ಸುಳ್ಳು ಮತ್ತು ಬಿಜೆಪಿ ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ : ದಿನೇಶ್ ಗುಂಡೂರಾವ್

Update: 2021-10-14 09:52 GMT

ಬೆಂಗಳೂರು : ಸುಳ್ಳು ಮತ್ತು ಬಿಜೆಪಿ ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ. ಫಾಲ್ಸ್ ಪ್ರೊಪಾಗ್ಯಾಂಡಾ ಹಾಗೂ ಸುಳ್ಳು ಬಿಜೆಪಿಯ ಬಂಡವಾಳ. ಸದ್ಯದ ತೈಲಬೆಲೆ ಹಾಗೂ ಅಗತ್ಯ ವಸ್ತುಗಳ ಬೆಲೆಯೇರಿಕೆಯನ್ನು ಸಮರ್ಥಿಸಿಕೊಳ್ಳಲು ಕಟ್ಟುಕಥೆ ಕಟ್ಟುತ್ತಿರುವ ಬಿಜೆಪಿ, ದೇಶದ ಜನರನ್ನು ಕುರಿಮಂದೆ ಎಂದು ಭಾವಿಸಿದಂತಿದೆ. ಆದರೆ ದೇಶದ ಜನ ಬಿಜೆಪಿಯವರು ತಿಳಿದುಕೊಂಡಷ್ಟು ಮೂರ್ಖರಲ್ಲ ಎಂದು ಶಾಸಕ ದಿನೇಶ್ ಗುಂಡೂರಾವ್ ಅವರು ಹೇಳಿದ್ದಾರೆ. 

ಈ ಬಗ್ಗೆ ಸರಣಿ ಟ್ವೀಟ್ ಮಾಡಿರುವ ಅವರು ತಮ್ಮ ಟ್ವೀಟ್ ನಲ್ಲಿ ''ತೈಲ ಬೆಲೆ ಹಾಗೂ ಅಗತ್ಯ ವಸ್ತುಗಳ ಬೆಲೆಯೇರಿಕೆಯನ್ನು ಲಜ್ಜೆಗೆಟ್ಟು ಸಮರ್ಥಿಸಿಕೊಳ್ಳುತ್ತಿರುವ ಶಾಸಕರುಯವರು ಸತ್ಯ ಮುಚ್ಚಿಡುತ್ತಿದ್ದಾರೆ. ಬೊಮ್ಮಾಯಿಯವರೇ, ಕಳೆದ ಏಳೂವರೆ ವರ್ಷಗಳಲ್ಲಿ ಕರ್ನಾಟಕದಿಂದ ತೈಲದ ಮೇಲಿನ ಅಬಕಾರಿ ಸುಂಕವನ್ನು ನಿಮ್ಮ ಕೇಂದ್ರ ಸಂಗ್ರಹಿಸಿರುವುದೆಷ್ಟು? ಅಡಿಷನಲ್ ಎಕ್ಸೈಸ್ ಡ್ಯೂಟಿಯಿಂದ ನಮ್ಮ  ರಾಜ್ಯಕ್ಕೆ ಬಂದಿರುವುದೆಷ್ಟು?

ನಿಯಮದ ಪ್ರಕಾರ‌ ಕೇಂದ್ರ ಸಂಗ್ರಹಿಸುವ ಒಟ್ಟಾರೆ ಅಬಕಾರಿ ಸುಂಕದಲ್ಲಿ,ಶೇ42% ರಷ್ಟು (ಹೆಚ್ಚುವರಿ ಅಬಕಾರಿ ಸುಂಕ)ದ ರೂಪದಲ್ಲಿ ರಾಜ್ಯಗಳಿಗೆ ವಾಪಸ್ಸಾಗಬೇಕು. ಕೇಂದ್ರ 2014 ರ ಮಾರ್ಚ್‌ನಿಂದ ಇಂದಿನವರೆಗೂ ಸಂಗ್ರಹಿಸಿರುವ ಮೊತ್ತವೇ 25 ಲಕ್ಷ ಕೋಟಿ. ಅದರಲ್ಲಿ ರಾಜ್ಯದ ಪಾಲು 1,37,000 ಕೋಟಿ ಈ ಮೊತ್ತದಲ್ಲಿ ರಾಜ್ಯಕ್ಕೆ ಹಿಂದಿರುಗಿ ಬಂದಿದೆಷ್ಟು ?

