ತಪ್ಪಿತಸ್ಥರನ್ನು ಶಿಕ್ಷಿಸಬೇಕೇ ಹೊರತು ಬೆಂಬಲಿಸುವುದಲ್ಲ: ರಕ್ಷಾ ರಾಮಯ್ಯ

Update: 2021-10-15 13:36 GMT

ಬೆಂಗಳೂರು, ಅ.15: ಸಂವಿಧಾನಕ್ಕೆ ಬದ್ಧರಾಗಿ ರಾಜ್ಯದ ಎಲ್ಲ ಪ್ರಜೆಗಳನ್ನು ಸಮಾನವಾಗಿ ನೋಡುವುದಾಗಿ ಪ್ರಮಾಣವಚನ ಸ್ವೀಕರಿಸಿದ್ದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ರಾಜ್ಯದಲ್ಲಿ ಅನೈತಿಕ ಪೊಲೀಸ್ ಗಿರಿಯನ್ನು ಬೆಂಬಲಿಸಿ ಒಂದು ವರ್ಗದ ಜನರನ್ನು ಓಲೈಕೆ ಮಾಡುತ್ತಿದ್ದಾರೆ ಆರೋಪಿಸಿ ಪ್ರದೇಶ ಯುವ ಕಾಂಗ್ರೆಸ್ ಕಾರ್ಯಕರ್ತರು ನಗರದ ರೇಸ್ ಕೋರ್ಸ್ ರಸ್ತೆಯಲ್ಲಿರುವ ಕಾಂಗ್ರೆಸ್ ಭವನದ ಮುಂಭಾಗ ಶುಕ್ರವಾರ ಪ್ರತಿಭಟನೆ ನಡೆಸಿದರು.

ಕೆಪಿವೈಸಿಸಿ ಅಧ್ಯಕ್ಷ ರಕ್ಞಾ ರಾಮಯ್ಯ ನೇತೃತ್ವದಲ್ಲಿ ರಾಜ್ಯದಲ್ಲಿ ಕೋಮುವಾದಿ ಸಂಘಟನೆಗಳಿಂದ ನಡೆಯುತ್ತಿರುವ ಅನೈತಿಕ ಪೊಲೀಸ್ ಗಿರಿಯನ್ನು ಬೆಂಬಲಿಸಿದ ಬಸವರಾಜ ಬೊಮ್ಮಾಯಿ ಅವರ ಧೋರಣೆ ಖಂಡಿಸಿ ಮುಖ್ಯಮಂತ್ರಿ ಅವರ ಪ್ರತಿಕೃತಿ ದಹಿಸಿ ಯುವ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದರು.

ಈ ಹಿಂದೆ ಗೃಹ ಸಚಿವರಾಗಿದ್ದ ಬಸವರಾಜ ಬೊಮ್ಮಾಯಿ ಇದೀಗ ಮುಖ್ಯಮಂತ್ರಿಯಾಗಿದ್ದಾರೆ. ಎಲ್ಲರನ್ನು ರಕ್ಷಣೆ ಮಾಡುವುದು ಅವರ ಜವಾಬ್ದಾರಿ. ಆದರೆ ಸಂಘ ಪರಿವಾರದವರು ನಡೆಸುವ ಕಾನೂನು ಬಾಹಿರ, ಸಮಾಜದ ಕೋಮು ಸಾಮರಸ್ಯಕ್ಕೆ ಧಕ್ಕೆ ಉಂಟು ಮಾಡುವ ನಡವಳಿಕೆಯನ್ನು ಬಹಿರಂಗವಾಗಿ ಬೆಂಬಲಿಸಿ ತಾವು ಕೋಮುವಾದಿಗಳ ಪರ ಎಂದು ಬಹಿರಂಗವಾಗಿ ಒಪ್ಪಿಕೊಂಡಿರುವುದನ್ನು ಯುವ ಕಾಂಗ್ರೆಸ್ ಕಾರ್ಯಕರ್ತರು ಖಂಡಿಸಿದರು.

ರಾಜ್ಯದಲ್ಲಿ ಬಿಜೆಪಿ ಗೂಂಡಾರಾಜ್ಯ ಸೃಷ್ಟಿಸುತ್ತಿದ್ದು ಸಮಾಜದ ಶಾಂತಿ ಮತ್ತು ಸಹಬಾಳ್ವೆಗೆ ಧಕ್ಕೆ ತರುತ್ತಿದೆ. ಕೋಮುವಾದಿ ಸಂಘಟನೆಗಳಿಂದ ಅಲ್ಪಸಂಖ್ಯಾತರು, ವಿದ್ಯಾರ್ಥಿಗಳು, ಮಹಿಳೆಯರು, ಯುವ ಜನರ ಮೇಲೆ ನಡೆಯುತ್ತಿರುವ ಅನೈತಿಕ ಪೋಲಿಸ್ ಗಿರಿಯನ್ನು ಬಸವರಾಜ ಬೊಮ್ಮಾಯಿ ಮಂಗಳೂರಿನಲ್ಲಿ ಸಮರ್ಥಿಸಿದ್ದಾರೆ ಎಂದು ಅವರು ಕಿಡಿಗಾರಿದರು.

