನ್‌ವರೆಗೆ ವಿಸ್ತರಿಸಿದೆ.

ಈ ಮಹಾ ಏಣು ಹೆಚ್ಚಾಗಿ ಸಾಗರದೊಳಗಿನ ಪರ್ವತ ಶ್ರೇಣಿಗಳ ಸರಪಳಿಗಳಾದರೂ, ಕೆಲವು ಭಾಗಗಳಲ್ಲಿ ಸಮುದ್ರಮಟ್ಟದ ಮೇಲೆ ಚಾಚಿಕೊಂಡಿದೆ, ಉದಾ: ಐಸ್‌ಲ್ಯಾಂಡ್. ಈ ಮಹಾಏಣು ವರ್ಷಕ್ಕೆ ಸರಾಸರಿ 2.5 ಸೆಂಟಿಮೀಟರ್‌ಗಳಷ್ಟು ಹರಡುತ್ತಿದ್ದು ಇದರ ಒಟ್ಟು ಉದ್ದ ಸುಮಾರು 65,000 ಕಿ.ಮೀ.ಗಳಾದರೆ, ಅಗಲ 1,000-4,000 ಕಿ.ಮೀ.ಗಳು. ಅನ್ಯಗ್ರಹ ಕಾಯಿಗಳು ಅಥವಾ ದೊಡ್ಡ ಉಲ್ಕಾಶಿಲೆಗಳು ಏನಾದರೂ ಭೂಮಿಗೆ ಬಡಿದರೆ ಭೂಮಿ ಇದೇ ಏಣುನಿಂದ ಒಡೆದುಹೋಗುತ್ತದೆ ಎನ್ನುವುದು ವಿಜ್ಞಾನಿಗಳ ಕಲ್ಪನೆ.

ಅಂದರೆ ನಾವಿರುವ ಭೂಮಿ ಅನ್ಯಕಾಯಿಗಳಿಂದ, ಉಲ್ಕಾಶಿಲೆಗಳ ದಾಳಿಯಿಂದ ಅಥವಾ ಪೂರ್ವ ಆಫ್ರಿಕನ್ ಬಿರುಕಿನಿಂದ ಕೋಟ್ಯಂತರ ವರ್ಷಗಳಲ್ಲಿ ಛಿದ್ರಗೊಳ್ಳಬಹುದು! ಆದರೆ ಭೂಒಡೆಯರಾದ ನಾವು ಭೂಮಿಯ ಮೇಲೆ ಈಗ ಸೃಷ್ಟಿಸುತ್ತಿರುವ ಶಾಖವರ್ಧಕ ಅನಿಲಗಳ ಬೆಂಕಿಯಿಂದ ಒಂದೆರಡು ಶತಮಾನಗಳಲ್ಲೇ ಭೂಮಿ ಸುಟ್ಟು ಕರಕಲಾಗಬಹುದು.

Writer - ಡಾ. ಎಂ. ವೆಂಕಟಸ್ವಾಮಿ

contributor

Editor - ಡಾ. ಎಂ. ವೆಂಕಟಸ್ವಾಮಿ

contributor

Similar News