ಬೆಂಗಳೂರಿನಲ್ಲಿ ಮಳೆ ಅವಾಂತರಕ್ಕೆ ಶಾಶ್ವತ ಪರಿಹಾರಕ್ಕೆ ಚಿಂತನೆ

Update: 2021-10-15 15:56 GMT

ಬೆಂಗಳೂರು, ಅ.15: ದಾಸರಹಳ್ಳಿ ವಿಧಾನ ಸಭೆ ಕ್ಷೇತ್ರದ ಬಿಟಿಎಸ್ ಬಡಾವಣೆಯಲ್ಲಿ ಬಹುತೇಕ ಮನೆಗಳು ಅನಧಿಕೃತವಾಗಿ ನಿರ್ಮಾಣಗೊಂಡಿವೆ. ಅಲ್ಲದೆ   ರಾಜಕಾಲುವೆಗಳನ್ನು ಒತ್ತುವರಿ ಮಾಡಿಕೊಳ್ಳಲಾಗಿದೆ. ಹೀಗಾಗಿ ಶುಕ್ರವಾರ ಮುಂಜಾನೆ ಸುರಿದ ಮಹಾಮಳೆಗೆ ಮನೆಗಳು ಜಲಾವೃತಗೊಂಡಿವೆ. ಈ ಕುರಿತು ಸರ್ವೆ ನಡೆಸಿ ಶಾಶ್ವತ ಪರಿಹಾರಕ್ಕೆ ಕ್ರಮವಹಿಸಲಾಗುವುದು ಎಂದು ಬಿಬಿಎಂಪಿ ಆಯುಕ್ತ ಗೌರವ್ ಗುಪ್ತಾ ಮಾಹಿತಿ ನೀಡಿದರು.

ಶುಕ್ರವಾರ ದಾಸರಹಳ್ಳಿ ವಿಧಾನಸಭಾ ಕ್ಷೇತ್ರದಲ್ಲಿ ಜಲಾವೃತಗೊಂಡಿರುವ ಪ್ರದೇಶಗಳ ಸ್ಥಳ ಪರಿವೀಕ್ಷಣೆ ನಡೆಸಿ ಮಾತನಾಡಿದ ಅವರು, ಬಿಟಿಎಸ್ ಬಡಾವಣೆಯಲ್ಲಿ ಅನಧಿಕೃತ ಕಟ್ಟಡಗಳು ನಿರ್ಮಾಣವಾಗಿವೆ. ಆದುದರಿಂದ ಬಹುತೇಕ ಮನೆಗಳಿಗೆ ನೀರು ನುಗ್ಗಿದೆ. ಅಲ್ಲದೆ ಸರಾಗವಾಗಿ ನೀರು ಹರಿಯಲು ಸಾಧ್ಯವಾಗದಂತೆ ಬಿಡಬ್ಲ್ಯೂಎಸ್‍ಎಸ್‍ಬಿ ರಾಜಕಾಲುವೆಗೆ ತಡೆಗೋಡೆಯನ್ನು ನಿರ್ಮಿಸಿದೆ ಎಂದು ಸಾರ್ವಜನಿಕರಿಂದ ಆರೋಪ ಕೇಳಿಬಂದಿದೆ. ಇದನ್ನು ಪರಿಶೀಲಿಸಿ ತಡೆಗೋಡೆಯನ್ನು ತೆರವುಗೊಳಿಸಲಾಗುವುದು. ಹಾಗೆಯೇ ಅನಧಿಕೃತ ಕಟ್ಟಡಗಳ ಸರ್ವೆ ನಡೆಸಲಾಗುವುದು ಎಂದು ಅವರು ತಿಳಿಸಿದರು.