ಕಳೆದ ಏಳೂವರೆ ವರ್ಷಗಳಲ್ಲಿ ಕರ್ನಾಟಕವೊಂದರಿಂದಲೇ 1,37,000 ಕೋಟಿ ಅಬಕಾರಿ ಸುಂಕವನ್ನು ಕೇಂದ್ರ ಸಂಗ್ರಹಿಸಿದೆ. ಈ ಮೊತ್ತದಲ್ಲಿ ಶೇ 42% ರಷ್ಟು ರಾಜ್ಯಕ್ಕೆ ವಾಪಾಸ್ಸಾಗಬೇಕು. ಶೇ 42% ಲೆಕ್ಕಾಚಾರದಂತೆ ರಾಜ್ಯಕ್ಕೆ 57.540 ಕೋಟಿ ಬರಬೇಕಿತ್ತು. ಆದರೆ ರಾಜ್ಯಕ್ಕೆ ಇಲ್ಲಿಯವರೆಗೂ ಸಿಕ್ಕಿರುವುದು 5 ಸಾವಿರ ಕೋಟಿ ಮಾತ್ರ. ಇನ್ನುಳಿದ ಹಣದ ಕಥೆ ಏನು ? ಎಂದು ಪ್ರಶ್ನಿಸಿದ್ದಾರೆ. 

ನಮ್ಮ ರಾಜ್ಯಕ್ಕೆ ಬರಬೇಕಾಗಿದ್ದ 57,540 ಕೋಟಿ ಹೆಚ್ಚುವರಿ ಅಬಕಾರಿ ಸುಂಕದಲ್ಲಿ ಕೇವಲ 5 ಸಾವಿರ ಕೋಟಿ ಸಂದಾಯವಾಗಿದೆ.  2019-20 ರ ಸಾಲಿನಲ್ಲಿ 1200 ಕೋಟಿ, 20-21 ರಲ್ಲಿ 800 ಕೋಟಿ ಸಿಕ್ಕಿದೆ. ಕಳೆದ‌ ಏಳೂವರೆ ವರ್ಷದಲ್ಲಿ ರಾಜ್ಯಕ್ಕೆ ಸಿಕ್ಕಿರುವುದು ಚಿಲ್ಲರೆ ಕಾಸಷ್ಟೆ. ಇನ್ನುಳಿದ ರಾಜ್ಯದ ಪಾಲು ಕೇಳಲು ಶಾಸಕರು ಯವರಿಗೆ ಧಮ್ ಇಲ್ಲವೆ ?

ಕೇಂದ್ರ, ರಾಜ್ಯದ ಜಿಎಸ್ ಟಿ ಪಾಲಲ್ಲೂ ವಂಚಿಸಿದೆ, ಹೆಚ್ಚುವರಿ ಅಬಕಾರಿ ಸುಂಕದಲ್ಲೂ ವಂಚಿಸುತ್ತಿದೆ. ತಿಂಗಳಿಗೊಮ್ಮೆ ದೆಹಲಿಗೆ ಟ್ರಿಪ್ ಮಾಡುವ ಬೊಮ್ಮಾಯಿಯವರಿಗೆ ಕೇಂದ್ರದ ಬಳಿ ರಾಜ್ಯದ ನ್ಯಾಯಯುತ ಪಾಲು ಕೇಳಲು ಬೆನ್ನುಹುರಿಯೇ ಇಲ್ಲ. ಪಾಲು ಕೇಳಿ ಅಂದರೆ ಸಾಲ ಕೇಳಿ ಬರುವ ಬೊಮ್ಮಾಯಿಯವರು ಬೆಲೆಯೇರಿಕೆಯನ್ನು ಸಮರ್ಥಿಸಿಕೊಳ್ಳುವುದು ಈ ನಾಡಿನ ದುರಂತ ಎಂದು ಗುಂಡೂರಾವ್ ಹೇಳಿದ್ದಾರೆ.