ಇದರ ಬೆನ್ನಲ್ಲೆ ಇದರಿಂದ ಹುರುಪುಗೊಂಡ ಹಿಂದೂ ಮಹಾಸಭಾ, ಆಯುಧಪೂಜೆ ನೆಪವಿಟ್ಟುಕೊಂಡು ಶಸ್ತ್ರಾಸ್ತ್ರಗಳನ್ನು ಹಂಚಿದೆ. ಈ ಸಂಘಟನೆಗಳ ಬೆಂಬಲಕ್ಕೆ ಬಿಜೆಪಿ ಸರಕಾರ ನಿಂತಿರುವುದೇ ಇದಕ್ಕೆಲ್ಲ ಮುಖ್ಯ ಕಾರಣ. ಆದುದರಿಂದ, ಸಮಾಜಘಾತುಕ ಸಂಘಟನೆಗಳ ಕೃತ್ಯವನ್ನು ಸಮರ್ಥಿಸಿದ ಬೊಮ್ಮಾಯಿ ಅವರ ಧೋರಣೆ ಖಂಡನೀಯ ಎಂದು ಯುವ ಕಾರ್ಯಕರ್ತರು ಘೋಷಣೆ ಕೂಗಿದರು.

ಕೆಪಿವೈಸಿಸಿ ಅಧ್ಯಕ್ಷ ರಕ್ಷಾ ರಾಮಯ್ಯ ಮಾತನಾಡಿ, ಮಂಗಳೂರು, ಬೆಂಗಳೂರು, ಕಲಬುರಗಿ, ಬೆಳಗಾವಿ ಮತ್ತಿತರ ಕಡೆಗಳಲ್ಲಿ ಅನೈತಿಕ ಪೊಲೀಸ್ ಗಿರಿ ನಡೆಯುತ್ತಿದ್ದು, ಇದನ್ನು ಮುಖ್ಯಮಂತ್ರಿಯಾದವರು ಖಂಡಿಸಿ, ತಪ್ಪಿತಸ್ಥರನ್ನು ಶಿಕ್ಷಿಸಬೇಕು. ಆದರೆ ಅವರೇ ಇದನ್ನು ಸಮರ್ಥಿಸಿಕೊಂಡು ಮಾತನಾಡಿರುವುದು ಆತಂಕಕಾರಿ ಬೆಳವಣಿಗೆ. ಇದರಿಂದ ಸಾಮರಸ್ಯದ ಸಂಸ್ಕøತಿಗೆ ಆತಂಕ ಎದುರಾಗಿದೆ. ಕೇವಲ ಸಂಘಪರಿವಾರದವರ ಮುಖ್ಯಮಂತ್ರಿಯಂತೆ ಬಸವರಾಜ ಬೊಮ್ಮಾಯಿ ಅವರು ವರ್ತಿಸಿದ್ದಾರೆ ಎಂದರು.

ಪ್ರತಿಯೊಂದು ಸಂವಿಧಾನಬದ್ಧವಾಗಿ ನಡೆಯಬೇಕು. ನೈತಿಕ ಪೊಲೀಸ್  ಗಿರಿ ಸರಕಾರದ ಜವಾಬ್ದಾರಿಯಲ್ಲ. ಕಾನೂನಿನ ಪ್ರಕಾರ ಜನರನ್ನು ರಕ್ಷಿಸುವುದು ಸರಕಾರದ ಜವಾಬ್ದಾರಿ. ಅನೈತಿಕ ಪೊಲೀಸ್ ಗಿರಿ ಮನೆಗೆ ಮಾತ್ರ ಸೀಮಿತವಾಗಿರಬೇಕು. ರಸ್ತೆಯಲ್ಲಿ ಇದನ್ನು ಪ್ರದರ್ಶಿಸುವುದು, ಹಾದಿ ಬೀದಿಯಲ್ಲಿ ಜನರಿಗೆ ಧರ್ಮಬೋಧನೆ ಮಾಡುವುದು ಸರಿಯಲ್ಲ. ಇದನ್ನು ನಾವು ಸಹಿಸುವುದಿಲ್ಲ ಎಂದು ರಕ್ಷಾ ರಾಮಯ್ಯ ಎಚ್ಚರಿಕೆ ನೀಡಿದರು.

ಪ್ರತಿಭಟನೆಯಲ್ಲಿ ಯುವ ಕಾಂಗ್ರೆಸ್ ಉಪಾಧ್ಯಕ್ಷೆ ಭವ್ಯಾ, ಪ್ರಧಾನ ಕಾರ್ಯದರ್ಶಿ ಆನಂದ್, ಜವಾಹರ್ ಬಾಲ್ ಮುಂಚ್ ಅಧ್ಯಕ್ಷ ಸಿರಿಲ್ ಪ್ರಭು ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News