ಬೆಂಗಳೂರು; ಹನಿಟ್ರ್ಯಾಪ್ ಆರೋಪ: ಯುವತಿ ಸೆರೆ

Update: 2021-10-15 14:09 GMT

ಬೆಂಗಳೂರು, ಅ.15: ಹರ್ಬಲ್ ಲೈಫ್ ಪ್ರಾಡೆಕ್ಟ್ ಮಾರಾಟ ಸೋಗಿನಲ್ಲಿ ವ್ಯಕ್ತಿವೊಬ್ಬರಿಂದ 1 ಕೋಟಿ ರೂಪಾಯಿ ಹಣಕ್ಕೆ ಬೇಡಿಕೆಯಿಟ್ಟಿದ್ದ ಆರೋಪ ಸಂಬಂಧ ಯುವತಿಯನ್ನು ಅನ್ನಪೂರ್ಣೇಶ್ವರಿ ನಗರ ಠಾಣಾ ಪೊಲೀಸರು ಬಂಧಿಸಿದ್ದಾರೆ.

ನಾಗರಭಾವಿ ನಿವಾಸಿ ಲೋಹಿತ್ ಎಂಬುವರು ನೀಡಿದ ದೂರಿನ ಮೇರೆಗೆ ಕಾವ್ಯಾ ಎಂಬಾಕೆಯನ್ನು (ಹೆಸರು ಬದಲಿಸಲಾಗಿದೆ) ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

ಸಿವಿಲ್ ಕಂಟ್ರಾಕ್ಟರ್ ಆಗಿರುವ ಲೋಹಿತ್ ಮೂರು ತಿಂಗಳ ಹಿಂದೆ ಮನೆ ಬಳಿ ಇಬ್ಬರು ಯುವಕರು ಬಂದು ಹರ್ಬಲ್ ಲೈಫ್ ಪ್ರಾಡಕ್ಟ್ ಉಪಯೋಗಿಸಿದರೆ ತೆಳ್ಳಗಾಗುತ್ತೀರಾ ಎಂದು ಹೇಳಿ ಆರೋಪಿತೆ ಮೊಬೈಲ್ ಸಂಖ್ಯೆ ಕೊಟ್ಟಿದ್ದರು. ಬಳಿಕ ಫೋನ್ ಮಾಡಿ ಹರ್ಬಲ್ ಲೈಫ್ ಪ್ರಾಡಕ್ಟ್ ಖರೀದಿಸುವ ಮುಖಾಂತರ ಆರೋಪಿತೆಯ ಪರಿಚಯವಾಗಿತ್ತು ಎನ್ನಲಾಗಿದೆ.

ಕಾಲಕ್ರಮೇಣ ಪರಿಚಯ ಸಲುಗೆಗೆ ತಿರುಗಿತ್ತು. ಲೋಹಿತ್ ಹಾಗೂ ಆರೋಪಿತೆ ಸ್ನೇಹಿತರೆಲ್ಲರೂ ಕನಕಪುರ ರೆಸಾರ್ಟ್‍ವೊಂದಕ್ಕೆ ಹೋಗಿದ್ದರು. ಈ ವೇಳೆ, ಇಬ್ಬರು ಸಹ ಜೊತೆಯಲ್ಲಿ ಓಡಾಡಿಕೊಂಡಿದ್ದರು. ಕೆಲ ದಿನಗಳ ಬಳಿಕ ಲೋಹಿತ್‍ಗೆ ಕರೆ ಮಾಡಿ ಯುವತಿ ನಾಗರಭಾವಿ ಬಳಿ ಕರೆಯಿಸಿಕೊಂಡಿದ್ದಾಳೆ ಎಂದು ಹೇಳಲಾಗುತ್ತಿದೆ.

ರೆಸಾರ್ಟ್‍ನಲ್ಲಿ ತೆಗೆದುಕೊಂಡಿದ್ದ ಫೋಟೊಗಳನ್ನು ತೋರಿಸಿ 1 ಕೋಟಿ ರೂ. ಹಣ ನೀಡುವಂತೆ ಒತ್ತಾಯಿಸಿದ್ದಾಳೆ. ಹಣ ಕೊಡದಿದ್ದರೆ ಮದುವೆಯಾಗಿ ವಂಚಿಸಿರುವುದಾಗಿ ಪೊಲೀಸ್ ಠಾಣೆಯಲ್ಲಿ ದೂರು ನೀಡುವುದಾಗಿ ಬೆದರಿಕೆ ಹಾಕಿದ್ದಳು. ಈ ಸಂಬಂಧ ಲೋಹಿತ್ ನೀಡಿದ ದೂರಿನ ಮೇರೆಗೆ ಅನ್ನಪೂರ್ಣೇಶ್ವರಿ ನಗರ ಪೊಲೀಸರು ಆರೋಪಿತೆಯನ್ನು ಬಂಧಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News