ಬೊಮ್ಮಾಯಿಯವರು ಕಳೆದ ಅಧಿವೇಶನದಲ್ಲಿ ಬೆಲೆಯೇರಿಕೆಯನ್ನು ನಾಚಿಕೆ ಬಿಟ್ಟು ಸಮರ್ಥಿಸಿಕೊಂಡಿದ್ದರು.  ಬೆಲೆಯೇರಿಕೆಯ ನಡುವೆಯೂ ಸರ್ಕಾರ ಸಾಧನೆ ಮಾಡಿದೆ ಎಂದು ಬಡಾಯಿ ಕೊಚ್ಚಿಕೊಂಡಿದ್ದರು. ಕಳೆದ 7 ತಿಂಗಳಿನಿಂದ ಕೇಂದ್ರ ಉಚಿತ ಅಕ್ಕಿ ಕೊಡುತ್ತಿದೆ ಎಂಬ ಅಂಶ ಪ್ರಸ್ತಾಪಿಸಿದ್ದರು. ಆದರೆ ಬೊಮ್ಮಾಯಿಯವರಿಗೆ ಆ ಉಚಿತ ಅಕ್ಕಿಯೊಳಗಿನ ಗುಟ್ಟು ಗೊತ್ತಿದೆಯೆ?

ಆಹಾರ ಭದ್ರತಾ ಕಾಯ್ದೆಯ ಪ್ರಕಾರ ಭಾರತ 30 ಮಿ. ಮೆಟ್ರಿಕ್ ಟನ್ ಅಕ್ಕಿ ದಾಸ್ತಾನು ಮಾಡಿಕೊಳ್ಳಬೇಕು. ಆದರೆ ದೇಶದಲ್ಲಿ 100 ಮಿ.ಮೆಟ್ರಿಕ್ ಟನ್ ಬಫರ್ ಸ್ಟಾಕ್ ಇದೆ. ಹೀಗೆ ಹೆಚ್ಚುವರಿಯಾಗಿ ಸಂಗ್ರಹವಾದ ಅಕ್ಕಿ ಕೊಳೆತು ಹೋಗುತ್ತಿದ್ದರೆ,‌ ಮತ್ತೊಂದು ಕಡೆ ಕೇಂದ್ರ ಎಥನಾಲ್ ಉತ್ಪಾದಿಸಲು ಈ ಅಕ್ಕಿಯನ್ನು ಕೆಜಿಗೆ 18 ರೂಪಾಯಿಯಂತೆ ಮಾರಾಟ ಮಾಡುತ್ತಿದೆ.

ಹೆಂಡ ಮಾಡಲು ಲಿಕ್ಕರ್ ಕಂಪನಿಗಳಿಗೆ ಅಕ್ಕಿ ಮಾರುವ ಕೇಂದ್ರಕ್ಕೆ ಆ ಅಕ್ಕಿಯನ್ನು ಬಡವರಿಗೆ ಕೊಡುವುದು ಕಷ್ಟವೇ ?  ಆಹಾರ ಭದ್ರತಾ ಕಾಯ್ದೆಯ ಪ್ರಕಾರ ದೇಶದ 92 ಕೋಟಿ ಜನರಿಗೆ ಉಚಿತ ಅಕ್ಕಿ ನೀಡಬೇಕು. ಆದರೆ ಸರ್ಕಾರ 2011 ರ ಜನಗಣತಿ ಅನುಸಾರ 82 ಕೋಟಿ ಜನರಿಗೆ ಮಾತ್ರ ಅಕ್ಕಿ ವಿತರಿಸುತ್ತಿದೆ. ಉಳಿದ 12 ಕೋಟಿ ಜನರ ಅಕ್ಕಿ ಯಾರ ಹುಡಿಗೆ ?

ಮೂಲ ಬಿಜೆಪಿಯವರಲ್ಲದ ಬೊಮ್ಮಾಯಿಯವರು, ಸಹವಾಸ ದೋಷದಿಂದ ಸನ್ಯಾಸಿ ಕೆಟ್ಟ ಎಂಬಂತೆ ಬಿಜೆಪಿ ಸೇರಿ ಮನುಷತ್ವವನ್ನೂ ಕಳೆದುಕೊಂಡಿದ್ದಾರೆ. ಮೂಲ ಬಿಜೆಪಿಯವರನ್ನೇ ನಾಚಿಸುವಷ್ಟು ಸುಳ್ಳು ಹೇಳುವ ಬೊಮ್ಮಾಯಿಯವರು, ಬೆಲೆಯೇರಿಕೆಯ ನೈಜ ಕಾರಣ ಮುಚ್ಚಿಡುತ್ತಿದ್ದಾರೆ. ಇನ್ನಾದರೂ ಬೊಮ್ಮಾಯಿಯವರು ಮನುಷ್ಯ ಸಹಜ ಗುಣಗಳಿಂದ ವರ್ತಿಸಲಿ ಎಂದು ಶಾಸಕರಾದ ದಿನೇಶ್ ಗುಂಡೂರಾವ್ ಟ್ವೀಟ್ ಮಾಡಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News