ಇನ್ನು ರಾಯಲ್ ಬಡಾವಣೆಯಲ್ಲಿ ಮನೆಗಳು ತಗ್ಗುಪ್ರದೇಶದಲ್ಲಿ ನಿರ್ಮಾಣಗೊಂಡಿವೆ. ಅಲ್ಲದೆ ಬಿಡಬ್ಲ್ಯೂಎಸ್‍ಎಸ್‍ಬಿ ಇಂದ ಕಾಮಗಾರಿ ಸಹ ನಡೆಯುತ್ತಿದೆ. ಕಾಮಗಾರಿ ಪೂರ್ಣಗೊಂಡ ಬಳಿಕ ಬಿಬಿಎಂಪಿ ವತಿಯಿಂದ ರಸ್ತೆಯನ್ನು ಪುನರ್ ನಿರ್ಮಾಣ ಮಾಡಲಾಗುವುದು. ಹಾಗೆಯೇ ಮನೆಗಳಿಗೆ ನೀರು ನುಗ್ಗದಂತೆ ಚರಂಡಿ ವ್ಯವಸ್ಥೆಯನ್ನು ಕಲ್ಪಿಸಲಾಗುವುದು ಎಂದರು.


ಚೊಕ್ಕಸಂದ್ರ ಕೆರೆಗೆ ಸುತ್ತಮುತ್ತಲಿನ ಕಾಲುವೆಗಳಿಂದ ಒಮ್ಮೆಲೆ ನೀರು ಹರಿದು ರಸ್ತೆ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಹರಿದು ತೊಂದರೆ ಉಂಟಾಗಿರುತ್ತದೆ. ಅಲ್ಲದೇ ಸ್ಥಳೀಯ ಬೃಹತ್ ನೀರು ಕಾಲುವೆಯಲ್ಲಿ ನೀರು ಹರಿಯದೆ ಅನಾವಶ್ಯಕ ವಸ್ತುಗಳು ಶೇಖರಣೆಗೊಂಡಿದೆ. ಇದರಿಂದ ನೀರು ಒಮ್ಮೆಲೆ ಹಿಮ್ಮುಖವಾಗಿ ಹರಿದು ಸಂಚಾರಕ್ಕೆ ಸ್ವಲ್ಪ ಮಟ್ಟಿಗೆ ತೊಂದರೆಯಾಗಿದೆ. ಕೂಡಲೆ ನೂತನ ತಂತ್ರಜ್ಞಾನವುಳ್ಳ  Floting Grating  ಅಳವಡಿಸಲು ಕ್ರಮವಹಿಸಲಾಗುವುದು. ಇದರಿಂದಾಗಿ ಎಷ್ಟೇ ನೀರು ರಭಸವಾಗಿ ಹರಿದರು, ಅನಾವಶ್ಯಕ ವಸ್ತುಗಳಿದ್ದರೂ ಸಹ ತಡೆಯಿಲ್ಲದೆ ನೀರು ಸರಾಗವಾಗಿ ಹರಿಯಲಿದೆ ಅವರು ತಿಳಿಸಿದರು.

ಶನಿವಾರ ವಲಯದ ಹಿರಿಯ ಅಧಿಕಾರಿಗಳೊಂದಿಗೆ ದಾಸರಹಳ್ಳಿ ವಲಯ ಕಚೇರಿಯಲ್ಲಿ ಸಭೆ ನಡೆಸಲಾಗುವುದು. ಸಭೆಯಲ್ಲಿ ಜರೂರು ಕಾರ್ಯವನ್ನು ತೆಗೆದುಕೊಳ್ಳಬೇಕಾದ ಅಂಶಗಳನ್ನು ಹಾಗೂ ಅಭಿವೃದ್ಧಿ ಕುರಿತಾದ ಕಾರ್ಯಗಳನ್ನು ಕೈಗೊಳ್ಳಲು ಕ್ರಮ ವಹಿಸುವಂತೆ ಅಧಿಕಾರಿಗಳಿಗೆ ಸೂಚಿಸಲಾಗುವುದು ಎಂದು ಅವರು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News